ವಿವಾಹ ಬಂಧನ ನಾಗರಿಕ ಸಮಾಜದ ಪ್ರಮುಖ ಲಕ್ಷಣವೂ ಹೌದು, ಅಗತ್ಯವೂ ಹೌದು. ಮದುವೆ (Marriage) ಎಂಬುದು ಎರಡು ಮನೆತನಗಳು, ಎರಡು ಮನಸ್ಸುಗಳು ಮತ್ತು ಎರಡು ಶರೀರಗಳ ಮಿಲನ. ಮದುವೆ ಸಂಕೀರ್ಣ ಸಂಬಂಧಗಳನ್ನು ಒಳಗೊಂಡಿರುತ್ತದೆ. ನಿಮ್ಮ ವೈವಾಹಿಕ ಸಂಬಂಧವು (Marital Relationship) ವಿಚ್ಛೇದನದತ್ತ (Divorce) ಸಾಗುತ್ತಿದೆ ಅಥವಾ ನಿಮ್ಮ ಮದುವೆ ಸಂಬಂಧ ಮುರಿದು ಬೀಳುತ್ತಿದೆ ಎಂದು ತೋರುವ ಮತ್ತು 90% ರಷ್ಟು ನಿಖರತೆ ಹೊಂದಿರುವ 4 ಎಚ್ಚರಿಕೆ ಸಂಕೇತಗಳ ಬಗ್ಗೆ ನಾವಿಂದು ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.
ಅವುಗಳ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದ್ದಲ್ಲಿ ಮತ್ತು ನಿಮ್ಮ ಸಂಬಂಧದಲ್ಲಿ ಆ ರೀತಿಯ ಲಕ್ಷಣಗಳನ್ನು ಪತ್ತೆ ಹಚ್ಚಲು ಈ ಲೇಖನವನ್ನು ಓದುವುದು ತುಂಬಾ ಮುಖ್ಯ.
ಸಂಶೋಧನೆಗಳು ಏನ್ ಹೇಳ್ತಿವೆ?
ವಿವಾಹ ಬಂಧಕ್ಕೆ ಒಳಗಾದ ದಂಪತಿಗಳ ಸಮಾಲೋಚನೆ ಮತ್ತು ಮಾನಸಿಕ ಆರೋಗ್ಯ ರಕ್ಷಣೆಯ ಬಗ್ಗೆ ಶಿಕ್ಷಣ ನೀಡುವ ಗಾಟ್‌ಮ್ಯಾನ್ ಇನ್‌ಸ್ಟಿಟ್ಯೂಟ್‌ನ ಸಹ-ಸಂಸ್ಥಾಪಕ ಜಾನ್ ಗಾಟ್‌ಮನ್, ಪಿಎಚ್‌ಡಿ ಅವರ ಸಂಶೋಧನೆಯ ಪ್ರಕಾರ, “ವಿಚ್ಛೇದನವನ್ನು ಮುನ್ಸೂಚಿಸುವ 4 ನಿಖರ ಎಚ್ಚರಿಕೆ ಸಂಕೇತಗಳು ಇವಾಗಿವೆ” ಎಂದು ಹೇಳಿದ್ದಾರೆ. ಅವುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.
ಇದನ್ನೂ ಓದಿ: ಕೆಂಪಾಗಿ, ಸ್ವೀಟ್ ಆಗಿರುವ ಕಲ್ಲಂಗಡಿ ಸೆಲೆಕ್ಟ್ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್
ನಿಂದನಕಾರಿ ಟೀಕೆಗಳು
ಪ್ರತಿಯೊಬ್ಬರಿಗೂ, ಪ್ರತಿಯೊಂದನ್ನೂ ಟೀಕಿಸುವ ಮನೋಭಾವ ನಿಮ್ಮದಾಗಿದೆಯೇ? ಇದಕ್ಕೆ ಉತ್ತರ ಹೌದು ಎಂದಾದರೆ ನಿಮ್ಮ ಮನೆಯಲ್ಲಿ ಗಂಭೀರ ವಾತಾವರಣ ಇದೆ ಎಂದರ್ಥ. ನಿಮ್ಮ ಸಂಗಾತಿ ಹತಾಶರಾಗಿದ್ದಾರೆ ಎಂದರ್ಥ. ಸಿನಿಕತನದಿಂದ ದೂರವಿರಿ. ಯಾವುದಾದರೂ ವಿಷಯ ನಿಮ್ಮನ್ನು ಕಾಡುತ್ತಿದ್ದರೆ ಸಂಗಾತಿಯೊಂದಿಗೆ, ಆಪ್ತಸ್ನೇಹಿತರೊಂದಿಗೆ ಮತ್ತು ಕುಟುಂಬ ಸದಸ್ಯರ ಜತೆ ಚರ್ಚಿಸಿ. ಸಮಸ್ಯೆಗಳು ನಿಮ್ಮ ಜೀವನಕ್ಕೆ ಹೊರೆಯಾಗಬಾರದು.
ನಿಂದನಕಾರಿ ಟೀಕೆಯು ನಿಮ್ಮ ಸಂಗಾತಿ ನಡುವಿನ ಭಾವನಾತ್ಮಕ ಸಂಪರ್ಕವನ್ನು ನಾಶಪಡಿಸುತ್ತದೆ ಮತ್ತು ವಿಚ್ಛೇದನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಪ್ರಕಾರ, “ನೀವು ಯಾವಾಗಲೂ ಟೀಕೆ ಮಾಡುತ್ತಿರುವವರು ಆಗಿದ್ದರೆ, ವಿಚ್ಚೇದನಕ್ಕೆ ದಾರಿ ಮಾಡಿಕೊಡುತ್ತಿರಿ ಎಂದರ್ಥ” ಎಂದು ಹೇಳಿದೆ.
ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು
ನೀವು ತಪ್ಪು ಮಾಡಿದಾಗ ಅವುಗಳನ್ನು ಸಮರ್ಥಿಸಿಕೊಳ್ಳುತ್ತೀರಿ ಎಂದಾದರೆ ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ಬೇಸರವಿದೆ ಎಂದರ್ಥ. ನಿಮ್ಮ ಟೀಕೆಗಳು,ನಿರಾಕರಣೆ ಅಥವಾ ಪ್ರತಿದಾಳಿಯೊಂದಿಗೆ ಸಂಗಾತಿ ಜೊತೆ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಹೊಂದಿದ್ದರೆ ಇದು ವಿಚ್ಛೇದನ ಸಂಕೇತ ಎಂದರ್ಥ. ದಂಪತಿಗಳು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಘರ್ಷಣೆಯನ್ನು ಮಾಡಿಕೊಳ್ಳುತ್ತಾರೆ. ಇದು ಸಂಬಂಧದ ಬಿರುಕುತನಕ್ಕೆ ಕಾರಣವಾಗಬಹುದು. ಅದರ ಬದಲು ನಿಮ್ಮ ನಿಮ್ಮ ತಪ್ಪುಗಳನ್ನು ಒಪ್ಪಿ ಮುನ್ನೆಡೆಯಿರಿ. ಇದರಿಂದ ಸಂಬಂಧದಲ್ಲಿ ಹೊಂದಾಣಿಕೆ ಕಂಡುಬರುತ್ತದೆ.
ಸಹಕಾರ ಮನೋಭಾವನೆ ಇಲ್ಲದಿರುವುದು
ಸಹಕಾರ ಮನೋಭಾವನೆ ಎಂದರೆ ಸಂವಹನದಿಂದ ಹಿಂದೆ ಸರಿಯುವುದು ಅಥವಾ ಸಂಘರ್ಷದ ಸಮಯದಲ್ಲಿ ಭಾವನಾತ್ಮಕ ವಿಷಯಗಳನ್ನು ಮುಚ್ಚಿಡುವುದು. ಇದರಿಂದ ಸಂಗಾತಿಗಳಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಕಷ್ಟವಾಗಬಹುದು ಮತ್ತು ವಿಚ್ಛೇದನದ ಅಪಾಯವನ್ನು ಹೆಚ್ಚಿಸಬಹುದು. ಅನೇಕ ದಂಪತಿಗಳು ಜಗಳವಾದಾಗ ಮೌನವಾಗಿದ್ದು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಾರೆ. ಇದೇ ಅವರು ಮಾಡುವ ದೊಡ್ಡ ತಪ್ಪು. ಮೌನ ನಿಮ್ಮ ಸಂಬಂಧವನ್ನು ಮತ್ತಷ್ಟು ಹಾಳು ಮಾಡಬಹುದು. ಆದ್ದರಿಂದ ಮುಕ್ತ ಮಾತುಕತೆ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸಂಶೋಧನೆ ಹೇಳುತ್ತಿದೆ.
ಸಂಗಾತಿಗಳ ಬಗ್ಗೆ ಇರುವ ತಿರಸ್ಕಾರ
ದಂಪತಿಗಳಲ್ಲಿ ತಿರಸ್ಕಾರದ ಸಂಕೇತಗಳನ್ನು ನೋಡುವುದಾದರೆ, ಮುಖ್ಯವಾಗಿ ನಿಟ್ಟುಸಿರು, ಕಣ್ಣಲ್ಲಿ ಕಣ್ಣು ಇಟ್ಟು ಮಾತನಾಡದೇ ಇರುವುದು, ಸಂಗಾತಿಯನ್ನು ಅಪಹಾಸ್ಯ ಮಾಡುವುದು, ಎಲ್ಲದಕ್ಕೂ ಅಸಮಾಧಾನ ವ್ಯಕ್ತಪಡಿಸುವುದು, ನಿಮ್ಮ ಸಂಗಾತಿಯಲ್ಲಿನ ಉತ್ತಮ ಗುಣಗಳನ್ನು ಇಷ್ಟ ಪಡದೇ ಇರುವುದು, ಇವೆಲ್ಲ ವಿಚ್ಛೆದನಕ್ಕೆ ದಾರಿ ಮಾಡಿಕೊಡುವ ಎಚ್ಚರಿಕೆ ಸಂಕೇತಗಳು ಆಗಿವೆ. ಸಂಗಾತಿಗಳ ಬಗ್ಗೆ ಪರಸ್ಪರ ಮೆಚ್ಚುಗೆಯ ಮಾತುಗಳು ಇರಬೇಕೆ ವಿನಃ ತಿರಸ್ಕಾರದ ಚುಚ್ಚು ಮಾತುಗಳು ಅಲ್ಲ.
ಈ 4 ಸಂಕೇತಗಳು ನಿಮ್ಮ ಸಂಬಂಧದಲ್ಲಿ ಇದ್ದರೆ ಕೂಡಲೇ ಅವುಗಳ ಬಗ್ಗೆ ಗಮನ ನೀಡಿ, ಅವುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿ ಇಲ್ಲದಿದ್ದರೆ ನಿಮ್ಮ ವೈವಾಹಿಕ ಸಂಬಂಧವು ಕೂಡ ವಿಚ್ಛೇದನದ ದಾರಿ ಹಿಡಿಯುವುದು ಖಂಡಿತ. ಎಚ್ಚರವಿರಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ