Schizophrenia Treatment: ಸ್ಕಿಜೋಫ್ರೆನಿಯಾ ಸಮಸ್ಯೆಗೆ ಇವುಗಳೇ ಪರಿಹಾರವಂತೆ

Schizophrenia Treatment: ರೋಗಿಗಳು ತಮ್ಮ ದೈನಂದಿನ ಜೀವನಕ್ಕಾಗಿ ಹೆಚ್ಚಿನ ಶಕ್ತಿ, ಸಾಮರ್ಥ್ಯ ಹೊಂದಿಸಿಕೊಳ್ಳುವ ದೃಷ್ಟಿಯಿಂದ ವ್ಯಾಯಾಮದಲ್ಲಿ ತೊಡಗಿಕೊಂಡಾಗ ಅವರ ಗಮನವೆಲ್ಲ ಬೇರೆಡೆ ಸೆಳೆದಂತಾಗುತ್ತದೆ. ಇದರಿಂದ ಅವರು ತಮ್ಮನ್ನು ತಾವು ಇತರರಂತೆ ಸಾಮಾನ್ಯ ಸ್ಥಿತಿಯಲ್ಲಿ ಇರುವಂತೆ ಕಂಡು ಹೆಚ್ಚು ಪ್ರಫುಲ್ಲಿತರಾಗುತ್ತಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಕಿಜೋಫ್ರೆನಿಯಾ (schizophrenia) ಒಂದು ಗಂಭೀರ ಮನೋವ್ಯಾಧಿ ಅಂದರೆ ಮಾನಸಿಕವಾಗಿ ಉದ್ಭವವಾಗುವ ವ್ಯಾಧಿಯಾಗಿದೆ. ಮಾನಸಿಕ ಸಮಸ್ಯೆಗಳಡಿಯಲ್ಲಿ (Mental Health Problem)  ಇದನ್ನು ಪರಿಗಣಿಸಬಹುದು.ಸ್ಕಿಜೋಫ್ರೆನಿಯಾ ಮನೋವ್ಯಾಧಿಯು ಗಂಭೀರವಾದ ಮಾನಸಿಕ ಸ್ಥಿತಿಯಾಗಿದ್ದು ಇದರ ಪ್ರಭಾವ ಮನುಷ್ಯನ ಯೋಚನಾ ಲಹರಿ, ಚಟುವಟಿಕೆ, ಅವನು ಅಥವಾ ಅವಳು ತನ್ನನ್ನು ವ್ಯಕ್ತಪಡಿಸುವ ರೀತಿ, ವಾಸ್ತವಿಕ ಅಂಶಗಳನ್ನು ಸ್ವೀಕರಿಸುವ ಬಗೆ ಹಾಗೂ ಅದನ್ನು ಇತರರೊಂದಿಗೆ ಯಾವ ರೀತಿ ಜೋಡಿಸಿ ನೋಡುವ ಬಗೆಗಳ ಮೇಲೆ ಹೆಚ್ಚಾಗಿ ಬೀರುತ್ತದೆ. 

ಹಾಗೆ ನೋಡಿದರೆ ಸಾಕಷ್ಟು ಬಗೆಯ ಮಾನಸಿಕ ಕಾಯಿಲೆಗಳಿಗೆ ಮನುಷ್ಯ ತುತ್ತಾಗುತ್ತಾನೆ. ಅವುಗಳಲ್ಲಿ ಬಹಳಷ್ಟು ಕಾಯಿಲೆಗಳು ಸಾಮಾನ್ಯ ಆಗಿರುತ್ತವೆ. ಆದರೆ, ಸ್ಕಿಜೋಫ್ರೆನಿಯಾ ಎಂಬುದು ಸಾಮಾನ್ಯವಾಗಿರುವ ಮಾನಸಿಕ ಕಾಯಿಲೆ ಖಂಡಿತ ಅಲ್ಲ, ಕಾರಣ ಅದರಿಂದಾಗುವ ವಿಪರೀತ ಪರಿಣಾಮಗಳು. ಸ್ಕಿಜೋಫ್ರೆನಿಯಾದಿಂದ ಬಳಲುವ ಜನರು ಸಾಮಾನ್ಯವಾಗಿ ಸಮಾಜದಲ್ಲಿ ಅಷ್ಟೊಂದು ಉತ್ತಮ ಅಥವಾ ಇತರರಂತೆ ಸಾಮಾನ್ಯ ಮಟ್ಟದಲ್ಲಿ ಬದುಕಲು ಬಹಳಷ್ಟು ಕಷ್ಟಪಡುವುದನ್ನು ನೋಡಲಾಗಿದೆ. 

ಈ ಸ್ಥಿತಿಯಿಂದ ಬಳಲುತ್ತಿರುವ ರೋಗಿಗಳು ಸದಾ ಕಾಲ ಆತಂಕದಲ್ಲಿರುವಂತೆ, ತಮ್ಮನ್ನು ತಾವೇ ಕಳೆದುಕೊಂಡಿರುವಂತೆ ಹಾಗೂ ನೈಜತೆಯಿಂದ ಬಲು ದೂರದಲ್ಲಿರುವಂತೆ ಕಂಡುಬರುತ್ತಾರೆ. ಹಾಗಾಗಿ ಅವರಿಗೆ ಸಾಮಾನ್ಯ ಜೀವನಶೈಲಿ ಎಂಬುದು ಅವರಿಗೆ ಬಲು ಕಷ್ಟ. ಈ ಮಾನಸಿಕ ಸ್ಥಿತಿಗೆ ಯಾವುದೇ ಪರಿಣಾಮಕಾರಿ ಔಷಧಿಗಳಿಲ್ಲ ಆದಾಗ್ಯೂ ಕೆಲ ಚಿಕಿತ್ಸೆಯ ಮೂಲಕ ಈ ಮನಸ್ಥಿತಿಯನ್ನು ತಕ್ಕ ಮಟ್ಟಿಗೆ ನಿಯಂತ್ರಣದಲ್ಲಿ ಇರಿಸಿ ಬದುಕಲು ಸಾಧ್ಯವಿರುವುದೇ ಒಂದು ವರದಾನವಾಗಿದೆ. ಹಾಗಾದರೆ ಈ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಯಾವ ಯಾವ ಚಿಕಿತ್ಸೆಗಳು ಉಪಯೋಗಕಾರಿಯಾಗಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ವೈಯಕ್ತಿಕ ಮಾನಸಿಕ ಚಿಕಿತ್ಸೆ : ಇದೊಂದು ಬಗೆಯ ಚಿಕಿತ್ಸೆಯಾಗಿದ್ದು ಇದರಲ್ಲಿ ಮನೋವೈದ್ಯರು ಅಥವಾ ಚಿಕಿತ್ಸಕನುಇದರಿಂದ ಬಳಲುತ್ತಿರುವ ರೋಗಿಗಳು ತಮ್ಮ ಆಲೋಚನೆಗಳು ಮತ್ತು ನಡವಳಿಕೆಗಳನ್ನು ಹೇಗೆ ಎದುರಿಸಬೇಕೆಂದು ಕಲಿಸುತ್ತಾರೆ. ಈ ಚಿಕಿತ್ಸೆಯಲ್ಲಿ ರೋಗಿಗಳು ತಮ್ಮ ಅನಾರೋಗ್ಯ ಮತ್ತು ಅದರ ಪರಿಣಾಮಗಳ ಬಗ್ಗೆ ಹೆಚ್ಚು ಕಲಿಯುತ್ತಾರೆ, ಹಾಗೆಯೇ ಯಾವುದು ನಿಜ ಮತ್ತು ಯಾವುದು ಅಲ್ಲದ ನಡುವಿನ ವ್ಯತ್ಯಾಸವನ್ನು ಹೇಗೆ ಹೇಳುವುದು ಎಂಬುದನ್ನು ಕಲಿಯುತ್ತಾರೆ. ಇದು ದೈನಂದಿನ ಜೀವನವನ್ನು ನಿರ್ವಹಿಸಲು ಸಹ ಅವರಿಗೆ ಸಹಾಯ ಮಾಡುತ್ತದೆ. 

ಕಾಗ್ನಿಟಿವ್ ಬಿಹೇವಿಯರ್ ಥೆರೆಪಿ (CBT) : ಈ ಚಿಕಿತ್ಸೆಯು ವ್ಯಕ್ತಿಯ ಆಲೋಚನೆ ಮತ್ತು ನಡವಳಿಕೆಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ. ಈ ಚಿಕಿತ್ಸೆಯಲ್ಲಿ ಅವರಿಗೆ ಧ್ವನಿಗಳು ಮತ್ತು ಭ್ರಮೆಗಳನ್ನು ಸಮರ್ಥವಾಗಿ ಎದುರಿಸಿ  ನಿಭಾಯಿಸಲು ಹಲವು ಮಾರ್ಗಗಳನ್ನು ತೋರಿಸಿಕೊಡಲಾಗುತ್ತದೆ. ಕೆಲವು ಔಷಧಿಗಳನ್ನು ಒಳಗೊಂಡ ಈ ಚಿಕಿತ್ಸೆಯ ನಂತರ ಕ್ರಮೇಣ ರೋಗಿಗಳು ತಮಗೆ ಸ್ಕಿಜೋಫ್ರೆನಿಯಾದ ಎಪಿಸೋಡುಗಳು ಯಾವಾಗ ಮತ್ತು ಹೇಗೆ ಉಂಟಾಗುತ್ತವೆ ಎಂಬುದನ್ನು ಹೇಳಲು ಸಮರ್ಥರಾಗುತ್ತಾರೆ. ಇದರಿಂದ ಮನೋವೈದ್ಯರಿಗೆ ಅವುಗಳನ್ನು ಹೇಗೆ ಕಡಿಮೆ ಮಾಡುವುದು ಅಥವಾ ಆ ಸ್ಥಿತಿಯಿಂದ ಹೊರಬರಬಹುದು ಎಂದು ಹೇಳಿ ಕೊಡಲು ಸಹಾಯವಾಗುತ್ತದೆ.

ಕಾಗ್ನಿಟಿವ್ ಎನ್ಹಾನ್ಸ್‍ಮೆಂಟ್ ಥೆರೆಪಿ (CET) : ಇದು ಒಂದು ಸುಧಾರಿತ ಕಾಗ್ನಿಟಿವ್ ಥೆರೆಪಿ ಆಗಿದೆ. ಸಾಮಾಜಿಕ ಸೂಚನೆಗಳು ಅಥವಾ ಪ್ರಚೋದಕಗಳನ್ನು ಹೇಗೆ ಉತ್ತಮವಾಗಿ ಗುರುತಿಸುವುದು ಮತ್ತು ಅವರ ಗಮನ, ಸ್ಮರಣೆ ಮತ್ತು ಅವರ ಆಲೋಚನೆಗಳನ್ನು ಸಂಘಟಿಸುವ ಸಾಮರ್ಥ್ಯವನ್ನು ಸುಧಾರಿಸುವುದು ಹೇಗೆ ಎಂಬುದನ್ನು ಈ ಚಿಕಿತ್ಸೆಯಲ್ಲಿ ಕಲಿಸಲಾಗುತ್ತದೆ. ಇದು ಕಂಪ್ಯೂಟರ್ ಆಧಾರಿತ ಮೆದುಳಿನ ತರಬೇತಿಯಾಗಿದ್ದು ಗ್ರೂಪ್ ಸೆಷನ್ ಗಳ ಮೂಲಕ ನೀಡಲಾಗುತ್ತದೆ.

ಸಾಮಾಜಿಕ ಕೌಶಲ್ಯ ತರಬೇತಿ : ಸಾಮಾನ್ಯವಾಗಿ ಸ್ಕಿಜೋಫ್ರೆನಿಯಾ ಕಾಯಿಲೆಯಿಂದ ಬಳಲುವವರು ತಮ್ಮನ್ನು ತಾವು ಸಮಾಜದಿಂದ ದೂರವೇ ಇಟ್ಟುಕೊಂಡಿರುತ್ತಾರೆ. ಹಾಗಾಗಿ ಈ ಚಿಕಿತ್ಸೆಯಲ್ಲಿ ಈ ರೋಗಿಗಳನ್ನು ಮೊದಲು ಮುಖ್ಯವಾಹಿನಿಗೆ ಜೋಡಿಸಲು ಪ್ರಯತ್ನಿಸಲಾಗುತ್ತದೆ. ಅವರಿಗೆ ಸಮಾಜದಲ್ಲಿ ಹೇಗಿರಬೇಕು, ಇತರರೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದರ ಬಗ್ಗೆ ವಿವರಿಸಿ ಅವರಲ್ಲಿ ಆ ಕೌಶಲ್ಯವನ್ನು ಮೂಡಿಸಲು ಪ್ರಯತ್ನಿಸಲಾಗುತ್ತದೆ. 

ಪುನಶ್ಚೇತನ : ಈ ಮನೋವ್ಯಾಧಿಯು ಸಾಮಾನ್ಯವಾಗಿ ವ್ಯಕ್ತಿಯು ತನ್ನ ಭವಿಷ್ಯ ನಿರ್ಮಿಸುವಲ್ಲಿ ನಿರತನಾದಾಗ ವರ್ಷದಿಂದ ವರ್ಷಕ್ಕೆ ಉಲ್ಬಣವಾಗುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿಗೆ ಸಮಯೋಚಿತ ಸಲಹೆ, ಜೀವನ ನಿರ್ವಹಣೆಯ ಕೌಶಲ್ಯ ಹಾಗೂ ಆರ್ಥಿಕ ಪರಿಸ್ಥಿತಿ ನಿರ್ವಹಿಸುವ ಕಲೆಗಳ ಬಗ್ಗೆ ಅರಿವು ಮೂಡಿಸಿ ಮುನ್ನಡೆಯುವಂತೆ ಪುನಶ್ಚೇತನ ತುಂಬಲಾಗುತ್ತದೆ. 

ಕುಟುಂಬ ಶಿಕ್ಷಣ : ನಿಮಗೆ ಸ್ಕಿಜೋಫ್ರೇನಿಯಾದ ಬಗ್ಗೆ ಜ್ಞಾನ ಹಾಗೂ ತಿಳುವಳಿಕೆಗಳಿದ್ದರೆ ಅದರಿಂದ ಬಳಲುತ್ತಿರುವ ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬದ ಯಾರಾದರೂ ಸದಸ್ಯರಿಗೆ ಉತ್ತಮವಾಗಿ ಸಹಾಯವಾಗಬಹುದು. ಸ್ಕಿಜೋಫ್ರೇನಿಯಾ ಹೊಂದಿರುವ ಜನರಿಗೆ ಸ್ನೇಹಿತರ ಅಥವಾ ಕುಟುಂಬ ಸದಸ್ಯರ ಗಟ್ಟಿಯಾದ ಬೆಂಬಲ, ಪ್ರೋತ್ಸಾಹ ದೊರೆತರೆ ಅವರು ಇತರೆ ಸ್ಕಿಜೋಫ್ರೇನಿಯಾ ಹೊಂದಿರುವ ವ್ಯಕ್ತಿಗಿಂತಲೂ  ಉತ್ತಮವಾಗಿ ಬದುಕಬಲ್ಲರು ಎಂದು ಸಂಶೋಧನೆ ತೋರಿಸಿಕೊಟ್ಟೀದೆ.

ಇದನ್ನೂ ಓದಿ: ತಿಂಗಳ ಕೊನೆಯಲ್ಲಿ ಜೇಬು ಖಾಲಿ ಆಗೋಕೆ ಈ ಅಭ್ಯಾಸಗಳೇ ಕಾರಣ

ಸ್ವ-ಸಹಾಯ ಗುಂಪುಗಳು : ನಿಮ್ಮ ಪ್ರೀತಿಪಾತ್ರರು ಯಾರಾದರೂ ಸ್ಕಿಜೋಫ್ರೆನಿಯಾದಿಂದ ಬಳಲುತ್ತಿದ್ದರೆ ಅವರನ್ನು ನೀವು ಸಾಮಾಜಿಕ ಕೌಶಲ್ಯಗಳ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸಲು, ಸಮುದಾಯ ಆರೈಕೆ ಮತ್ತು ಔಟ್‌ರೀಚ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನೀವು ಪ್ರೋತ್ಸಾಹಿಸಬೇಕು. ನ್ಯಾಷನಲ್ ಅಲಯನ್ಸ್ ಆನ್ ಮೆಂಟಲ್ ಇಲ್ನೆಸ್ (NAMI) ಒಂದು ಔಟ್ರೀಚ್ ಸಂಸ್ಥೆಯಾಗಿದ್ದು ಅದು ಉಚಿತ ಪೀರ್-ಟು-ಪೀರ್ ಕಾರ್ಯಕ್ರಮವನ್ನು ನೀಡುತ್ತದೆ, ಉದಾಹರಣೆಗೆ, ಇದರಲ್ಲಿ ಮಾನಸಿಕ ಅಸ್ವಸ್ಥತೆಯ ವಯಸ್ಕರಿಗೆ 10 ಸೆಷನ್‌ಗಳನ್ನು ನಡೆಸಲಾಗುತ್ತದೆ, ಅವರು ತಮ್ಮ ಸ್ಥಿತಿಯನ್ನು ಸ್ವತಃ ಅನುಭವಿಸಿದ ಅಥವಾ ಪ್ರೀತಿಪಾತ್ರರ ಮೂಲಕ ಅನುಭವಿಸಿದ ಜನರಿಂದ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಅವಕಾಶವಿದೆ.

ಕೋಆರ್ಡಿನೇಟೆಡ್ ಸ್ಪೆಷಾಲಿಟಿ ಕೇರ್ (CSC) : ಇದು ಮೊದಲ ಬಾರಿಗೆ ಸೈಕೋಸಿಸ್ನ ಸಂಚಿಕೆಯನ್ನು ಅನುಭವಿಸುವ ಜನರಿಗೆ ಉತ್ತಮವಾದ ಚಿಕಿತ್ಸೆ ಎಂದು ಹೇಳಬಹುದು. ಈ ಚಿಕಿತ್ಸೆಯು ಔಷಧಿ ಮತ್ತು ಮಾನಸಿಕ ಚಿಕಿತ್ಸೆಗಳ ಸಂಯೋಜನೆಯಾಗಿದೆ. ರೋಗವನ್ನು ಅದರ ಆರಂಭಿಕ ಹಂತಗಳಲ್ಲಿ ಪತ್ತೆ ಹಚ್ಚುವ ಮೂಲಕ ಅದರ ದಿಕ್ಕು ಮತ್ತು ಮುನ್ನಡೆಯನ್ನು ಬದಲಾಯಿಸುವುದೇ ಈ ಚಿಕಿತ್ಸೆಯ ಗುರಿಯಾಗಿದೆ. ಸ್ಕಿಜೋಫ್ರೇನಿಯಾ ಹೊಂದಿರುವ ಜನರು ಆರಂಭಿಕ ಮತ್ತು ತೀವ್ರವಾದ ಚಿಕಿತ್ಸೆಯನ್ನು ಪಡೆಯುವಲ್ಲಿ ಉತ್ತಮ ದೀರ್ಘಕಾಲೀನ ಫಲಿತಾಂಶಗಳನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತೋರಿಸುತ್ತದೆ.

ಅಸರ್ಟಿವ್ ಕಮ್ಯೂನಿಟಿ ಟ್ರೀಟ್ಮೆಂಟ್ (ACT) : ಸ್ಕಿಜೋಫ್ರೇನಿಯಾ ಹೊಂದಿರುವ ಜನರು ಔಷಧಿಗಳನ್ನು ತೆಗೆದುಕೊಳ್ಳುವಂತಹ ಜೀವನದ ದೈನಂದಿನ ಸವಾಲುಗಳನ್ನು ಎದುರಿಸಲು ಸಹಾಯ ಮಾಡಲು ಇದು ಹೆಚ್ಚು ಸಕ್ರಿಯ ಪಾತ್ರವಹಿಸುತ್ತದೆ. ACT ವೃತ್ತಿಪರರು, ರೋಗಿಗಳು ತಮ್ಮ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ನಿಭಾಯಿಸಲು ಮತ್ತು ಬಿಕ್ಕಟ್ಟುಗಳನ್ನು ಎದುರಿಸುವಂತೆ ಸಹಾಯ ಮಾಡುತ್ತಾರೆ.

ಸೊಶಿಯಲ್ ರಿಕವರಿ ಥೆರೆಪಿ : ಈ ಚಿಕಿತ್ಸೆಯು ಸ್ಕಿಜೋಫ್ರೇನಿಯಾ ಹೊಂದಿರುವ ವ್ಯಕ್ತಿಗೆ ಗುರಿಗಳನ್ನು ಹೊಂದಿಸಲು ಮತ್ತು ಅವುಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಅವರಲ್ಲಿ ಆಶಾಭಾವನೆ ಮತ್ತು ತಮ್ಮ ಮತ್ತು ಇತರರ ಬಗ್ಗೆ ಸಕಾರಾತ್ಮಕ ನಂಬಿಕೆಗಳನ್ನು ನಿರ್ಮಿಸಿಕೊಳ್ಳುವಂತೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸಮಂತಾ ತೊಟ್ಟಿರೋ ಈ ಎಲ್ಲಾ ಡ್ರೆಸ್ ಗಳನ್ನ ನೀವೂ ಖರೀದಿಸಬಹುದು, Onlineನಲ್ಲೇ ಸಿಗುತ್ತೆ ನೋಡಿ!

ಚಟುವಟಿಕೆಯುಕ್ತರಾಗುವಂತೆ ನೋಡಿಕೊಳ್ಳುವುದು : ಸ್ಕಿಜೋಫ್ರೇನಿಯಾ ಹೊಂದಿರುವ ವ್ಯಕ್ತಿಗೆ ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಗಮನ ನೀಡ ಬೇಕಾಗುತ್ತದೆ. ನಿತ್ಯ ಅವರು ತಮ್ಮ ವ್ಯಾಯಾಮಗಳಲ್ಲಿ ತೊಡಗಿಕೊಳುವಂತೆ ಮಾಡುವುದು ಒಂದು ಉತ್ತಮ ಚಿಕಿತ್ಸೆಯ ರೂಪವಾಗಿದೆ. ಈ ಮೂಲಕ ರೋಗಿಗಳು ತಮ್ಮ ದೈನಂದಿನ ಜೀವನಕ್ಕಾಗಿ ಹೆಚ್ಚಿನ ಶಕ್ತಿ, ಸಾಮರ್ಥ್ಯ ಹೊಂದಿಸಿಕೊಳ್ಳುವ ದೃಷ್ಟಿಯಿಂದ ವ್ಯಾಯಾಮದಲ್ಲಿ ತೊಡಗಿಕೊಂಡಾಗ ಅವರ ಗಮನವೆಲ್ಲ ಬೇರೆಡೆ ಸೆಳೆದಂತಾಗುತ್ತದೆ. ಇದರಿಂದ ಅವರು ತಮ್ಮನ್ನು ತಾವು ಇತರರಂತೆ ಸಾಮಾನ್ಯ ಸ್ಥಿತಿಯಲ್ಲಿ ಇರುವಂತೆ ಕಂಡು ಹೆಚ್ಚು ಪ್ರಫುಲ್ಲಿತರಾಗುತ್ತಾರೆ. 
Published by:Sandhya M
First published: