Sleeping Disorder: ಇದು ನಿದ್ರೆ ಸಮಸ್ಯೆಯ ವಿಧಗಳು, ನಿಮಗೆ ಯಾವ ತೊಂದರೆ ಇದೆ ನೋಡಿ

Major Sleep Disorders: ಕೊನೆಯದಾಗಿ, ಶರೀರದ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳಲು ನಿದ್ರೆ ನಮಗೆ ಅವಶ್ಯಕವಾಗಿ ಬೇಕಾಗಿರುವ ಪ್ರಕ್ರಿಯೆಯಾಗಿದೆ. ಕೆಲ ತಜ್ಞರ ಪ್ರಕಾರ ರಾತ್ರಿಯ ಸಮಯದಲ್ಲಿ ಮಲಗಿಕೊಂಡೇ ಸಾಕಷ್ಟು ಜನರು ಮೊಬೈಲ್ ವೀಕ್ಷಣೆ ಮಾಡುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಿದ್ದೆ (Sleep) ಅಥವಾ ನಿದ್ರೆ ದೇಹದ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಅಗತ್ಯ ಪ್ರಮಾಣದಲ್ಲಿ ನಿದ್ರಿಸುವುದರಿಂದ ನಮ್ಮ ಶರೀರದಲ್ಲಿರುವ ಹಾರ್ಮೋನುಗಳು  ಸರಿಯಾಗಿ ಕೆಲಸ ಮಾಡುತ್ತವೆ. ಹಾಗಾಗಿ, ಸಮರ್ಪಕ ಪ್ರಮಾಣದಲ್ಲಿ ನಿದ್ರೆ ದೊರೆತರೆ ಆರೋಗ್ಯವೂ (Health) ಸಶಕ್ತವಾಗಿರುತ್ತದೆ ಹಾಗೂ ಉತ್ಸಾಹವೂ ಇಮ್ಮಡಿಯಾಗುತ್ತದೆ. ಆದರೆ ನಿದ್ರೆ ಎಂಬುದು ಸರಿಯಾಗಿ ಬರಬೇಕೆಂದರೆ ನಮ್ಮ ಆರೋಗ್ಯ ಸರಿಯಾಗಿರಬೇಕು. ಅದಕ್ಕಾಗಿ ನಮ್ಮ ಜೀವನಶೈಲಿಯು (Lifestyle) ಸಮರ್ಪಕವಾಗಿರಬೇಕು. ಆದರೆ ಇಂದಿನ ದಿನಮಾನಗಳಲ್ಲಿ ಅದು ಸಾಧ್ಯವೆ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಭಾರತದಂತಹ ದೇಶದಲ್ಲಿ ದಿನದ 24 ಗಂಟೆಗಳೂ ಕೆಲಸ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ಅದೆಷ್ಟೋ ಜನರು ರಾತ್ರಿ ಪಾಳಯಗಳಲ್ಲಿ ಕೆಲಸ ಮಾಡುತ್ತಾರೆ. ಇದರಿಂದಾಗಿ ಅವರ ಸ್ವಾಭಾವಿಕ ಜೀವನಶೈಲಿ ಬದಲಾಗಿ ಹೋಗಿದೆ. ಇಂದು ಬಹಳಷ್ಟು ಜನರು 'ಸೌಂಡ್ ಸ್ಲೀಪ್' ಗಾಗಿ ಪರದಾಡುತ್ತಾರೆ. ಇದರ ಫಲಶೃತಿಯಿಂದಾಗಿಯೇ ಭಾರತದಲ್ಲಿ (India) ಸಾಕಷ್ಟು ಜನರು ನಿದ್ರಾಹೀನತೆಯ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ಕಾಣಬಹುದು. 

ನಿದ್ರಾಹೀನತೆ ಎಂಬುದು ನಿತ್ಯವು ಸಮರ್ಪಕವಾಗಿ ಅವಶ್ಯಕವಿದ್ದಷ್ಟು ಪ್ರಮಾಣದಲ್ಲಿ ನಿದ್ರೆ ಬಾರದೆ ಇರುವಂತಹ ಒಂದು ಸ್ಥಿತಿಯಾಗಿದೆ. ಸಾಮಾನ್ಯವಾಗಿ, ಇಂದು ಕೆಲಸದ ಒತ್ತಡಗಳಿಂದಾಗಿ, ಮಾನಸಿಕ ಒತ್ತಡಗಳಿಂದಾಗಿ  ಬಹುತೇಕ ಜನರು ನಿದ್ರಾಹೀನತೆಯ ಸ್ಥಿತಿಯನ್ನು ಸಾಂದರ್ಭಿಕವಾಗಿ ಆಗಾಗ ಅನುಭವಿಸುತ್ತಲೇ ಇರುತ್ತಾರೆ. ಆದರೆ ಈ ಸ್ಥಿತಿಯು ನಿರಂತರವಾಗಿ ಮುಂದುವರೆದು ನಿಮ್ಮ ನಿತ್ಯ ಜೀವನದಲ್ಲಿ ಅಡೆ-ತಡೆಗಳುಂಟಾಗುವ ಪರಿಸ್ಥಿತಿ ಬಂದರೆ ಅದು ನಿದ್ರಾಹೀನತೆ ಅಥವಾ ಸ್ಲೀಪಿಂಗ್ ಡಿಸಾರ್ಡರ್ ಬಂದಿರುವುದನ್ನು ಸೂಚಿಸುತ್ತದೆ. 

ಸರಳವಾಗಿ ಹೇಳಬೇಕೆಂದರೆ ನಿದ್ರಾಹೀನತೆ ಎಂಬುದು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ನಿದ್ರೆಯ ಪ್ರಮಾಣದಲ್ಲಾಗುವ ಕೊರತೆ. ಈ ಕೊರತೆಯು ದೇಹದ ಶಕ್ತಿ, ಮನಸ್ಥಿತಿ, ಏಕಾಗ್ರತೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 

ಕೆಲವು ಸಂದರ್ಭಗಳಲ್ಲಿ, ನಿದ್ರಾಹೀನತೆಯು ಮತ್ತೊಂದು ವೈದ್ಯಕೀಯ ಅಥವಾ ಮಾನಸಿಕ ಆರೋಗ್ಯ ಸ್ಥಿತಿಯ ಲಕ್ಷಣವೂ ಆಗಿರಬಹುದು. ಅದಕ್ಕನುಸಾರವಾಗಿ ಚಿಕಿತ್ಸೆಯನ್ನು ಪಡೆದ ನಂತರ ನಿದ್ರೆಯ ಸಮಸ್ಯೆಗಳು ಹೋಗಬಹುದು.

ನಿದ್ರಾಹೀನತೆ ಉಂಟಾಗಲು ಸಾಕಷ್ಟು ಕಾರಣಗಳಿವೆ. ರೋಗಗಳು, ಮಾನಸಿಕ ಒತ್ತಡಗಳು ಹಾಗೂ ಕೆಲವು ಔಷಧಿಗಳ ಸೇವನೆ ನಿಮಗೆ ನಿದ್ರಾಹೀನತೆಯನ್ನುಂಟು ಮಾಡಬಹುದು. ನಿಮಗೆ ನಿದ್ರಾಹೀನತೆ ಉಂಟಾಗಿದೆ ಎಂಬ ಅನುಮಾನ ಬಂದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಅದಕ್ಕೆ ಚಿಕಿತ್ಸೆಯನ್ನು ಪಡೆಯುವುದು ಮುಖ್ಯವಾಗುತ್ತದೆ. ಏಕೆಂದರೆ, ಇದಕ್ಕೆ ಚಿಕಿತ್ಸೆ ಪಡೆಯದೆ ಹಾಗೆ ನಿರ್ಲಕ್ಷಿಸಿದರೆ ಇದು ದೇಹದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುವುದರ ಮೂಲಕ ಒಟ್ಟಾರೆ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

    ನಿದ್ರಾಹೀನತೆಯಲ್ಲಿರುವ ಪ್ರಕಾರಗಳು

ಹಾಗೆ ನೋಡಿದರೆ, ನಿದ್ರಾಹೀನತೆಯಲ್ಲಿ ಸಾಕಷ್ಟು ಪ್ರಕಾರಗಳಿರುವುದನ್ನು ಈಗಾಗಲೇ ಮಾಡಲಾದ ಅಧ್ಯಯನಗಳ ಮೂಲಕ ತಿಳಿದುಬರುತ್ತದೆ. ಆದರೂ ಪ್ರಮುಖವಾಗಿ, ನಿದ್ರಾಹೀನತೆಯಲ್ಲಿ ಐದು ಪ್ರಕಾರಗಳನ್ನು ಗುರುತಿಸಬಹುದಾಗಿದೆ. 

ಇನ್ಸೋಮ್ನಿಯಾ : ನೀವು ಪ್ರತಿ ರಾತ್ರಿ ನಿದ್ರಿಸಲು ಕಷ್ಟಪಡುತ್ತಿದ್ದರೆ ಅದರಲ್ಲೂ ನಿಮಗೆ ಸಾಕಷ್ಟು ದಣಿವಾಗಿದ್ದರೂ ನಿಮಗೆ ನಿದ್ರೆ ಬರುವುದು ಬಲು ಕಷ್ಟವಾಗುತ್ತಿದ್ದರೆ, ಅದಕ್ಕೆ ಕಾರಣ ಇನ್ಸೋಮ್ನಿಯಾ ಆಗಿರಬಹುದು. ನಿದ್ರಿಸಲು ಬಹಳಷ್ಟು ಕಷ್ಟ ಪಡುವುದು ಅಥವಾ ದೀರ್ಘ ಸಮಯ ನಿದ್ರೆಯ ಸ್ಥಿತಿಯಲ್ಲಿಲ್ಲದೆ ಇರುವುದು ಇನ್ಸೋಮ್ನಿಯಾದ ಮುಖ್ಯ ಲಕ್ಷಣವಾಗಿದೆ. ಇದರಲ್ಲೂ ಎರಡು ವಿಭಾಗಗಳಿದ್ದು ಅವುಗಳನ್ನು ಅಕ್ಯೂಟ್ ಹಾಗೂ ಕ್ರಾನಿಕ್ ಇನ್ಸೋಮ್ನಿಯಾ ಎಂದು ಗುರುತಿಸಲಾಗಿದೆ. 

ಇದನ್ನೂ ಓದಿ: ಈ ವಸ್ತುಗಳನ್ನು ಫ್ರಿಡ್ಜ್​ನಲ್ಲಿ ಇಡಲೇಬಾರದಂತೆ, ಇಲ್ಲಿದೆ ನೋಡಿ ಲಿಸ್ಟ್

ಅಕ್ಯೂಟ್ ಇನ್ಸೋಮ್ನಿಯಾ ಎಂಬುದು ತಾತ್ಕಾಲಿಕವಾದ ನಿದ್ರಾಹೀನತೆಯ ಸ್ಥಿತಿಯಾಗಿದೆ. ಇದು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದಾಗ ಉಂಟಾಗುವ ಜೆಟ್ ಲ್ಯಾಗ್ ಹಾಗೂ ಕೆಲವೊಮ್ಮೆ ಆಘಾತಕಾರಿ ವಿಷಯಗಳಿಂದ ಉಂಟಾಗಬಹುದು. ಕ್ರಾನಿಕ್ ಇನ್ಸೋಮ್ನಿಯಾ ಎಂಬುದು ದೀರ್ಘಕಾಲದವರೆಗೆ ಇರುವ ನಿದ್ರಾಹೀನತೆಯ ಸ್ಥಿತಿಯಾಗಿರುತ್ತದೆ. 

ಪ್ರಧಾನವಾಗಿ, ಇನ್ಸೋಮ್ನಿಯಾ ಉಂಟಾಗಲು ಇತರೆ ಹಲವು ಕಾರಣಗಳೂ ಸಹ ಇವೆ, ಅವುಗಳೆಂದರೆ, ಇತರೆ ಔಷಧಿಗಳ ಸೇವನೆ, ಹೆಚ್ಚು ಮದ್ಯ ಸೇವನೆ, ನಿಕೋಟಿನ್ ಸೇವನೆ, ಮಾನಸಿಕ ಒತ್ತಡ ಹಾಗೂ ಮಲಗುವ ಪರಿಸರ ಹಿತಕರವಾಗಿಲ್ಲದೆ ಇರುವುದು. ನಿದ್ರಾಹೀನತೆಯು ನಮ್ಮ ದಿನಚರಿಯ ಚಟುವಟಿಕೆಗಳ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ನಿಶಕ್ತ್ಯತೆ, ಕೆಲಸ ಕಾರ್ಯಗಳಲ್ಲಿ ಗಮನವಿಲ್ಲದೆ ಇರುವುದು ಹಾಗೂ ಖಿನ್ನತೆಯೂ ಇದರಿಂದ ಬರಬಹುದು.

ರೆಸ್ಟ್ ಲೆಸ್ ಲೆಗ್ಸ್ ಸಿಂಡ್ರೋಮ್ (RLS) : ಹೆಸರೇ ಸೂಚಿಸುವಂತೆ ಮಲಗಿದಾಗ ಕಾಲುಗಳಲ್ಲಾಗುವ ಚಲನೆಯಿಂದಾಗಿ ನಿದ್ರೆ ಬರದಿರುವ ಸ್ಥಿತಿ ಇದಾಗಿದೆ. ಈ ಸ್ಥಿತಿಯಲ್ಲಿ ಕಾಲುಗಳಲ್ಲಿ ಜುಮ್ಮೆನಿಸುವಂತಹ ಸಂವೇದನೆಯುಂಟಾಗುವ ಕಾರಣ ಕಾಲುಗಳು ಚಲನೆಯ ಸ್ಥಿತಿಯಲ್ಲಿರುತ್ತವೆ. ನಾವು ಆಡು ಭಾಷೆಯಲ್ಲಿ ಇದನ್ನು ಕಾಲಾಡಿಸುವುದು ಎಂತಲೂ ಕರೆಯುತ್ತೇವೆ. ಇದೂ ಸಹ ನಿದ್ರಾಹೀನತೆಯ ಒಂದು ಸ್ಥಿತಿಯಾಗಿದೆ. ಸಾಮಾನ್ಯವಾಗಿ ಕಾಲಾಡಿಸುವುದು ದಿನದ ಸಮಯದಲ್ಲಿ ಕಂಡುಬಂದರೂ ರಾತ್ರಿ ಮಲಗುವಾಗ ಇದರ ತೀವ್ರತೆ ಹೆಚ್ಚಾಗಿರುತ್ತದೆ. 

ಪ್ಯಾರಾಸೋಮ್ನಿಯಾ : ಇದೊಂದು ರೀತಿಯ ನಿದ್ರಾಹೀನತೆಯ ಸ್ಥಿತಿಯಾಗಿದ್ದು ಇದರಲ್ಲಿ ವ್ಯಕ್ತಿಯು ಮಲಗಿರುವಾಗ ದೈಹಿಕ ಕ್ರಿಯೆಗಳನ್ನು ಮಾಡುತ್ತಾನೆ. ಅಂದರೆ ವ್ಯಕ್ತಿಗೆ ಕನಸು ಬಿದ್ದಿದ್ದರೆ ಆ ಕನಸಿನ ಪ್ರಸಂಗದಂತೆ ಅವನ ವರ್ತನೆ ಬಾಹ್ಯವಾಗಿಯೂ ಕಂಡುಬರುತ್ತದೆ. ಕೈ/ಕಾಲುಗಳನ್ನಾಡಿಸುವುದು, ಅರಚುವುದು/ಚೀರುವುದು, ಹಾಸಿಗೆ ಒದ್ದೆ ಮಾಡುವುದು, ಹಲ್ಲು ಕಡಿಯುವುದು, ನಿದ್ರೆಯಲ್ಲೇ ಚಲಿಸುವುದು ಮುಂತಾದವುಗಳನ್ನು ಮಾಡುತ್ತಾನೆ. ಇದು ಮನೆಯಲ್ಲಿ ಇತರರಿಗೂ ಅಪಾಯವನ್ನು ಒಡ್ಡಬಹುದು.    

ಸ್ಲೀಪ್ ಅಪ್ನಿಯಾ : ಇದು ಇನ್ನೊಂದು ಬಗೆಯ ನಿದ್ರಾಹೀನತೆಯ ಸ್ಥಿತಿ. ಮಲಗಿರುವಾಗ ಉಸಿರಾಟದಲ್ಲಿ ಅಡಚಣೆಯುಂಟಾಗಿ ಥಟ್ಟನೆ ಏಳುವುದು ಈ ನಿದ್ರಾಹೀನತೆಯ ಲಕ್ಷಣ. ಈ ಸ್ಥಿತಿ ಬರಲು ಕಾರಣ ನೀವು ಉಸಿರಾಡುವಾಗ ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿರಬಹುದು ಇಲ್ಲವೆ ಆಳವಿಲ್ಲದ ಉಸಿರು ಹೊರ ಬಿಡುತ್ತಿರಬಹುದು. ಈ ಸ್ಥಿತಿಯಿಂದ ಬಳಲುವ ಜನರು ಮಲಗಿದ್ದಾಗ ಒಮ್ಮೊಮ್ಮೆ ಉಸಿರಾಡುವುದನ್ನೇ ನಿಲ್ಲಿಸಿಬಿಡುತ್ತಾರೆ, ಪರಿಣಾಮ ಥಟ್ಟನೆ ಎಚ್ಚರವಾಗಿ ಬಿಡುತ್ತದೆ. ಇದನ್ನು ನಿರ್ಲಕ್ಷಿಸಿದರೆ ಇದು ರಕ್ತದೊತ್ತಡ ಏರುವಂತೆ ಮಾಡಬಹುದು ಹಾಗೂ ಹೃದಯಾಘಾತವಾಗುವ ಸಾಧ್ಯತೆಯೂ ಇರುತ್ತದೆ. 

ಇದರಲ್ಲಿ ಮೂರು ಬಗೆಗಳಿವೆ

ಆಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ - ನಿಮ್ಮ ಗಂಟಲಿನಲ್ಲಿರುವ ಮಸಲ್ ಗಳು ರಿಲ್ಯಾಕ್ಸ್ ಆದಾಗ ಗಾಳಿಯಾಡುವುದು ಬ್ಲಾಕ್ ಆಗುತ್ತದೆ. 

ಸೆಂಟ್ರಲ್ ಸ್ಲೀಪ್ ಅಪ್ನಿಯಾ - ಇದು ಮೇಲಿನ ಅಪ್ನಿಯಾದ ವಿರುದ್ಧವಾಗಿ ಕೆಲಸ ಮಾಡುತ್ತದೆ. ಅಂದರೆ, ನಿಮ್ಮಲ್ಲಿ ಗಾಳಿಯಾಡುವುದು ಸಮರ್ಪಕವಾಗಿರುತ್ತದೆ, ಆದರೆ ನಿಮ್ಮ ಮೆದುಳು ಉಸಿರಾಡುವಂತೆ ಸೂಚನೆಯನ್ನು ನೀಡುವುದಿಲ್ಲ.

ಕಾಂಪ್ಲೆಕ್ಸ್ ಸ್ಲೀಪ್ ಅಪ್ನಿಯಾ - ಇದು ಸೆಂಟ್ರಲ್ ಸ್ಲೀಪ್ ಅಪ್ನಿಯಾ ಹಾಗೂ ಆಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಇವರಡರ ಸಂಯೋಜನೆಯಾಗಿದೆ. 

ಇದನ್ನೂ ಓದಿ: ಒಣ ಕಣ್ಣುಗಳ ಸಮಸ್ಯೆಗೆ ಈ ಆಹಾರಗಳೇ ರಾಮಬಾಣವಂತೆ

ನಾರ್ಕೋಲೆಪ್ಸಿ : ಇದೊಂದು ಬಗೆಯ ನಿದ್ರಾಹೀನತೆಯ ಸ್ಥಿತಿಯಾಗಿದೆ. ಈ ಸ್ಥಿತಿಯಲ್ಲಿ ವ್ಯಕ್ತಿ ದಿನವಿಡಿ ದಣಿದಿರುವ, ನಿದ್ರೆಯ ಗುಂಗಿನಲ್ಲಿರುವ ಮನಸ್ಥಿತಿಯಲ್ಲಿರುತ್ತಾನೆ. ಈ ಸ್ಥಿತಿಯನ್ನು ವೈದ್ಯಕೀಯವಾಗಿ ನಿದ್ರಾಘಾತ ಎಂತಲೂ ಕರೆಯುತ್ತಾರೆ. ಹೇಗೆ ಸಡನ್ ಆಗಿ ಹೃದಯಾಘಾತವಾಗುವುದೋ ಅದೇ ರೀತಿಯಲ್ಲಿ ಈ ಸ್ಥಿತಿಯಲ್ಲಿರುವವರು ಥಟ್ಟನೆ ನಿದ್ರಾಘಾತಕ್ಕೆ ಒಳಗಾಗುತ್ತಾರೆ. ಅಂದರೆ ದಿನದ ಯಾವುದೇ ಸಮಯದಲ್ಲಿ ಆ ವ್ಯಕ್ತಿಗಳಿಗೆ ತಡೆದುಕೊಳ್ಳಲಾಗದಂತಹ ನಿದ್ರೆ ಬರಬಹುದು. ಇದು ಒಂದು ರೀತಿಯಲ್ಲಿ ಸಾಕಷ್ಟು ಅಪಾಯಕಾರಿಯಾಗಿರುವ ಸ್ಥಿತಿ ಎಂತಲೂ ಹೇಳಬಹುದು. ಏಕೆಂದರೆ ದಿನದ ಸಮಯದಲ್ಲಿ ವ್ಯಕ್ತಿಯು ಹಲವು ಬಾಹ್ಯ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ. ಉದಾಹರಣೆಗೆ ಕಾರ್ಖಾನೆಗಳಲ್ಲಿ ಭಾರವಾದ ಯಂತ್ರಗಳೊಂದಿಗೆ ಕೆಲಸ ಮಾಡುವ ವ್ಯಕ್ತಿ, ವಾಹನ ಚಾಲನೆ ಮಾಡುತ್ತಿರುವ ವ್ಯಕ್ತಿ ಈ ರೀತಿಯ ನಿದ್ರಾಘಾತಕ್ಕೆ ಒಳಗಾದರೆ ಅಪಾಯ ಸಂಭವಿಸಬಹುದಾದ ಸಾಧ್ಯತೆ ಹೆಚಾಗುತ್ತದೆ. 

ಕೊನೆಯದಾಗಿ, ಶರೀರದ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳಲು ನಿದ್ರೆ ನಮಗೆ ಅವಶ್ಯಕವಾಗಿ ಬೇಕಾಗಿರುವ ಪ್ರಕ್ರಿಯೆಯಾಗಿದೆ. ಕೆಲ ತಜ್ಞರ ಪ್ರಕಾರ ರಾತ್ರಿಯ ಸಮಯದಲ್ಲಿ ಮಲಗಿಕೊಂಡೇ ಸಾಕಷ್ಟು ಜನರು ಮೊಬೈಲ್ ವೀಕ್ಷಣೆ ಮಾಡುತ್ತಾರೆ. ಅದರಿಂದ ಹೊರಹೊಮ್ಮುವ ಆ ಪರದೆಯ ಬೆಳಕಿನ ತರಂಗಾಂತರಗಳು ನಮ್ಮ ನಿದ್ರೆಯ ಸ್ಥಿತಿಯು ತೊಲಗುವಂತೆ ಮಾಡುತ್ತದೆ ಎನ್ನಲಾಗಿದೆ. ಹಾಗಾಗಿ, ಕೆಲ ಅನವಶ್ಯಕ ಅಭ್ಯಾಸಗಳನ್ನು ತ್ಯಜಿಸುವುದರ ಮೂಲಕ ಉತ್ತಮವಾದ ನಿದ್ರೆ ಮಾಡುತ್ತ ಆರೋಗ್ಯದಿಂದಿರಲು ಪ್ರಯತ್ನಿಸಿ. 
Published by:Sandhya M
First published: