Piles Remedy: ಪೈಲ್ಸ್​ ಸಮಸ್ಯೆಯಿಂದ ಹೈರಾಣಾಗಿದ್ರೆ ಚಿಂತೆ ಬಿಡಿ, ನಾವ್ ಹೇಳೋ ಈ ಮದ್ದು ಟ್ರೈ ಮಾಡಿ

Home Remedies For Piles: ಇಂದಿನ ದಿನಮಾನಗಳಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳು ಬಂದಿವೆ. ಇದೆಲ್ಲವುಗಳ ಸಂಯೋಜನೆಯಿಂದ ಉತ್ತಮವಾದ ಚಿಕಿತ್ಸೆ ಇಂದು ಲಭ್ಯವಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೂಲವ್ಯಾಧಿ (Piles) ಅಥವಾ ಎಲ್ಲೆಡೆ ಸಾಮಾನ್ಯವಾಗಿ ಕರೆಯಲಾಗುವ ಪೈಲ್ಸ್ ಎಂಬುದು ಇಂದು ಅತಿ ಸಾಮಾನ್ಯ ಸಮಸ್ಯೆಗಳಲ್ಲೊಂದಾಗಿ (Problem) ಗುರುತಿಸಲ್ಪಟ್ಟಿದೆ. ಮೂಲವ್ಯಾಧಿಗೆ ಸಂಬಂಧಿಸಿದಂತೆ ನೂರಾರು ಅಧ್ಯಯನಗಳನ್ನು ಈಗಾಗಲೇ ಮಾಡಲಾಗಿದ್ದು ಕೆಲ ವರದಿಯ ಪ್ರಕಾರ, ಪ್ರಸ್ತುತ ಭಾರತದಲ್ಲಿ ಪ್ರತಿವರ್ಷ ಸುಮಾರು ಒಂದು ಕೋಟಿ ಜನರು ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆನ್ನಲಾಗಿದೆ. 

ಮೂಲವ್ಯಾಧಿ ಎಂದರೇನು?

ಆಂಗ್ಲ ಭಾಷೆಯಲ್ಲಿ ಹೆಮೊರಾಯಿಡ್ಸ್ ಎಂದು ಕರೆಯಲ್ಪಡುವ ಈ ಸಮಸ್ಯೆಯು ಗುದನಾಳಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಾಗಿದೆ. ಗುದದ್ವಾರ ಹಾಗೂ ಗುದನಾಳದಲ್ಲಿರುವ ನರಗಳು ಊದಿಕೊಂಡ (ಬಾವು ಬರುವುದು) ಸ್ಥಿತಿಯನ್ನೇ ಪೈಲ್ಸ್ ಅಥವಾ ಮೂಲವ್ಯಾಧಿ ಎನ್ನುತ್ತಾರೆ. ಇದರಿಂದ ಪೈಲ್ಸ್ ಹೊಂದಿದ ವ್ಯಕ್ತಿ ಅದರಲ್ಲೂ ವಿಶೇಷವಾಗಿ ಮಲವಿಸರ್ಜನೆಯ ಸಂದರ್ಭದಲ್ಲಿ ಗುದದ್ವಾರದ ಬಳಿ ಕೆರೆತ, ನೋವು ಹಾಗೂ ಒಮ್ಮೊಮ್ಮೆ ರಕ್ತಸ್ರಾವವಾಗುವುದನ್ನು ಅನುಭವಿಸುತ್ತಾನೆ. ಇದು ಸಾಕಷ್ಟು ಕಿರಿಕಿರಿಯಾಗುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. ಇದು ಗುದನಾಳದ ರಕ್ತಸ್ರಾವದ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಹೆಮೊರಾಯಿಡ್ಸ್ ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ ಇದು ಗಮನಾರ್ಹವಾದ ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು.

ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ಹಲವಾರು ಅಧ್ಯಯನಗಳಲ್ಲಿ ಕಂಡುಬಂದಿರುವ ಸಂಗತಿಯೆಂದರೆ, 45 ರಿಂದ 65 ವಯೋಮಿತಿಯಲ್ಲಿರುವ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿ ತಮ್ಮ ಜೀವನದ ಯಾವುದಾದರೊಂದು ಸಮಯದಲ್ಲಿ ಪೈಲ್ಸ್ ಅನ್ನು ಅನುಭವಿಸಿಯೇ ಇರುತ್ತಾನೆಂದು ತಿಳಿದುಬಂದಿದೆ. ಆದರೆ, ಇತ್ತೀಚಿನ ಕೆಲ ಸಮಯದಿಂದ ಕಿರಿಯ ವಯಸ್ಕರಲ್ಲೂ ಪೈಲ್ಸ್ ಹೆಚ್ಚಾಗುತ್ತಿರುವುದು ಆತಂಕದ ಹಾಗೂ ಕಳವಳಕಾರಿಯಾದ ಸಂಗತಿಯಾಗಿದೆ. ಇಂದಿನ ಜೀವನಶೈಲಿ, ಒತ್ತಡ, ಬೊಜ್ಜು ಹಾಗೂ ಅದರಿಂದುಂಟಾಗುವ ಮಲಬದ್ಧತೆ ಮುಂತಾದವುಗಳು ಮೂಲವ್ಯಾಧಿ ಚಿಕ್ಕವರಲ್ಲೂ ಕಂಡುಬರಲು ಕಾರಣವಾಗುತ್ತಿವೆ. 

ವೈದೃಶಿ ಲ್ಯಾಬೋರೇಟರೀಸ್‌ನ ವಕ್ತಾರರಾದ ಡಾ. ರೋಹಿತ್ ಪರಾಶರ್ ಹೇಳುತ್ತಾರೆ, “ಸಣ್ಣ ಪಟ್ಟಣಗಳು ಅಥವಾ ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಪೈಲ್ಸ್ (ಹೆಮೊರಾಯಿಡ್ಸ್) ಹೊಂದಿರುವವರ ಸಂಖ್ಯೆ ಹೆಚ್ಚು. ಇದಕ್ಕೆ ಕಾರಣ ನಗರ ಪ್ರದೇಶಗಳಲ್ಲಿ ಜನರು ದೋಷಪೂರಿತ ಆಹಾರ ಪದ್ಧತಿ, ಅಂದರೆ ಜಂಕ್ ಫುಡ್, ಮಸಾಲೆಗಳ ಹೆಚ್ಚಿನ ಸೇವನೆ ಮಾಡುತ್ತಾರೆ. ಫೈಬರ್ ಭರಿತ ಆಹಾರದ ಕಡಿಮೆ ಸೇವನೆ. ಈ ರೀತಿ ಫಾಸ್ಟ್ ಮತ್ತು ಜಂಕ್ ಫುಡ್ ಸೇವನೆಗೆ ದಾಸರಾಗುವ ಮೂಲಕ ಯುವಕರು ಶಾಲೆ ಅಥವಾ ಕಾಲೇಜು ದಿನಗಳಿಂದಲೇ ಈ ಪೈಲ್ಸ್ ಸಮಸ್ಯೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ ಮತ್ತು ಅವರು ಮುಂದೆ ಒತ್ತಡದ ವೃತ್ತಿಜೀವನಕ್ಕೆ ಪ್ರವೇಶಿಸಿದಾಗ ಈ ಸಮಸ್ಯೆ ಇನ್ನಷ್ಟು ಹದಗೆಡುತ್ತದೆ. ನಾನ್-ಫೈಬ್ರಸ್ ಆಹಾರವು ಗುದನಾಳ ಮತ್ತು ಗುದದ್ವಾರದಲ್ಲಿ ಸಾಕಷ್ಟು ಹಾನಿ ಮಾಡಿ ಉರಿಯೂತವನ್ನು ಉಂಟುಮಾಡುತ್ತದೆ. ಊತ ಮತ್ತು ಉರಿಯೂತ ದೀರ್ಘಕಾಲದವರೆಗೆ ಮುಂದುವರಿದಾಗ, ಅದು ಮೂಲವ್ಯಾಧಿಗೆ ಜನ್ಮ ನೀಡುತ್ತದೆ. ಆದ್ದರಿಂದ ಸಾಕಷ್ಟು ಸಲಾಡ್‌ಗಳು, ಕಾಲೋಚಿತ ತರಕಾರಿಗಳು ಮತ್ತು ತಾಜಾ ಹಣ್ಣುಗಳೊಂದಿಗೆ ಹೆಚ್ಚಿನ ಫೈಬರ್ ಆಹಾರವು ಪ್ರತಿದಿನವೂ ಸೇವಿಸಬೇಕು. ಮತ್ತೊಂದೆಡೆ, ಮಸಾಲೆಗಳು, ಮಾಂಸಾಹಾರಿ ಆಹಾರಗಳು ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಪೈಲ್ಸ್ ನಿಂದ ದೂರವಿರಲು ಬಯಸಿದರೆ ಸಾಧ್ಯವಾದಷ್ಟು ತ್ಯಜಿಸಬೇಕು". 

ಇದನ್ನೂ ಓದಿ: ಯೂರಿಕ್ ಆಮ್ಲದಿಂದ ಬರಬಹುದು ಈ ಸಮಸ್ಯೆಗಳು, ಅದಕ್ಕೆ ಪರಿಹಾರ ಇಲ್ಲಿದೆ

ಮೂಲವ್ಯಾಧಿಯಲ್ಲಿರುವ ಪ್ರಕಾರಗಳು

ಮೂಲವ್ಯಾಧಿಯಲ್ಲಿ ಪ್ರಧಾನವಾಗಿ ಎರಡು ಪ್ರಮುಖ ಪ್ರಕಾರಗಳಿವೆ ಹಾಗೂ ಅವುಗಳೆಂದರೆ ಆಂತರಿಕ ಮೂಲವ್ಯಾಧಿ ಹಾಗೂ ಬಾಹ್ಯ ಮೂಲವ್ಯಾಧಿ

ಆಂತರಿಕ ಮೂಲವ್ಯಾಧಿ : ಗುದನಾಳದ ಒಳ ಭಾಗದಲ್ಲಿ ಈ ಮೂಲವ್ಯಾಧಿಯ್ಂಟಾಗುತ್ತದೆ. ಹೊರಗಿನಿಂದ ಈ ಮೂಲವ್ಯಾಧಿಯನ್ನು ನೋಡಲಾಗದು ಹಾಗೂ ಇದು ನೋವುರಹಿತವಾಗಿರುತ್ತದೆ.

ಬಾಹ್ಯ ಮೂಲವ್ಯಾಧಿ : ಗುದದ್ವಾರದ ಸುತ್ತಲಿನ ಚರ್ಮದಲ್ಲಿ ಈ ಮೂಲವ್ಯಾಧಿ ಕಂಡುಬರುತ್ತದೆ ಹಾಗೂ ಇದು ಸರಳವಾಗಿ ಗೋಚರಿಸಲ್ಪಡುತ್ತದೆ. ಗುದದ್ವಾರದ ನರಗಳು ಹಾಗೂ ಚರ್ಮಗಳು ಸ್ಪರ್ಶ ಜ್ಞಾನ ಹೊಂದಿರುವುದರಿಂದ ಇದು ಸಾಕಷ್ಟು ನೋವುಂಟು ಮಾಡುತ್ತದೆ. 

ಮೂಲವ್ಯಾಧಿಗೆ ಚಿಕಿತ್ಸೆ

ಇಂದಿನ ದಿನಮಾನಗಳಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳು ಬಂದಿವೆ. ಇದೆಲ್ಲವುಗಳ ಸಂಯೋಜನೆಯಿಂದ ಉತ್ತಮವಾದ ಚಿಕಿತ್ಸೆ ಇಂದು ಲಭ್ಯವಿದೆ. ಮೂಲವ್ಯಾಧಿಗೂ ಸಹ ಸಾಕಷ್ಟು ಚಿಕಿತ್ಸೆಗಳು ಆಯುರ್ವೇದ, ಆಲೋಪತಿ ಹಾಗೂ ಹೋಮಿಯೋಪತಿ ವೈದ್ಯಕೀಯ ಶಾಸ್ತ್ರಗಳಲ್ಲಿವೆ. ಇದಕ್ಕೆ ಹೊರತಾಗಿ, ಮನೆಯಲ್ಲೇ ಕೆಲವು ಪಥ್ಯೆಗಳನ್ನು ಪಾಲಿಸುವುದರ ಮೂಲಕ ಪೈಲ್ಸ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಹಾಗಾದರೆ, ಪೈಲ್ಸ್ ಚಿಕಿತ್ಸೆಗಾಗಿ ಮಾಡಿಕೊಳ್ಳಬಹುದಾದ ಮನೆಮದ್ದುಗಳು ಯಾವುವು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. 

ಎಪ್ಸಮ್ ಉಪ್ಪು ಮಿಶ್ರಿತ ನೀರಿನಲ್ಲಿ ಸ್ನಾನ : ಉಗುರು ಬೆಚ್ಚಗಿನ ನೀರಿನಲ್ಲಿ ಒಂದರಿಂದ ಎರಡು ಚಮಚಗಳಷ್ಟು ಎಪ್ಸಂ ಉಪ್ಪು, ಬೇಕಿಂಗ್ ಸೋಡಾ ಹಾಗೂ ಆಪಲ್ ಸೈಡರ್ ವಿನೆಗಾರ್ ಅನ್ನು ಹಾಕಿ ಚೆನ್ನಾಗಿ ಕಲೆಸಿ. ಇದನ್ನು ಆಂಗ್ಲದಲ್ಲಿ ಸಿಟ್ಜ್ ಬಾತ್ ಎಂದು ಕರೆಯುತ್ತಾರೆ. ಇದರ ಕಿಟ್ ಗಳು ಸಹ ಲಭ್ಯವಿದ್ದು ಅದು ಪೋಟಾಶಿಯಂ ಅನ್ನೂ ಸಹ ಒಳಗೊಂಡಿರುತ್ತದೆ. ಈ ನೀರನ್ನು ಬಾತ್ ಟಬ್ ನಲ್ಲಿರಿಸಿ ಅದರಲ್ಲಿ ಕುಳಿತು 15-20 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ. ದಿನಕ್ಕೆ ಎರಡರಿಂದ ಮೂರು ಬಾರಿ ಮಾಡಬಹುದು. 

ತೆಂಗಿನ ಎಣ್ಣೆ : ಮೂಲವ್ಯಾಧಿಯಿಂದ ಉರಿಯೂತ, ಕೆರೆತ, ನೋವು, ಬಾವುಗಳೇನಾದರೂ ಇದ್ದಲ್ಲಿ ತೆಂಗಿನ ಎಣ್ಣೆಯನ್ನು ಆ ಜಾಗದ ಸುತ್ತಲು ಹಚ್ಚಿಕೊಂಡು ಮೃದುವಾಗಿ ತಿಕ್ಕಿಕೊಳ್ಳಿ. ನೋವು ಉಪಶಮನವಾಗುತ್ತದೆ. 

ವಿಚ್ ಹಾಜಲ್ : ಇದೊಂದು ಲೊಳೆಯಿರುವ ತೊಗಟೆಯ ಸಸ್ಯ. ಇದರ ದ್ರವ್ಯವನ್ನು ರಕ್ತ ಹರಿಯದಂತೆ ತಡೆಯುವಲ್ಲಿ ಬಳಸಲಾಗುತ್ತದೆ. ಇದು ಉರಿಯೂತ ವಿರೋಧಕ ತತ್ವ, ಆಂಟಿ ಆಕ್ಸಿಡೆಂಟ್ ಹಾಗೂ ಅಸ್ಟ್ರಿಂಜೆಂಟ್ ಅಂಶಗಳನ್ನು ಹೊಂದಿದ್ದು ಬಾಹ್ಯ ಮೂಲವ್ಯಾಧಿಯಿಂದಾಗುವ ನೋವು ಉಪಶಮನ ಮಾಡುತ್ತದೆ. ಹಾಗಾಗಿ, ಶುದ್ಧವಾದ ಆಂಟಿ ಹಾಜಲ್ ಬಳಸುವುದು ಉತ್ತಮ.

ಅಲೋವಿರಾ : ಈ ಸ್ವಾಭಾವಿಕ ಸಸ್ಯವು ಉರಿಯೂತ ವಿರೋಧಕ ತತ್ವವನ್ನು ಅಪಾರವಾಗಿ ಹೊಂದಿದ್ದು ನೋವು ಮಾಯವಾಗುವಂತೆ ಮಾಡುತ್ತದೆ. ಕೆರೆತ, ಕಿರಿಕಿರಿಗಳಿದ್ದರೂ ಅಲೋವಿರಾ ಬಳಕೆಯಿಂದ ಉತ್ತಮವಾಗಿ ಉಪಚರಿಸಬಹುದು. ಅಲೋವಿರಾ ವನ್ನು ನೇರವಾಗಿ ಗುದದ್ವಾರದ ಸ್ಥಳದಲ್ಲಿ ಹಚ್ಚಿಕೊಳ್ಳಬಹುದಾಗಿದೆ. 

ಐಸ್ ಪ್ಯಾಕ್ : ಮಂಜುಗಡ್ಡೆಗಳನ್ನು ಹಚ್ಚುವುದರ ಮೂಲಕವೂ ಮೂಲವ್ಯಾಧಿಯ ನೋವಿನಿಂದ ಪರಿಹಾರ ಪಡೆಯಬಹುದು. ಚಿಕ್ಕ ಚಿಕ್ಕ ಮಂಜುಗಡ್ಡೆಗಳ ಐಸ್ ಪಾಕ್ಯ್ ಅನ್ನು ನೇರವಾಗಿ ಮೂಲವ್ಯಾಧಿ ಸ್ಥಳದ ಸುತ್ತಮುತ್ತ ಹಚ್ಚಿಕೊಳ್ಳುವುದರಿಂದ ಉರಿಯೂತ, ಬಾವು, ಕೆರೆತ ಹಾಗೂ ನೋವಿನಿಂದ ತ್ವರಿತವಾಗಿ ಮುಕ್ತಿಪಡೆಯಬಹುದು. 

ಸರಳವಾಗಿ ದೊರೆಯುವ ಔಷಧಿಗಳು: ಓವರ್ ದ ಕೌಂಟರ್ ನೋವು ನಿವಾರಕಗಳನ್ನು ಬಳಸಿ ಪೈಲ್ಸ್ ನೋವಿನಿಂದ ಮುಕ್ತಿ ಪಡೆಯಬಹುದು. ಅಂದರೆ ಔಷಧಿ ಅಂಗಡಿಗಳಲ್ಲಿ ನಿರಾಯಾಸವಾಗಿ ದೊರೆಯುವ (ಐಬುಪ್ರೊಫೇನ್ ಅಥವಾ ಅಸೆಟಾಮಿನೋಫೆನ್), ಸ್ಟೆರಾಯ್ಡ್ ಕ್ರೀಮ್‌ಗಳು ಮತ್ತು ಹೆಮೊರೊಹಾಯಿಡ್ ಕ್ರೀಮ್‌ಗಳು ನಿಮಗೆ ನೋವಿನಿಂದ ಪರಿಹಾರವನ್ನು ನೀಡಬಹುದು. ಆದರೆ, ಅದನ್ನು ಹಚ್ಚಿಕೊಳ್ಳುವ ಮುಂಚೆ ಒಂದೊಮ್ಮೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: ಇದೇ ಕಾರಣಕ್ಕೆ ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗಬೇಕಂತೆ

ಸಾಕಷ್ಟು ಜಲಸಂಚಯನ: ನಿತ್ಯ ಸಾಕಷ್ಟು ನೀರು ಅಥವಾ ಹಣ್ಣು ರಸಗಳ ಮೂಲಕ ದ್ರವವನ್ನು ಕುಡಿಯುವುದು ಉತ್ತಮ. ದೇಹದಲ್ಲಿ ನೀರಿನಂಶ ಉತ್ತಮವಾಗಿದ್ದರೆ ಎಂದಿಗೂ ಮಲಬದ್ಧತೆಯಾಗದು ಮತ್ತು ದಿನವಿಡೀ ಜಲಸಂಚಯನವು ಮಲವನ್ನು ಮೃದುಗೊಳಿಸುತ್ತದೆ, ಮಲವಿಸರ್ಜನೆ ಮಾಡುವಾಗ ನೋವು, ಕಿರಿಕಿರಿ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ (ಮಲವು ಸುಲಭವಾಗಿ ಹಾದುಹೋಗುತ್ತದೆ). 

ಫೈಬರ್ ಭರಿತ ಆಹಾರ: ಆಹಾರದಲ್ಲಿರುವ ಹೆಚ್ಚಿನ ಫೈಬರ್ ಮಲವನ್ನು ಮೃದುಗೊಳಿಸುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ, ಮಲವಿಸರ್ಜನೆಯ ಸಮಯದಲ್ಲಿ ನೋವು, ಕಿರಿಕಿರಿ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಫೈಬರ್ ಭರಿತ ಆಹಾರವು ಜೀರ್ಣಕಾರಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಫೈಬರ್ ಅಂಶವು  ಸಮೃದ್ಧವಾಗಿರುತ್ತವೆ.

ಸಿಲ್ಲಿಯಂ ಹಸ್ಕ್: ಸಿಲ್ಲಿಯಂ ಹಸ್ಕ್ ಒಂದು ನೈಸರ್ಗಿಕವಾದ ನಾರಿನಂಶದ ವಸ್ತುಅವಾಗಿದ್ದು, ಮಲವನ್ನು ಮೃದುಗೊಳಿಸಲು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೈನಂದಿನ ಊಟ ತಿಂಡಿಗಳಲ್ಲಿ ಫೈಬರ್ ಸೇವನೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಆದರೆ ನೆನಪಿಡಿ ಹೆಚ್ಚು ಫೈಬರ್ ಅನ್ನು ತ್ವರಿತವಾಗಿ ಸೇರಿಸುವುದರಿಂದ ಹೊಟ್ಟೆ ಉಬ್ಬುವಿಕೆ ಅಥವಾ ಹೊಟ್ಟೆ ಸೆಳೆತ ಉಂಟಾಗಬಹುದು. ಹಾಗಾಗಿ, ಅದನ್ನು ಕ್ರಮೇಣವಾಗಿ ಹೆಚ್ಚಿಸುತ ಬರಬೇಕು.

ಇದನ್ನೂ ಓದಿ: ನಿಮ್ಮ ಫುಡ್​ ಅನ್ನು ಹೀಗೆ ಉಳಿಸಿದ್ರೆ ಹಣ ಸಹ ಸೇವ್ ಆಗುತ್ತಂತೆ

ಸೂಕ್ತವಾದ ಬಟ್ಟೆಗಳನ್ನು ಧರಿಸುವುದು: ಸಡಿಲವಾದ, ಗಾಳಿಯಾಡುವ ಪ್ರಕ್ರಿಯೆಗೆ ಅಡಚಣೆಯುಂಟು ಮಾಡದ, ಹತ್ತಿ ಬಟ್ಟೆ ಮತ್ತು ಒಳ ಉಡುಪುಗಳನ್ನು ಧರಿಸುವುದರಿಂದ ಸಾಕಷ್ಟು ಅನುಕೂಲವಾಗಬಹುದು. ಇದು ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ, ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯೂತದ ಉಲ್ಬಣವನ್ನು ತಡೆಯುತ್ತದೆ.
Published by:Sandhya M
First published: