Cancer In Women: ಈ ಕ್ಯಾನ್ಸರ್​ ಭಾರತದ ಮಹಿಳೆಯರಲ್ಲಿ ಸಾಮಾನ್ಯವಂತೆ

Most Common Cancer in Indian Women: ಹಾಗೆ ನೋಡಿದರೆ ಸ್ತನ ಕ್ಯಾನ್ಸರ್ ಕಾಯಿಲೆಯಲ್ಲಿಯೂ ವಿವಿಧ ಬಗೆಗಳಿವೆ. ಗೂಗಲ್ ನಲ್ಲಿ ಕಣ್ಣಾಡಿಸಿ ಅವುಗಳ ಬಗ್ಗೆ ನೀವು ತಿಳಿಯಬಹುದು. ಆದರೆ ಪ್ರಾಥಮಿಕವಾಗಿ ಸ್ತನ ಕ್ಯಾನ್ಸರ್ ಗಳಲ್ಲಿ ಕಂಡುಬರುವ ವಿಧಗಳೆಂದರೆ 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
3-4 ದಶಕಗಳ ಹಿಂದೆ ಕ್ಯಾನ್ಸರ್ (Cancer) ಕಾಯಿಲೆ ಎಂದು ಕೇಳಲ್ಪಟ್ಟರೆ ಸಾಕು, ಅದು ನ್ಯಾಯಾಧೀಶರು ವಿಧಿಸುವ ಅತ್ಯಂತ ಕಠಿಣ ಶಿಕ್ಷೆಯಾದ ಮರಣ-ದಂಡನೆಗೆ ಸಮ ಎಂಬಂತಹ ಪರಿಸ್ಥಿತಿಯಿತ್ತು. ಆದರೆ ಕಾಲ ಕಳೆದಂತೆ ತಂತ್ರಜ್ಞಾನ (Technology) ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿ ಈಗ ಕ್ಯಾನ್ಸರ್ ಅಂದರೆ ಮರಣಕ್ಕೆ ಖಂಡಿತ ಸಮವಲ್ಲ ಎಂಬಂತಹ ಧೈರ್ಯದ ವಾತಾವರಣ ಮೂಡಿದೆ. 

ಆದರೂ ಕ್ಯಾನ್ಸರ್ ಕಾಯಿಲೆಯನ್ನು ಕಡೆಗಣಿಸುವಂತಿಲ್ಲ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಜೀವಕ್ಕೆ ಅಪಾಯ ಉಂಟಾಗಬಹುದು. ಇಂದಿಗೂ ಕ್ಯಾನ್ಸರ್ ಎಂಬ ಶಬ್ದ ಜನರಲ್ಲಿ ಆತಂಕ ಹಾಗೂ ಭಯ ಮೂಡಿಸುತ್ತದೆ ಎಂದರೆ ತಪ್ಪಾಗಲಾರದು. ವಿಷಾದದ ಸಂಗತಿಯೆಂದರೆ ಪ್ರತಿ ವರ್ಷ ಕ್ಯಾನ್ಸರ್ ಪೀಡಿತರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿರುವುದು. ಅದರಲ್ಲೂ ವಿಶೇಷವಾಗಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲೂ ಕ್ಯಾನ್ಸರ್ ಪೀಡಿತರ ಸಂಖ್ಯೆ ನಿಧಾನವಾಗಿ ಏರುತ್ತಲೇ ಇದೆ. 

ಕ್ಯಾನ್ಸರ್ ಕಾಯಿಲೆಯಲ್ಲಿ ಹಲವು ಬಗೆಗಳಿವೆ. ಇದು ಪುರುಷ ಹಾಗೂ ಮಹಿಳೆಯರಿಬ್ಬರಿಗೂ ಉಂಟಾಗಬಹುದು. ಆದರೆ, ಮಹಿಳೆಯರಲ್ಲಿ ಕೆಲವು ನಿರ್ದಿಷ್ಟ ಕ್ಯಾನ್ಸರ್ ಕಾಯಿಲೆಗಳನ್ನು ಕಾಣಬಹುದಾಗಿದ್ದು ಇವು ಪುರುಷರಲ್ಲಿ ಕಂಡುಬರುವುದಿಲ್ಲ. ಉದಾಹರಣೆಗೆ ಸರ್ವಿಕಲ್ ಕ್ಯಾನ್ಸರ್. ಸರ್ವಿಕ್ಸ್ ಅನ್ನು ಹೊಂದಿರುವ ಮಹಿಳೆಯರಲ್ಲಿ ಇದು ಕಂಡುಬರುತ್ತದೆ. ಇನ್ನು ಎರಡನೇಯದಾಗಿ ಸ್ತನದ ಕ್ಯಾನ್ಸರ್. ಈ ಕ್ಯಾನ್ಸರ್ ಪುರುಷರಲ್ಲೂ ಕಂಡುಬರುತ್ತದೆಯಾದರೂ ಅದು ಅತ್ಯಂತ ಅಪರೂಪವೆಂದೇ ಹೇಳಬಹುದು.

ಇನ್ನು ವಿಶ್ವದಾದ್ಯಂತ ವಿವಿಧ ಭೂಪ್ರದೇಶಗಳಲ್ಲಿರುವ ಮಹಿಳೆಯರ ಕುರಿತು ನಡೆಸಿದ ಅಧ್ಯಯನದಲ್ಲಿ ವಿವಿಧ ಬಗೆಯ ಕ್ಯಾನ್ಸರ್ ಗಳು ಆಯಾ ಭೂಪ್ರದೇಶಗಳ ಮಹಿಳೆಯರಲ್ಲಿ ಅತ್ತಿ ಹೆಚ್ಚೆಚ್ಚಾಗಿ ಕಂಡುಬಂದಿದ್ದನ್ನು ಗಮನಿಸಲಾಗಿದೆ. ಅದರಂತೆ ಭಾರತೀಯ ಮಹಿಳೆಯರಲ್ಲೂ ಕೆಲ ಕ್ಯಾನ್ಸರ್ ಬಗೆಗಳು ಸಾಮಾನ್ಯವಾಗಿ ಕಂಡು ಬರುವುದನ್ನು ಗಮನಿಸಲಾಗಿದೆ.  ಈ ನಿಟ್ಟಿನಲ್ಲಿ ಭಾರತೀಯ ಮಹಿಳೆಯರಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಕಾಯಿಲೆಗಳಲ್ಲಿ ಅತಿ ಮಂಚೂಣಿಯಲ್ಲಿರುವ ಕ್ಯಾನ್ಸರ್ ಎಂದರೆ ಸ್ತನ ಕ್ಯಾನ್ಸರ್ ಎನ್ನಲಾಗಿದೆ.     

ಸ್ತನದ ಕ್ಯಾನ್ಸರ್ ಎಂಬುದು ಜಾಗತಿಕವಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹಿಳೆಯರಲ್ಲಿ ಕಂಡುಬರುತ್ತಿದೆ. ಅದರಲ್ಲೂ ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರ ಸಂಖ್ಯೆಯಲ್ಲಿ ಏರು ಮುಖವಾಗುತ್ತಿದೆ. ಭಾರತದ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ವರದಿಯ ಪ್ರಕಾರ, ಭಾರತ ದೇಶದಲ್ಲಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವವರ ಸಂಖ್ಯೆ 179,790 ಆಗಿದ್ದು ಇದು ಕಂಡುಬರುವ ಎಲ್ಲ ಕ್ಯಾನ್ಸರ್ ಗಳಲ್ಲಿ ಶೇ. 10 ರಷ್ಟಾಗಿದೆ ಎಂದು ಹೇಳಿದೆ. ಪ್ರತಿ 22 ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವನಾವಧಿಯಲ್ಲಿ ಸ್ತನ ಕ್ಯಾನ್ಸರ್ ರೋಗಕ್ಕೆ ಈಡಾಗುತ್ತಾರೆ ಎಂದು ಕೆಲ ಅಧ್ಯನದ ಮೂಲಕ ತಿಳಿದುಬಂದಿದೆ.

ಹಾಗೆ ನೋಡಿದರೆ ಸ್ತನ ಕ್ಯಾನ್ಸರ್ ಕಾಯಿಲೆಯಲ್ಲಿಯೂ ವಿವಿಧ ಬಗೆಗಳಿವೆ. ಗೂಗಲ್ ನಲ್ಲಿ ಕಣ್ಣಾಡಿಸಿ ಅವುಗಳ ಬಗ್ಗೆ ನೀವು ತಿಳಿಯಬಹುದು. ಆದರೆ ಪ್ರಾಥಮಿಕವಾಗಿ ಸ್ತನ ಕ್ಯಾನ್ಸರ್ ಗಳಲ್ಲಿ ಕಂಡುಬರುವ ವಿಧಗಳೆಂದರೆ 

ಡಕ್ಟಲ್ ಕ್ಯಾರ್ಸಿನೋಮಾ ಎಂದು ಕರೆಯಲ್ಪಡುವ ಸ್ತನ ಕ್ಯಾನ್ಸರ್ : ಇದು ಅತಿ ಸಾಮಾನ್ಯವಾಗಿ ಕಂಡು ಬರುವ ಸ್ತನ ಕ್ಯಾನ್ಸರ್ ಪ್ರಕಾರವಾಗಿದೆ. ಇದು ನಿಮ್ಮ ಡಕ್ಟ್ ನಲ್ಲಿ ಪ್ರಾರಂಭವಾಗುತ್ತದೆ. ಪ್ರತಿ ಐದು ಹೊಸ ಸ್ತನ ಕ್ಯಾನ್ಸರ್ ಗಳಲ್ಲಿ ಒಂದು ಡಕ್ಟಲ್ ಕ್ಯಾರ್ಸಿನೋಮಾ ಆಗಿರುತ್ತದೆ. ಅಂದರೆ ನಿಮ್ಮ ಡಕ್ಟ್ ಗಳನ್ನು ಅಲೈನ್ ಮಾಡುವ ಜೀವಕೋಶಗಳಲ್ಲಿ ಈ ಕ್ಯಾನ್ಸರ್ ಉಂಟಾಗಿದೆ ಎಂದರ್ಥ. ಈ ಕ್ಯಾನ್ಸರ್ ನ ಯಾವುದೇ ಲಕ್ಷಣ ನಿಮಗೆ ಗೋಚರಿಸದೆ ಇರಬಹುದು. ಇದು ಗಂಟು ಅಥವಾ ರಕ್ತಸ್ರಾವವನ್ನುಂಟು ಮಾಡಬಹುದು.

ಲೊಬ್ಯೂಲರ್ ಕ್ಯಾರ್ಸಿನೋಮಾ : ಸ್ತನಗಳಲ್ಲಿ ಹಾಲನ್ನು ಉತ್ಪಾದಿಸಲು ಕಾರಣವಾದ ಗ್ರಂಥಿಗಳಲ್ಲಿ ಇದು ಪ್ರಾರಂಭವಾಗುತ್ತದೆ. ಈ ಗ್ರಂಥಿಗಳನ್ನು ಲೊಬ್ಯೂಲ್ಸ್ ಎಂದು ಕರೆಯುವುದರಿಂದ ಇದನ್ನು ಲೊಬ್ಯೂಲರ್ ಕ್ಯಾರ್ಸಿನೋಮಾ ಎಂದು ಕರೆಯಲಾಗಿದೆ. ಇದರ ಲಕ್ಷಣಗಳೆಂದರೆ,

* ಒಂದು ಭಾಗದಲ್ಲಿ ಗಟ್ಟಿಯಾಗುವಿಕೆ, ಬಾವು ಬರುವುದು

* ಚಪ್ಪಟೆಯಾದ ಅಥವಾ ಹಿಂಭಾಗದಲ್ಲಿ ಚಾಚಿದ ಮೊಲೆ ತೊಟ್ಟು

ಸ್ತನ ಕ್ಯಾನ್ಸರ್ ನ ಲಕ್ಷಣಗಳು ವಿವಿಧ ಮಹಿಳೆಯರಲ್ಲಿ ವಿವಿಧ ರೀತಿಯಲ್ಲಿರುತ್ತವೆ. ಸಾಮಾನ್ಯವಾಗಿ ಸ್ತನಗಳ ಮೇಲ್ನೋಟ, ಅಂದರೆ ಅವುಗಳ ಗಾತ್ರ, ಆಕಾರ, ಬಣ್ಣ ಸ್ತನಗಳ ಆರೋಗ್ಯವನ್ನು ಸೂಚಿಸುತ್ತದೆ. ಸ್ತನ ಕ್ಯಾನ್ಸರ್ ನ ಅತಿ ಸಾಮಾನ್ಯ ಲಕ್ಷಣವೆಂದರೆ ಸ್ತನದಲ್ಲಿ ಗಂಟು ಬರುವುದು. ಇನ್ನು ಇತರೆ ಲಕ್ಷಣಗಳೆಂದರೆ ಸ್ತನ ಚರ್ಮದ ಬಣ್ಣದಲ್ಲಿ ಬದಲಾಗುವಿಕೆ, ಸ್ತನದಲ್ಲಿ ನೋವು ಕಾಣಿಸುವುದು, ಮೊಲೆ ತೊಟ್ಟು ಹಿಂಭಾಗಕ್ಕೆ ಚಾಚಿಕೊಳ್ಳುವುದು, ಮೊಲೆ ತೊಟ್ಟಿನಿಂದ ದ್ರವ ವಿಸರ್ಜನೆಯಾಗುವುದು.  

ಸ್ತನದಲ್ಲಿ ಗಂಟು ಉಂಟಾಗುವುದು: ಇದು ಸ್ತನ ಕ್ಯಾನ್ಸರ್ ಕಾಯಿಲೆಯ ಪ್ರಥಮ ಲಕ್ಷಣ. ಸ್ತನದಲ್ಲಿ ಗಂಟು ಮೂಡಿದಾಗ ಅದರ ಬಗ್ಗೆ ಮೊದಲು ಗೊತ್ತಾಗುವುದಿಲ್ಲ. ಆದರೆ ವೈದ್ಯರು ಮ್ಯಾಮೋಗ್ರಾಮ್ ಮೂಲಕ ಇದನ್ನು ಗಮನಿಸಬಹುದಾಗಿದೆ. ಮುಂದೆ ಈ ಗಂಟು ದೊಡ್ಡದಾದಂತೆ ಅದರ ಅನುಭವ ಉಂಟಾಗಲಾರಂಭಿಸುತ್ತದೆ. ಹೀಗೆ ಉಂಟಾಗುವ ಪ್ರತಿ ಗಂಟು ಕ್ಯಾನ್ಸರ್ ಲಕ್ಷಣ ಎಂದು ಹೇಳಲು ಸಾಧ್ಯವಿಲ್ಲ.  

ಇದನ್ನೂ ಓದಿ: ಮದುವೆ ಟೈಮ್​ನಲ್ಲಿ ಕೂದಲ ಆರೈಕೆ ಹೀಗಿದ್ರೆ ಸೂಪರ್ ಹೇರ್​ಸ್ಟೈಲ್​ ಮಾಡ್ಬೋದು

ಕಾಲರ್ಬೋನ್ ಸ್ಥಳದಲ್ಲಿ ಬಾವು : ನಿಮ್ಮ ಆರ್ಮ್ ಪಿಟ್ ಭಾಗದಲ್ಲಿ ಸ್ಥಳದಲ್ಲಿ ಬಾವು ಬಂದಿದ್ದರೆ ಸ್ತನ ಕ್ಯಾನ್ಸರ್ ನಿಮ್ಮ ಲಿಂಫ್ ನೋಡ್ ಗಳವರೆಗೂ ವಿಸ್ತರಿಸಿರುವ ಸಾಧ್ಯತೆಯಿರಬಹುದು. ನಿಮಗೆ ಗಂಟು ಉಂಟಾಗಿರುವ ಅನುಭವ ದೊರೆಯುವುದಕ್ಕಿಂತ ಮುಂಚೆಯೇ ಇದು ವಿಸ್ತರಿಸಿರಬಹುದು. ಹಾಗಾಗಿ ನೀವು ಇದನ್ನೇನಾದರೂ ಗಮನಿಸಿದರೆ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ. 

ನೋವು ಹಾಗೂ ಮೃದುತ್ವ : ಸ್ತನದಲ್ಲಿ ಉಂಟಾಗುವ ಗಂಟುಗಳು ಸಾಮಾನ್ಯವಾಗಿ ನೋಯುವುದಿಲ್ಲ, ಆದರೆ, ಒಮ್ಮೊಮ್ಮೆ ನೋವಿನ ಅನುಭವ ಉಂಟಾಗಬಹುದು. ಅಲ್ಲದೆ ಸ್ತನಗಳು ಸಹಜಕ್ಕಿಂತಲೂ ಅತಿ ಮೃದುವಾಗಬಹುದು. ಈ ಸಂದರ್ಭದಲ್ಲೂ ವೈದ್ಯರ ಭೇಟಿ ಮಾಡಿ ತಪಾಸಣೆ ಮಾಡಿಕೊಳ್ಳಿ. 

ಸ್ತನದಲ್ಲಿ ಚಪ್ಪಟೆಯಾದ ಭಾಗ ಅಥವಾ ಬಿರುಕು ಮೂಡುವುದು : ನಿಮ್ಮ ಅನುಭವಕ್ಕೆ ಬಾರದಂತಹ ಗಂಟು ಹಲವು ಗುಣಲಕ್ಷಣ ತೋರಬಹುದು. ಅದರಲ್ಲಿ ಒಂದಾಗಿದೆ ಸ್ತನದ ಯಾವುದಾದರೂ ಭಾಗ ಚಪ್ಪಟೆಯಾಗುವುದು ಅಥವಾ ಬಿರುಕು ಮೂಡುವುದು. 

ಸ್ತನದ ಆಕಾರ, ಗಾತ್ರ ಹಾಗೂ ಬಣ್ಣದಲ್ಲಿ ಬದಲಾವಣೆ : ನಿಮ್ಮ ಸ್ತನದ ಆಕಾರದಲ್ಲಿ ಬದಲಾವಣೆಯಾಗುವುದು, ಗಾತ್ರ, ಹಾಗೂ ಬಣ್ಣದಲ್ಲೂ ಬದಲಾವಣೆಯಾಗುವುದು ಸ್ತನ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು. 

ಸ್ತನ ತೊಟ್ಟು ಅಥವಾ ಮೊಲೆ ತೊಟ್ಟುಗಳಲ್ಲಾಗುವ ಬದಲಾವಣೆ : ಸ್ತನ ಕ್ಯಾನ್ಸರ್ ಕಾಯಿಲೆಯ ಇನ್ನೊಂದು ಲಕ್ಷಣವೆಂದರೆ ಮೊಲೆ ತೊಟ್ಟಿನಲ್ಲಾಗುವ ಬದಲಾವಣೆ. ಮೊಲೆ ತೊಟ್ಟು ಮುಂದೆ ಚಾಚಿರುವ ಬದಲು ಒಳಮುಖವಾಗಿ ಚಾಚಿಕೊಳ್ಳುವುದು, ಸ್ತನದಲ್ಲಿ ಉರಿ ಅನುಭವ, ಕೆರೆತ ಹಾಗೂ ಅಸಹಜವಾದ ರೀತಿಯಲ್ಲಿ ತೊಟ್ಟಿನಿಂದ ದ್ರವ ವಿಸರ್ಜನೆಯಾಗುವುದು.

ಓದುಗರೆ, ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಇಲ್ಲಿ ಹೇಳಲಾಗಿರುವ ಲಕ್ಷಣಗಳು ಕಂಡು ಬಂದಲ್ಲಿ ನಿಮಗೆ ಸ್ತನ ಕ್ಯಾನ್ಸರ್ ಉಂಟಾಗಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಒಮ್ಮೊಮ್ಮೆ ಇತರೆ ಕಾರಣಗಳಿಂದಲೂ ನಿಮ್ಮಲ್ಲಿ ಆ ಲಕ್ಷಣಗಳು ಗೋಚರಿಸಿರಬಹುದು. ಅಲ್ಲದೆ ಇಂದು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಎಷ್ಟು ಪ್ರಗತಿಯಾಗಿದೆ ಎಂದರೆ ಕ್ಯಾನ್ಸರ್ ಕಾಯಿಲೆ ಸೂಕ್ತ ಸಮಯದಲ್ಲಿ ಗುರುತಿಸಲ್ಪಟ್ಟಾಗ ಅದಕ್ಕೆ ಪರಿಣಾಮಕಾರಿಯಾಗಿ ವಿಕಿತ್ಸೆ ನೀಡಿ ಕ್ಯಾನ್ಸರ್ ನಿಂದ ಮುಕ್ತಿ ಪಡೆಯಬಹುದು. ಕ್ಯಾನ್ಸರ್ ಗೆದ್ದ ಅದೆಷ್ಟೋ ಮಹಿಳೆಯರು ಇಂದು ನಮ್ಮ ಕಣ್ಣ ಮುಂದಿದ್ದಾರೆ. ಹಾಗಾಗಿ, ಯಾವುದೇ ಆತಂಕ ಪಡದೆ ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳುತ್ತಿರಿ. 

ಇದನ್ನೂ ಓದಿ: ಭಾರತದ ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸುವ ಕ್ಯಾನ್ಸರ್​ಗಳಿವು

ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಲು ಹಾಗೂ ಅದು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೇವಲ ಮಹಿಳೆಯರಷ್ಟೆ ಅಲ್ಲದೆ ಪ್ರತಿ ಜವಾಬ್ದಾರಿಯುತ ನಾಗರಿಕರಲ್ಲಿ ಸ್ಪಷ್ಟವಾದ ಅರಿವು ಮೂಡಿಸಬೇಕಾದ ಸಮಯ ಇದಾಗಿದೆ. ಮಹಿಳೆಯರು ತಮ್ಮ ಜೀವನಶೈಲಿಯಲ್ಲಿ ಕೆಲ ಮಹತ್ತರ ಬದಲಾವಣೆಗಳನ್ನು ದೃಢ ಮನಸ್ಸಿನಿಂದ ಮಾಡಿಕೊಳ್ಳೂವುದರ ಮೂಲಕ ಸ್ತನ ಕ್ಯಾನ್ಸರ್ ಬರದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ.
Published by:Sandhya M
First published: