Breast Cancer Symptoms: ಈ ಲಕ್ಷಣ ಸ್ತನ ಕ್ಯಾನ್ಸರ್​ನ ಸೂಚನೆ; ನಿರ್ಲಕ್ಷ್ಯ ಬೇಡ, ಇರಲಿ ಜೋಪಾನ

ನಿಮ್ಮ ಸ್ತನದ ಆಕಾರದಲ್ಲಿ ಬದಲಾವಣೆಯಾಗುವುದು, ಗಾತ್ರ, ಹಾಗೂ ಬಣ್ಣದಲ್ಲೂ ಬದಲಾವಣೆಯಾಗುವುದು ಸ್ತನ ಕ್ಯಾನ್ಸರ್​ನ ಲಕ್ಷಣಗಳಾಗಿರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದಿನ ಆಧುನಿಕ ಜೀವನಶೈಲಿಯು (Modern Lifestyle) ಮನುಷ್ಯ ಸಾಕಷ್ಟು ಒತ್ತಡ ಅನುಭವಿಸುವಂತೆ ಮಾಡುತ್ತಿದೆ ಎಂದರೆ ತಪ್ಪಿಲ್ಲ. ರಭಸದ ಈ ಜೀವನದಿಂದಾಗಿ ಇಂದು ಮನುಷ್ಯನಿಗೆ ಸಾಕಷ್ಟು ಸಮಯ ಎಂಬುದು ಸಿಗುತ್ತಿಲ್ಲ. ಹಾಗಾಗಿ ಫಾಸ್ಟ್ ಫುಡ್ ಜೀವನಕ್ಕೆ (Fast Food Life) ಒಗ್ಗಿಕೊಳ್ಳುವಂತಾಗಿದೆ. ಅದರಲ್ಲೂ ವಿಶೇಷವಾಗಿ ಇಂದಿನ ಮಹಿಳೆಯರು ಮನೆ ಒಳಗೆ ಹಾಗೂ ಹೊರಗೆ ಕೆಲಸ ಮಾಡುತ್ತ ಸೈ ಎನಿಸಿಕೊಂಡಿದ್ದಾರಾದರೂ ಇದರಿಂದ ಅವರ ಆರೋಗ್ಯದ ಮೇಲೆಯೂ (Health Effects)  ಸಹ ಸಾಕಷ್ಟು ಪರಿಣಾಮ ಬೀರುತ್ತಿದೆ. ಹಾಗಾಗಿ ಇಂದು ಮಹಿಳೆಯರು ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದರಲ್ಲಿ ಸ್ತನ ಕ್ಯಾನ್ಸರ್ (Breast Cancer)  ಸಹ ಒಂದಾಗಿದೆ.

    ಭಾರತದಂತಹ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ತನದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಎಂಬುದು ಅಪರೂಪ ಎಂದೇನಲ್ಲ. ಆದರೆ ಅದು ಬಂದಾಗ ಅದನ್ನು ಮುಂಚಿತವಾಗಿಯೇ ಗುರುತಿಸಿ ಸಮರ್ಪಕವಾದ ಚಿಕಿತ್ಸೆ ತೆಗೆದುಕೊಳ್ಳುವುದು ಬಲು ಉತ್ತಮ. ಸ್ತನ ಕ್ಯಾನ್ಸರ್ ರೋಗದ ಲಕ್ಷಣಗಳೇನು ಎಂಬುದರ ಬಗ್ಗೆ ಮೊದಲು ತಿಳಿದುಕೊಳ್ಳುವುದು ಈ ನಿಟ್ಟಿನಲ್ಲಿ ಅವಶ್ಯಕ.

    ಅತಿ ಸಾಮಾನ್ಯ ಲಕ್ಷಣವೇನು?
    ವಿವಿಧ ಜನರಲ್ಲಿ ಸ್ತನ ಕ್ಯಾನ್ಸರ್ ಲಕ್ಷಣಗಳು ವಿವಿಧ ರೀತಿಯಲ್ಲಿರುತ್ತವೆ. ಅದರ ಮೊದಲ ಲಕ್ಷಣಗಳನ್ನು ಸಾಮಾನ್ಯವಾಗಿ ಯಾರೂ ಗಮನಿಸುವುದೇ ಇಲ್ಲ. ನಿಮ್ಮ ಸ್ತನಗಳು ಹೇಗೆ ಕಾಣುತ್ತವೆ ಹಾಗೂ ನಿಮಗೆ ಯಾವ ರೀತಿಯ ಅನುಭವ ನೀಡುತ್ತವೆ ಎಂಬುದು ನಿಮ್ಮ ಸ್ತನಗಳ ಆರೋಗ್ಯವನ್ನು ಸೂಚಿಸುತ್ತದೆ. ಸ್ತನ ಕ್ಯಾನ್ಸರ್​ನ ಅತಿ ಸಾಮಾನ್ಯ ಲಕ್ಷಣವೆಂದರೆ ಸ್ತನದಲ್ಲಿ ಅಥವಾ ಕಂಕುಳದಲ್ಲಿ ಗಂಟು ಬರುವುದು. ಇನ್ನು ಇತರೆ ಲಕ್ಷಣಗಳೆಂದರೆ ಸ್ತನ ಚರ್ಮದ ಬಣ್ಣದಲ್ಲಿ ಬದಲಾಗುವಿಕೆ, ಸ್ತನದಲ್ಲಿ ನೋವು ಕಾಣಿಸುವುದು, ಮೊಲೆ ತೊಟ್ಟು ಹಿಂಭಾಗಕ್ಕೆ ಚಾಚಿಕೊಳ್ಳುವುದು, ಮೊಲೆ ತೊಟ್ಟಿನಿಂದ ಅಸಾಮಾನ್ಯವಾದ ದ್ರವ ವಿಸರ್ಜನೆಯಾಗುವುದು.

    ಸ್ತನದಲ್ಲಿ ಗಂಟು ಬರುವುದು : ಇದು ಸ್ತನ ಕ್ಯಾನ್ಸರ್ ರೋಗದ ಪ್ರಥಮ ಲಕ್ಷಣವಾಗಿದೆ. ಸ್ತನದಲ್ಲಿ ಗಂಟು ಮೂಡಿದಾಗ ಮೊದಲು ನಿಮಗೆ ಅದು ಗೊತ್ತೆ ಆಗುವುದಿಲ್ಲ. ಆದರೆ ವೈದ್ಯರು ಮ್ಯಾಮೋಗ್ರಾಮ್ ಮೂಲಕ ಇದನ್ನು ಗಮನಿಸಬಹುದಾಗಿದೆ. ಮುಂದೆ ಈ ಗಂಟು ದೊಡ್ಡದಾದಂತೆ ಅದರ ಅನುಭವ ನಿಮಗುಂಟಾಗುತ್ತದೆ. ಆದರೆ ನೆನಪಿಡಿ, ಹೀಗೆ ಉಂಟಾಗುವ ಪ್ರತಿ ಗಂಟು ಕ್ಯಾನ್ಸರ್ ಲಕ್ಷಣ ಎಂದು ಹೇಳಲು ಸಾಧ್ಯವಿಲ್ಲ.

    ಕಂಕುಳದಲ್ಲಿ ಅಥವಾ ಕಾಲರ್ಬೋನ್ ಸ್ಥಳದಲ್ಲಿ ಬಾವು
    ನಿಮ್ಮ ಆರ್ಮ್ ಪಿಟ್ ಅಥವಾ ಕಂಕುಳ ಇಲ್ಲವೆ ಕಾಲರ್ಬೋನ್ ಸ್ಥಳದಲ್ಲಿ ಬಾವು ಬಂದಿದ್ದರೆ ಸ್ತನ ಕ್ಯಾನ್ಸರ್ ನಿಮ್ಮ ಲಿಂಫ್ ನೋಡ್ ಗಳವರೆಗೂ ವಿಸ್ತರಿಸಿರುವ ಸಾಧ್ಯತೆಯಿದೆ. ನಿಮಗೆ ಗಂಟು ಉಂಟಾಗಿರುವ ಅನುಭವ ದೊರೆಯುವುದಕ್ಕಿಂತ ಮುಂಚೆಯೇ ಇದು ವಿಸ್ತರಿಸಿರಬಹುದು. ಹಾಗಾಗಿ ನೀವು ಇದನ್ನೇನಾದರೂ ಗಮನಿಸಿದರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

    ನೋವು ಹಾಗೂ ಮೃದುತ್ವ
    ಸ್ತನದಲ್ಲಿ ಮೂಡುವ ಗಂಟುಗಳು ಸಾಮಾನ್ಯವಾಗಿ ನೋವುಂಟು ಮಾಡದು. ಆದರೂ ಒಮ್ಮೊಮ್ಮೆ ಒಂದು ರೀತಿಯ ನೋವಿನ ಅನುಭವ ನಿಮಗುಂಟಾಗಬಹುದು. ಅಲ್ಲದೆ ನಿಮ್ಮ ಸ್ತನಗಳು ಸಹಜಕ್ಕಿಂತಲೂ ಅತಿ ಮೃದುವಾಗಿರುವ ಅನುಭವ ಉಂಟಾಗಬಹುದು. ಈ ಸಂದರ್ಭದಲ್ಲೂ ವೈದ್ಯರ ಭೇಟಿ ಮಾಡಿ ತಪಾಸಣೆ ಮಾಡಿಕೊಳ್ಳಿ.

    ಸ್ತನದಲ್ಲಿ ಚಪ್ಪಟೆಯಾದ ಭಾಗ ಅಥವಾ ಬಿರುಕು ಮೂಡುವುದು : ಸ್ತನ ಕ್ಯಾನ್ಸರ್ ಬಂದಾಗ ಪ್ರಾರಂಭದಲ್ಲಿ ಆ ಬಗ್ಗೆ ನಿಮಗೆ ಗೊತ್ತೆ ಆಗುವುದಿಲ್ಲ. ನಿಮ್ಮ ಅನುಭವಕ್ಕೆ ಬಾರದಂತಹ ಗಂಟು ಹಲವು ಗುಣಲಕ್ಷಣ ತೋರಬಹುದು. ಅದರಲ್ಲಿ ಒಂದಾಗಿದೆ ಸ್ತನದ ಯಾವುದಾದರೂ ಭಾಗ ಚಪ್ಪಟೆಯಾಗುವುದು ಅಥವಾ ಬಿರುಕು ಮೂಡುವುದು.

    ಸ್ತನದ ಆಕಾರ, ಗಾತ್ರ ಹಾಗೂ ಬಣ್ಣದಲ್ಲಿ ಬದಲಾವಣೆ
    ನಿಮ್ಮ ಸ್ತನದ ಆಕಾರದಲ್ಲಿ ಬದಲಾವಣೆಯಾಗುವುದು, ಗಾತ್ರ, ಹಾಗೂ ಬಣ್ಣದಲ್ಲೂ ಬದಲಾವಣೆಯಾಗುವುದು ಸ್ತನ ಕ್ಯಾನ್ಸರ್​ನ ಲಕ್ಷಣಗಳಾಗಿರಬಹುದು.

    ಸ್ತನ ತೊಟ್ಟು ಅಥವಾ ಮೊಲೆ ತೊಟ್ಟುಗಳಲ್ಲಾಗುವ ಬದಲಾವಣೆ : ಸ್ತನ ಕ್ಯಾನ್ಸರ್ ನ ಇನ್ನೊಂದು ಲಕ್ಷಣವೆಂದರೆ ಮೊಲೆ ತೊಟ್ಟುಗಳಲ್ಲಾಗುವ ಬದಲಾವಣೆ. ಮೊಲೆ ತೊಟ್ಟುಗಳು ಮುಂದೆ ಚಾಚಿರುವ ಬದಲು ಹಿಮ್ಮುಖದಲ್ಲಿ ಚಾಚಿಕೊಳ್ಳುವುದು, ಉರಿ, ಕೆರೆತ ಹಾಗೂ ಅಸಹಜವಾದ ರೀತಿಯಲ್ಲಿ ತೊಟ್ಟುಗಳಿಂದ ದ್ರವ ವಿಸರ್ಜನೆಯಾಗುವುದು.

    ಸ್ತನ ಕ್ಯಾನ್ಸರ್​ನಲ್ಲಿ ಹಲವು ಬಗೆಗಳಿದ್ದು ಎಲ್ಲವೂ ಕೆಲವು ಲಕ್ಷಣಗಳನ್ನು ತೋರ್ಪಡಿಸುತ್ತವೆ.

    ಡಕ್ಟಲ್ ಕ್ಯಾರ್ಸಿನೋಮಾ ಎಂದು ಕರೆಯಲ್ಪಡುವ ಸ್ತನ ಕ್ಯಾನ್ಸರ್ ಲಕ್ಷಣಗಳು
    ಇದು ಅತಿ ಸಾಮಾನ್ಯವಾಗಿ ಕಂಡು ಬರುವ ಸ್ತನ ಕ್ಯಾನ್ಸರ್ ಪ್ರಕಾರವಾಗಿದೆ. ಇದು ನಿಮ್ಮ ಡಕ್ಟ್​ನಲ್ಲಿ ಪ್ರಾರಂಭವಾಗುತ್ತದೆ. ಪ್ರತಿ ಐದು ಹೊಸ ಸ್ತನ ಕ್ಯಾನ್ಸರ್​ಗಳಲ್ಲಿ ಒಂದು ಡಕ್ಟಲ್ ಕ್ಯಾರ್ಸಿನೋಮಾ ಆಗಿರುತ್ತದೆ. ಅಂದರೆ ನಿಮ್ಮ ಡಕ್ಟ್ ಗಳನ್ನು ಅಲೈನ್ ಮಾಡುವ ಜೀವಕೋಶಗಳಲ್ಲಿ ಈ ಕ್ಯಾನ್ಸರ್ ಉಂಟಾಗಿದೆ ಎಂದರ್ಥ. ಈ ಕ್ಯಾನ್ಸರ್ ನ ಯಾವುದೇ ಲಕ್ಷಣ ನಿಮಗೆ ಗೋಚರಿಸದೆ ಇರಬಹುದು. ಇದು ಗಂಟು ಅಥವಾ ರಕ್ತಸ್ರಾವವನ್ನುಂಟು ಮಾಡಬಹುದು.

    ಲೊಬ್ಯೂಲರ್ ಕ್ಯಾರ್ಸಿನೋಮಾ
    ಸ್ತನಗಳಲ್ಲಿ ಹಾಲನ್ನು ಉತ್ಪಾದಿಸಲು ಕಾರಣವಾದ ಗ್ರಂಥಿಗಳಲ್ಲಿ ಇದು ಪ್ರಾರಂಭವಾಗುತ್ತದೆ. ಈ ಗ್ರಂಥಿಗಳನ್ನು ಲೊಬ್ಯೂಲ್ಸ್ ಎಂದು ಕರೆಯುವುದರಿಂದ ಇದನ್ನು ಲೊಬ್ಯೂಲರ್ ಕ್ಯಾರ್ಸಿನೋಮಾ ಎಂದು ಕರೆಯಲಾಗಿದೆ. ಇದರ ಲಕ್ಷಣಗಳೆಂದರೆ,

    * ಒಂದು ಭಾಗದಲ್ಲಿ ಗಟ್ಟಿಯಾಗುವಿಕೆ, ಬಾವು ಬರುವುದು
    * ಚಪ್ಪಟೆಯಾದ ಅಥವಾ ಹಿಂಭಾಗದಲ್ಲಿ ಚಾಚಿದ ಮೊಲೆ ತೊಟ್ಟು

    ಸ್ತನ ಕ್ಯಾನ್ಸರ್ ರೋಗ ಲಕ್ಷಣಗಳಿಗೆ ಸಂಬಂಧಿಸಿದಂತೆ ಇಲ್ಲಿ ವಿವರಿಸಲಾಗಿರುವ ಎಲ್ಲ ಲಕ್ಷಣಗಳ ಬಗ್ಗೆ ತಿಳಿದುಕೊಂಡಿರುವುದು ಬಲು ಅವಶ್ಯಕ. ಆದರೆ, ಈ ರೀತಿಯ ಲಕ್ಷಣಗಳೇನಾದರೂ ನಿಮಗೆ ಕಂಡುಬಂದಲ್ಲಿ ಆತಂಕಪಡುವ ಅವಶ್ಯಕತೆಯಿಲ್ಲ. ಏಕೆಂದರೆ ಈ ಲಕ್ಷಣಗಳು ನಿಮಗೆ ಕ್ಯಾನ್ಸರ್ ಬಂದಿದೆ ಎಂದು ಖಂಡಿತವಾಗಿ ಸೂಚಿಸುತ್ತಿದೆ ಎನ್ನಲಾಗುವುದಿಲ್ಲ.

    ಇದನ್ನೂ ಓದಿ: Breast Cancer: ಈ ಆಹಾರಗಳನ್ನು ಸೇವಿಸಿದ್ರೆ ಸ್ತನ ಕ್ಯಾನ್ಸರ್ ಬರದಂತೆ ತಡೆಯಬಹುದು

    ಇದಕ್ಕೆ ವಿವಿಧ ಇತರೆ ಕಾರಣಗಳೂ ಇರಬಹುದು. ಸಾಮಾನ್ಯವಾಗಿ ನಿಮ್ಮ ಎರಡು ಸ್ತನಗಳಲ್ಲಿ ನೋವು ಕಾಣಿಸಿದರೆ ಅದನ್ನು ಸ್ತನ ಕ್ಯಾನ್ಸರ್ ಎನ್ನಲಾಗದು. ಆದರೆ ಒಂದು ಸ್ತನದಲ್ಲಿ ನಿಮಗೆ ನೋವುಂಟಾದರೆ ವೈದ್ಯರ ಬಳಿ ತೆರಳಿ ಒಮ್ಮೆ ಪರೀಕ್ಷಿಸಿಕೊಳ್ಳಿ. ಕೇವಲ ಮಹಿಳೆಯರಷ್ಟೆ ಅಲ್ಲ ಬಲು ಅಪರೂಪವಾಗಿ ಪುರುಷರಲ್ಲೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಎದೆ ಭಾಗದಲ್ಲಿ ಗಂಟು ಮೂಡುವುದು ಪುರುಷರಲ್ಲಿ ಕಂಡುಬರಬಹುದಾದ ಸ್ತನ ಕ್ಯಾನ್ಸರ್ ಲಕ್ಷಣವಾಗಿದೆ.

    ವೈದ್ಯರನ್ನು ಭೇಟಿ ಮಾಡಿ
    ಸ್ತನ ಕ್ಯಾನ್ಸರ್ ಬರದಂತೆ ಅಥವಾ ತಡೆಗಟ್ಟಲು ಕಾಲ ಕಾಲಕ್ಕೆ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳುವುದು ಉತ್ತಮ ಅಭ್ಯಾಸ. ಇದಲ್ಲದೆ ಮನೆಯಲ್ಲೇ ನೀವು ನಿಮ್ಮ ಸ್ತನಗಳ ಆರೋಗ್ಯದ ಕಡೆ ಗಮನಹರಿಸಬಹುದಾಗಿದೆ. ಅದಕ್ಕಾಗಿ ನೀವು ನಿತ್ಯ ಸ್ಪರ್ಶ, ನೋಟ, ಹಾಗೂ ಪರೀಕ್ಷಣೆ ಕ್ರಮಗಳನ್ನು ಅನುಸರಿಸಬಹುದು.

    ಸ್ಪರ್ಶದ ಅನುಭವ
    ನಿತ್ಯ ನಿಮ್ಮ ಸ್ತನಗಳನ್ನು ಸ್ಪರ್ಶಿಸಿಕೊಳ್ಳುತ್ತಿರಿ. ಇದರಿಂದ ನಿಮಗೊಂದು ಸ್ಪರ್ಶಾನುಭವವಾಗತೊಡಗುತ್ತದೆ. ನಿಮ್ಮ ಸ್ತನದಲ್ಲಿ ಏನಾದರೂ ಬದಲಾವಣೆಯಾಗಿದ್ದಲ್ಲಿ ಸ್ಪರ್ಶಾನುಭವದಿಂದ ನಿಮಗದು ಗೊತ್ತಾಗಬಹುದು. ಹಾಗೇನಾದರೂ ಅನಿಸಿದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ.

    ಇದನ್ನೂ ಓದಿ: Breast Cancer Prevention: ಸ್ತನ ಕ್ಯಾನ್ಸರ್ ಬರದಂತೆ ಹೇಗೆ ತಡೆಯೋದು? ನಿಮಗಾಗಿಯೇ ಇಲ್ಲಿದೆ ವಿವರ

    ನೋಟ : ನಿಮ್ಮ ಸ್ತನಗಳು ಸಾಮಾನ್ಯವಾಗಿ ಹೇಗೆ ಕಾಣುತ್ತವೆ ಎಂಬುದನ್ನು ಗಮನಿಸುತ್ತಿರುವುದು ಉತ್ತಮ ಅಭ್ಯಾಸ. ಒಂದು ವೇಳೆ ಕ್ಯಾನ್ಸರ್ ನಿಂದಾಗಿ ನಿಮ್ಮ ಸ್ತನಗಳ ಅಕಾರ ಅಥವಾ ಬಣ್ಣಗಳಲ್ಲಿ ಏನಾದರೂ ಬದಲಾವಣೆಯಾಗಿದ್ದಲ್ಲಿ ನೋಟದ ಮೂಲಕ ನಿಮಗದು ತಿಳಿಯಬಹುದು.

    ಪರೀಕ್ಷೆ ಹೇಗೆ?
    ನಿಮ್ಮ ಸ್ತನಗಳಲ್ಲಿ ಏನಾದರೂ ಅಸಹಜವಾದುದು ಕಂಡು ಬಂದರೆ ಅಥವಾ ದ್ರವ ವಿಸರ್ಜನೆಯಾಗುತ್ತಿದ್ದರೆ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಿ.
    Published by:guruganesh bhat
    First published: