ಪ್ರಸ್ತುತ ಪ್ರಪಂಚವು ಆಧುನೀಕರಣಗೊಳ್ಳುವಲ್ಲಿ ದಾಪುಗಾಲನ್ನಿಟ್ಟಿದೆ. ಎಷ್ಟೋ ಸಂಪ್ರದಾಯಗಳು ರೀತಿ ರಿವಾಜುಗಳು ಆಧುನೀಕತೆಯ ಆಚಾರ ವಿಚಾರಗಳಿಂದ ಮೂಲೆಗುಂಪಾಗುತ್ತಿದೆ ಎಂಬುದು ಹಿರಿಯರ ವಾದವಾಗಿದೆ. ಹಿಂದೆಲ್ಲಾ ವಿವಾಹವೂ ಸೇರಿದಂತೆ ಎಷ್ಟೋ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಸಂಪ್ರದಾಯ ಬದ್ಧವಾಗಿ ನಡೆಸಲಾಗುತ್ತಿತ್ತು ಆದರೆ ಈಗ ಆಧುನೀಕತೆಯಿಂದಾಗಿ ಶಾಸ್ತ್ರಬದ್ಧವಾಗಿ ನಡೆಯುವ ಹಲವಾರು ಕಾರ್ಯಕ್ರಮಗಳನ್ನು ಮೊಟಕಾಗಿ ನಡೆಸಲಾಗುತ್ತಿದೆ. ಆದರೆ ಕೆಲವೊಂದು ಬುಡಕಟ್ಟು ಜನಾಂಗದವರು ಕೆಲವೊಂದು ಚಿತ್ರವಿಚಿತ್ರ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದು ನಮ್ಮನ್ನು ದಿಗ್ಭ್ರಮೆಗೊಳಿಸುವುದಂತೂ ಖಂಡಿತ.
ಹಾಗಿದ್ದರೆ ಆ ಸಂಪ್ರದಾಯಗಳು ಹಾಗೂ ಆಚರಣೆಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಈ ವಿಚಿತ್ರ ಸಂಪ್ರದಾಯಗಳು ಹೆಚ್ಚು ಯಾತನಾಮಯವಾಗಿದ್ದು ಇಂತಹ ಕೌರ್ಯತೆಯನ್ನು ನಡೆಸುವವರು ನಿಜಕ್ಕೂ ಮನುಷ್ಯರೇ ಎಂಬ ಸಂದೇಹ ನಮ್ಮಲ್ಲಿ ಉಂಟುಮಾಡುತ್ತದೆ.
ಪಶ್ಚಿಮ ಆಫ್ರಿಕಾದಲ್ಲಿನ ವಿಚಿತ್ರ ಸಂಪ್ರದಾಯ
ಪಶ್ಚಿಮ ಆಫ್ರಿಕಾದ ನೈಜರ್ನ ವೊಡಾಬೆ ಬುಟಕಟ್ಟು ಜನಾಂಗದಲ್ಲಿ ವಿಚಿತ್ರ ಆಚರಣೆಯೊಂದಿದ್ದು ಸೋದರ ಸಂಬಂಧಿಗಳ ನಡುವೆ ಶೈಶಾವಸ್ಥೆಯಲ್ಲೇ ಪೋಷಕರು ವಿವಾಹವನ್ನು ಏರ್ಪಡಿಸುತ್ತಾರೆ. ಆದರೆ ವಾರ್ಷಿಕವಾಗಿ ನಡೆಯುವ ಗೆರೆವಾಲ್ ಉತ್ಸವದಲ್ಲಿ ವೊಡಾಬೆ ಬುಡಕಟ್ಟಿನ ಪುರುಷರು ಸ್ತ್ರೀಯರನ್ನು ಮೆಚ್ಚಿಸಲು ಚೆನ್ನಾಗಿ ಅಲಂಕರಿಸಿಕೊಂಡು ನೃತ್ಯ ಮಾಡುತ್ತಾರೆ. ಹಾಗೂ ಮೆಚ್ಚಿಕೊಂಡ ಸ್ತ್ರೀಯನ್ನು ನೂತನ ಪತ್ನಿಯಾಗಿ ಸ್ವೀಕರಿಸುತ್ತಾರೆ.
ದುಷ್ಟಶಕ್ತಿಗಳನ್ನು ಗೊಂದಲಗೊಳಿಸಲು ಪತ್ನಿಯರ ವಿನಿಮಯ
ಉತ್ತರ ಅಮೆರಿಕಾ ಹಾಗೂ ಸೈಬೀರಿಯಾದ ಪ್ರದೇಶಗಳಲ್ಲಿ ವಾಸಿಸುವವರು ಕೆಲವೊಂದು ವಿಚಿತ್ರ ಪದ್ಧತಿಗಳನ್ನು ಅನುಸರಿಸುತ್ತಿದ್ದು ಪತ್ನಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರಿಂದ ದುಷ್ಟಶಕ್ತಿಗಳನ್ನು ಗೊಂದಗೊಳಿಸಿ ಕೆಟ್ಟಶಕುನಗಳನ್ನು ದೂರವಿಡಬಹುದು ಎಂದು ವಿಶ್ವಾಸವಿರಿಸುತ್ತಾರೆ.
ಬೆರಳುಗಳನ್ನು ಕತ್ತರಿಸುವುದು
ಇಂಡೋನೇಷ್ಯಾದ ಡಾನಿ ಬುಡಕಟ್ಟು ಜನಾಂಗದಲ್ಲಿ ಅತ್ಯಂತ ಯಾತನಾಮಯವಾದ ಸಂಪ್ರದಾಯವನ್ನು ಆಚರಿಸಲಾಗುತ್ತಿದ್ದು ಈ ಬುಡಕಟ್ಟಿನ ಮಹಿಳೆಯರು ಕುಟುಂಬದಲ್ಲಿ ಮೃತರಾದವರ ದುಃಖವನ್ನು ಬೆರಳಿನ ಒಂದು ಭಾಗವನ್ನು ಕತ್ತರಿಸುವ ಮೂಲಕ ದೈಹಿಕವಾಗಿ ತೋರ್ಪಡಿಸಬೇಕು.
ನರಭಕ್ಷಕತೆ ಹೆಣದ ಸಂಭೋಗ
ಭಾರತದ ಅಘೋರಿ ಬಾಬಾಗಳು ಮೃತಶರೀರದ ಸೇವನೆಯನ್ನು ಮಾಡುತ್ತಾರೆ. ಪವಿತ್ರ ಪುರುಷರು, ಗರ್ಭಿಣಿಯರು, ಅವಿವಾಹಿತ ಮಹಿಳೆಯರ ಶವವನ್ನು ಸುಡದೇ ಗಂಗಾನದಿಯಲ್ಲಿ ತೇಲಿಬಿಡುತ್ತಾರೆ. ಇಂತಹ ತೇಲಿಬಂದ ಶವವನ್ನು ಅಘೋರಿಗಳು ಸೇವಿಸುತ್ತಾರೆ.
ಕೆಂಡದ ಮೇಲೆ ನಡೆಯುವುದು
ಮಲೇಷಿಯಾದ ಪೆನಾಂಗ್ನಲ್ಲಿ ಟಾವೊ ಆಚರಣೆಯನ್ನು ನಡೆಸಲಾಗುತ್ತಿದ್ದು ಕೆಂಡದ ಮೇಲೆ ಬರಿಗಾಲಿನಲ್ಲಿ ನಡೆಯುವ ಸಂಪ್ರದಾಯ ಹಿಂದಿನಿಂದಲೂ ಜಾರಿಯಲ್ಲಿದೆ. ದುಷ್ಟ ಶಕ್ತಿಯನ್ನು ಹಿಮ್ಮೆಟ್ಟಿಸುತ್ತದೆ ಎಂಬ ನಂಬಿಕೆಯಿಂದ ಜನರು ಕೆಂಡದ ಮೇಲೆ ಬರಿಗಾಲಿನಲ್ಲಿ ನಡೆಯುತ್ತಾರೆ.
ಮೃತಶರೀರದೊಂದಿಗೆ ವಾಸಿಸುವುದು
ಇಂಡೋನೇಷ್ಯಾದ ತೊರಾಜಾ ಬುಡಕಟ್ಟು ಸಮುದಾಯವು ತಮ್ಮ ಹಳ್ಳಿಯ ಜನರ ಮೃತಶರೀರದೊಂದಿಗೆ ವಾಸಿಸುವ ಭಯಾನಕ ಪದ್ಧತಿಯನ್ನು ಅನುಸರಿಸುತ್ತಾರೆ. ಶರೀರವನ್ನು ವಿಶೇಷ ದಿರಿಸುಗಳಿಂದ ಅಲಂಕರಿಸಿ ಹಳ್ಳಿಯಾದ್ಯಂತ ಮೆರವಣಿಗೆ ನಡೆಸುತ್ತಾರೆ.
ಕರಡಿ ಪೂಜೆ
ಜಪಾನ್ ಹಾಗೂ ರಷ್ಯಾದ ಸ್ಥಳೀಯ ವಾಸಿಗಳಾದ ಐನು ಜನರು ಕರಡಿಗಳನ್ನು ಬಲಿ ನೀಡುವ ಪದ್ಧತಿಯನ್ನು ಹೊಂದಿದ್ದು ಕರಡಿಯ ಪ್ರಾಣ ತ್ಯಾಗದಿಂದ ಮಾನವಕುಲಕ್ಕೆ ಆಶೀರ್ವಾದ ದೊರೆಯುತ್ತದೆ ಎಂಬುದು ಇಲ್ಲಿನವರ ನಂಬಿಕೆಯಾಗಿದೆ.
ಕಠಾರಿಯಿಂದ ತಮಗೆ ತಾವೇ ಹೊಡೆದುಕೊಳ್ಳುವುದು
ಪ್ರಪಂಚದಾದ್ಯಂತ ಅನೇಕ ಮುಸ್ಲಿಮರು ಅಶುರಾ ಎಂಬ ಪದ್ಧತಿಯನ್ನು ಆಚರಿಸುತ್ತಿದ್ದು ಪ್ರವಾದಿ ಮಹಮ್ಮದರ ಮೊಮ್ಮಗ ಇಮಾನ್ ಹುಸೇನ್ನ ಮರಣದ ದಿನದ ನೆನಪಿಗಾಗಿ ಈ ಆಚರಣೆ ರೂಢಿಯಲ್ಲಿದೆ. ಈ ಆಚರಣೆಯಲ್ಲಿ ಕೆಲವೊಂದು ಪುರುಷರು ಮೆರವಣಿಗೆಯಲ್ಲಿ ಸಾಗಿ ಕಠಾರಿಯಿಂದ ತಮ್ಮ ತಲೆಗೆ ರಕ್ತಬರುವಂತೆ ಹೊಡೆದುಕೊಳ್ಳುತ್ತಾರೆ.
ದೇಹವನ್ನು ಮಾರ್ಪಡಿಸುವ ಆಚರಣೆ
ಕಪಿಂಗಾರ ಎಂಬ ಹೆಸರಿನ ಪಪುವಾ ಬುಡಕಟ್ಟು ಜನರು ತಮ್ಮ ದೇಹವನ್ನು ಚೂಪಾದ ಬಿದಿರಿನ ತುಂಡುಗಳಿಂದ ಗಾಯ ಮಾಡಿಕೊಳ್ಳುತ್ತಾರೆ ಹೀಗೆ ಮಾಡಿದ ಗಾಯವು ಮೊಸಳೆಯ ಚರ್ಮಕ್ಕೆ ಸಮನಾಗಿರುತ್ತದೆ. ಮೊಸಳೆಯು ಮನುಷ್ಯನ ಸೃಷ್ಟಿಕರ್ತ ಎಂಬ ಕಲ್ಪನೆಯನ್ನು ಈ ಸಂಪ್ರದಾಯ ಆಧರಿಸಿದೆ.
ಯೋನಿ ಹೊಲಿಯುವ ಸಂಪ್ರದಾಯ
ಪೂರ್ವ ಆಫ್ರಿಕಾ ಹಾಗೂ ಹಲವಾರು ಪೆರುವಿಯನ್ ಬುಡಕಟ್ಟು ಸಮುದಾಯದಲ್ಲಿ ಅಮಾನವೀಯ ಆಚರಣೆ ರೂಢಿಯಲ್ಲಿದ್ದು ವಿವಾಹದ ಮೊದಲು ಯುವತಿ ಅಥವಾ ಸ್ತ್ರೀಯರು ಸಂಭೋಗವನ್ನು ನಡೆಸಬಾರದು ಎಂಬ ಕಾರಣಕ್ಕೆ ಯೋನಿಯನ್ನು ಹೊಲಿಯುತ್ತಾರೆ. ಮೂತ್ರ ವಿಸರ್ಜನೆಗಾಗಿ ಸಣ್ಣ ರಂಧ್ರವನ್ನು ಮಾತ್ರವೇ ಬಿಡುತ್ತಾರೆ. ಈ ಪದ್ಧತಿಯನ್ನು ಇನ್ಪಿಬುಲೇಶನ್ ಎಂದು ಕರೆಯುತ್ತಾರೆ. ಇದೊಂದು ಅತ್ಯಂತ ನೋವಿನಿಂದ ಕೂಡಿದ್ದು ಜನನಾಂಗ ತ್ವಚೆಗೆ ಹಾನಿಯನ್ನುಂಟು ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ