ಈಗಂತೂ ಅನೇಕರು ಈ ಸಂಧಿವಾತದಿಂದ (Arthritis Pain) ಬಳಲುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಎಂದರೆ ಕೀಲುಗಳು ಮತ್ತು ಮೂಳೆಗಳಲ್ಲಿ (Joints Pain) ಒಂದು ರೀತಿಯ ನೋವು ಕಂಡು ಬರುತ್ತದೆ. ಅದರಲ್ಲೂ ಈ ಚಳಿಗಾಲದ (Winter) ಚುಮು-ಚುಮು ಮೈ ಕೊರೆಯುವ ಚಳಿಯಲ್ಲಿ ಈ ಕೀಲುಗಳ ಮತ್ತು ಮೂಳೆಗಳ ನೋವು ಇನ್ನೂ ಹೆಚ್ಚಾಗುತ್ತದೆ ಅಂತ ಹೇಳಬಹುದು. ಈ ರೋಗವು ಭಾರತದಲ್ಲಿ ಅನೇಕರ ಮೇಲೆ ಈಗಾಗಲೇ ಭಾರಿ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ. ಕೀಲುಗಳು ಮತ್ತು ಮೂಳೆಗಳಲ್ಲಿ ಬಿಗಿತ, ಉರಿಯೂತ ಮತ್ತು ಒಂದು ರೀತಿಯ ಕೆಟ್ಟ ನೋವು (Pains) ಕಾಣಿಸಿಕೊಳ್ಳುತ್ತದೆ. ಸಂಧಿವಾತವು ಕೀಲುಗಳ ಚಲನಶೀಲತೆಯನ್ನು ನಿರ್ಬಂಧಿಸುವುದರಿಂದ ಒಬ್ಬ ವ್ಯಕ್ತಿಗೆ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಕಷ್ಟವಾಗಬಹುದು.
ಸಂಧಿವಾತದಿಂದಾಗಿ ಕುಳಿತುಕೊಳ್ಳುವುದು ಅಥವಾ ಬಾಗುವುದು ಮುಂತಾದ ಸರಳ ಕಾರ್ಯಗಳು ಸಹ ತುಂಬಾನೇ ಕಷ್ಟಕರವಾಗಿ ಪರಿಣಮಿಸಬಹುದು.
ಸಂಧಿವಾತದಿಂದ ಬಳಲುತ್ತಿರುವ ವ್ಯಕ್ತಿಯು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ನೋವು ಮತ್ತು ಊತವನ್ನು ಕಡಿಮೆ ಮಾಡಬಹುದು.
ಸಂಧಿವಾತಕ್ಕೆ ಪರಿಹಾರ
ಮೊದಲೆಲ್ಲಾ ಬರೀ ವಯೋ ವೃದ್ದರಲ್ಲಿ ಈ ರೀತಿಯ ಸಂಧಿವಾತ ಸಮಸ್ಯೆ ಕಂಡು ಬರುತ್ತಿತ್ತು. ಆದರೆ ಈಗ ಎಲ್ಲಾ ವಯೋಮಾನದವರಲ್ಲಿ ಈ ಕೀಲುಗಳ ಮತ್ತು ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಅಂತ ಹೇಳಬಹುದು.
ಪೌಷ್ಠಿಕ ತಜ್ಞ ಲೊವ್ನೀತ್ ಬಾತ್ರಾ ಅವರ ಪ್ರಕಾರ, ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಸರಿಯಾದ ಬದಲಾವಣೆಗಳನ್ನು ಮಾಡುವುದರಿಂದ ಸಂಧಿವಾತ ಸಂಬಂಧಿತ ನೋವಿನಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ.
ಇನ್‌ಸ್ಟಾಗ್ರಾಮ್ ರೀಲ್ ನಲ್ಲಿ ಸಂಧಿವಾತದ ನೋವನ್ನು ನಿಭಾಯಿಸಲು ಕೆಲವು ಗಿಡಮೂಲಿಕೆಗಳನ್ನು ಹೇಗೆ ಬಳಸಬಹುದು ಎಂದು ಅವರು ವಿವರಿಸುತ್ತಾರೆ.
ಅಸ್ಥಿಸಂಧಿವಾತ (ಒಎ) ಮತ್ತು ರುಮಟಾಯ್ಡ್ ಆರ್ಥ್ರೈಟಿಸ್ (ಆರ್‌ಎ) ತೀವ್ರವಾದ ಕೀಲು ನೋವಿಗೆ ಕಾರಣವಾಗುವ ಸಂಧಿವಾತದ ಸಾಮಾನ್ಯ ವಿಧಗಳಾಗಿವೆ ಎಂದು ಪೌಷ್ಠಿಕ ತಜ್ಞರು ಹೇಳುತ್ತಾರೆ.
ಸಂಧಿವಾತದ ನೋವನ್ನು ಕಡಿಮೆ ಮಾಡುತ್ತವೆ ಈ 5 ಗಿಡಮೂಲಿಕೆಗಳು:
1.ಅಲೋವೆರಾ
ಅಲೋವೆರಾ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಕೀಲು ನೋವನ್ನು ನಿವಾರಿಸಲು ಇದು ತುಂಬಾನೇ ಸಹಾಯ ಮಾಡುತ್ತದೆ ಎಂಬ ಉಪಯುಕ್ತ ಮಾಹಿತಿಯನ್ನು ಪೌಷ್ಠಿಕ ತಜ್ಞರು ತಮ್ಮ ರೀಲ್ ನಲ್ಲಿ ಹಂಚಿಕೊಂಡಿದ್ದಾರೆ.
ಅಲೋವೆರಾದಲ್ಲಿ ಕಂಡು ಬರುವ ಜೆಲ್ ಆಂಥ್ರಾಕ್ವಿನೋನ್ ಗಳಿಂದ ತುಂಬಿದೆ, ಇದು ಸಂಧಿವಾತದ ಸ್ಥಿತಿಯನ್ನು ಮತ್ತು ನೋವನ್ನು ನಿವಾರಿಸುವಲ್ಲಿ ಮತ್ತು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ.
2.ಅರಿಶಿನ
ಸಂಧಿವಾತವನ್ನು ನಿರ್ವಹಿಸಲು ಅರಿಶಿನವು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಮತ್ತೊಂದು ಗಿಡಮೂಲಿಕೆಯಾಗಿದೆ. ಇದರ ಮುಖ್ಯ ಘಟಕಾಂಶವೆಂದರೆ ಕರ್ಕ್ಯುಮಿನ್, ಇದು ನೋವಿನಿಂದ ಪರಿಹಾರವನ್ನು ನೀಡುತ್ತದೆ ಮತ್ತು ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ ಅಂತ ಹೇಳಲಾಗುತ್ತದೆ.
3.ಥೈಮ್
ಸಂಧಿವಾತವನ್ನು ಎದುರಿಸಲು ಥೈಮ್ ಅನ್ನು ಸಹ ಬಳಸಬಹುದು. ಇದು ಸಹ ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ರೋಗವನ್ನು ನಿರ್ವಹಿಸುವಲ್ಲಿ ಮತ್ತು ನೋವನ್ನು ಕಡಿಮೆ ಮಾಡುವಲ್ಲಿ ತುಂಬಾನೇ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ: Rose Water: ಸೌಂದರ್ಯಕ್ಕೊಂದೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ರೋಸ್ ವಾಟರ್
4.ಶುಂಠಿ
ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಶುಂಠಿಯನ್ನು ಸಂಧಿವಾತದ ನೋವನ್ನು ಕಡಿಮೆ ಮಾಡಲು ಬಳಸಬಹುದು. ಹೌದು, ಶುಂಠಿಯಲ್ಲಿ ಲ್ಯೂಕೋಟ್ರೀನ್ ಎಂಬ ಅಂಶ ಇರುತ್ತದೆ ಮತ್ತು ಇದು ಉರಿಯೂತದ ಅಣುಗಳನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಸಂಧಿವಾತದಲ್ಲಿ ನೀವು ಅನುಭವಿಸುವ ನೋವಿನ ಹಿಂದಿರುವ ಪ್ರೊಸ್ಟಗ್ಲಾಂಡಿನ್ ಗಳನ್ನು ಶುಂಠಿ ಸಂಶ್ಲೇಷಿಸುತ್ತದೆ ಅಂತ ಹೇಳಲಾಗುತ್ತದೆ.
5.ಬೆಳ್ಳುಳ್ಳಿ
ಮನೆಯಲ್ಲಿರುವ ಬೆಳ್ಳುಳ್ಳಿಯಲ್ಲಿ ಡಯಲೈಲ್ ಡೈಸಲ್ಫೈಡ್ ಎಂಬ ಉರಿಯೂತ ನಿವಾರಕ ಸಂಯುಕ್ತವು ಕಂಡು ಬರುತ್ತದೆ, ಇದು ಉರಿಯೂತದ ಪರ ಸೈಟೋಕಿನ್ ಗಳ ಪರಿಣಾಮಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ಸಂಧಿವಾತದ ನೋವನ್ನು ಬೆಳ್ಳುಳ್ಳಿ ನಿವಾರಿಸುತ್ತದೆ ಅಂತ ಹೇಳಲಾಗುತ್ತದೆ.
(Disclaimer:ಮೇಲಿನ ಲೇಖನದ ವರದಿಯೂ ಅಂತರ್ಜಾಲದಲ್ಲಿ ಲಭ್ಯ ಇರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ನ್ಯೂಸ್ 18 ಖಚಿತಪಡಿಸುವುದಿಲ್ಲ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ