ಪೇರಲೆ ಹಣ್ಣು (Guava) ಫೈಬರ್‌ನ ಸಮೃದ್ಧ ಮೂಲಗಳಲ್ಲಿ ಒಂದು. ಬಾಯಿ ರುಚಿಯಷ್ಟೇ ಆರೋಗ್ಯಕ್ಕೂ ಹಿತವಾಗಿರುವ ಈ ಹಣ್ಣು ತನ್ನ ಹಲವಾರು ಪೋಷಕಾಂಶಗಳಿಂದ (Nutrient) ಹತ್ತಾರು ರೋಗಗಳನ್ನು ದೂರ ಮಾಡುವ ಸಾಮರ್ಥ್ಯ ಹೊಂದಿದೆ. ಕೇವಲ ಹಣ್ಣು ಮಾತ್ರವಲ್ಲ ಪೇರಲೆಯ ಎಲೆಗಳು ಸಹ ಔಷಧೀಯ ಗುಣಗಳನ್ನು ಹೊಂದಿದೆ. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA) ಪ್ರಕಾರ 100 ಗ್ರಾಂ ಹಣ್ಣಿನಲ್ಲಿ ಕೇವಲ 68 ಗ್ರಾಂ ಕ್ಯಾಲೋರಿಗಳು (Calories) ಮತ್ತು 8.92 ಗ್ರಾಂ ಸಕ್ಕರೆ ಇರುತ್ತದೆ. 18 ಗ್ರಾಂ ಖನಿಜಾಂಶ ಜೊತೆಗೆ ಕ್ಯಾಲ್ಸಿಯಂ ಕೂಡ ಸಮೃದ್ಧವಾಗಿದೆ. 22 ಗ್ರಾಂ ಮೆಗ್ನೀಸಿಯಮ್, ಗಮನಾರ್ಹ ಪ್ರಮಾಣದ ರಂಜಕ ಮತ್ತು ಪೊಟ್ಯಾಸಿಯಮ್ ಕೂಡ ಇದೆ.
ಇಷ್ಟೆಲ್ಲಾ ಸತ್ವ ಹೊಂದಿರುವ ಪೇರಲೆ ಸಹಜವಾಗಿಯೇ ಆರೋಗ್ಯಕ್ಕೆ ವರದಾನವಾಗಿದೆ. ಹಾಗಾದ್ರೆ ಮಳೆಗಾಲ ಸೇರಿದಂತೆ ಈ ಹಣ್ಣನ್ನು ತಿನ್ನುವುದಿಂದ ಸಿಗುವ ಪ್ರಯೋಜನಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.
1) ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಪೇರಲೆ ಹಣ್ಣು ವಿಟಮಿನ್ ಸಿ ಯ ಶ್ರೀಮಂತ ಮೂಲಗಳಲ್ಲಿ ಒಂದಾಗಿದ್ದು, ಕಿತ್ತಳೆಯಲ್ಲಿರುವ ವಿಟಮಿನ್ ಸಿಗಿಂತ 4 ಪಟ್ಟು ಹೆಚ್ಚು ವಿಟಮಿನ್ ಸಿ ಸತ್ವವನ್ನು ಹೊಂದಿದೆ. ಹೀಗಾಗಿ ಇದರಲ್ಲಿರುವ ವಿಟಮಿನ್ ಸಿ ನಮ್ಮಲ್ಲಿನ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಸಾಮಾನ್ಯ ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸುತ್ತದೆ. ಇದಲ್ಲದೆ, ಪೇರಲೆ ಕಣ್ಣುಗಳನ್ನು ಸಹ ಆರೋಗ್ಯಕರವಾಗಿರಿಸುತ್ತದೆ.
2) ಮಧುಮೇಹವನ್ನು ನಿಯಂತ್ರಿಸುತ್ತದೆ
ನೇರಳೆ ಹಣ್ಣು ಹೇಗೆ ಮಧುಮೇಹಿ ಸ್ನೇಹಿಯಾಗಿದೆಯೋ ಹಾಗೆಯೇ ಪೇರಲೆ ಹಣ್ಣು ಕೂಡ ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಫಲ. ಹೇರಳವಾದ ಫೈಬರ್ ಅಂಶ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಕಾರಣ, ಪೇರಲ ಮಧುಮೇಹ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ. ಜೊತೆಗೆ ಪೇರಲೆಯಲ್ಲಿರುವ ಫೈಬರ್ ಅಂಶವು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಇದನ್ನೂ ಓದಿ: Cholesterol: ಕೊಲೆಸ್ಟ್ರಾಲ್ ಮಟ್ಟ ಕಂಟ್ರೋಲ್ ಮಾಡೋಕೆ ಈ ಆಹಾರ ಕ್ರಮ ಪಾಲಿಸಿ ಸಾಕು
3) ಹೃದಯದ ಕಾಳಜಿ ಮಾಡುತ್ತದೆ
ಈ ಹಣ್ಣು ದೇಹದ ಸೋಡಿಯಂ ಮತ್ತು ಪೊಟ್ಯಾಸಿಯಮ್ ಸಮತೋಲನವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮತ್ತು ಹೃದ್ರೋಗದ ಬೆಳವಣಿಗೆಗೆ ಕೊಡುಗೆ ನೀಡುವ ಟ್ರೈಗ್ಲಿಸರೈಡ್‌ಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಮಟ್ಟವನ್ನು ಕಡಿಮೆ ಮಾಡಲು ಪೇರಲೆ ಸಹಾಯ ಮಾಡುತ್ತದೆ. ಈ ಸೂಪರ್ ಫ್ರೂಟ್ ನಲ್ಲಿರುವ ಫೈಬರ್ ಅಂಶ ಹೆಚ್ಚುವರಿ ಕೊಬ್ಬನ್ನು ತೊಡೆದುಹಾಕಿ ಉತ್ತಮ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಮಟ್ಟವನ್ನು ಸುಧಾರಿಸುತ್ತದೆ. ಇದರಿಂದಾಗಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
4) ಮಲಬದ್ಧತೆಗೆ ಚಿಕಿತ್ಸೆ ನೀಡುತ್ತದೆ
ಇತರ ಹಣ್ಣುಗಳಿಗೆ ಹೋಲಿಸಿದರೆ ಇದು ಫೈಬರ್‌ನ ಸಮೃದ್ಧ ಮೂಲವಾಗಿದೆ. ಕೇವಲ 1 ಪೇರಲೆ ಹಣ್ಣು ನಿಮ್ಮ ದೈನಂದಿನ ಅಗತ್ಯದ 12% ಫೈಬರ್ ಅನ್ನು ಪೂರೈಸುತ್ತದೆ. ಇದು ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಪೇರಲ ಬೀಜಗಳನ್ನು ಸಂಪೂರ್ಣವಾಗಿ ಸೇವಿಸಿದರೆ ಅಥವಾ ಅಗಿಯುತ್ತಿದ್ದರೆ, ಇದು ಅತ್ಯುತ್ತಮ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ, ಆರೋಗ್ಯಕರ ಕರುಳಿನ ಚಲನೆಯನ್ನು ರೂಪಿಸಲು ಸಹ ಸಹಾಯ ಮಾಡುತ್ತದೆ.
5) ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ
ವಿಟಮಿನ್ ಎ ಹೇರಳವಾಗಿ ಇರುವ ಕಾರಣ, ಪೇರಲವು ದೃಷ್ಟಿ ಆರೋಗ್ಯಕ್ಕೆ ಬೂಸ್ಟರ್ ಎಂದು ಹೆಸರುವಾಸಿಯಾಗಿದೆ. ಇದು ದೃಷ್ಟಿ ಕ್ಷೀಣಿಸುವುದನ್ನು ತಡೆಯುವುದಲ್ಲದೆ, ದೃಷ್ಟಿಯನ್ನು ಸುಧಾರಿಸುತ್ತದೆ. ಇದು ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ನೋಟವನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Fruits Seeds: ಈ ಹಣ್ಣಿನ ಬೀಜ ತಿಂದರೆ ಆರೋಗ್ಯಕ್ಕೆ ಹಾನಿ ಗ್ಯಾರೆಂಟಿ, ಹಣ್ಣು ತಿನ್ನುವ ಮುನ್ನ ಯೋಚಿಸಿ
6) ಹಲ್ಲುನೋವಿಗೆ ರಾಮಬಾಣ
ಪೇರಲೆ ಎಲೆಗಳು ಪ್ರಬಲವಾದ ಉರಿಯೂತದ ಕ್ರಿಯೆ ಮತ್ತು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಸಾಮರ್ಥ್ಯವನ್ನು ಹೊಂದಿವೆ, ಇದು ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಹೀಗಾಗಿ, ಪೇರಲೆ ಎಲೆಗಳನ್ನು ಸೇವಿಸುವುದು ಹಲ್ಲುನೋವಿಗೆ ಅದ್ಭುತವಾದ ಮನೆಮದ್ದಾಗಿದೆ. ಪೇರಲೆ ಎಲೆಗಳ ರಸವು ಹಲ್ಲುನೋವು, ಊದಿಕೊಂಡ ಒಸಡುಗಳು ಮತ್ತು ಬಾಯಿಯ ಹುಣ್ಣುಗಳನ್ನು ಸಹ ಗುಣಪಡಿಸುತ್ತದೆ.
7) ಒತ್ತಡ ನಿವಾರಿಸುತ್ತದೆ
ಹಣ್ಣಿನಲ್ಲಿರುವ ಮೆಗ್ನೀಸಿಯಮ್ ಪೇರಲೆಯ ಅನೇಕ ಪ್ರಯೋಜನಗಳಲ್ಲಿ ಒಂದಾಗಿದೆ, ಇದು ದೇಹದ ಸ್ನಾಯುಗಳು ಮತ್ತು ನರಗಳ ಆರೊಗ್ಯಕ್ಕೆ ಪ್ರಯೋಜನಕಾರಿ. ಆದ್ದರಿಂದ ಪೇರಲೆ ಒತ್ತಡ ನಿವಾರಕವಾಗಿ ಅದ್ಭುತವಾಗಿ ಕೆಲಸ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ