ಆಟಕ್ಕೂ ಸೈ, ಮಕ್ಕಳಾಟಕ್ಕೂ ಸೈ; ಮಕ್ಕಳನ್ನು ಆಡಿಸಲು ರೋಬೋ ರೆಡಿ

news18
Updated:June 16, 2018, 7:12 PM IST
ಆಟಕ್ಕೂ ಸೈ, ಮಕ್ಕಳಾಟಕ್ಕೂ ಸೈ; ಮಕ್ಕಳನ್ನು ಆಡಿಸಲು ರೋಬೋ ರೆಡಿ
news18
Updated: June 16, 2018, 7:12 PM IST
ನ್ಯೂಸ್​ ​18 ಕನ್ನಡ
ಮೊದಲೆಲ್ಲ ಮಕ್ಕಳಿಗೆ ಆಟವಾಡೋಕೆ ಮನೆಯಲ್ಲಿ, ಅಕ್ಕಪಕ್ಕದ ಮನೆಗಳಲ್ಲಿ ಸಾಕಷ್ಟು ಮಕ್ಕಳಿರ್ತಿದ್ರು. ಆದರೆ ಈಗ ಎಲ್ಲರ ಮನೆಯಲ್ಲೂ ಒಬ್ಬೊಬ್ಬರೇ ಮಕ್ಕಳು ಅಂತ ಆಗಿರೋದ್ರಿಂದ ಮಕ್ಕಳೆಲ್ಲ ಕೈಯಲ್ಲಿ ವಿಡಿಯೋ ಗೇಂ, ಮೊಬೈಲ್​, ಟಿವಿ-ಕಾರ್ಟೂನ್​ ಅಂತ ಬೇರೆ ರೀತಿಯ ಮನರಂಜನೆಗಳ ಮೊರೆಹೋಗುತ್ತಿದ್ದಾರೆ.

ಇದು ಕೇವಲ ಭಾರತದ ಕತೆಯಲ್ಲ, ಬೇರೆ ದೇಶಗಳಲ್ಲೂ ಮಕ್ಕಳ ಒಂಟಿತನವನ್ನು ಹೋಗಲಾಡಿಸೋಕೆ ಪೋಷಕರು ಸಾಕಷ್ಟು ಪ್ರಯತ್ನ ಪಡೋ ಹಾಗಾಗಿದ್ಯಂತೆ. ಅದಕ್ಕಾಗಿಯೇ ತಾಂತ್ರಿಕ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಮಕ್ಕಳಿಗೆ ಜೊತೆಗಾರರನ್ನು ತರುವ ಪ್ರಯೋಗಕ್ಕೆ ಮುಂದಾಗಿದ್ದಾರಂತೆ. ಯಾರು ಆ ಜೊತೆಗಾರರು ಅಂತ ಯೋಚಿಸ್ತಿದೀರಾ?

ಆಧುನಿಕ ಜಗತ್ತು ಸಂಪೂರ್ಣ ತಾಂತ್ರಿಕತೆಗೆ ಒಗ್ಗಿಕೊಳ್ಳುತ್ತಿದೆ. ಮಾಡುವ ಪ್ರತಿ ಕೆಲಸಕ್ಕೂ ಟೆಕ್ನಾಲಜಿ ಕಾಲಿಟ್ಟಿದೆ. ಅದೇರೀತಿ ಚೀನಾದಲ್ಲಿ ಮಕ್ಕಳೊಂದಿಗೆ ಆಟವಾಡಲು ಐಪಾಲ್​ ಎಂಬ ರೋಬೋಟನ್ನು ಕಂಡುಹಿಡಿಯಲಾಗಿದೆ. ಚೀನಾದ ಶಾಂಗೈನಲ್ಲಿ ಈ ವಾರ ಬಿಡುಗಡೆಯಾಗಲಿರುವ ಐಪಾಲ್​ ಟೆಕ್ನಾಲಜಿ ಕ್ಷೇತ್ರಕ್ಕೆ ಹೊಸ ಅಳವಡಿಕೆಯಾಗಿದೆ.

 

ಏನೇನು ಮಾಡುತ್ತದೆ ಐಪಾಲ್​?: ಅಂದಹಾಗೆ, ಈ ಐಪಾಲ್​ ನೋಡೋಕಷ್ಟೆ ಕಲರ್​ಫುಲ್​ ಆಗಿಲ್ಲ. ನೋಡಲು ಸೇಮ್ ಮನುಷ್ಯರ ಹಾಗೆ ಕಾಣುವ ಐಪಾಲ್​ ಸೇಮ್​ ಟು ಸೇಮ್​ ಮನುಷ್ಯರ ಹಾಗೆ ಚಕ್ರದ ಆಧಾರದಲ್ಲಿ ಡ್ಯಾನ್ಸ್​ ಮಾಡುತ್ತದೆ. 5 ವರ್ಷದ ಮಕ್ಕಳಷ್ಟು ದೊಡ್ಡದಾಗಿರುವ ಈ ರೋಬೋಟ್​ ಮುಖದಲ್ಲಿ ಬೇರೆ ಬೇರೆ ರೀತಿಯ ಭಾವನೆಗಳನ್ನು ಕೂಡ ಹೊರಸೂಸಬಲ್ಲದು. ಐಪಾಲ್​ ಅನ್ನು ಬಳಸಿಕೊಂಡು ರಿಮೋಟ್​ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬಹುದು, ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಬಹುದು, ಆಫೀಸಿನಲ್ಲಿದ್ದುಕೊಂಡೇ ಮಕ್ಕಳೊಂದಿಗೆ ಮಾತನಾಡಬಹುದು. ಸ್ಮಾರ್ಟ್​ಫೋನ್​ ಆ್ಯಪ್​ನೊಂದಿಗೆ ಲಿಂಕ್​ ಆಗಿರುವ ಈ ಐಪಾಲ್​ ರೋಬೋಟ್​ ಮೂಲಕ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕುಳಿತಲ್ಲಿಂದಲೇ ನೋಡಲು ಮತ್ತು ಕೇಳಲು ಸಾಧ್ಯವಿದೆ.

ಮುಖ್ಯವಾಗಿ ಮಕ್ಕಳೊಂದಿಗೆ ಆಟವಾಡಲು, ಮಾತನಾಡಲು ಕಂಪನಿ ಬೇಕೆಂಬ ಕಾರಣಕ್ಕೆ ಈ ರೋಬೋಟನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಮಕ್ಕಳಿಗೆ ಮನೆಯಲ್ಲೇ ಇದ್ದರೂ ಬೇಸರವಾಗುವುದಿಲ್ಲ. ಈ ರೋಬೋಟ್​ ಚಿಕ್ಕದಾಗಿ ಇರುವುದರಿಂದ ತನ್ನ ಗೆಳೆಯನೆಂಬ ಭಾವನೆ ಮಕ್ಕಳಲ್ಲಿ ಮೂಡುತ್ತದೆ, ತಮ್ಮ ಮನೆಯಲ್ಲಿ ಇನ್ನೊಂದು ಮಗುವಿದೆ ಎಂದುಕೊಳ್ಳುತ್ತಾರೆ ಎನ್ನುವುದು ಅವತಾರ್​ಮೈಂಡ್​ ರೋಬೋಟ್​ ಟೆಕ್ನಾಲಜಿಯ ಸಹ ಸಂಸ್ಥಾಪಕ ತಿಂಗ್ಯು ಹುಯಾಂಗ್​ ಅವರ ಅಭಿಪ್ರಾಯ.
Loading...

ಚೀನಾದಲ್ಲಿ ತಂದೆ-ತಾಯಿಯಿಬ್ಬರೂ ಉದ್ಯೋಗಕ್ಕೆ ಹೋಗುವುದರಿಂದ ಈ ರೋಬೋಟ್​ಗಳಿಗೆ ಒಳ್ಳೆಯ ಬೇಡಿಕೆ ಬರುತ್ತಿದೆ. ಶೋರೂಂಗಳಲ್ಲಿ ಚಂದವಾಗಿ ಡ್ಯಾನ್ಸ್ ಮಾಡಿಕೊಂಡು ನಿಂತಿರುವ ಪುಟಾಣಿ ರೋಬೋಟ್​ಗಳನ್ನು ನೋಡಿದ ಮಕ್ಕಳು ಕೂಡ ಅದನ್ನು ತಮ್ಮ ಮನೆಗೆ ಕರೆದೊಯ್ಯಲು ಇಷ್ಟಪಡುತ್ತಿದ್ದಾರೆ. ಇದರಿಂದ ಮಕ್ಕಳನ್ನು ನೊಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲ ಎಂಬ ತಲೆನೋವು ಅಲ್ಲಿನ ಪೋಷಕರಿಗೆ ಕಡಿಮೆಯಾದಂತಾಗಿದೆ. ರೋಬೋಟ್​ಗಳು ಶಿಕ್ಷಕರು ಮತ್ತು ಪೋಷಕರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂಬ ಮಾತು ನಿಜವಾದರೂ ಆಧುನಿಕ ಜೀವನಶೈಲಿಯಲ್ಲಿ ಎಲ್ಲವೂ ಅನಿವಾರ್ಯ ಎಂಬಂತಾಗಿರುವುದು ಸುಳ್ಳಲ್ಲ. ಚೀನಾದಷ್ಟು ಆಧುನಿಕ ಮನಸ್ಥಿತಿ ಭಾರತದಲ್ಲಿ ಬಂದಿಲ್ಲವಾದ್ದರಿಂದ ಈ ರೋಬೋಟ್​ಗಳು ಭಾರತದ ಮನೆಗಳಿಗೆ ಕಾಲಿಡಲು ಇನ್ನೂ ಬಹಳಷ್ಟು ವರ್ಷಗಳು ಬೇಕಾಗಬಹುದು.
First published:June 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ