#HealthTips: ವ್ಯಾಯಾಮ ಮತ್ತು ಕ್ರೀಡೆಯು ಜೀವನದ ಭಾಗವಾಗಿರಲಿ

news18
Updated:August 28, 2018, 4:25 PM IST
#HealthTips: ವ್ಯಾಯಾಮ ಮತ್ತು ಕ್ರೀಡೆಯು ಜೀವನದ ಭಾಗವಾಗಿರಲಿ
news18
Updated: August 28, 2018, 4:25 PM IST
-ನ್ಯೂಸ್ 18 ಕನ್ನಡ

-ಡಾ. ಶ್ರೀಲತಾ ಪದ್ಯಾಣ, ಪ್ರಕೃತಿ ಚಿಕಿತ್ಸಾ ತಜ್ಞರು

ನಮ್ಮ ಜೀವನವನ್ನು ಸುಂದರವಾಗಿ ರೂಪಿಸುವಲ್ಲಿ ವ್ಯಾಯಾಮ ಮತ್ತು ಕ್ರೀಡೆಗಳು ಅತ್ಯಂತ ಮಹತ್ವವಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಆಹಾರ, ನಿದ್ರೆ, ವಸತಿ, ಗಾಳಿ ಎಷ್ಟು ಮುಖ್ಯವೋ ಶಾರೀರಿಕ ವ್ಯಾಯಾಮ, ಕ್ರೀಡೆಗಳು, ಯೋಗಾಸನಗಳು ಅಷ್ಟೇ ಅವಶ್ಯವಾಗಿದೆ. ಹಾಗಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಮತ್ತು ಕ್ರೀಡೆಗಳು ಸುಲಭವಾದ ಮಾರ್ಗಗಳು.

ಭಾರತದಲ್ಲಿ ಕ್ರೀಡಾ ಸಂಪ್ರದಾಯ ಪುರಾತನ ಕಾಲದಿಂದಲೂ ನಡೆದು ಬರುತ್ತಿದೆ. ಹಿಂದಿನ ಕಾಲದಲ್ಲಿ ಕುದುರೆ ಸವಾರಿ, ಬಾಣದ ಗುರಿ, ಈಟಿ ಎಸೆತ, ಪಗಡೆ ಆಟ,ಕತ್ತಿ ವರಸೆ ಮುಂತಾದ ಆಟಗಳೊಂದಿಗೆ ಸೂರ್ಯ ನಮಸ್ಕಾರ, ಪ್ರಾಣಾಯಾಮ, ವ್ಯಾಯಾಮಗಳು ಚಾಲ್ತಿಯಲ್ಲಿದ್ದವು. ಇವು ಸ್ಪರ್ಧಾತ್ಮಕ ಭಾವನೆ, ಸ್ನೇಹಪರ ಭಾವನೆ, ಕೌಶಲತೆಯನ್ನು ಮೂಡಿಸಿ ಶಾರೀರಿಕ ಸಂಪತ್ತು ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೈ ಮನಸ್ಸುಗಳಿಗೆ ಉಲ್ಲಾಸ ನೀಡಿ ದೇಹವೂ ಚೈತನ್ಯದಿಂದಿರುವಂತೆ ಪ್ರೇರೇಪಿಸುತ್ತದೆ.

ಕ್ರೀಡೆಯು ಮನರಂಜನೆ ನೀಡುವುದರೊಂದಿಗೆ ಪ್ರೀತಿ ,ಸಹಕಾರ, ಸಹಬಾಳ್ವೆ ,ದೇಶಪ್ರೇಮದ ಭಾವೈಕ್ಯತೆಯನ್ನು ಬೆಳೆಸುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಶಾರೀರಿಕ ಬೆಳವಣಿಗೆಯೊಂದಿಗೆ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯ. ಇದರಿಂದ ಮಾನಸಿಕ ನೆಮ್ಮದಿಯೂ ಸಿಗುವುದರೊಂದಿಗೆ ತ್ರಾಣವನ್ನು ಹೆಚ್ಚಿಸಿ ಆಯಾಸವಾಗುವುದನ್ನು ಹೋಗಲಾಡಿಸಬಹುದು. ಓಡುವುದು ಒಂದು ವ್ಯಾಯಾಮವಾಗಿದ್ದು ಇದರಿಂದ ಹೃದಯದ ಆರೋಗ್ಯ ಹತೋಟಿಯಲ್ಲಿರುತ್ತದೆ. ದಿನನಿತ್ಯದ ವ್ಯಾಯಾಮದಿಂದ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು.

ಸರಳ ವ್ಯಾಯಾಮಗಳಾದ ಕೈಕಾಲು, ಸೊಂಟದ ಚಲನೆಗಳು, ಕುತ್ತಿಗೆ ಬೆನ್ನಿನ ವ್ಯಾಯಾಮಗಳಿಂದ ರಕ್ತ ಸಂಚಾರ ಸರಿಯಾಗಿ ನಡೆದು ಮೂಳೆ,ಸಂಧುಗಳಲ್ಲಿ ಆಗುವಂತಹ ನೋವುಗಳನ್ನು ನಿವಾರಿಸಬಹುದು. ಹಾಗೆಯೇ ಇದರಿಂದ ಸ್ನಾಯುಗಳು ಕೂಡ ಬಲಿಷ್ಠವಾಗುತ್ತವೆ. ಕಣ್ಣಿಗೆ ವ್ಯಾಯಾಮ ಕೊಡುವುದರಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮಹಿಳೆಯರ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ವ್ಯಾಯಾಮದಿಂದ ಪರಿಹಾರ ದೊರೆಯುವುದು. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ವ್ಯಾಯಾಮ ಪ್ರಮುಖ ಪಾತ್ರವಹಿಸಲಿದ್ದು, ಇದು ಹೃದ್ರೋಗಗಳನ್ನು ದೂರವಿಡುತ್ತದೆ. ಪ್ರತಿನಿತ್ಯದ ವ್ಯಾಯಾಮದಿಂದ ಸಕ್ಕರೆ ಕಾಯಿಲೆ ದೂರವಾಗುವುದಲ್ಲದೆ, ಹಾರ್ಮೋನುಗಳ ಉತ್ಪಾದನೆ ನಿಯಂತ್ರಿಸಲು ಸಹಕಾರಿಯಾಗಿದೆ. ವ್ಯಾಯಾಮದಿಂದ ದೈಹಿಕ ಚಟುವಟಿಕೆಯೂ ಉತ್ತಮಗೊಂಡು, ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ವ್ಯಾಯಾಮ ಮಾಡುವುದರಿಂದ ಮೆದುಳಿನ ಕಾರ್ಯವೂ ಉತ್ತಮಗೊಳ್ಳುತ್ತದೆ. ಇದರಿಂದ ಗ್ರಹಣ ಶಕ್ತಿ, ಏಕಾಗ್ರತೆಯು ಹೆಚ್ಚಾಗುವುದಲ್ಲದೆ ದೇಹವೂ ಲವಲವಿಕೆಯಿಂದ ಇದ್ದು ಆರೋಗ್ಯವಾಗಿರುತ್ತದೆ.
Loading...

ಕ್ರೀಡೆಯೂ ಜೀವನದ ಒಂದು ಭಾಗವಾಗಿದ್ದು ಸ್ಪರ್ಧಾತ್ಮಕ ಮನೋಭಾವನೆಯನ್ನು ಮೂಡಿಸುತ್ತದೆ.ನೀತಿ ನಿಯಮಗಳ ಸಂವಹನೆಯೊಂದಿಗೆ ಶಿಸ್ತಿನ ಅರಿವು ಉಂಟಾಗುತ್ತದೆ. ಕ್ರೀಡೆಯಲ್ಲಿ ಒಳಾಂಗಣ ಆಟಗಳಾದ ಚದುರಂಗ, ಚೌಕಾಬಾರ, ಜ್ಞಾಪಕ ಶಕ್ತಿ ಹೆಚ್ಚಿಸುವ ಆಟಗಳು. ಚೆಂಡಿನಾಟ, ಕೇರಂಗಳನ್ನು ಆಡುವುದರಿಂದ ಮನಸ್ಸಿನ ಹತೋಟಿಯನ್ನು ಸಾಧಿಸಬಹುದು ಹಾಗೂ ಸಕಾರಾತ್ಮಕ ಭಾವನೆಗಳನ್ನು ಹೊಂದಬಹುದು. ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್ ,ಹಾಕಿ ಮುಂತಾದ ಹೊರಾಂಗಣ ಆಟಗಳಿಂದ ದೈಹಿಕ ಬಲ ಹೆಚ್ಚುತ್ತದೆ. ಕ್ರೀಡೆಯಲ್ಲಿನ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೆಚ್ಚಿಸುತ್ತದೆ. ಹಾಗೆಯೇ ಇದರಿಂದ ಮನಸ್ಸಿನ ನಾಗಾಲೋಟದ ಕೌಶಲತೆ ವೃದ್ಧಿಸುತ್ತದೆ.

ಕ್ರೀಡೆ ಕೇವಲ ಕಾಲಹರಣ ಆಕ್ಟಿವಿಟಿ ಆಗಿರದೆ ಹಲವು ಜಂಜಾಟಗಳಿಂದ ಹೊರಬರಲು ಒಳ್ಳೆಯ ಮಾರ್ಗವಾಗಿದೆ. ಇದು ಯೋಗ ಮತ್ತು ವ್ಯಾಯಾಮದ ದ್ವಂದ್ವ ಚಟುವಟಿಕೆಯಾಗಿದ್ದು ದೇಹ, ಮನಸ್ಸು ಹಾಗೂ ಆತ್ಮ ಸುಖಕ್ಕೆ ಸ್ಫೂರ್ತಿಯಾಗಿದೆ. ಒಟ್ಟಿನಲ್ಲಿ ವ್ಯಾಯಾಮ ಮತ್ತು ಕ್ರೀಡೆಯು ಜೀವನದ ಒಂದು ಭಾಗವೆಂದು ಪರಿಗಣಿಸುವುದರಿಂದ ಒತ್ತಡದ ಜೀವನದಿಂದ ಹೊರಬರಲು ಸಾಧ್ಯ. ಇತರರೊಂದಿಗಿನ ಕ್ರಿಯೆ- ಪ್ರತಿಕ್ರಿಯೆಗಳ ಸರಪಳಿಯ ಕೊಂಡಿ  ಬಲವಾಗಿ ಇರುವುದರೊಂದಿಗೆ ಸ್ವಯಂ ಶಕ್ತಿ ಹಾಗೂ ಸದಾರೋಗ್ಯದ ಬದುಕು ನಡೆಸುವಂತಹ ಜೀವ ಚೈತನ್ಯವನ್ನು ತುಂಬುತ್ತದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...