ಆಹಾರವನ್ನು ಯಾವ ರೀತಿಯಲ್ಲಿ ಸೇವಿಸಬೇಕು ಎನ್ನುವುದಕ್ಕೆ ಒಂದು ಮಾತಿದೆ. ಬೆಳಿಗ್ಗೆ ರಾಜನಂತೆ ಉಪಹಾರ ಸೇವಿಸಿ, ಮಧ್ಯಾಹ್ನ ಸಾಮಾನ್ಯರಂತೆ ಊಟ ಮಾಡಿ, ರಾತ್ರಿ ಬಡವರಂತೆ ಊಟವನ್ನು ಮಾಡಬೇಕಂತೆ. ಇದು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳೋಕೆ ಹೇಳಿದ ಮಾತು. ಆದರೆ ಧಾವಂತದ ಬದುಕಿನಲ್ಲಿ ಅನೇಕರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿಯೇ ಬಾಳೆಹಣ್ಣು ತಿಂದು ಕೆಲಸಕ್ಕೆ ಹೊರಡುವವರೂ ಇದ್ದಾರೆ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿನ್ನುವುದು ಒಳ್ಳೆಯದಾ? ಕೆಟ್ಟದ್ದಾ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬಾಳೆ ಹಣ್ಣು ಸೇವನೆಯಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಇದರ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಸುಸ್ತು ಕಡಿಮೆ ಆಗುತ್ತದೆ. ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದರ ಜೊತೆಗೆ ಖಿನ್ನತೆ, ಮಲಬದ್ಧತೆ ಹಾಗೂ ಎದೆಯುರಿಯನ್ನೂ ಕಡಿಮೆ ಮಾಡುತ್ತದೆ. ಅಲ್ಲದೇ ಇದು ಹೃದಯಯದ ಆರೋಗ್ಯಕ್ಕೆ ಉತ್ತಮ.
ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಬಹಳಷ್ಟಿದೆ. ಹೀಗಾಗಿ ಇದು ರಕ್ತದಲ್ಲಿನ ಹೀಮೋಗ್ಲೋಬಿನ್ ಪ್ರಮಾಣ ಹೆಚ್ಚಿಸೋಕೆ ಸಹಾಯ ಮಾಡುತ್ತದೆ. ಅಲ್ಲದೇ ರಕ್ತಹೀನತೆಯನ್ನೂ ತಡೆಯುತ್ತದೆ. ಹೀಗಾಗಿ ದೇಹದ ಆರೋಗ್ಯಕ್ಕೆ ಬಾಳೆಹಣ್ಣು ಸೇವನೆ ಅತ್ಯಂತ ಅಗತ್ಯ. ಆದರೆ ಬಾಳೆ ಹಣ್ಣು ಸೇವನೆಗೆ ಸೂಕ್ತ ಸಮಯ ಯಾವುದು? ಬೆಳಗ್ಗೆ ಬಾಳೆಹಣ್ಣನ್ನು ಸೇವಿಸಬಹುದಾ? ಎನ್ನುವುದು ಅನೇಕರಿಗೆ ಕಾಡುವ ಪ್ರಶ್ನೆ. ಇದಕ್ಕೆ ಉತ್ತರ ಇಲ್ಲಿದೆ.
ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಮೇಗ್ನಿಷಿಯಂ ಹಾಗೂ ಫೈಬರ್ (ಕರಗುವ ನಾರು) ಹೇರಳವಾಗಿವೆ. ಹೀಗಾಗಿ ಇದು ದೇಹಕ್ಕೆ ಬೇಕಾದ ವಿವಿಧ ಪೋಷಕಾಂಶಗಳನ್ನು ಪೂರೈಸುತ್ತದೆ. ಅಲ್ಲದೇ ದೇಹದ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಹಸಿವನ್ನೂ ಕೂಡ ಕಡಿಮೆ ಮಾಡುತ್ತದೆ. ಆದ್ದರಿಂದ ಬಾಳೆಹಣ್ಣನ್ನು ಪ್ರತಿದಿನ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಸುಮಾರು 100 ಗ್ರಾಂನಷ್ಟು ಇರುವ ಬಾಳೆಹಣ್ಣಿನಲ್ಲಿ 12-14 ಗ್ರಾಂ ಸಕ್ಕರೆ ಅಂಶ ಸೇರಿದೆ. ಒಬ್ಬ ಮನುಷ್ಯನಿಗೆ ದಿನಕ್ಕೆ ಬೇಕಾದ ಸಕ್ಕರೆ ಪ್ರಮಾಣದ ಶೇ.25ರಷ್ಟು ಸಕ್ಕರೆ ಅಂಶವನ್ನು ಬಾಳೆ ಹಣ್ಣು ಒದಗಿಸುತ್ತದೆ. ಇದರಲ್ಲಿ ಇತರೆ ಪೋಷಕಾಂಶಗಳಾದ ಟ್ರಿಪ್ಟಾಫಾನ್, ಫ್ಲಾಟ್ ಐರನ್ ಮತ್ತು ವಿಟಮಿನ್ 'ಬಿ' ಕೂಡ ಇವೆ.
ಈ ಕುರಿತು ಅಮೆರಿಕದ ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್ ಹೇಳೋದೇನು ಗೊತ್ತಾ? ಒಂದು ಸಾಮಾನ್ಯ ಗಾತ್ರದ ಬಾಳೆಹಣ್ಣು 89 ಕ್ಯಾಲೋರಿಗಳನ್ನು ಹೊಂದಿದೆ. ಇದಲ್ಲದೆ, ಮ್ಯಾಂಗನೀಸ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಬಿ6 ಕೂಡ ಇರುವುದರಿಂದ ಇದು ದೇಹದ ಆರೋಗ್ಯಕ್ಕೆ ಉತ್ತಮ. ಅಲ್ಲದೇ ಇದು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಕಾರಣದಿಂದ ದೇಹ ನಿರ್ಜಲೀಕರಣ ಆಗದಂತೆ ತಡೆಯುತ್ತದೆ ಎನ್ನುತ್ತದೆ.
ಬಾಳೆ ಹಣ್ಣು ಸೇವನೆಯಿಂದ ಇಷ್ಟೆಲ್ಲ ಪ್ರಯೋಜನಗಳಿದ್ದರೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವಿಸಬೇಡಿ. ಯಾಕೆಂದರೆ ಬಾಳೆಹಣ್ಣಿನಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುವುದರಿಂದ ಇದು ಮನುಷ್ಯನ ದೇಹದ ಗ್ಲೂಕೋಸ್ ಅಂಶವನ್ನು ಹೆಚ್ಚಿಸುತ್ತದೆ. ಗ್ಲೂಕೋಸ್ ಹೆಚ್ಚಿದರೆ ನಿದ್ರೆ ಹಾಗೂ ಆಯಾಸವನ್ನು ತರುತ್ತದೆ.ಕೇವಲ ಗ್ಲೂಕೋಸ್ ಅಷ್ಟೇ ಅಲ್ಲ, ಆಮ್ಲೀಯತೆ ಕೂಡ ಉಂಟಾಗುತ್ತದೆ. ಹೌದು ಬಾಳೆಹಣ್ಣು ಮನುಷ್ಯನ ದೇಹದಲ್ಲಿ ಜೀರ್ಣ ಆಗುವ ಆಮ್ಲ ಬಿಡುಗಡೆ ಆಗುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವಿಸಬೇಡಿ ಎನ್ನುತ್ತಾರೆ ಬೆಂಗಳೂರು ಮೂಲದ ವೈದ್ಯರಾದ ಅಂಜು ಸೂದ್. ಆದರೆ ನೀರಿನಲ್ಲಿ ನೆನೆಹಾಕಿದ ಡ್ರೈ ಫ್ರೂಟ್ಸ್ ಜೊತೆಗೆ ಅಲ್ಪ ಪ್ರಮಾಣದಲ್ಲಿ ಬಾಳೆ ಹಣ್ಣು ಸೇವಿಸಬಹುದು ಎನ್ನುತ್ತಾರವರು.
ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದವೂ ಕೂಡ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿನ್ನಬೇಡಿ ಎನ್ನುತ್ತದೆ. ಆಯುರ್ವೇದ ತಜ್ಞರ ಪ್ರಕಾರ, ಕೇವಲ ಬಾಳೆಹಣ್ಣು ಅಷ್ಟೇ ಅಲ್ಲ, ಬೇರೆ ಯಾವುದೇ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದಂತೆ. ಯಾಕೆಂದರೆ ಈಗ ಹಣ್ಣುಗಳಿಗೆ ರಾಸಾಯನಿಕಗಳನ್ನು ಬಳಲಾಗುತ್ತಿದೆ. ಇದು ದೇಹಕ್ಕೆ ಅಪಾಯಕಾರಿ ಎನ್ನುತ್ತಾರೆ ಅವರು.
-ಆದರೆ ಬೇರೆ ಪದಾರ್ಥಗಳೊಂದಿಗೆ ಉಪಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಬಾಳೆಹಣ್ಣನ್ನು ಸೇವಿಸಬಹುದು.
-ಬೆಳಗಿನ ಉಪಹಾರ ಓಟ್ಸ್ ಮೀಲ್ನಲ್ಲಿ ಬಾಳೆಹಣ್ಣು ಹಾಗೂ ಡ್ರೈ ಫ್ರೂಟ್ಸ್ ಸೇರಿಸಿ ಸೇವಿಸಬಹುದು.
-ಬೆರ್ರಿ ಮತ್ತು ಬಾಳೆಹಣ್ಣನ್ನು ಚಿಕ್ಕದಾಗಿ ಕಟ್ ಮಾಡಿ ಅದರ ಜೊತೆಗೆ ಸ್ಕೀಮ್ಡ್ ಮಿಲ್ಕ್ ಸೇರಿಸಿ ಸೇವಿಸಬಹುದು.
-ಬಾಳೆಹಣ್ಣು, ಡ್ರೈಫ್ರೂಟ್ಸ್ ಹಾಗೂ ಕೋಕೊ ಪೌಡರ್ ಬೆರಿಸಿ ಮಿಲ್ಕ್ ಶೇಕ್ ಮಾಡಿ ಸೇವಿಸಬಹುದು.