ವಿದ್ಯುನ್ಮಾನ ಮಾಧ್ಯಮದ ಮೂಲಕ ಸ್ವಹಾನಿ ಮತ್ತು ಆತ್ಮಹತ್ಯೆ ಮಾಡುತ್ತಿರುವವರ ಸಂಖ್ಯೆ ಏರುತ್ತಿರುವ ದಿನಗಳಿವು. ಇತ್ತೀಚಿನ ಈ ಹೊಸ ವಿದ್ಯಮಾನಕ್ಕೆ ನಮ್ಮ ನಿತ್ಯದ ಬದುಕಿನಲ್ಲಿ ಕಂಡುಬರುತ್ತಿರುವ ಅವಸರ, ಆತಂಕಗಳು ಪ್ರಮುಖ ಕಾರಣವೆನ್ನುವುದು ಸರಿ ಎನಿಸುತ್ತದೆ. ಧಾವಂತ, ಧಣಿವು ಬದುಕಿನ ವೈಖರಿಯನ್ನು ಬದಲಾಯಿಸಿದೆ. ಇದರೊಂದಿಗೆ ಸಮ ಸಮವಾಗಿ ಮನುಷ್ಯರಲ್ಲಿ ಹಿಂದೆಂದೂ ಇರದಂತಹ ಆವೇಗಗಳು ಕಾಣಿಸಿಕೊಳ್ಳುತ್ತಿದ್ದು ಮನುಷ್ಯ ಸಹಜವಾದ ಹಿತ, ತೃಪ್ತಿ ಎನ್ನುವಂತಹ ಮಾನಸಿಕ ಬಲಗಳು ಕ್ಷೀಣಿಸಿ ಅಸಹನೀಯ ನಡೆನುಡಿಗಳ ಮೂಲಕ ಹೊರಬರುತ್ತಿವೆ.
ಕೇವಲ ಮೂರ್ನಾಲ್ಕು ದಶಕಗಳ ಕಾಲಾವಧಿಯಲ್ಲಿನ ಈ ಬೆಳವಣಿಗೆಗಳು ಸಾವಿರಾರು ವರ್ಷಗಳಲ್ಲಿ ಕಾಣಿದಿದ್ದಂತಹ ಮನುಷ್ಯ ಮನೋಭಾವಗಳನ್ನು ಹೊರತಂದಿರುವುದು ಸ್ಪಷ್ಟ. ಈ ಮಾಧ್ಯಮದ ಪ್ರೇರಣೆಯಿಂದಲೇ ಕಾಣಿಸಿಕೊಳ್ಳುತ್ತಿರುವ ನಡೆನುಡಿಗಳು ವ್ಯಕ್ತಿ ಮತ್ತು ಸಮುದಾಯದ ವರ್ತನೆಗಳಿಗೆ ಅಗತ್ಯವಾಗಿ ಇರಬೇಕಾದ ಎಲ್ಲೆಗಳೆಲ್ಲವನ್ನು ಕಿತ್ತೊಗೆಯುತ್ತಿರುವುದು ಸೂಕ್ತವೋ, ಸಮರ್ಪಕವೋ ಹೇಳುವುದು ಕಷ್ಟ. ಆದರೆ ಈ ಅಪರಿಚಿತ ಬೆಳವಣಿಗೆಗಳು ವ್ಯಕ್ತಿಯ ಮನೋಮಟ್ಟದಲ್ಲಿ ಹಾಗೂ ಸಮಾಜಿಕ ವರ್ತನೆಗಳ ಹಿನ್ನೆಲೆಯಲ್ಲಿ ಶಂಕೆ, ತವಕ, ತಲ್ಲಣಗಳನ್ನು ಹೆಚ್ಚಿಸುತ್ತಿರುವುದಂತೂ ನಿಜ.
ಈ ಹೊಸ ಬೆಳವಣಿಗೆಯೊಂದಿಗೆ ಹುಟ್ಟಿ ಬೆಳೆಯುವ ಮಕ್ಕಳ, ಹದಿಹರೆಯರ ಮನದಾವರಣದಲ್ಲಿ ಯಾವುದು ಏನ್ನನ್ನೂ ಮಾಡುತ್ತಿದೆ ಎಂದು ಊಹಿಸಿಕೊಳ್ಳುವುದು ಸಲಭವಲ್ಲವೆನ್ನುವ ಭಾವನೆ ಪೋಷಕರಲ್ಲಿ ಗಾಢವಾಗುತ್ತಿದೆ. ಇದರಿಂದಾಗಿಯೇ ಮನಸ್ಸೂ ಕೂಡ ಸದಾ ಆತಂಕ, ಸಂದೇಹಗಳ ಬೀಡಾಗುತ್ತಿವೆ ಎನ್ನುವುದಕ್ಕೆ ನಿದರ್ಶನಗಳು ಹೇರಳ. ಹದಿಹರೆಯರಿರುವ ಮನೆಗಳಲ್ಲಂತೂ ಮಕ್ಕಳೊಂದಿಗೆ ನಿತ್ಯವೂ ಸಂಘರ್ಷ, ಮನಸ್ತಾಪದ ನಡೆನುಡಿಗಳೇ ಇದರ ಪ್ರತೀಕವೆನ್ನಬಹುದು. ಪೋಷಕರು-ಪಾಲಕರ ಈ ನಡೆಯನ್ನು ಪ್ರತಿಭಟಿಸದೆ ಇರುವುದು ಬೆಳೆಯುವ ಮಕ್ಕಳಿಗಿಂತೂ ಸುಲಭವಲ್ಲ.
ಪ್ರತಿಭಟನೆ ಸಾಧ್ಯವಾಗದಿದ್ದಲ್ಲಿ, ತಂತ್ರಜ್ಞಾನದ ವಿನೂತನ ಸಲಕರಣೆ, ಸೌಲಭ್ಯಗಳಿಗೆ ಮನಸೋಲುವುದು, ದಾಸರಾಗುವುದು ಸಾಮಾನ್ಯ. ಹಾಗೆಯೇ ಈ ಸಲಕರಣೆಗಳ ಉಪಯುಕ್ತತತೆಯು ಪೋಷಕರಲ್ಲಿ ಜಿಜ್ಞಾಸೆ, ಅಸಾಹಯಕತೆಯನ್ನು ಹೆಚ್ಚಿಸುವಷ್ಟೆ ಇರಬಲ್ಲದು -ಮೊಬೈಲು ಕೊಡಿಸ ಬೇಕೋ? ಬೇಡವೋ? ಕೊಡಿಸಿದ ಪಕ್ಷದಲ್ಲಿ ಅದರ ಬಳಕೆಯ ಮೇಲೆ ನಿಷೇಧವಿರಬೇಕೋ, ಇರಬಾರದೋ ಎನ್ನುವಂತಹ ಸಂದೇಹಗಳು. ಮತ್ತೇ, ಅಂತರರ್ಜಾಲ, ಸಾಮಾಜಿಕ ಜಾಲತಾಣಗಳ ಪ್ರಭಾವಗಳಿಗೆ ಒಳಗಾಗಿ ದುಷ್ಚಟಗಳಿಗೆ ದಾಸರಾಗಿಬಿಟ್ಟರೆ? ಎನ್ನುವ ಚಿಂತೆ. ಇಂತಹ ವಿಷಯಗಳ ಬಗ್ಗೆ ಪ್ರತಿಯೊಂದು ಕುಟುಂಬದಲ್ಲಿಯೂ ಬಿರುಸಿನ ವಾಗ್ವಾದ ನಿತ್ಯವೂ ಇರುತ್ತದೆ. ಇದರ ಪರಿಣಾಮವೆನ್ನುವುಂತೆ ತಳಮಳ, ತಿಕ್ಕಾಟಗಳನ್ನು ತಂದೊಡ್ಡಿ ಪೋಷಕರಿಂದ ದೂರ ಸರಿಯುವ ಮಕ್ಕಳು ಸ್ವಹಿಂಸೆ, ಪ್ರಾಣಹಾನಿಯತ್ತ ಮನಸ್ಸು ಮಾಡಿಕೊಂಡಿರುವ ಪ್ರಕರಣಗಳು ನಿತ್ಯವೂ ಬೆಳಕಿಗೆ ಬರುತ್ತಿರುವುದುಂಟು.
ಮಾಹಿತಿ ಜಾಗೃತಿಯನ್ನು ಮೂಡಿಸುವ ತಂತ್ರಜ್ಞಾನವನ್ನು ಅಜಾಗರೂಕತೆಯಿಂದ ಬಳಸಿದಾಗ ಮಾರಕವಾಗುವ ಸಾಧ್ಯತೆಗಳೇ ಹೆಚ್ಚು. ಜಾಲತಾಣಗಳು, ಯುಟ್ಯೂಬಿನ ಮೂಲಕ ಪ್ರಸರಣಗೊಳ್ಳುವ ದೃಶ್ಯಾವಳಿಗಳೂ ಹದಿಹರಿಯರ ಮನಸ್ಸು ಮತ್ತು ವಿವೇಚನೆಯನ್ನು ಕೆಡಿಸಿರುವುದರ ಬಗ್ಗೆ ಅಂಕಿ-ಅಂಶಗಳು ಲಭ್ಯವಿರದಿದ್ದರೂ ಯುವಜನರ ನಡೆನುಡಿಗಳನ್ನು ಗಮನಿಸಿದಾಗ ಈ ಮಾಧ್ಯಮಗಳು ಬಹಳ ಸುಲಭವಾಗಿ ಮನಸ್ಸನ್ನು ವಶಪಡಿಸಿಕೊಳ್ಳಬಲ್ಲದು ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟವಲ್ಲ. ಮೊಬೈಲಿನ ಮೂಲಕ ಮನರಂಜನೆ, ತಿಳಿವಳಿಕೆಯನ್ನು ಪಡೆಯುವುಂತೆಯೇ ವಿವೇಚನಾ ಶಕ್ತಿಯನ್ನು ಕುಗ್ಗಿಸಿ, ಭಾವುಕತನ, ಧಾವಂತ, ಸಿಟ್ಟು, ಆಕ್ರೋಶದ ವರ್ತನೆಗಳೂ ಸಾಧ್ಯ. ಇವೇ ಪಾಲಕರ, ಆತ್ಮೀಯರ ತಿಳಿವಳಿಕೆಯ ಮಾತುಗಳು ಅಸಹನೀಯವಾಗಿ ಆಕ್ರೋಶ, ಹಿಂಸೆ, ಸ್ವಹಿಂಸೆ, ಆತ್ಮಹತ್ಯೆಯಂತಹ ಕೃತ್ಯಗಳತ್ತ ಅತಿ ರಭಸದಿಂದ ಹೋಗುವಂತೆಯೂ ಪ್ರೇರೇಪಿಸಬಲ್ಲದು. ಅದರಲ್ಲಿಯೂ ವಿವೇಚನೆಗೆ ವಿರುದ್ಧವಾದಂತಹ ನಡೆನುಡಿಗಳ ಮೂಲಕ ಕಾಣಿಸಿಕೊಳ್ಳುವುದೇ ಹೆಚ್ಚು.
ಅದೇ ರೀತಿಯಲ್ಲಿ ತನ್ನತನವನ್ನು ರಕ್ಷಿಸಿಕೊಳ್ಳಲು ಅಥವಾ ತನ್ನತನದ ಕೊರತೆಯನ್ನು ನೀಗಿಸಿಕೊಳ್ಳಲು, ಪ್ರತಿಷ್ಠೆ, ಪ್ರಶಂಸೆಗಳನ್ನು ಬಯಸುವಂತಹ ತಾಂತ್ರಿಕ-ಸಾಮಾಜಿಕ ಪರಿಸರದಲ್ಲಿ ತಂತ್ರಜ್ಞಾನ ಮತ್ತು ಸಲಕರಣೆಗಳ ಪಾತ್ರ ಅಷ್ಟಿಷ್ಟಲ್ಲ. ವ್ಯಕ್ತಿಯ ತನ್ನತನವೆಂಬ ಮನದ ಸ್ಥಿತಿಯೊಂದು ಸದಾಕಾಲ ಸೂಕ್ಷ್ಮ ಸಂವೇದನೆಯಾಗಿ ಜಾಗೃತವಾಗಿರುತ್ತದೆ. ಉದಾಹರಣೆಗೆ , ತನ್ನತನವನ್ನು ಬಿಂಬಿಸುವ ಮತ್ತು ಮಾನ್ಯತೆಯನ್ನು ಗಿಟ್ಟಿಸುವ ಮನೋಹೆದ್ದಾರಿ "ಸೆಲ್ಫಿ." ಇದರ ಮೂಲಕ ಹಿತ ಪಡೆದುಕೊಳ್ಳುವುದು ಒಂದು ವಿಧವಾದರೆ, ಇನ್ನೊಂದು, ಸಾಹಸ ಕೃತ್ಯದ ಕ್ಷಣಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಅತಿಯುತ್ಸಾಹದ ಆವೇಗ. ವೇಗವಾಗಿ ಚಲಿಸುವ ರೈಲಿನ ಹಳಿಗಳ ಮೇಲೆ ನಿಂತು ಸೆರೆಹಿಡಿಯುವ "ಸೆಲ್ಫಿ", ಅತಿ ಎತ್ತರದ ಜಾಗದಲ್ಲಿ ನಿಂತು "ಸೆಲ್ಫಿ" ಕ್ಲಿಕ್ಕಿಸಿಕೊಳ್ಳವುದು, ಜೀವಕ್ಕೆ ಅಪಾಯ ಇರುವ ಸ್ಥಳ, ಸನ್ನಿವೇಶಗಳನ್ನೇ ಆಯ್ದುಕೊಂಡು "ಸೆಲ್ಫಿ" ಮಗ್ನರಾಗುವ ಯುವಜನರು, ಕಿರಿಯರು ಲೆಕ್ಕಕ್ಕೆ ಸಿಗದಷ್ಟು. ಇದರ ಜೊತೆ ಜೊತೆಯಲ್ಲಿಯೇ ಮೊಬೈಲು ಬಳಸಿಕೊಂಡು ಹತಾಶೆ, ಒತ್ತಾಸೆಗಳನ್ನು ಸ್ವಹತ್ಯೆ, ಸ್ವಹಾನಿಯ ದೃಶ್ಯಗಳ ಚಿತ್ರೀಕರಣದ ಮೂಲಕ ಜಾಲತಾಣದ ಮಾಧ್ಯಮಗಳ ಹರಿಹಾಯಿಸುವುದು.
ನಿದರ್ಶನಗಳನ್ನು ನೆನಪಿಸಿಕೊಳ್ಳುವುದಾದರೆ: ಕಳೆದ ಕೆಲ ವಾರಗಳ ಹಿಂದೆ "ನಮ್ಮ ಮೆಟ್ರೋ" ಹಳಿಗಳ ಮೇಲೆ ಹದಿಹರೆಯನೊಬ್ಬ ಹಾರಿ ಪ್ರಾಣಕಳೆದುಕೊಳ್ಳುವ ಪ್ರಯತ್ನ ಮಾಡಿದ್ದು, ಮೈಸೂರಿನ ಹದಿಹರೆಯದ ಹೆಣ್ಣುಮಗಳೊಬ್ಬಳು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಲೈಕ್ ಸಂಖ್ಯೆ ಶೂನ್ಯವೆನ್ನುವ ಕಾರಣದಿಂದ ಮನನೊಂದು ಅದೇ ಖಾತೆಯಲ್ಲಿ ತನ್ನ ಸಾವಿಗೆ ಕಾರಣ ವಿವರಿಸುವುದರೊಂದಿಗೆ ಇದರ ಮೂಲಕವಾದರೂ ತನ್ನ ಪ್ರಶಂಸೆ ಸಂಖ್ಯೆ ಹೆಚ್ಚಲಿ ಎನ್ನುವ ವಿಷಯ ಅತ್ಯಂತ ದುಃಖಕರ ಸಂಗತಿ. ಅದೇ ಮಾದರಿಯಲ್ಲಿ ತುಂಡು ಉಡುಪಿನ್ನಷ್ಟೇ ಧರಿಸಿ ತುತ್ತ ತುದಿಗಳನೇರಿ ಪಕ್ಷಿನೋಟವನ್ನು ಸೆರೆಹಿಡಿದು ಜಾಲತಾಣಗಳಲ್ಲಿ ಛಾಪಿಸುತ್ತಿದ್ದ ಟೈವಾನ್ ದೇಶದ ರೂಪದರ್ಶಿ "ಬಿಕಿನಿ ಕ್ಲೈಂಬರ್" ಎಂದೇ ಕರೆದುಕೊಳ್ಳುತ್ತಿದ್ದ ಯುವತಿ ಹೀಗೆ ಚಿತ್ರಿಸಿಕೊಳ್ಳುವಾಗ ಆಯತಪ್ಪಿ ಹಿಮ ಆವೃತ ಶಿಖರದಡಿಗೆ ಉರುಳಿ ಕೊರೆಯುವ ಚಳಿಗೆ ದೇಹ ಹೆಪ್ಪುಕಟ್ಟಿ ಅಸು ನೀಗಿದ ಸಂಗತಿ ಕಳೆದವಾರವಷ್ಟೇ ಸಂಭವಿಸಿತ್ತು.
ಜಾಲತಾಣದ ಮೂಲಕ ತನ್ನತನದ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಜೀವ ಕಳೆದುಕೊಳ್ಳುವ ಪ್ರವೃತ್ತಿ ಹೆಣ್ಣು-ಗಂಡೆಂಬ ವ್ಯತ್ಯಾಸವಿಲ್ಲದೆ ವ್ಯಾಪಕವಾಗುತ್ತಿದೆ. ಇಂತಹ ಸಂಗತಿಗಳು ನಮ್ಮ ಗಮನಕ್ಕೆ ಬಂದಾಗ ಮೊದಲು ಮೂಡುವ ಪ್ರಶ್ನೆಯೆಂದರೆ: ಸಾಹಸ, ಅತಿಯುಲ್ಲಾಸದ ಕ್ಷಣಗಳನ್ನೇ ಆತ್ಮಾಹುತಿ ಸನ್ನಿವೇಶವಾಗಿಸಿ ಕೊಳ್ಳುವುದು ಏಕೆ? ಹತಾಶೆಯನ್ನು ಎದುರಿಸಲಾಗದೆ ಅಥವಾ ಎದುರಿಸಲು ಪ್ರಯತ್ನಿಸಿದೆ ಸಾವಿಗೆ ಶರಣಾಗಿ ಮನೆಮಂದಿ, ಆತ್ಮೀಯರನ್ನು ಜೀವನವಿಡೀ ನೋವು, ಪಾಪಪ್ರಜ್ಞೆಯ ಕೂಪದಲ್ಲಿರುವಂತೆ ಮಾಡುವುದಕ್ಕೆ ನಿಜ ಪ್ರೇರಣೆಗಳಿರಬಲ್ಲದೆ ಎನ್ನುವ ಪ್ರಶ್ನೆ ಮನೋವಿಜ್ಞಾನಿಗಳಿಗೂ ದೊಡ್ಡ ಸವಾಲಾಗಿಯೇ ಉಳಿದಿದೆ.
ನಮ್ಮ ಸುತ್ತಮುತ್ತಲ ಸಮಾಜದಲ್ಲಿನ ಮುಖಾಮುಖಿ ಮನುಷ್ಯ ಸಂಬಂಧಗಳಿಗಿಂತಲೂ ಅಗೋಚರ ವ್ಯಕ್ತಿಗಳ ಹೆಬ್ಬ್ಬೆರೆಳು ಮೆಚ್ಚುಗೆಯನ್ನು ನಂಬಿ ತಮ್ಮ ಜನಪ್ರಿಯತೆಯ ಬಗ್ಗೆ ಹೆಮ್ಮೆಪಡುವ ಅಂತರಾಳವು ಸಹಜ ವರ್ತನೆಗಳಲ್ಲೊಂದು ಎನ್ನುವಂತಾಗಿದೆ. ಕೊಂಚ ಹೆಮ್ಮೆ, ಉಲ್ಲಾಸ ಮತ್ತು ಸ್ವಪ್ರಶಂಸೆಯನ್ನು ಈ ಮೂಲಕ ಪಡೆಯುವುದು ಹಾನಿಕಾರಕವಲ್ಲ. ಆದರೆ ಸಾವಿರಾರು ನಿಮಿರಿದ ಹೆಬ್ಬೆಟ್ಟುಗಳು ಸದಾ ತಮ್ಮ ಜಾಲದಾಣದ ಖಾತೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಮಾನಸಿಕ ಹಾನಿಯತ್ತ ಸುಳಿಯುತ್ತಿದೆ ಎನ್ನುವುದರ ಸೂಚನೆ.
ಇಂತಹ ಬಯಕೆಗಳನ್ನು ತಡೆಗಟ್ಟುವ ಕೆಲಸವಂತೂ ಶಿಕ್ಷಣ, ತಿಳಿವಳಿಕೆಯ ಮೂಲಕವೇ ಆಗಬೇಕೆನ್ನುವುದಂತೂ ಸರಿಯೇ. ಆದರೆ, ಈ ಮಾದರಿಯ ಬಯಕೆಗಳ ತಕ್ಷಣದಲ್ಲಿ ಕಾಣಿಸಿಕೊಳ್ಳದೆ ಕ್ರಮೇಣವಾಗಿ ಬಲಗೊಳ್ಳುವುದು, ಈ ಸಮಯದಲ್ಲಿ ಮನದಾವರಣದಲ್ಲಿ ಕಾಣಿಸಿಕೊಳ್ಳುವ ತೀವ್ರತನ, ಅವಸರ, ಹಂಬಲ ಪದೇಪದೇ ಖಾತೆಯತ್ತ ಗಮನವಿರಿಸಿಕೊಳ್ಳುವ ಲಕ್ಷಣಗಳತ್ತ ಕೊಂಚ ಲಕ್ಷ್ಯಕೊಟ್ಟರೆ ಅಪಾಯದಿಂದ ಪಾರಾಗುವುದು ಸುಲಭ. ಒಂದು ವೇಳೆ ಇಂತಹ ಮನದ ಸ್ಥಿತಿ ಕಂಡಬಂದಲ್ಲಿ ತಕ್ಷಣದಲ್ಲಿ ತಜ್ಞರ ನೆರವು ಪಡೆಯುವುದು ಬಹುಮುಖ್ಯ. ಈ ಮೂಲಕ ಸಂಭವಿಸಬಹುದಾದ ದುರಂತಗಳನ್ನು ತಕ್ಕಮಟ್ಟಿಗೆಗಾದರೂ ತಡೆಗಟ್ಟಬಹುದು.
- ಡಾ. ಅ.ಶ್ರೀಧರ, ಮನೋವಿಜ್ಞಾನಿ (ಈ ಮೇಲಿನ ಲೇಖನ, ಲೇಖಕರ ಅಭಿಪ್ರಾಯವಾಗಿದೆ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ