Mango: ಈ ಸಲ ಏನು ಮಿಸ್ ಮಾಡಿದ್ರೂ ಈ 6 ತಳಿಯ ಮಾವು ತಿನ್ನೋದನ್ನ ಮರಿಬೇಡಿ!

6 ಅತ್ಯುತ್ತಮ ತಳಿಯ ಮಾವಿನ ಹಣ್ಣುಗಳು ಮತ್ತು ಅವುಗಳು ಹೊಂದಿರುವ ಪೋಷಕಾಂಶಗಳ ಬಗ್ಗೆ ಇಲ್ಲಿ ಮಾಹಿತಿ ಇಲ್ಲಿದೆ ನೋಡಿ.

ಮಾವಿನ ಹಣ್ಣು

ಮಾವಿನ ಹಣ್ಣು

  • Share this:
ಬೇಸಿಗೆ (Summer) ಬಂತೆಂದರೆ ಎಲ್ಲರಿಗೂ ಮಾವಿನ ಹಣ್ಣು (Mango) ತಿನ್ನುವ ಸಂಭ್ರಮ. ಹೆಚ್ಚಿನವರ ಅಚ್ಚುಮೆಚ್ಚಿನ ಮಾವಿನ ಹಣ್ಣು, ಅತ್ಯಂತ ರುಚಿಕರ ಮತ್ತು ಸುವಾಸನೆಯುಕ್ತವಾಗಿರುತ್ತದೆ. ಆಮ್‍ರಸ್ (Aam ras), ಮ್ಯಾಂಗೋ ಫಿರ್ನಿ (Mango Firini), ಮ್ಯಾಂಗೋ ಕುಲ್ಫಿ (Mango Kulfi), ಶ್ರೀಖಂಡ್ (Shrikhand), ಮ್ಯಾಂಗೋ ಶೇಕ್ (Mango Shake), ಮ್ಯಾಂಗೋ ಐಸ್‍ಕ್ರೀಂ (Mango ice-cream) ಹೀಗೆ ಮಾವಿನ ಹಣ್ಣಿನ ತರಾವರಿ ತಿನಿಸುಗಳನ್ನು ತಿನ್ನುವುದಂತೂ ಇನ್ನೂ ಮಜಾ. ಓಟಿಪೈನ ಸಂಸ್ಥಾಪಕ ಮತ್ತು ಸಿಇಓ ವರುಣ್ ಖುರಾನಾ, 6 ಅತ್ಯುತ್ತಮ ತಳಿಯ ಮಾವಿನ ಹಣ್ಣುಗಳು ಮತ್ತು ಅವುಗಳು ಹೊಂದಿರುವ ಪೋಷಕಾಂಶಗಳ ಬಗ್ಗೆ ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

1. ಅಲ್ಫಾನ್ಸೊ:
ಎಲ್ಲಾ ರೀತಿಯ ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಅಲ್ಫಾನ್ಸೋ ಮಾವಿನ ಹಣ್ಣುಗಳು ವಿಟಮಿನ್ ಎ ಯ ಆಗರವಾಗಿವೆ. ಮಹಾರಾಷ್ಟ್ರದ ರತ್ನಾಗಿರಿ ಮೂಲದ ಈ ಹಣ್ಣು, ಪರಿಮಳ, ಸಿಹಿ ಮತ್ತು ಅದರ ಅಪ್ರತಿಮ ಫ್ಲೇವರ್‍ಗೆ ಹೆಸರುವಾಸಿ. ಅದು ತೆಳುವಾದ ದೃಢ ಸಿಪ್ಪೆ ಮತ್ತು ಅತ್ಯಂತ ರುಚಿಕರ ತಿರುಳನ್ನು ಹೊಂದಿದೆ.

ಈ ಹಣ್ಣಿನ ಬೀಜವು, ಇತರ ಮಾವಿನ ಹಣ್ಣುಗಳ ತಳಿಗಳಿಗಿಂತ ಚಿಕ್ಕದಾಗಿರುತ್ತದೆ ಮತ್ತು ಬೇರೆ ಹಣ್ಣಿಗಳಿಗೆ ಹೋಲಿಸಿದರೆ ಇಳುವರಿ ಹೆಚ್ಚಿರುತ್ತದೆ. ಅಲ್ಫಾನ್ಸೋ ಮಾವಿನ ಹಣ್ಣಿನಿಂದ ಆಮ್‍ರಸ್ ಮತ್ತು ಮ್ಯಾಂಗೋ ಫಿರ್ನಿ ತಯಾರಿಸಬಹುದು.

2. ಬೈಗನಪಲ್ಲಿ :
ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಮತ್ತು ಅತ್ಯುತ್ತಮ ಗುಣಮಟ್ಟದೆಂದು ಪರಿಗಣಿಸಲ್ಪಟ್ಟಿರುವ ಈ ಮಾವಿನ ಹಣ್ಣನ್ನು ‘ದಕ್ಷಿಣ ಭಾರತದಲ್ಲಿ ಮಾವಿನ ಹಣ್ಣಿನ ರಾಜ’ ಎಂದು ಕರೆಯಲಾಗುತ್ತದೆ.

ಕಣ್ಮನ ಸೆಳೆಯುವ ಚಿನ್ನದ ಬಣ್ಣವನ್ನು ಹೊಂದಿರುವ ಈ ಹಣ್ಣು ಅತ್ಯಂತ ಸಿಹಿಯಾಗಿರುತ್ತದೆ ಮತ್ತು ಜುಟ್ಟು–ಮುಕ್ತ ತಿರುಳನ್ನು ಹೊಂದಿರುತ್ತದೆ. ಇದು ವಿಟಮಿನ್ ಎ ಮತ್ತು ಸಿ ಯ ಉತ್ತಮ ಮೂಲವಾಗಿದೆ ಕೂಡ. ಮ್ಯಾಂಗೋ ಕುಲ್ಫಿ, ಶ್ರೀಖಂಡ್, ಮ್ಯಾಂಗೋ ಶೇಕ್ ಮತ್ತು ಮ್ಯಾಂಗೋ ಐಸ್‍ಕ್ರೀಂ ತಯಾರಿಸಲು ಈ ಹಣ್ಣು ಸೂಕ್ತ.

3. ಕೇಸರ್ :
ಗುಜರಾತ್‍ನ ಗಿರ್‍ನಾರ್ ಪರ್ವತದ ತಪ್ಪಲಲ್ಲಿ ಬೆಳೆಯಲಾಗುವ ಈ ಮಾವಿನ ತಳಿಯನ್ನು ‘ಮಾವಿನ ರಾಣಿ’ ಎಂದು ಕರೆಯುತ್ತಾರೆ. ಕೇಸರಿ ಬಣ್ಣದ ತಿರುಳು ಹಾಗೂ ವಿಶಿಷ್ಟ ಪರಿಮಳದ ಕಾರಣದಿಂದ ಇದು ಇತರ ಮಾವಿನ ತಳಿಗಳಿಗಿಂತ ಭಿನ್ನವೆನಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಈ ತಳಿಯಲ್ಲಿ ವಿಟಮಿನ್ ಎ, ಬಿ6, ಸಿ ಮತ್ತು ಇ ಹೇರಳವಾಗಿವೆ. ಮ್ಯಾಂಗೋ ಲಸ್ಸಿ, ಮ್ಯಾಂಗೋ ಬರ್ಫಿ ಮತ್ತು ಮ್ಯಾಂಗೋ ಪೇಡಾ ಮಾಡಲು ಈ ಹಣ್ಣು ಅತ್ಯಂತ ಸೂಕ್ತ.

4. ದಸ್ಸೇರಿ :
ಈ ತಳಿಯ ಮಾವಿನ ಹಣ್ಣನ್ನು ಉತ್ತರ ಪ್ರದೇಶದ ಲಕ್ನೋದಲ್ಲಿ ಬೆಳೆಯಲಾಗುತ್ತದೆ. ಅತ್ಯಂತ ಪರಿಮಳಭರಿತವಾಗಿರುವ ದಸ್ಸೇರಿ ಹಣ್ಣುಗಳು, ತುಂಬಾ ಸಿಹಿಯಾಗಿದ್ದು, ಜುಟ್ಟು–ಮುಕ್ತ ಪೀಚ್ ಬಣ್ಣದ ತಿರುಳನ್ನು ಹೊಂದಿರುತ್ತವೆ.

ಇದನ್ನೂ ಓದಿ: Belagavi Mango Mela: ಜೀವನದಲ್ಲೇ ಈ ತಳಿಯ ಮಾವಿನ ಹಣ್ಣನ್ನು ತಿಂದಿರಲಿಲ್ಲ! ಬೆಳಗಾವಿ ಮಾವು ಮೇಳಕ್ಕೆ ಬಂದವರು ಹೀಗಂದಿದ್ದೇಕೆ?

ಈ ಹಣ್ಣಿನ ನಯವಾದ ಅರೆ ದಪ್ಪ ಸಿಪ್ಪೆ ತಿಳಿ ತಿಳಿ ಹಸಿರು - ಹಳದಿ-ಹಸಿರು ಬಣ್ಣವನ್ನು ಹೊಂದಿರುತ್ತದೆ. ಇದರಲ್ಲಿ, ವಿಟಮಿನ್ ಸಿ, ವಿಟಮಿನ್ ಎ, ಜಿಂಕ್ , ವಿಟಮಿನ್ ಇ, ಕಭ್ಬಿಣಾಂಶ ಮತ್ತು ಕ್ಯಾಲ್ಸಿಯಂ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ಉಪ್ಪಿನಕಾಯಿ ಮತ್ತು ಮಾವಿನ ಮೂಸ್ ತಯಾರಿಸಲು ಈ ತಳಿ ಅತ್ಯಂತ ಸೂಕ್ತ.

5. ಚೌಸಾ :
ಉತ್ತರ ಪ್ರದೇಶದ ಪಶ್ಚಿಮ ಭಾಗಗಳ ಮೂಲವನ್ನು ಹೊಂದಿರುವ ಈ ಮಾವಿನ ತಳಿ, ಚಿನ್ನದ ಹಳದಿ ಬಣ್ಣವನ್ನು ಹೊಂದಿರುತ್ತದೆ. ವಿಶಿಷ್ಟ ಸುವಾಸನೆ ಮತ್ತು ಜುಟ್ಟು ಮುಕ್ತ ತಿರುಳನ್ನು ಹೊಂದಿರುವ ಈ ಹಣ್ಣು ಅತ್ಯಂತ ಸಿಹಿಯಾಗಿರುತ್ತದೆ. ಜನಪ್ರಿಯ ಮಾವಿನ ಹಣ್ಣುಗಳ ತಳಿಗಳಲ್ಲಿ ಒಂದಾಗಿರುವ ಚೌಸಾ ಮಾವಿನ ಹಣ್ಣನ್ನು, ಅದರ ಸಿಹಿ, ರಸಭರಿತ ತಿರುಳು ಮತ್ತು ಅತ್ಯಧಿಕ ಪೋಷಕಾಂಶದ ಮೌಲ್ಯದ ಕಾರಣದಿಂದಾಗಿ, ಪರಿಪೂರ್ಣ ಮಾವಿನ ಹಣ್ಣು ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Wonder Mango: ವರ್ಷಕ್ಕೆ ಎರಡು ಸಲ ಫಸಲು ನೀಡುವ ಮಾವಿನ ಮರ! ಬೆಳಗಾವಿಯಲ್ಲಿದೆ ಅಚ್ಚರಿಯ ಮಾವು

ಇತರ ಮಾವಿನ ಹಣ್ಣುಗಳಿಗಿಂತ ಹೆಚ್ಚು ವಿಟಮಿನ್ ಸಿ ಯನ್ನು ಇದು ಹೊಂದಿದೆ. ಮಾವಿನ ಹಣ್ಣಿನ ಪರೋಟ, ಮ್ಯಾಂಗೋ ಸಲಾಡ್, ಮ್ಯಾಂಗೋ ಶೇಕ್ , ಮ್ಯಾಂಗೋ ಟಾರ್ಟ್ ಮತ್ತು ಕುಲ್ಫಿ ಮತ್ತಿತರ ಮಾವಿನ ಹಣ್ಣಿನ ರೆಸಿಪಿಗಳಲ್ಲಿ ಬಳಸಬಹುದು.

6. ತೋತಾಪುರಿ :
ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಬೆಳೆಯಲಾಗುವ ಈ ಹಸಿರು ಬಣ್ಣದ ಮಾವಿನ ಹಣ್ಣು ನೋಡಲ ಗಿಣಿಯ ಕೊಕ್ಕಿನಂತಿರುತ್ತದೆ. ಈ ಹಣ್ಣು ಅಷ್ಟೇನೂ ಸಿಹಿಯಾಗಿರುವುದಿಲ್ಲ, ಆದರೆ ಹದವಾದ ಹುಳಿ ಫ್ಲೇವರನ್ನು ಹೊಂದಿರುತ್ತದೆ. ಹೇರಳ ವಿಟಮಿನ್ ಸಿ ಮತ್ತು ವಿಟಮಿನ್ ಎ ಯನ್ನು ಹೊಂದಿರುವ ತೋತಾಪುರಿಯನ್ನು ಆಮ್ರಸ್, ಚಟ್ನಿ, ಸಲಾಡ್ ಮತ್ತು ಉಪ್ಪಿನಕಾಯಿಗಳಲ್ಲಿ ಬಳಸಲಾಗುತ್ತದೆ.
Published by:Ashwini Prabhu
First published: