ವಿಟಮಿನ್ ಡಿ (Vitamin D) ಅನ್ನೋದು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂಥ ವಿಟಮಿನ್ ಆಗಿದೆ. ಸೂರ್ಯನ ಬೆಳಕಿಗೆ (Sun Light) ಒಡ್ಡಿಕೊಂಡಾಗ ನಮ್ಮ ದೇಹವು ವಿಟಮಿನ್ ಡಿಯನ್ನು ಉತ್ಪಾದಿಸುತ್ತದೆ. ವಿಟಮಿನ್ ಡಿ ಮುಖ್ಯವಾಗಿ ಮೂಳೆ ಆರೋಗ್ಯ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಹಾಗಾಗಿ ನಮ್ಮ ದೇಹಕ್ಕೆ ಪ್ರತಿದಿನ 10-20 ಮೈಕ್ರೋಗ್ರಾಂಗಳಷ್ಟು ಈ ಸನ್ಶೈನ್ ವಿಟಮಿನ್ ಅಗತ್ಯವಿದೆ.
ಈ ಅತ್ಯಗತ್ಯ ಪೋಷಕಾಂಶವಾದ ವಿಟಮಿನ್ ಡಿ ಕೊರತೆಯು ದೇಹದ ಮೂಳೆ ಸಮಸ್ಯೆ ಉಂಟು ಮಾಡುತ್ತದೆ. ಆದ್ದರಿಂದ ವಿಟಮಿನ್ ಡಿ ಸೇವನೆಯ ಬಗ್ಗೆ ಜಾಗರೂಕರಾಗಿರಬೇಕು. ಹಾಗೆಯೇ ಅದರ ಕೊರತೆಗೆ ಸಂಬಂಧಿಸಿದ ತೊಡಕುಗಳ ಬಗ್ಗೆಯೂ ಗಮನ ಹರಿಸಬೇಕು.
ವಿಟಮಿನ್ ಡಿ ಕೊರತೆಯ ಲಕ್ಷಣಗಳನ್ನು ಹೊರಹಾಕುತ್ತೆ ದೇಹ
ಕೆಲವು ವರ್ಷಗಳ ಹಿಂದೆ, ವಿಟಮಿನ್ ಡಿ ಮಹತ್ವದ ಬಗ್ಗೆ ಜನಸಾಮಾನ್ಯರಿಗೆ ಅಷ್ಟಾಗಿ ಅರಿವಿರಲಿಲ್ಲ. ಅಲ್ಲದೇ ವೈದ್ಯರು ಹೇಳಿದ ಮೇಲೆ ರಕ್ತ ಪರೀಕ್ಷೆ ಮಾಡಿಸುವುದರಿಂದ ಮಾತ್ರ ದೇಹದಲ್ಲಿ ಸಾಕಷ್ಟು ವಿಟಮಿನ್ ಡಿ ಇದೆಯೇ ಅಥವಾ ಕೊರತೆ ಇದೆಯೇ ಎಂಬುದನ್ನು ಕಂಡುಹಿಡಿಯಲು ಸಾಧ್ಯ ಎಂದು ಸಾಕಷ್ಟು ಜನರು ಭಾವಿಸುತ್ತಾರೆ. ಆದರೆ ನಿಮಗೆ ಗೊತ್ತಿರಲಿ ದೇಹವು ಈ ಪೋಷಕಾಂಶದ ಕೊರತೆಯ ಲಕ್ಷಣಗಳನ್ನು ಹೊರಹಾಕುತ್ತದೆ. ಆದರೆ ವಿಟಮಿನ್ ಡಿ ಕೊರತೆಯ ಎಚ್ಚರಿಕೆ ಚಿಹ್ನೆಗಳು ಯಾವವು ಅನ್ನೋದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಗಾಯಗಳು ನಿಧಾನವಾಗಿ ಗುಣವಾಗುವುದು
ವಿಟಮಿನ್ ಡಿ ಗಾಯಗಳನ್ನು ಗುಣಪಡಿಸುವ ದೇಹದ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ. ಆದ್ರೆ ವಿಟಮಿನ್ ಡಿ ಕೊರತೆ ಇದ್ದಾಗ ಗಾಯಗಳು ಗುಣವಾಗುವಾಗ ಹೆಚ್ಚಿನ ಸಮಯ ಬೇಕಾಗುತ್ತದೆ. ಮಧುಮೇಹ ರೋಗಿಗಳ ಮೇಲಿನ ಅಧ್ಯಯನಗಳು ಮಧುಮೇಹಿಗಳ ಗಾಯ ಗುಣಪಡುವ ಸಾಮರ್ಥ್ಯವು ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಂಡ ಮೇಲೆ ಹೆಚ್ಚಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: Vitamin Deficiency: ಈ ವಿಟಮಿನ್ ಕೊರತೆ ಆತಂಕದ ಸಮಸ್ಯೆಗೆ ಕಾರಣವಂತೆ
ಖಿನ್ನತೆ ಉಂಟಾಗುವುದು
ವಿಟಮಿನ್ ಡಿ ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗುವುದರಿಂದ ಖಿನ್ನತೆ ಉಂಟಾಗುವ ಸಾಧ್ಯತೆ ಹೆಚ್ಚು. ವಿಟಮಿನ್ ಡಿ ಚಿತ್ತ ವರ್ಧಕವಾಗಿದೆ ಎಂದು ಸಾಬೀತುಪಡಿಸಲು ಹೆಚ್ಚಿನ ಪುರಾವೆಗಳು ಅಗತ್ಯವಿದ್ದರೂ ಇದುವರೆಗಿನ ಅಧ್ಯಯನಗಳು ಖಿನ್ನತೆಯನ್ನು ಗುಣಪಡಿಸುವಲ್ಲಿ ವಿಟಮಿನ್ ಡಿ ಪೂರಕಗಳು ಮಹತ್ವದ ಪಾತ್ರ ಹೊಂದಿವೆ ಎಂದು ತೋರಿಸಿವೆ.
ಹೆಚ್ಚು ಆಯಾಸ
ದೇಹವು ಅಗತ್ಯವಾದ ಜೀವಸತ್ವಗಳಲ್ಲಿ ಒಂದನ್ನು ಹೊಂದಿಲ್ಲದಿದ್ದರೂ ಶಕ್ತಿ ಕುಂಠಿತಗೊಳ್ಳುತ್ತದೆ. ಇದರಿಂದ ಆರೋಗ್ಯದಲ್ಲಿ ತೊಡಕುಂಟಾಗಿ ಆಯಾಸ ಹೆಚ್ಚಾಗುವುದಲ್ಲದೇ ಹಲವಾರು ರೋಗಗಳಿಗೂ ಆಹ್ವಾನ ನೀಡುತ್ತದೆ. ಆದಾಗ್ಯೂ ವಿಟಮಿನ್ ಡಿ ಕೊರತೆಯ ಸಂದರ್ಭದಲ್ಲಿ ಇದು ಹೆಚ್ಚಾಗಿ ತಲೆನೋವು, ನಿದ್ರೆಯ ಕೊರತೆ ಮತ್ತು ನಿರಂತರ ಮೂಳೆ ನೋವಿನಿಂದ ಹೆಚ್ಚು ಆಯಾಸ ಉಂಟಾಗುತ್ತದೆ.
ನಿರಂತರ ಬೆನ್ನು ನೋವು
ನೋವುವಿಟಮಿನ್ ಡಿ ನೇರವಾಗಿ ಮೂಳೆಯ ಆರೋಗ್ಯಕ್ಕೆ ಸಂಬಂಧಿಸಿರುವುದರಿಂದ, ಅದರ ಕೊರತೆಯು ಮೂಳೆಗೆ ಹಾನಿಯನ್ನುಂಟುಮಾಡುತ್ತದೆ. ಇದರಿಂದ ನಿರಂತ ಬೆನ್ನು ನೋವು ಕಾಣಿಸಿಕೊಳ್ಳಬಹುದು. ವಿಟಮಿನ್ ಡಿ ಕ್ಯಾಲ್ಸಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಮೂಲಕ ಮೂಳೆಗಳನ್ನು ಬಲಪಡಿಸುತ್ತದೆ. ಸಂಧಿವಾತ, ಸ್ನಾಯು ನೋವು ಮತ್ತು ನಿರಂತರ ಬೆನ್ನು ನೋವು ಇರುವವರು ಕಡಿಮೆ ಮಟ್ಟದ ವಿಟಮಿನ್ ಡಿ ಹೊಂದಿರುತ್ತಾರೆ ಎಂದು ಹೇಳಬಹುದು.
ವಿಟಮಿನ್ ಡಿ ಕೊರತೆಯ ಇತರ ಲಕ್ಷಣಗಳು
ವಿಟಮಿನ್ ಡಿ ಕೊರತೆಯ ಇತರ ಲಕ್ಷಣಗಳಲ್ಲಿ ಪ್ರಮುಖವಾದವುಗಳೆಂದರೆ ನಿದ್ರಾಹೀನತೆ, ಹಸಿವಿನ ಕೊರತೆ, ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವುದು, ಕೂದಲು ಉದುರುವಿಕೆ, ಸ್ನಾಯು ದೌರ್ಬಲ್ಯ ಮುಂತಾದವು.
ವಿಟಮಿನ್ ಡಿ ಕೊರತೆ ಏಕೆ ನಿರ್ಲಕ್ಷಿಸಲ್ಪಡುತ್ತದೆ?
ವಿಟಮಿನ್ ಡಿ ಕೊರತೆಯ ಹಲವು ಲಕ್ಷಣಗಳು ಇತರ ಕಾಯಿಲೆಗಳಿಗೆ ಹೋಲುತ್ತವೆ. ಈ ಕಾರಣದಿಂದಾಗಿ ಅನೇಕ ಜನರು ಕಾಯಿಲೆಗಳ ಮುಖ್ಯ ಕಾರಣವನ್ನು ನಿರ್ಲಕ್ಷಿಸುತ್ತಾರೆ. ಹಾಗಾಗಿ ನಿಮ್ಮ ವೈದ್ಯರಿಗೆ ನಿಮ್ಮ ಆರೋಗ್ಯದ ನಿಖರವಾದ ವಿವರಣೆಯನ್ನು ನೀಡುವ ಮೂಲಕ ಮುಖ್ಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ. ಒಟ್ಟಾರೆ, ವಿಟಮಿನ್ ಡಿ ದೇಹಕ್ಕೆ ಅತ್ಯಗತ್ಯ. ಇದರ ಕೊರತೆಯಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವೈದ್ಯರಿಗೆ ಸರಿಯಾದ ವಿವರಣೆ ನೀಡಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ