Summer Care: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೀವು 5 ಬಗೆಯ ತರಕಾರಿಗಳನ್ನು ತಿನ್ನಲೇಬೇಕು

ಬೇಸಿಗೆಯಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವಂತಹ ಈ ಋತುವಿನ 5 ತರಕಾರಿಗಳ ಬಗ್ಗೆ ತಿಳಿದುಕೊಳ್ಳಿ, ಅವುಗಳಲ್ಲಿ ಇರುವ ಪೌಷ್ಟಿಕಾಂಶಗಳು ಮತ್ತು ಆರೋಗ್ಯಕ್ಕೆ ಹಲವು ಪ್ರಯೋಜನ ನೀಡುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೇಸಿಗೆ (Summer) ಧಗೆ ಹೆಚ್ಚಿದಷ್ಟು ದೇಹ ಮತ್ತು ಮನಸ್ಸು ಎರಡಕ್ಕೂ ಕಿರಿಕಿರಿ ಎನಿಸುತ್ತದೆ. ಯಾವ ಕೆಲಸ ಮಾಡುವುದಕ್ಕೂ ಉತ್ಸಾಹ ಇರುವುದಿಲ್ಲ. ತೀವ್ರ ಶೆಖೆ ಇದ್ದರಂತೂ ಮತ್ತಷ್ಟು ಗೋಳು, ಏಸಿ ಮತ್ತು ಫ್ಯಾನ್‍ಗಳಿಂದಲೂ ಅದನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಬೇಸಿಗೆಯ ಶಾಖದಿಂದ ಉಂಟಾಗುವ ಸಮಸ್ಯೆಗಳಿಂದ (Problem) ಪಾರಾಗಲು ನಮ್ಮ ದೇಹವನ್ನು ಒಳಗಿನಿಂದ ಸಿದ್ಧಪಡಿಸಿಕೊಳ್ಳುವುದು ಅತ್ಯಗತ್ಯ. ಅದಕ್ಕೆ ಸುಲಭ ಉಪಾಯವೆಂದರೆ, ಆ ಋತುವಿಗೆ ಸಿಗುವ ತರಕಾರಿಗಳನ್ನು (Vegetable) ನಮ್ಮ ದಿನನಿತ್ಯದ ಆಹಾರ (Food) ಕ್ರಮದಲ್ಲಿ ಸೇರಿಸಿಕೊಳ್ಳುವುದು. ಬೇಸಿಗೆಯಲ್ಲಿ ನಮ್ಮ ದೇಹದ ಆರೋಗ್ಯವನ್ನು (Health) ಕಾಪಾಡಲು ಸಹಾಯ ಮಾಡುವಂತಹ ಈ ಋತುವಿನ 5 ತರಕಾರಿಗಳು, ಅವುಗಳಲ್ಲಿ ಇರುವ ಪೌಷ್ಟಿಕಾಂಶಗಳು ಮತ್ತು ಅವುಗಳಿಂದ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನವಾಗುತ್ತದೆ (Benefits) ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

1. ಸೌತೆಕಾಯಿ :

ಸಲಾಡ್, ಜ್ಯೂಸ್, ಸ್ಯಾಂಡ್‍ವಿಚ್ ಹೀಗೆ ಸೌತೆಕಾಯಿಯನ್ನು ಬೇರೆ ಬೇರೆ ರೀತಿಯಲ್ಲಿ ತಿನ್ನಬಹುದು. ಮಕ್ಕಳಿಂದ ಮುದುಕರಾದಿಯಾಗಿ ಎಲ್ಲರೂ ಇಷ್ಟಪಡುವ ರುಚಿಕರ ತರಕಾರಿ ಇದು. ಸೌತೆಕಾಯಿಯಲ್ಲಿ ನೀರಿನ ಅಂಶ ಹೇರಳವಾಗಿದೆ. ಹಾಗಾಗಿ ಧಗೆಯ ದಿನಗಳಲ್ಲಿ ಅವು ಅತ್ಯಂತ ಪ್ರಯೋಜನಕಾರಿ. ಅಷ್ಟೇ ಅಲ್ಲ, ಸೌತೆಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆಯಂತಹ ಸಾಕಷ್ಟು ಆ್ಯಂಟಿಆಕ್ಸಿಡೆಂಟ್‍ಗಳಿವೆ. ಅವುಗಳಲ್ಲಿ ಶೇಕಡಾ 96 ರಷ್ಟು ನೀರು ಇರುತ್ತದೆ, ಹಾಗಾಗಿ ಅದರ ಸೇವನೆಯಿಂದ ದೇಹವನ್ನು ಹೈಡ್ರೇಟ್ ಆಗಿಡಬಹುದು.

2. ಸೋರೆಕಾಯಿ :

ಈ ತರಕಾರಿ ರುಚಿಕರ ಮಾತ್ರವಲ್ಲ, ಅತ್ಯಂತ ಹೆಚ್ಚು ಪೌಷ್ಟಿಕಾಂಶಗಳನ್ನು ಕೂಡ ಹೊಂದಿದೆ. ಇದನ್ನು ಅತ್ಯುತ್ತಮ ತರಕಾರಿಗಳಲ್ಲಿ ಒಂದು ಎನ್ನಲು ಅಡ್ಡಿಯಿಲ್ಲ. ಇದು ಅತ್ಯಧಿಕ ನೀರಿನಾಂಶವನ್ನು ಹೊಂದಿರುವುದು ಮಾತ್ರವಲ್ಲ, ಕ್ಯಾಲ್ಸಿಯಂನಿಂದಲೂ ಸಮೃದ್ಧವಾಗಿದೆ. ಹಾಗಾಗಿ ಅದು ಮೂಳೆಗಳ ಆರೋಗ್ಯಕ್ಕೂ ಲಾಭದಾಯಕ. ಇದನ್ನು ಬಹಳ ಹಿಂದಿನಿಂದಲೂ, ಜೀರ್ಣ ಸಂಬಂಧಿ ಸಮಸ್ಯೆಗಳಿಗೆ, ಅಧಿಕ ಕೊಲೆಸ್ಟ್ರಾಲ್‍ಗೆ ಮತ್ತು ರಕ್ತ ಸಕ್ಕರೆ ನಿಯಂತ್ರಣಕ್ಕೆ ಮನೆಮದ್ದಾಗಿ ಬಳಸಲಾಗುತ್ತದೆ.

ಇದನ್ನೂ ಓದಿ:  ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏಕೆ ಏರುತ್ತದೆ? ಇದಕ್ಕೇನು ಕಾರಣ?

3. ಕುಂಬಳಕಾಯಿ :

ಕುಂಬಳಕಾಯಿ ವಿಟಮಿನ್ ಎ ಯ ಖಜಾನೆಯಾಗಿದ್ದು, ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಂತ ಪ್ರಯೋಜನಕಾರಿ ಆಗಿದೆ. ಆ ಮೂಲಕ ನೀವು ಕಾಯಿಲೆಗಳಿಂದ ದೂರ ಇರಬಹುದು. ಕುಂಬಳ ಕಾಯಿಯಲ್ಲಿ, ಹೃದಯದ ಕಾಯಿಲೆ ಬಾರದಂತೆ ತಡೆಯುವ ಮತ್ತು ದೇಹದ ತಾಪಮಾನವನ್ನು ನಿಯಂತ್ರಿಸುವ ಬೀಟಾ ಕ್ಯಾರೋಟಿನ್ ಎಂಬ ಆ್ಯಂಟಿಆಕ್ಸಿಡೆಂಟ್ ಕೂಡ ಇದೆ.

4. ಹಾಗಲಕಾಯಿ :

ಈ ತರಕಾರಿಯನ್ನು ಇಷ್ಟಪಡುವವರ ಸಂಖ್ಯೆ ಕಡಿಮೆ, ಅದರಲ್ಲೂ ಮಕ್ಕಳು ಹಾಗಲಕಾಯಿ ತಿನ್ನಲು ಒಪ್ಪುವುದು ವಿರಳ. ಆದರೆ, ರುಚಿಯಲ್ಲಿ ಕಹಿಯಾಗಿದ್ದರೂ, ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಸಿಹಿ ಎನ್ನಬಹುದಾದ ತರಕಾರಿ ಇದು. ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣಾಂಶ ಮತ್ತು ಪೊಟ್ಯಾಶಿಯಂ ಈ ತರಕಾರಿಯಲ್ಲಿ ಅತ್ಯಧಿಕವಾಗಿದೆ. ತರಾವರಿ ಹೊಟ್ಟೆಯ ಕಾಯಿಲೆಗಳು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಮನೆ ಮದ್ದಾಗಿ ಹಾಗಲಕಾಯಿ ರಸವನ್ನು ಬಳಸಲಾಗುತ್ತದೆ.

ಇದನ್ನೂ ಓದಿ:  Fruits: ಮಧುಮೇಹಿಗಳು ತಿನ್ನಬಹುದಾದ ಹತ್ತು ಹಣ್ಣುಗಳ ಪಟ್ಟಿ ಇಲ್ಲಿದೆ..!

5. ಹಸಿರು ಬೀನ್ಸ್ :

ಇದು ಅತ್ಯಂತ ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿ. ಇದನ್ನು ಬೇಯಿಸಿ ಅಥವಾ ಹಸಿಯಾಗಿ ಕೂಡ ತಿನ್ನಬಹುದು. ಪಲ್ಯ, ಸಾಂಬಾರ್, ಪಲಾವ್ ಹೀಗೆ ನಾನಾ ವಿಧದ ಆಹಾರಗಳಲ್ಲಿ ಬೀನ್ಸನ್ನು ಬಳಸುತ್ತಾರೆ. ಅಷ್ಟು ಮಾತ್ರವಲ್ಲ, ತೂಕ ಇಳಿಸುವವರಿಗೂ ಹಸಿರು ಬೀನ್ಸ್ ಅಚ್ಚುಮೆಚ್ಚಿನ ತರಕಾರಿ. ಹಸಿರು ಬೀನ್ಸ್‌ಗಳನ್ನು ತಿನ್ನಲು ಬೇಸಿಗೆ ಸೂಕ್ತವಾದ ಸಮಯ. ಹಸಿರು ಬೀನ್ಸ್‌ಗಳು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಫೈಬರ್‌ ಸೇವನೆ ಜೀರ್ಣಕ್ರಿಯೆಗೆ ಅತ್ಯಂತ ಪ್ರಯೋಜನಕಾರಿ ಎಂಬುವುದು ನಿಮಗೆ ಗೊತ್ತಿರಬಹುದು. ಹಸಿರು ಬೀನ್ಸ್‌ನಲ್ಲಿ ಪ್ರೋಟೀನ್, ಕಬ್ಬಿಣಾಂಶ, ಜಿಂಕ್‍ನಂತಹ ಮಿನರಲ್‍ಗಳು ಮತ್ತು ಆ್ಯಂಟಿಆಕ್ಸಿಡೆಂಟ್‍ಗಳು ಹಾಗೂ ಮೂಳೆಯ ಆರೋಗ್ಯಕ್ಕೆ ಆವಶ್ಯಕವಾದ ವಿಟಮಿನ್ ಕೆ ಕೂಡ ಇದೆ.
Published by:Pavana HS
First published: