ತರಲೆ, ಕಿತಾಪತಿ, ಅಡ್ಜಸ್ಟ್​ಮೆಂಟ್​; ಒಂದು ಪಿಜಿಗೆ ಹತ್ತಾರು ಮುಖಗಳು

news18
Updated:September 1, 2018, 4:33 PM IST
ತರಲೆ, ಕಿತಾಪತಿ, ಅಡ್ಜಸ್ಟ್​ಮೆಂಟ್​; ಒಂದು ಪಿಜಿಗೆ ಹತ್ತಾರು ಮುಖಗಳು
news18
Updated: September 1, 2018, 4:33 PM IST
ಸುಚಕ್ರೆ, ನ್ಯೂಸ್​ 18 ಕನ್ನಡ


ಪೇಯಿಂಗ್ ಗೆಸ್ಟ್ ಹೋಂಗಳ ಒಳಗೆ ಹತ್ತಾರು ಹುಡುಗ-ಹುಡುಗಿಯರ ಕತೆಗಳಿರುತ್ತವೆ. ನೋಡಲು ಮಾಮೂಲಿ ಮನೆಯಂತೆ ಕಂಡರೂ ಅದರೊಳಗೆ ವಾಸಿಸುವ ಒಬ್ಬೊಬ್ಬರದೂ ಒಂದೊಂದು ಕತೆ. ಆ ಕತೆಗಳನ್ನು ಕೆದಕುತ್ತಾ ಹೋದಂತೆ ಹೊಸ ಹೊಳಹುಗಳು ಸಿಗುತ್ತಾ ಹೋಗುತ್ತವೆ.

ಈಗ ನಾವು ಹೇಳುವ ಕತೆ ಅವುಗಳಲ್ಲೊಂದು. ಪಿಜಿಯಲ್ಲಿ ಉಳಿದುಕೊಳ್ಳಲೆಂದು ಹೋದ ಆ ಹುಡುಗಿಗೆ ಮೊದಲು ಎಲ್ಲೂ ಜಾಗ ಸಿಗಲಿಲ್ಲ. ಆಮೇಲೆ ಒಂದು ಪಿಜಿಯಲ್ಲಿ ಜಾಗವೇನೋ ಸಿಕ್ಕಿತು. ಆದರೆ, ಅಲ್ಲಿಂದ ಆಫೀಸು ಬಹಳ ದೂರವಿತ್ತು. ಟ್ರಾಫಿಕ್​ನಲ್ಲಿ ಹೋಗಲು 3ರಿಂದ 4 ಗಂಟೆ ಬೇಕಾಗುತ್ತಿತ್ತು. ಇದರಿಂದಾಗಿ ಮನೆಗೆ ಬಂದ ಕೂಡಲೇ ಸುಸ್ತಾಗಿ ಮಲಗಿದರೆ ಸಾಕು ಎನಿಸುತ್ತಿತ್ತು. ಪಿಜಿಯ ಊಟವೇಕೋ ಹಿಡಿಸುತ್ತಿರಲಿಲ್ಲ.

ದಿನಾ ಉಪ್ಪು-ಹುಳಿ ಇಲ್ಲದ ಊಟ ಮಾಡಿ ಬೇಜಾರಾಗಿತ್ತು. ಸಂಜೆ ಅಮ್ಮ ಫೋನ್ ಮಾಡಿದಾಗ ಮನೆಯ ಅಡುಗೆಯ ಬಗ್ಗೆ ಮಾತನಾಡಿದರೆ ಹೊಟ್ಟೆಯಲ್ಲೆಲ್ಲ ಚುರುಚುರು ಅನ್ನುತ್ತಿತ್ತು. ಊಟ ಸರಿಯಿಲ್ಲದಿದ್ದರೇನಂತೆ… ಉಳಿದುಕೊಳ್ಳಲು ಸುರಕ್ಷಿತವಾದ ಸ್ಥಳವಾದರೂ ಇದೆಯಲ್ಲ ಎಂದು ಸಮಾಧಾನ ಮಾಡಿಕೊಂಡು ಹೇಗೋ ದಿನ ಸಾಗಿಸಿದ್ದಾಯಿತು. ಒಂದು ದಿನ ಉಪ್ಪಿನಕಾಯಿ ಅನ್ನ, ಇನ್ನೊಂದು ದಿನ ಮೊಸರು-ಚಟ್ನಿಪುಡಿ, ಮತ್ತೊಂದು ದಿನ ಪಕ್ಕದ ಬೀದಿಯಲ್ಲಿದ್ದ ಉತ್ತರ ಕರ್ನಾಟಕದ ರೊಟ್ಟಿ-ಪಲ್ಯ ಹೀಗೆ ಹೇಗೋ ದಿನಗಳು ಸಾಗುತ್ತಿತ್ತು.ಇದೆಲ್ಲ ಹೆಚ್ಚು ದಿನ ನಡೆಯುವಂತೆ ಕಾಣಲಿಲ್ಲ. ಹಾಗಾಗಿ, ನಾವು ರೂಂಮೇಟ್​ಗಳೆಲ್ಲ ಸೇರಿ ಚಿಕ್ಕದೊಂದು ಕರೆಂಟ್ ಸ್ಟೌವ್ ತಂದಿಟ್ಟುಕೊಂಡೆವು. ಕಪಾಟಿನಲ್ಲಿ ಒಂದೆರಡು ಪಾತ್ರೆಗಳು ಬಂದು ಕುಳಿತವು. ಮೇಲಿನ ಫ್ಲೋರ್​ನಲ್ಲಿ ನಾವೆಲ್ಲ ಇದ್ದಿದ್ದರಿಂದ ಕ್ಲೀನ್ ಮಾಡಲು ಮಾತ್ರ ಮೇಲೆ ಬರುತ್ತಿದ್ದರು. ಬಾಗಿಲು ಹಾಕಿಕೊಂಡು ದಿನಕ್ಕೊಂದು ರೀತಿಯ ರಸಂ, ಗೊಜ್ಜು, ಸಾಸಿವೆಯಂತಹ ಸಿಂಪಲ್ ಅಡುಗೆ ಮಾಡಿಕೊಂಡು ಕೆಳಗಿನಿಂದ ಅನ್ನ ತಂದುಕೊಂಡು ಊಟ ಮಾಡುತ್ತಿದ್ದೆವು. ನಮ್ಮನ್ನು ನೋಡಿ ಅಕ್ಕಪಕ್ಕದವರು ಕೂಡ ಅದೇ ಪ್ಲಾನ್ ಅಳವಡಿಸಿಕೊಂಡರು.
Loading...

ರೂಂಮೇಟ್​ಗಳೆಲ್ಲ ಸೇರಿ ಒಟ್ಟಿಗೇ ರೂಮಿನಲ್ಲಿ ಕುಳಿತು ಊಟ ಮಾಡುತ್ತಿದ್ದೆವು. ಊರಿಂದ ಬರುತ್ತಿದ್ದ ತಿಂಡಿಗಳೆಲ್ಲ ಶೇರ್ ಆಗುತ್ತಿತ್ತು. ಪಿಜಿಯಲ್ಲಿ ಕೊಡುತ್ತಿದ್ದ ಸಾಂಬಾರಿಗೆ ರೂಮಿನಲ್ಲೇ ಒಂಚೂರು ಉಪ್ಪು-ಹುಳಿ ಸೇರಿಸಿಕೊಂಡು ರುಚಿಕರವೆನಿಸುವಂತೆ ಮಾಡುವ ಕಲೆ ನಮಗೂ ಸಿದ್ಧಿಸತೊಡಗಿತ್ತು. ಬರುಬರುತ್ತಾ ಸಮಸ್ಯೆಯೆಂಬುದು ಒಂದು ಸಮಸ್ಯೆಯೇ ಅಲ್ಲ ಎಂದು ಅರಿವಾಗತೊಡಗಿತು.

ಈ ಪಿಜಿ ಜೀವನವೇ ಸಾಕಪ್ಪ ಎಂದು ಬೇಸರಿಸಿಕೊಳ್ಳುತ್ತಿದ್ದವರೆಲ್ಲ ಇದ್ದುದರಲ್ಲೇ ಖುಷಿಯಾಗಿ ಎಂಜಾಯ್ ಮಾಡುವ ಬಗೆಯನ್ನು ಕಲಿತುಕೊಂಡೆವು. ಒಂದೇ ಸೂರಿನಡಿ ಹಲವಾರು ಮನಸ್ಥಿತಿಗಳ ಸಮ್ಮಿಲನವಾಗಿತ್ತು. ಅತ್ತ ಪಿಜಿ ಓನರ್​ಗೂ ಬೇಸರವಾಗದಂತೆ ಇತ್ತ ನಮ್ಮ ಹೊಟ್ಟೆಗೂ ಅನ್ಯಾಯ ಮಾಡದಂತೆ ಹೇಗೋ ಜೀವನ ಸಾಗುತ್ತಿತ್ತು. ಅದೆಲ್ಲ ಆಗಿ ಐದಾರು ವರ್ಷಗಳೇ ಆದವು. ಆದರೆ, ನೆನಪು ಮಾತ್ರ ಇಂದಿಗೂ ಜೀವಂತವಾಗಿವೆ.

 

 
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...