Breast Feeding: ಒತ್ತಡದ ಜೀವನಶೈಲಿಯ ಕಾರಣ ತಾಯಂದಿರಿಗೆ ಹಾಲುಣಿಸಲು ಕಷ್ಟವಾಗ್ತಿದೆಯಾ?

ಜೀವನ ಶೈಲಿಯ ಬದಲಾವಣೆ, ಒತ್ತಡ, ತಡವಾದ ಮದುವೆ ಹೀಗೆ ಅನೇಕ ಕಾರಣಗಳಿಂದಾಗಿ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆ, ಮಕ್ಕಳಾದ ಬಳಿಕ ಎದೆಹಾಲಿನ ಕೊರತೆ ಇಂತಹ ಸಮಸ್ಯೆಗಳು ಇತ್ತೀಚೆಗೆ ಸಾಕಷ್ಟು ಸಹಜವಾಗಿವೆ. ಆರೋಗ್ಯ ತಜ್ಞರು ಕೂಡ ಈ ಕುರಿತಾಗಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜೀವನ ಶೈಲಿಯ ಬದಲಾವಣೆ, ಒತ್ತಡ, ತಡವಾದ ಮದುವೆ ಹೀಗೆ ಅನೇಕ ಕಾರಣಗಳಿಂದಾಗಿ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆ, ಮಕ್ಕಳಾದ (Children) ಬಳಿಕ ಎದೆಹಾಲಿನ ಕೊರತೆ ಇಂತಹ ಸಮಸ್ಯೆಗಳು ಇತ್ತೀಚೆಗೆ ಸಾಕಷ್ಟು ಸಹಜವಾಗಿವೆ. ಆರೋಗ್ಯ ತಜ್ಞರು ಕೂಡ ಈ ಕುರಿತಾಗಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವೃತ್ತಿಜೀವನ, ತಡವಾದ ಮದುವೆಗಳು, ಮುಂದುವರಿದ ತಾಯಿಯ ವಯಸ್ಸು, ವೃತ್ತಿಪರ ಒತ್ತಡ, ಜೀವನಶೈಲಿಯ ಬದಲಾವಣೆಗಳು ಮತ್ತು ಇತರ ಅಂಶಗಳು ಕಡಿಮೆ ಎದೆಹಾಲಿನ ಸ್ರವಿಸುವಿಕೆಗೆ (secretion of breast milk) ಕಾರಣವಾಗಿದ್ದು, ನೈಸರ್ಗಿಕವಾಗಿ ಸಿಗಬೇಕಾಗಿರುವ ಪೌಷ್ಠಿಕ ಆಹಾರದಿಂದ (Nutritious food) ಶಿಶುಗಳು ವಂಚಿತರಾಗಿದ್ದಾರೆ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಹೊಸ ತಾಯಂದಿರಲ್ಲಿ (New Mothers) ಈ ಸಮಸ್ಯೆ ಹೆಚ್ಚಾಗಿ ಕಾಣ ಸಿಗುತ್ತಿದೆ ಎನ್ನುತ್ತಾರೆ ಲ್ಯಾಕ್ಟೇಷನ್ ಪರಿಣಿತರು.

ಸ್ತನ್ಯಪಾನ ಜಾಗೃತಿ ವಾರ
ಆಗಸ್ಟ್ ಮೊದಲ ವಾರವನ್ನು ಸ್ತನ್ಯಪಾನ ಜಾಗೃತಿ ವಾರವನ್ನಾಗಿ ಎಲ್ಲೆಡೆ ಆಚರಿಸಲಾಗುತ್ತದೆ. ಎದೆಹಾಲಿನ ಮಹತ್ವ, ಮಕ್ಕಳಿಗೆ ಏಕೆ ಮೊದಲು ಇದನ್ನೇ ಉಣಿಸಬೇಕು, ಎದೆಹಾಲನ್ನು ಹೇಗೆ ಉಣಿಸಬೇಕು ಹೀಗೆ ಹತ್ತಾರು ವಿಷಯಗಳ ಬಗ್ಗೆ ಮಾಹಿತಿ ಮತ್ತು ಮಹತ್ವದ ಬಗ್ಗೆ ತಿಳಿಸಲು ಒಂದು ವಾರ ಜಾಗೃತಿ ವಾರವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎದೆಹಾಲು ಸ್ರವಿಸುವಿಕೆ ಬಗ್ಗೆ ಮಾತನಾಡಿದ ತಜ್ಞರು ಮತ್ತು ವೈದ್ಯರು ಈ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಹೊಸ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಕಷ್ಟಪಡುತ್ತಿರುವುದು ಏಕೆ
ಕಡಿಮೆ ಎದೆ ಹಾಲಿನ ಉತ್ಪಾದನೆಯಿಂದಾಗಿ ಸುಮಾರು 15-20 ಪ್ರತಿಶತದಷ್ಟು ಹೊಸ ತಾಯಂದಿರು ಹಾಲುಣಿಸಲು ಕಷ್ಟಪಡುತ್ತಿದ್ದರೆ, ಸುಮಾರು 40-50 ಪ್ರತಿಶತ ತಾಯಂದಿರು ಮಗು ಹುಟ್ಟಿದ ಎರಡು ಅಥವಾ ಮೂರು ತಿಂಗಳೊಳಗೆ ವೃತ್ತಿಪರತೆಯ ನಿಮಿತ್ತ ಕಾರಣ, ಒತ್ತಡ ಸೇರಿ ಇತರೆ ಕಾರಣಗಳಿಂದ ಹಾಲುಣಿಸುವಿಕೆಯನ್ನು ನಿಲ್ಲಿಸಲು ಆದ್ಯತೆ ಕೊಡುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Vitamin A: ಆರೋಗ್ಯಕರ ಸಂತಾನೋತ್ಪತ್ತಿಗೆ ವಿಟಮಿನ್ ಎ! ಇನ್ನೂ ಹಲವು ಪ್ರಯೋಜನ

ಮದರ್‌ಹುಡ್ ಆಸ್ಪತ್ರೆಯ ನವಜಾತ ತಜ್ಞ ಮತ್ತು ಮಕ್ಕಳ ತಜ್ಞ ಡಾ.ಸಂತೋಷ್ ಕುಮಾರ್ ಮಾತನಾಡಿ, ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ, ಅಕಾಲಿಕ ಜನನ, ಜೆನೆಟಿಕ್ ಮಾಡ್ಯುಲೇಷನ್, ಪರಿಸರ, ವೃತ್ತಿಪರ ಮತ್ತು ಕೌಟುಂಬಿಕ ಜೀವನವನ್ನು ಸಮತೋಲನಗೊಳಿಸುವಲ್ಲಿನ ಒತ್ತಡ, ಆಹಾರ ಪದ್ಧತಿ, ಪೋಷಣೆ, ನಿದ್ರೆಯ ಚಕ್ರ ಹೀಗೆ ಈ ಎಲ್ಲಾ ಪರಿಸ್ಥಿತಿಗಳು ಎದೆ ಹಾಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ ಎಂದಿದ್ದಾರೆ.

ಬಾಟಲಿ ಹಾಲಿನ ಅಪಾಯಗಳು
ಮಹಿಳೆಯರು ಎದೆಹಾಲಿನ ಕೊರತೆಯಂತಹ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಹಾಲುಣಿಸುವಿಕೆಯನ್ನು ಸುಧಾರಿಸಲು ವೈದ್ಯರ ಸಲಹೆಯನ್ನು ಪಡೆಯಬೇಕು ಅಥವಾ ಅವರು ಶಿಶು ಸೂತ್ರ ಅಥವಾ ಪಾಶ್ಚರೀಕರಿಸಿದ ದಾನಿ ಹ್ಯೂಮನ್ ಹಾಲನ್ನು ಹಾಲಿನ ಬ್ಯಾಂಕ್‌ನಿಂದ ಆರಿಸಿಕೊಳ್ಳಬಹುದು ಎಂಬ ಸಲಹೆಯನ್ನು ವೈದ್ಯರು ತಾಯಂದಿರಿಗೆ ನೀಡುತ್ತಾರೆ.

ಆದಾಗ್ಯೂ, ಈ ಕ್ರಮಗಳು ಹಲವಾರು ಅಪಾಯಗಳನ್ನು ಹೊಂದಿದೆ. ಇಂತಹ ಹಾಲು ನೆಕ್ರೋಟೈಸಿಂಗ್ ಎಂಟ್ರೊಕೊಲೈಟಿಸ್‌ಗೆ ಕಾರಣವಾಗಬಹುದು ಎಂಬ ಎಚ್ಚರಿಕೆ ಸಹ ನೀಡುತ್ತಾರೆ. ಬಾಟಲ್ ಫೀಡಿಂಗ್ ಅತಿಸಾರ, ಕಿವಿ ಸೋಂಕು, ನ್ಯುಮೋನಿಯಾ ಮತ್ತು ಸೆಪ್ಸಿಸ್‌ನಂತಹ ಸೋಂಕುಗಳ ಅಪಾಯಕ್ಕೆ ಕಾರಣವಾಗಬಹುದು. ಇದರಿಂದ ಸ್ಥೂಲಕಾಯತೆ, ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ಕಳಪೆ ಕಾರ್ಯಕ್ಷಮತೆಯಂತಹ ದೀರ್ಘಕಾಲೀನ ಸಮಸ್ಯೆಗಳ ಅಪಾಯವನ್ನು ಶಿಶುಗಳು ಎದುರಿಸುವ ಸಾಧ್ಯತೆಗಳಿವೆ.

ಈ ಬಗ್ಗೆ ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞೆ ಡಾ.ಸ್ಮೃತಿ ಡಿ. ನಾಯಕ್ ಏನು ಹೇಳಿದ್ದಾರೆ
ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞೆ ಡಾ.ಸ್ಮೃತಿ ಡಿ. ನಾಯಕ್ ಮಾತನಾಡಿ, ಮಗುವಿನ ಅತ್ಯುತ್ತಮ ಬೆಳವಣಿಗೆಗೆ ಎದೆ ಹಾಲು ಅತ್ಯುತ್ತಮ ಪೋಷಕಾಂಶವಾಗಿದೆ. ಇದು ಮಕ್ಕಳನ್ನು ಅಲರ್ಜಿಗಳು, ಸೋಂಕುಗಳು, ಕಾಯಿಲೆಗಳು ಮತ್ತು ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ ಎಂದು ಅವರು ಹೇಳಿದರು.

ಎಲ್ಲಾ ತಾಯಂದಿರು ತಮ್ಮ ಮಕ್ಕಳಿಗೆ ಆದರ್ಶಪ್ರಾಯವಾಗಿ, ಆರು ತಿಂಗಳಿಂದ ಕನಿಷ್ಠ ಒಂದು ವರ್ಷದವರೆಗೆ ಸ್ತನ್ಯಪಾನ ಮಾಡಿಸಬೇಕು ಎಂದು ವೈದ್ಯ ಲೋಕ ಯಾವಾಗಲೂ ಸಲಹೆ ನೀಡುತ್ತಿರುತ್ತದೆ. ಶಿಶುಗಳಿಗೆ ಮೊದಲ ಆಹಾರವಾಗಿರುವ ತಾಯಿಯ ಎದೆ ಹಾಲು ಹಲವಾರು ಪೋಷಕಾಂಶಗಳನ್ನು ಪೂರೈಸುವುದರ ಜೊತೆಗೆ ಸೋಂಕುಗಳನ್ನು ರೋಗಗಳನ್ನು ತಡೆಗಟ್ಟಿ ಮಗುವನ್ನು ಆರೋಗ್ಯವಾಗಿರಿಸುತ್ತದೆ.

ಇದನ್ನೂ ಓದಿ: Breast Feeding: ಹಾಲುಣಿಸುವ ತಾಯಿಯ ಗೊಂದಲಗಳಿಗೆ ತಜ್ಞರ ಉತ್ತರ

ಆದ್ದರಿಂದ ಕೆಲಸ, ಒತ್ತಡದಂತಹ ಸಮಸ್ಯೆಗಳೇನೇ ಇದ್ದರೂ ಮಕ್ಕಳಿಗೆ ಮೊದಲ ಒಂದು ವರ್ಷ ಹಾಲು ನೀಡುವ ಬಗ್ಗೆ ತಾಯಂದಿರು ಪ್ರಾಶಸ್ತ್ಯ ನೀಡಬೇಕು. ಎದೆ ಹಾಲು ಹೆಚ್ಚಾಗಿ ಇಲ್ಲದ್ದಲ್ಲಿ ಉತ್ತಮ ಆಹಾರ, ಸರಿಯಾದ ಜೀವನ ಶೈಲಿ, ವೈದ್ಯರ ಸಲಹೆಯನ್ನು ಅನುಸರಿಸಬೇಕು. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ತಾಯಂದಿರು ಮಕ್ಕಳಿಗೆ ಹೆಚ್ಚು ಹೆಚ್ಚು ಹಾಲುಣಿದಿಷ್ಟು, ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ. ಹೀಗಾಗಿ ನಿಮ್ಮ ಮಗುವಿಗೆ ಸಾಕಷ್ಟು ಹಾಲುಣಿಸುವ ರೂಢಿಯನ್ನು ಅನುಸರಿಸಿದರೆ ತಾಯಿ ಮತ್ತು ಮಗು ಇಬ್ಬರಿಗೂ ಒಳಿತು.
Published by:Ashwini Prabhu
First published: