• Home
  • »
  • News
  • »
  • lifestyle
  • »
  • Joint Pain: ಚಳಿಗಾಲದಲ್ಲಿ ಸಂಧಿವಾತವನ್ನು ತಡೆಗಟ್ಟಲು ನಿಮ್ಮ ಜೀವನಶೈಲಿಯಲ್ಲಿ ಇಂಥ ಬದಲಾವಣೆ ತನ್ನಿ!

Joint Pain: ಚಳಿಗಾಲದಲ್ಲಿ ಸಂಧಿವಾತವನ್ನು ತಡೆಗಟ್ಟಲು ನಿಮ್ಮ ಜೀವನಶೈಲಿಯಲ್ಲಿ ಇಂಥ ಬದಲಾವಣೆ ತನ್ನಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜೀವನದ ಯಾವುದೇ ಹಂತದಲ್ಲಿ ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ನೀವು ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ.

  • News18 Kannada
  • Last Updated :
  • New Delhi, India
  • Share this:

ಚುಮುಚುಮು ಚಳಿಗಾಲವೆಂದರೆ (Winter) ಬಹಳ ಜನರಿಗೆ ಇಷ್ಟದ ಕಾಲ. ಕೊರೆಯುವ ಚಳಿಯಲ್ಲಿ ಬೆಚ್ಚಗೆ ಇರೋದು, ಬಿಸಿ ಬಿಸಿ ಕಾಫಿ ಕುಡಿಯೋದು, ಕರಿದಿದ್ದನ್ನ ತಿನ್ನೋದು, ಖಾರ ಖಾರ ಊಟ (Dinner) ಮಾಡೋದು, ಬೆಚ್ಚಗೆ ಮಲಗೋದು, ಹೀಗೆ ಚಳಿಗಾಲದಲ್ಲಿ ಇವೆಲ್ಲ ಕೆಲಸಗಳನ್ನು ಬಹಳಷ್ಟು ಜನರು (People) ಖುಷಿಯಿಂದ ಮಾಡುತ್ತಾರೆ. ಆದ್ರೆ ನಿಮಗೆ ಗೊತ್ತಿರಲಿ, ಅನೇಕರಿಗೆ ಇದು ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ತಂದಿಡುವ ಕಾಲವಾಗಿದೆ. ಇದ್ದದ್ದು, ಇಲ್ಲದಿದ್ದದು ಎಲ್ಲ ಬಗೆಯ ನೋವುಗಳೂ ಕಾಣಿಸಿಕೊಂಡು ಹಿಂಸೆ ಮಾಡುತ್ತವೆ.


ಹೌದು ಚಳಿಗಾಲ ನೋವುಗಳನ್ನು ಉಲ್ಬಣಗೊಳಿಸುತ್ತದೆ. ಅದರಲ್ಲೂ ಸಂಧಿವಾತದಿಂದ ಬಳಲುತ್ತಿರುವ ಜನರಿಗೆ ಚಳಿಗಾಲ ಇನ್ನಷ್ಟು ಕಷ್ಟ. ಚಳಿಗಾಲದಲ್ಲಿ ನಮ್ಮ ದೇಹದಲ್ಲಿನ ಕೀಲುಗಳ ಸುತ್ತಲಿನ ರಕ್ತನಾಳಗಳು ಗಟ್ಟಿಯಾಗುವುದರಿಂದ ಸಾಕಷ್ಟು ನೋವು ಎದುರಿಸಬೇಕಾಗಿ ಬರುತ್ತದೆ. ಆದ್ರೆ ಇದನ್ನು ಉತ್ತಮ ಜೀವನಶೈಲಿಯಿಂದ ಬದಲಾಯಿಸಬಹುದು ಎಂಬುದಾಗಿ ಹೇಳ್ತಾರೆ ತಜ್ಞರು. ಅದರಲ್ಲೂ ನೀವು ಆಕ್ಟಿವ್‌ ಆಗಿರುವುದು, ನಿಯಮಿತ ವ್ಯಾಯಾಮ ಮಾಡುವುದು, ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳುವುದರಿಂದ ನೀವು ಇದರಿಂದ ಹೊರಬರಬಹುದು ಎನ್ನುತ್ತಾರೆ.


ಸಂಧಿವಾತ ಹೊಂದಿರುವವರಿಗೆ ಚಳಿಗಾಲ ಏಕೆ ಕಷ್ಟಕರ?
ನೋವು ಮತ್ತು ಅಂಗವೈಕಲ್ಯಕ್ಕೆ ಸಂಧಿವಾತ ಪ್ರಮುಖ ಕಾರಣವಾಗಿದೆ. ಚಳಿಗಾಲದಲ್ಲಿ ನೋವು ಹೆಚ್ಚಾಗುವುದಕ್ಕೆ ಹಲವು ಕಾರಣಗಳಿವೆ. ಸಾಮಾನ್ಯವಾಗಿ ಸಂಧಿವಾತದಿಂದ ಬಳಲುತ್ತಿರುವ ಜನರು ಚಳಿಗಾಲದಲ್ಲಿ ವಾತಾವರಣದ ಒತ್ತಡಕ್ಕೆ ಒಳಗಾಗಿ ಇನ್ನಷ್ಟು ಸೂಕ್ಷ್ಮವಾಗುತ್ತಾರೆ.


ಚಳಿಗಾಲದಲ್ಲಿ ನಮ್ಮ ದೇಹವು ಶಾಖವನ್ನು ಸಂರಕ್ಷಿಸಲು ಆರಂಭಿಸುತ್ತದೆ. ಅಲ್ಲದೇ ಹೆಚ್ಚಿನ ಪ್ರಮಾಣದ ರಕ್ತ ಚಲನೆ ಪ್ರಾರಂಭಿಸುತ್ತದೆ. ಆದ್ರೆ ಚಳಿಗಾಲದಲ್ಲಿ ತೋಳುಗಳು, ಕಾಲುಗಳು, ಭುಜಗಳು, ಮೊಣಕಾಲಿನ ಕೀಲುಗಳಲ್ಲಿ ಇರುವ ರಕ್ತನಾಳಗಳು ಗಟ್ಟಿಯಾಗುತ್ತವೆ. ಇದು ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂದು ಕನ್ಸಲ್ಟಂಟ್‌ ಆರ್ಥೋಪೆಡಿಕ್‌ ಸರ್ಜನ್‌ ಡಾ.ಆರ್.ಎ.ಪೂರ್ಣಚಂದ್ರ ತೇಜಸ್ವಿ ಹೇಳುತ್ತಾರೆ.


ಕುಳಿತು ಕೆಲಸ ಮಾಡುವರಿಗೆ ಹೆಚ್ಚು ತೊಂದರೆ!
ಹೈದ್ರಾಬಾದ್‌ನ ಬಂಜಾರಾ ಹಿಲ್ಸ್‌ನ ಕೇರ್ ಆಸ್ಪತ್ರೆಗಳ ಮೂಳೆ ಮತ್ತು ಜಂಟಿ ಬದಲಿ ಶಸ್ತ್ರಚಿಕಿತ್ಸಕ ಡಾ. ಮನೋಜ್ ಕುಮಾರ್ ಗುಡ್ಲೂರು ಹೇಳುವ ಪ್ರಕಾರ, ದೈಹಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರುವವರಿಗೆ ಹೋಲಿಸಿದರೆ ಚಳಿಗಾಲದಲ್ಲಿ ಕುಳಿತುಕೊಳ್ಳುವ ಕೆಲಸ ಮಾಡುವವರು ಹೆಚ್ಚು ಸಂಧಿವಾತದ ಸಮಸ್ಯೆಗಳನ್ನು ಹೊಂದಿರುತ್ತಾರೆ.


ಸ್ನಾಯುಗಳ  ರಕ್ಷಣೆ
ಚಳಿಗಾಲದಲ್ಲಿ, ಸ್ನಾಯುಗಳ ಹಾಗೂ ನರದ ನೋವು ಉಂಟಾಗುತ್ತದೆ. ಏಕೆಂದರೆ ಮಂಡಿಚಿಪ್ಪಿನಲ್ಲಿರುವ ಸೈನೋವಿಯಲ್ ದ್ರವವು ಕಡಿಮೆ ತಾಪಮಾನದಲ್ಲಿ ದಪ್ಪವಾಗುತ್ತದೆ. ಅಲ್ಲದೇ ಸೈನೋವಿಯಲ್‌ ಎಂಬ ದ್ರವವು ಕಡಿಮೆ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದರಿಂದ ನೋವು ಮತ್ತಷ್ಟು ಹೆಚ್ಚಾಗುತ್ತದೆ.


ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು ನಿರಂತರವಾಗಿ ದೈಹಿಕ ಕೆಲಸ ಮಾಡುತ್ತಲೇ ಇರುವುದರಿಂದ ಅವರು ಹೆಚ್ಚಾಗಿ ಇಂಥ ಸಮಸ್ಯೆಗಳನ್ನು ಎದುರಿಸೋದಿಲ್ಲ. ದೈಹಿಕ ಚಟುವಟಿಕೆಯು ಕೀಲುಗಳಲ್ಲಿ ಶಾಖವನ್ನು ಉತ್ಪಾದಿಸುತ್ತದೆ ಮತ್ತು ಸೈನೋವಿಯಲ್ ದ್ರವವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.


ಆದ್ರೆ ಒಂದೆಡೆ ಕುಳಿತು ಕೆಲಸ ಮಾಡುವ ಜನರು ನಿಯಮಿತವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳೋದಿಲ್ಲ. ಜೊತೆಗೆ ದೈಹಿಕವಾಗಿಯೂ ಆಕ್ಟಿವ್‌ ಆಗಿರೋದಿಲ್ಲ. ಇದು ದೀರ್ಘಾವಧಿಯಲ್ಲಿ ಅಸ್ಥಿಸಂಧಿವಾತ ಮತ್ತು ಸಂಧಿವಾತಕ್ಕೆ ಕಾರಣವಾಗುತ್ತದೆ. 18 ರಿಂದ 40 ವರ್ಷದೊಳಗಿನ ಯುವಕರಲ್ಲಿ ಇಂತಹ ಪ್ರಕರಣಗಳನ್ನು ನಾವು ಹೆಚ್ಚಾಗಿ ನೋಡುತ್ತೇವೆ ಎಂಬುದಾಗಿ ಹೇಳ್ತಾರೆ ಡಾ. ಗುಡ್ಲೂರು.


ಇದನ್ನೂ ಓದಿ: ಮಧುಮೇಹಿಗಳು ಗೋಡಂಬಿಯನ್ನು ಸೇವಿಸೋದು ಒಳ್ಳೆಯದಾ, ಕೆಟ್ಟದಾ?


ಶೀತವು ಸ್ನಾಯು ಸೆಳೆತವನ್ನು ಹೆಚ್ಚು ಮಾಡುತ್ತದೆ
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ.ನಾರಾಯಣ್ ಹಲ್ಸೆ ಅವರು, ಶೀತವು ರಕ್ತ ಪರಿಚಲನೆಯ್ನು ಕಡಿಮೆ ಮಾಡುವುದರ ಜೊತೆಗೆ ಸ್ನಾಯು ಸೆಳೆತವನ್ನು ಹೆಚ್ಚು ಮಾಡುತ್ತದೆ ಎಂದಿದ್ದಾರೆ.


ಸಂಧಿವಾತವು ಶೀತ ವಾತಾವರಣದಿಂದ ಉಂಟಾಗುವುದಿಲ್ಲವಾದರೂ ಚಳಿಗಾಲದಲ್ಲಿ ಅನೇಕ ಜನರು ನೋವು ಮತ್ತು ಕೀಲುಗಳ ಬಿಗಿತವನ್ನು ಅನುಭವಿಸುತ್ತಾರೆ. ಜೀವನಶೈಲಿಯ ಬದಲಾವಣೆಗಳು ಚಳಿಗಾಲದಲ್ಲಿ ಸಂಧಿವಾತ ನೋವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.


ಚಳಿಗಾಲದಲ್ಲಿ ಸಂಧಿವಾತ ಹೊಂದಿರುವವರ ಜೀವನಶೈಲಿ ಹೇಗಿರಬೇಕು?
ಡಾ ಹಲ್ಸ್ ಅವರು, ಚಳಿಗಾಲದಲ್ಲಿ ಸಂಧಿವಾತದ ಹೊಂದಿರುವಂಥ ಜನರಿಗೆ ಈ ಕೆಳಗಿನ ಜೀವನಶೈಲಿಯ ಬದಲಾವಣೆಗಳನ್ನು ಸೂಚಿಸುತ್ತಾರೆ. ಅವುಗಳು ಯಾವವು ಅನ್ನೋದನ್ನು ನೋಡೋದಾದ್ರೆ,


• ನಿಮ್ಮನ್ನು ಬೆಚ್ಚಗಿಡುವಂಥ ಬಟ್ಟೆಗಳನ್ನು ಹಾಕಿಕೊಳ್ಳಿ. ಜೊತೆಗೆ ಮನೆಯೊಳಗಿರಬೇಕಾದರೆ ಆದಷ್ಟು ಬೆಚ್ಚಗಿರಿ.


• ಬಿಸಿಲಿನಲ್ಲಿ ಚುರುಕಾದ ವಾಕಿಂಗ್ ಅಥವಾ ವ್ಯಾಯಾಮ ಮಾಡಿ. ಇದು ನಿಮ್ಮ ಮೆಟಬಾಲಿಕ್ ಹೀಟ್ ಅನ್ನು ಹೆಚ್ಚಿಸುತ್ತದೆ. ಕೆಲವು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನಿಮ್ಮ ದೇಹ ಮತ್ತು ಮನಸ್ಸಿಗೆ ಸಹಾಯ ಮಾಡಬಹುದು.


• ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ವಿಶೇಷವಾಗಿ ಹಣ್ಣುಗಳು, ತರಕಾರಿಗಳು, ಮೀನುಗಳು, ಬೀಜಗಳ ಸೇವನೆ.


• ವಿಟಮಿನ್ ಡಿ ಪ್ರಯೋಜನಕಾರಿ ಎಂಬುದು ಗೊತ್ತಿರಲಿ.


• ಬೆಚ್ಚಗಿನ ಸ್ನಾನ, ಬೆಚ್ಚಗಿನ ಪೂಲ್ ಈಜು ದೇಹದ ಶಾಖವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಡಾ ಆರ್ ಎ ಪೂರ್ಣಚಂದ್ರ ತೇಜಸ್ವಿ ಅವರು ಕುಳಿತುಕೊಳ್ಳುವಾಗ, ನಿಂತುಕೊಳ್ಳುವಾಗ ಅಥವಾ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಾಗ ನಿಮ್ಮ ಕೀಲುಗಳ ಬಗ್ಗೆ ಗಮನ ಕೊಡುವುದು ಮುಖ್ಯ ಎಂದು ಹೇಳುತ್ತಾರೆ.


ಮುಖ್ಯವಾಗಿ ನಿಮ್ಮ ಕೀಲುಗಳನ್ನು ಚಲಿಸುವಂತೆ ನೋಡಿಕೊಳ್ಳಿ. ನಿಮಗೆ ಸಂಧಿವಾತ ಇದ್ದಾಗ, ಚಲನೆಯು ನಿಮ್ಮ ನೋವು ಮತ್ತು ಬಿಗಿತವನ್ನು ಕಡಿಮೆ ಮಾಡುತ್ತದೆ. ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ. ಜೊತೆಗೆ ಉತ್ತಮ ಭಂಗಿಯನ್ನು ರೂಢಿ ಮಾಡಿಕೊಳ್ಳಿ. ತಜ್ಞರ ಬಳಿ ಸರಿಯಾಗಿ ಕುಳಿತುಕೊಳ್ಳುವುದು, ನಿಲ್ಲುವುದು ಮತ್ತು ಚಲಿಸುವುದು ಹೇಗೆ ಎಂಬುದನ್ನು ಕೇಳಿ ತಿಳಿದುಕೊಳ್ಳಿ.


ನಿಮ್ಮ ದೇಹದ ತೂಕದ ಬಗ್ಗೆ ಎಚ್ಚರ ವಹಿಸಿ. ಅಧಿಕ ತೂಕವು ಸಂಧಿವಾತದ ತೊಡಕುಗಳನ್ನು ಹೆಚ್ಚಿಸುತ್ತದೆ ಮತ್ತು ಸಂಧಿವಾತ ನೋವಿಗೆ ಕಾರಣವಾಗಬಹುದು ಎಂಬುದು ನೆನಪಿರಲಿ. ಹಾಗಾಗಿ ತೂಕ ನಿರ್ವಹಣೆಯ ಪರಿಣಾಮಕಾರಿ ವಿಧಾನ. ನಿಮ್ಮ ಮಿತಿಗಳನ್ನು ತಿಳಿದುಕೊಳ್ಳಿ. ಸಮತೋಲನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಮತ್ತು ವಿಶ್ರಾಂತಿಯನ್ನೂ ನಿರ್ಲಕ್ಷಿಸಬೇಡಿ ಎಂಬುದಾಗಿ ಡಾ ತೇಜಸ್ವಿ ಹೇಳುತ್ತಾರೆ.


ಸಂಧಿವಾತ ರೋಗಿಗಳು ಈ ಕೆಲಸಗಳನ್ನು ಮಾಡಬೇಡಿ!


ಡಾ. ತೇಜಸ್ವಿ ಅವರು ಹೇಳುವಂತೆ ಸಂಧಿವಾತ ಹೊಂದಿರುವಂಥವರು ತೀವ್ರತರವಾದಂತಹ ಮತ್ತು ಪದೇ ಪದೇ ಮಾಡುವಂತಹ ದೈಹಿಕ ಚಟುವಟಿಕೆಗಳನ್ನು ತಪ್ಪಿಸಿ. ಉದಾಹರಣೆಗೆ ಓಟ, ಜಿಗಿತ, ಹೆಚ್ಚಿನ ಪ್ರಭಾವದ ಏರೋಬಿಕ್ಸ್ ನಂತಹ ಚಟುವಟಿಕೆಗಳನ್ನು ಮಾಡದಿರಿ ಎಂಬುದಾಗಿ ಹೇಳುತ್ತಾರೆ. ಅಲ್ಲದೇ, ಧೂಮಪಾನ ತ್ಯಜಿಸಲು ಸಲಹೆ ನೀಡುತ್ತಾರೆ. ಧೂಮಪಾನವು ನಮ್ಮ ಶರೀರ ಹಾಗೂ ಮನಸ್ಸಿನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಸಂಧಿವಾತದ ನೋವನ್ನು ಹೆಚ್ಚಿಸುತ್ತದೆ ಎಂಬುದಾಗಿ ಡಾ. ತೇಜಸ್ವಿ ಹೇಳುತ್ತಾರೆ.


ಆರೋಗ್ಯಕರ ಜೀವನಶೈಲಿಯ ಅವಶ್ಯಕತೆ


"ಜೀವನದ ಯಾವುದೇ ಹಂತದಲ್ಲಿ ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯವಾಗಿದೆ. ನಿಮ್ಮ ದೇಹದ ಬಗ್ಗೆ ಕಾಳಜಿ ವಹಿಸಲು ಇನ್ನು ತಡಮಾಡಬೇಡಿ. ಜಾಯಿಂಟ್‌ ಗಳನ್ನು ಬಲಪಡಿಸುವಿಕೆಗೆ ಪೂರಕವಾದ ವ್ಯಾಯಾಮಗಳನ್ನು ಮಾಡಲು ಪ್ರಯತ್ನಿಸಿ. ಜೊತೆಗೆ ಬೆಚ್ಚಗಿರಬೇಕು ಮತ್ತು ಸುತ್ತಲಿನ ಸ್ನಾಯುಗಳಿಗೆ ವಿಶ್ರಾಂತಿ ನೀಡಬೇಕು ಎಂಬುದಾಗಿ ಡಾ. ಗುಡ್ಲೂರು ಹೇಳುತ್ತಾರೆ.
ಚಳಿಗಾಲದಲ್ಲಿ ಸಂಧಿವಾತ ರೋಗಿಗಳಿಗೆ ಅವರು ಈ ಕೆಳಗಿನ ಸಲಹೆಗಳನ್ನು ಸೂಚಿಸುತ್ತಾರೆ:


- ಗಂಟುಗಳ ಸುತ್ತ ಇರುವ ಚರ್ಮವನ್ನು ರಕ್ಷಿಸುವುದು ಬಹಳ ಮುಖ್ಯ. ಏಕೆಂದರೆ ಚರ್ಮವು ಒಣಗಿದಾಗ, ಅದು ಕೀಲುಗಳ ಮೇಲೆ ಸುಡುವಂಥಹ ಅನುಭವ ನೀಡುತ್ತದೆ. ವಿಟಮಿನ್ ಎ ಮತ್ತು ಇ ಹೊಂದಿರುವ ಮಾಯಿಶ್ಚರೈಸರ್‌ಗಳು ನೋವನ್ನು ಕಡಿಮೆ ಮಾಡುತ್ತದೆ.


- ಸೂರ್ಯನಿಗೆ ಸಾಕಷ್ಟು ಒಡ್ಡಿಕೊಳ್ಳುವುದು (ವಿಟಮಿನ್ ಡಿ) ಮೂಳೆಗಳನ್ನು ಇನ್ನಷ್ಟು ಬಲಪಡಿಸಲು ಸಹಾಯ ಮಾಡುತ್ತದೆ.


- ಸಂಧಿವಾತದಿಂದ ಬಳಲುತ್ತಿರುವ ಜನರು ನೋವನ್ನು ಕಡಿಮೆ ಮಾಡಲು ಬೆಚ್ಚಗಿನ ಟಬ್ ಸ್ನಾನವನ್ನು ತೆಗೆದುಕೊಳ್ಳಬೇಕು.


- ವ್ಯಾಯಾಮವು ಮೊಣಕಾಲುಗಳು ಸಾಕಷ್ಟು ಪ್ರಮಾಣದ ಸೈನೋವಿಯಲ್ ದ್ರವವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.


- ವಿಟಮಿನ್ ಡಿ, ವಿಟಮಿನ್ ಸಿ, ಒಮೆಗಾ 3 ಕೊಬ್ಬಿನಾಮ್ಲಗಳು, ಶುಂಠಿ, ಸೋಯಾ ಬೀನ್, ಕೊಬ್ಬಿನ ಮೀನು, ಹಸಿರು ತರಕಾರಿಗಳು, ಬೀಜಗಳು ಮತ್ತು ಸಾಕಷ್ಟು ನೀರು ಮತ್ತು ಸಮತೋಲಿತ ಆಹಾರವು ಕೀಲುಗಳು ಬಲಗೊಳ್ಳಲು ಮತ್ತು ಚಳಿಗಾಲದಲ್ಲಿ ಮೂಳೆ ಆರೈಕೆಗೆ ಸಹಾಯ ಮಾಡುತ್ತದೆ.


ಒಟ್ಟಾರೆ, ಚಳಿಗಾಲದಲ್ಲಿ ಬೆಚ್ಚಗಿರುವುದು ಹಾಗೂ ಸಾಕಷ್ಟು ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಮುಖ್ಯ. ಸರಿಯಾದ, ಆರೋಗ್ಯಕರವಾದ ಜೀವನ ಶೈಲಿಯಿಂದ ಮಾತ್ರವೇ ಇಂದಿನ ಕಾಲದಲ್ಲಿ ನಾವು ಆರೋಗ್ಯವಂತರಾಗಿರೋಕೆ ಸಾಧ್ಯ ಎಂಬುದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು ಎಂಬುದಾಗಿ ಹೇಳ್ತಾರೆ ವೈದ್ಯರು.

First published: