ನಿಮ್ಮ ಆಹಾರದಲ್ಲಿನ (Food) ಸಣ್ಣ ಬದಲಾವಣೆಗಳು ಸಹ ಕೆಲವೊಮ್ಮೆ ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ (Health) ದೊಡ್ಡ ವ್ಯತ್ಯಾಸವನ್ನುಂಟು ಮಾಡಬಹುದು. ನಿಮ್ಮ ದಿನವನ್ನು ಪರಿಪೂರ್ಣ ಪೌಷ್ಠಿಕಾಂಶದ (Nutrition) ಆಹಾರ ಪದಾರ್ಥಗಳನ್ನು ಸೇವಿಸುವುದರೊಂದಿಗೆ ಶುರು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ನಮ್ಮಲ್ಲಿ ಅನೇಕರು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಎದುರಿಸಬಹುದು, ಅದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಉದಾಹರಣೆಗೆ, ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್ ಬಿ12 ಮತ್ತು ವಿಟಮಿನ್ ಎ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ವಿಟಮಿನ್ ಡಿ ಕೊರತೆಯು ಕಡಿಮೆ ರಕ್ತದ ಕ್ಯಾಲ್ಸಿಯಂ ಮಟ್ಟ, ರಿಕೆಟ್ಸ್, ವಯಸ್ಕರಲ್ಲಿ ಮೂಳೆಗಳ ಮೃದುತ್ವಕ್ಕೆ ಕಾರಣವಾಗಬಹುದು.
ಉತ್ತಮ ಆರೋಗ್ಯಕ್ಕೆ ಎಂತಹ ಆಹಾರ ಪದಾರ್ಥಗಳು ಬೆಸ್ಟ್?
ಬಾದಾಮಿ, ಗೋಡಂಬಿ, ವಾಲ್ನಟ್ ಮತ್ತು ಕಡಲೆಕಾಯಿಯಂತಹ ಬೀಜಗಳು ಬಿ-ಜೀವಸತ್ವಗಳು, ಫೋಲೇಟ್ ಮತ್ತು ವಿಟಮಿನ್ ಇ ಯ ಉತ್ತಮ ಮೂಲವಾಗಿದೆ. ಈ ಸಣ್ಣ ಪುಟ್ಟ ಸೂಪರ್ ಫುಡ್ಗಳು ನಿಯಮಿತವಾಗಿ ಸೇವಿಸಿದರೆ ನಿಮ್ಮ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಅದರಲ್ಲೂ ನೀವು ಇವುಗಳನ್ನು ನೀರಿನಲ್ಲಿ ನೆನೆಸಿದಾಗ ಪೋಷಕಾಂಶಗಳು ದೇಹದಿಂದ ಉತ್ತಮವಾಗಿ ಹೀರಲ್ಪಡುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅವುಗಳನ್ನು ರಾತ್ರಿಯಿಡೀ ನೆನೆಸುವುದರಿಂದ ಅಜೀರ್ಣಕ್ಕೆ ಕಾರಣವಾಗುವ ಈ ಬೀಜಗಳಲ್ಲಿನ ಫೈಟಿಕ್ ಆಮ್ಲವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಬೀಜಗಳನ್ನು ನೆನೆಸುವುದು ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅವುಗಳ ರುಚಿ ಮತ್ತು ವಿನ್ಯಾಸವನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಪೌಷ್ಟಿಕತಜ್ಞೆ ಜೂಹಿ ಕಪೂರ್ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ಗಳಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆಗೆ ಸಹಾಯ ಮಾಡುವ ಮತ್ತು ದೀರ್ಘಕಾಲದ ಅಥವಾ ನಿರಂತರ ಆರೋಗ್ಯ ಸಮಸ್ಯೆಗಳ ರೋಗಲಕ್ಷಣಗಳನ್ನು ನಿವಾರಿಸುವ ಸೂಪರ್ ಫುಡ್ಗಳ ಬಗ್ಗೆ ಮಾತನಾಡಿದ್ದಾರೆ ನೋಡಿ.
ಇದನ್ನೂ ಓದಿ: Curry Leaves: ಕರಿಬೇವಿನ ಎಲೆಗಳನ್ನು ಪ್ರತಿದಿನ ಸೇವಿಸುವುದರಿಂದ ಈ ಎಲ್ಲಾ ಕಾಯಿಲೆಗಳು ಗುಣವಾಗುತ್ತಂತೆ!
ಪಿಸಿಓಎಸ್, ಮೊಡವೆ ನಿವಾರಣೆಗಾಗಿ ನೆನೆಸಿದ ಬಾದಾಮಿ ಬೆಸ್ಟ್
ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಪಿಸಿಒಎಸ್, ಮೊಡವೆಗಳನ್ನು ನಿವಾರಿಸಲು ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಕಪೂರ್ ಹೇಳುತ್ತಾರೆ. 5-7 ಬಾದಾಮಿಗಳನ್ನು ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ಸಿಪ್ಪೆ ಸುಲಿದು ಸೇವಿಸಿ.
ಮುಟ್ಟಿನ ತೊಂದರೆಗಳಿಗೆ ಒಣದ್ರಾಕ್ಷಿ ಮತ್ತು ಕೇಸರಿ ಸೂಕ್ತ
ಮುಟ್ಟಿನ ನೋವು ಮತ್ತು ಅನಿಯಮಿತ ಅವಧಿಗೆ, 6-8 ನೆನೆಸಿದ ಒಣದ್ರಾಕ್ಷಿ ಮತ್ತು 2 ಎಳೆ ಕೇಸರಿಯನ್ನು ರಾತ್ರಿಯಿಡೀ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಅದನ್ನು ಸೇವಿಸಿ.
ಕೂದಲು ಉದುರುವಿಕೆಗೆ ನೆನೆಸಿದ ಕಪ್ಪು ಒಣದ್ರಾಕ್ಷಿ ಸೂಪರ್
ಕೂದಲು ಉದುರುವಿಕೆ ಮತ್ತು ರೋಗನಿರೋಧಕ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ, ಕಪ್ಪು ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೆನೆಸಿಟ್ಟು ಮರುದಿನ ಬೆಳಿಗ್ಗೆ ಸೇವಿಸಿ.
ಸ್ಮರಣೆ ಮತ್ತು ಏಕಾಗ್ರತೆಗಾಗಿ ನೆನೆಸಿದ ವಾಲ್ನಟ್ ಗಳು ಉತ್ತಮ
ಮೆದುಳಿನ ಶಕ್ತಿ, ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಎರಡು ವಾಲ್ನಟ್ ಗಳನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಸೇವಿಸಬಹುದು. ಮಕ್ಕಳು ತಮ್ಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇದು ಉತ್ತಮವಾಗಿದೆ.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕಾಗಿ ನೆನೆಸಿದ ಹೆಸರುಕಾಳು
ಉತ್ತಮ ಕೂದಲು, ಸ್ನಾಯುಗಳ ಆರೋಗ್ಯ ಮತ್ತು ಉತ್ತಮ ಚರ್ಮಕ್ಕಾಗಿ 2 ಟೀ ಸ್ಪೂನ್ ಹೆಸರುಕಾಳನ್ನು ನೆನೆಸಿಟ್ಟು, ಬೆಳಿಗ್ಗೆ ಸೇವಿಸಿ. ಇದು ವಿಶೇಷವಾಗಿ ಹದಿಹರೆಯದವರಿಗೆ ಮತ್ತು ಮಹಿಳೆಯರಿಗೆ ಒಳ್ಳೆಯದು.
ಮಲಬದ್ಧತೆಯನ್ನು ನಿವಾರಿಸುತ್ತೆ ನೆನೆಸಿದ ಅಂಜೂರ
ನೆನೆಸಿದ ಎರಡು ಅಂಜೂರದ ಹಣ್ಣುಗಳು ನಿಮ್ಮ ಕರುಳಿನ ಆರೋಗ್ಯದ ಸಮಸ್ಯೆಯನ್ನು ಕಡಿಮೆ ಮಾಡಬಲ್ಲದು. ವಿಶೇಷವಾಗಿ ಗರ್ಭಿಣಿಯರು ಮತ್ತು ಹಿರಿಯ ನಾಗರಿಕರಲ್ಲಿ ಮಲಬದ್ಧತೆಯನ್ನು ನಿವಾರಿಸಲು ಇದು ತುಂಬಾನೇ ಸಹಾಯ ಮಾಡುತ್ತದೆ ಎಂದು ಕಪೂರ್ ಹೇಳುತ್ತಾರೆ.
ಇವುಗಳನ್ನು ನೆನೆಸುವುದು ಹೇಗೆ?
- ಮೊದಲು ಎಲ್ಲವನ್ನೂ ಚೆನ್ನಾಗಿ ತೊಳೆಯಿರಿ
- ರಾತ್ರಿಯಿಡೀ ಶುದ್ಧ ಕುಡಿಯುವ ನೀರಿನಲ್ಲಿ ನೆನೆಸಿಡಿ
- ಬೆಳಿಗ್ಗೆ ಆ ನೀರನ್ನು ಬಿಸಾಡಿ, ಕಾಳು-ಬೀಜಗಳನ್ನು ಸೇವಿಸಿ
- ವಾಲ್ನಟ್ ಮತ್ತು ಅಂಜೂರದ ಹಣ್ಣುಗಳನ್ನು ನೇರವಾಗಿ ಸೇವಿಸಿ.
- ಹಸಿರು ಹೆಸರುಕಾಳನ್ನು ಮೊಳಕೆಯೊಡೆಯಲು 6-8 ಗಂಟೆಗಳ ಕಾಲ ಬಿಡಬಹುದು. ಆನಂತರ ಅದನ್ನು ಸಲಾಡ್ ನೊಂದಿಗೆ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ