ಆಹಾರ ಸೇವಿಸುವಾಗ ಸ್ಮಾರ್ಟ್​ ಫೋನ್​ ಬಳಸುತ್ತೀರಾ? ಹಾಗಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

news18
Updated:August 23, 2018, 12:18 PM IST
ಆಹಾರ ಸೇವಿಸುವಾಗ ಸ್ಮಾರ್ಟ್​ ಫೋನ್​ ಬಳಸುತ್ತೀರಾ? ಹಾಗಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
news18
Updated: August 23, 2018, 12:18 PM IST
-ನ್ಯೂಸ್ 18 ಕನ್ನಡ

ಸ್ಮಾರ್ಟ್​ ಫೋನ್​ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಮೊದಲ ಮಾಡುವ ಕೆಲಸ ಎಂದರೆ ಫೋನ್​ನಲ್ಲಿ ಕಣ್ಣಾಡಿಸುವುದು. ಸಮಯ ಸಿಕ್ಕಾಗೆಲ್ಲಾ ಸಮಯ ಪೋಲಾಗದಂತೆ ಸ್ಮಾರ್ಟ್​ ಫೋನ್​​ನ್ನು ಬಳಸುವಷ್ಟು ನಾವಿಂದು ಮೊಬೈಲ್​ನ ದಾಸರಾಗಿದ್ದೇವೆ. ಆಹಾರ ಸೇವಿಸುವ ವೇಳೆ ಸ್ಮಾರ್ಟ್​ಫೋನ್ ನೋಡದಿದ್ದರೆ ತಿನ್ನುವ ಆಹಾರ ಗಂಟಲಿನಿಂದ ಕೆಳಗಿಳಿಯುವುದಿಲ್ಲ ಎನ್ನುವ ಮಟ್ಟಿಗೆ ತಲುಪಿದ್ದೇವೆ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚೆಗೆ ಸ್ಮಾರ್ಟ್​ಫೋನ್ ಮೇಲೆ ನಡೆಸಲಾದ ಸಂಶೋಧನೆಯಿಂದ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಟಾಯ್ಲೆಟ್​ ಸೀಟ್​ನಲ್ಲಿ ಕಂಡು ಬರುವ ಕೀಟಾಣುಗಳಿಗಿಂತ ಮೂರು ಪಟ್ಟು ಕೀಟಾಣುಗಳು ಸ್ಮಾರ್ಟ್​ ಫೋನ್​ ಸ್ಕ್ರೀನ್​ಗಳಲ್ಲಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸ್ಮಾರ್ಟ್​ ಫೋನ್ ಬಳಸುವ ಶೇ.35 ರಷ್ಟು ಜನರು ತಮ್ಮ ಮೊಬೈಲ್​ನ್ನು ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ. ವೈಪ್, ಫ್ಲುಯೆಡ್ ಗಳನ್ನು ಬಳಸಿ ಮೊಬೈಲ್ ಸ್ಕ್ರೀನ್​ಗಳನ್ನು ಕ್ಲೀನ್ ಮಾಡಬೇಕಿರುವುದು ಹೆಚ್ಚಿನವರಿಗೆ ತಿಳಿದಿಲ್ಲ. ಪ್ರತಿ 20 ಸ್ಮಾರ್ಟ್​ ಫೋನ್​ ಬಳಕೆದಾರರಲ್ಲಿ ಒಬ್ಬರು ಮಾತ್ರ 6 ತಿಂಗಳಿಗೊಮ್ಮೆ ಸ್ಮಾರ್ಟ್​ ಫೋನ್ ಸ್ವಚ್ಛಗೊಳಿಸುತ್ತಾರೆ ಎಂದು ಇಂಗ್ಲೆಂಡ್​ನ 2ಗೋ ಮೊಬೈಲ್ ಇನ್ಶುರೆನ್ಸ್​ ಸಂಸ್ಥೆ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.

ಎರೋಬಿಕ್ ಬ್ಯಾಕ್ಟೀರಿಯಾ, ಯೀಸ್ಟ್​, ವೌಲ್ಡ್ ಪ್ರಮಾಣವನ್ನು ಪರೀಕ್ಷಿಸಲು ಅಧ್ಯಯನ ತಂಡವು ಐಫೊನ್ 6, ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್ಸಂಗ್ ಗ್ಯಾಲೆಕ್ಸಿ 8 ಮೊಬೈಲ್​ಗಳನ್ನು ಆಯ್ದುಕೊಂಡಿದ್ದರು. ಹಾಗೆಯೇ ಎಲ್ಲ ಮೊಬೈಲ್​ಗಳಲ್ಲೂ ಎರೋಬಿಕ್ ಬ್ಯಾಕ್ಟೀರಿಯಾ, ಯೀಸ್ಟ್​ ಮತ್ತು ವೌಲ್ಡ್​ ಕೀಟಾಣುಗಳು ಕಂಡು ಬಂದಿದ್ದು, ಅದರಲ್ಲೂ ಸ್ಕ್ರೀನ್​ನಲ್ಲಿ ಅಧಿಕ ಪ್ರಮಾಣದಲ್ಲಿ ಕೀಟಾಣುಗಳು ಕಂಡು ಬಂದಿದೆ. ಇದರಿಂದ ಚರ್ಮ ಮತ್ತು ಇತರೆ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಅಧ್ಯಯನಕ್ಕಾಗಿ ಬಳಸಲಾದ ಮೊಬೈಲ್ ಸ್ಕ್ರೀನ್​ಗಳ ಪ್ರತಿ ಚದರ ಸೆಂ.ಮೀ.ಗೆ 254.9 ಕಾಲನಿ ಫಾರ್ಮಿಂಗ್ ಯುನಿಟ್​ಗಳಿದ್ದವು. ಅಂದರೆ ಪ್ರತಿ ಸ್ಕ್ರೀನ್ ಸರಾಸರಿ 84.9 ಯುನಿಟ್​ಗಳು. ಹಾಗೆಯೇ ಟಾಯ್ಲೆಟ್​​ಗಳ ಸೀಟ್​ ಮತ್ತು ಫ್ಲಷ್​ಗಳಲ್ಲಿ ಕೇವಲ 24 ಯುನಿಟ್ ಪ್ರಮಾಣದಲ್ಲಿ ಕೀಟಾಣುಗಳಿದ್ದವು. ಆಫೀಸ್ ಕಂಪ್ಯೂಟರ್, ಮೌಸ್ ಮತ್ತು ಕೀಬೋರ್ಡ್​ಗಳನ್ನು ಪರಿಶೀಲಿಸಿದಾಗ ಇದರ ಪ್ರಮಾಣ ಕೇವಲ 5 ಯುನಿಟ್​ಗಳಷ್ಟಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

ಸ್ಮಾರ್ಟ್​ ಫೋನ್​ಗಳ ಹಿಂಭಾಗದಲ್ಲಿ ಸರಾಸರಿ 30 ಯುನಿಟ್, ಲಾಕ್ ಬಟನ್ 23.8 ಮತ್ತು ಹೋಮ್ ಬಟನ್ 10.6 ಯುನಿಟ್​ಗಳನ್ನು ಹೊಂದಿತ್ತು. ಅದೇ ರೀತಿ ಸಂಶೋಧನೆಗೆ ಒಳಪಡಿಸಲಾದ ಸ್ಮಾರ್ಟ್​ ಫೋನ್​ ಬಳಕೆದಾರರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಯಾವತ್ತೂ ತಮ್ಮ ಮೊಬೈಲ್​ಗಳನ್ನು ಸ್ವಚ್ಛ ಮಾಡಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಅಧ್ಯಯನ ತಂಡ ತಿಳಿಸಿದೆ.

ನಾವು ಸ್ಮಾರ್ಟ್​ ಫೊನ್​ಗಳಿಂದ ದೂರವಿರುವುದಿಲ್ಲ. ಸದಾ ಮೊಬೈಲ್​ಗಳನ್ನು ಎಲ್ಲೆಡೆ ಕೊಂಡೊಯ್ಯುತ್ತೇವೆ. ಇದರಿಂದ ಕೆಲವು ಸೂಕ್ಷ್ಮಜೀವಿಗಳು ಮೊಬೈಲ್​ನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು 2ಗೊ ಸಂಸ್ಥೆಯ ಅಧಿಕಾರಿ ಗ್ಯಾರಿ ಬೀಸ್ಟನ್ ತಿಳಿಸಿದ್ದಾರೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ