ಈಗಿನ ಒತ್ತಡ ಭರಿತ ಜೀವನದಲ್ಲಿ ನಮ್ಮ ಮನಸ್ಸಿಗೆ ಹಿತವನ್ನು ನೀಡುವುದರ ಮೂಲಕ ನಮ್ಮಲ್ಲಿರುವ ಎಲ್ಲಾ ರೀತಿಯ ಒತ್ತಡವನ್ನು ಕೂಡಲೇ ನಿವಾರಿಸಿ ದೇಹದ ಆರೋಗ್ಯವನ್ನು (Health) ಚೆನ್ನಾಗಿರಿಸಿಕೊಳ್ಳಲು ಸಹಾಯ ಮಾಡುವುದೇ ಯೋಗಾಭ್ಯಾಸ (Yoga) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನಾದಿಕಾಲದಿಂದಲೂ, ಯೋಗವು ಸಾಕಷ್ಟು ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದು ನಿಮ್ಮ ದೇಹದ ಒಳಗಿನ ಮತ್ತು ಹೊರಗಿನ ಆರೋಗ್ಯದ ಮೇಲೆ ತುಂಬಾನೇ ಚೆನ್ನಾಗಿ ಕೆಲಸ ಮಾಡುತ್ತದೆ. ನಿಮ್ಮ ಚರ್ಮವು ಸದಾ ಹೊಳೆಯುತ್ತಾ ಇರಬೇಕು ಎಂದರೆ, ಚರ್ಮದ ಆರೈಕೆಗಾಗಿ ಈ 6 ಯೋಗ ಭಂಗಿಗಳನ್ನು ನೀವು ಮನೆಯಲ್ಲಿ ತಪ್ಪದೆ ಮಾಡಿ. ಉತ್ತಮ ದೇಹದ ಚರ್ಮಕ್ಕಾಗಿ (Skin) ಯೋಗದ ಪ್ರಯೋಜನಗಳನ್ನು ಹೇಗೆ ಪಡೆಯುವುದು ಎಂದು ತಿಳಿಯಲು, ಹೆಲ್ತ್ ಶಾಟ್ಸ್ ಪ್ರಸಿದ್ಧ ಯೋಗ ತಜ್ಞೆಯಾದ ಸಮೀಕ್ಷಾ ಶೆಟ್ಟಿ ಅವರ ಮಾತುಗಳನ್ನು ಕೇಳೋಣ ಬನ್ನಿ.
ಯೋಗ ಮತ್ತು ಚರ್ಮದ ಆರೈಕೆ, ಇವೆರಡೂ ಪರಸ್ಪರ ಸಂಬಂಧವನ್ನು ಹೊಂದಿದೆ, ಏಕೆಂದರೆ ಯೋಗ ಮಾಡುವುದರಿಂದ ಒಂದು ಪ್ರಯೋಜನವೆಂದರೆ ಪ್ರಕಾಶಮಾನವಾದ ಮತ್ತು ಆರೋಗ್ಯಕರ ಚರ್ಮವನ್ನು ನಾವು ಪಡೆಯಬಹುದು. ನಿಮ್ಮ ಚರ್ಮದ ಆರೋಗ್ಯವನ್ನು ಕೆಡಿಸುವಂತಹ ಅನೇಕ ಆರೋಗ್ಯ ಸಮಸ್ಯೆಗಳನ್ನು ಯೋಗವು ಒಳಗಿನಿಂದ ನಿಯಂತ್ರಿಸುತ್ತದೆ ಮತ್ತು ನಿಮ್ಮ ಮುಖಕ್ಕೆ ಆರೋಗ್ಯಕರ ಕಾಂತಿಯುತ ಹೊಳಪನ್ನು ನೀಡುತ್ತದೆ ಎಂದು ಯೋಗ ತಜ್ಞೆ ಸಮೀಕ್ಷಾ ಶೆಟ್ಟಿ ಹೇಳಿದ್ದಾರೆ.
ಚರ್ಮದ ಉತ್ತಮ ಆರೈಕೆಗಾಗಿ ಈ 6 ಯೋಗ ಭಂಗಿಗಳನ್ನು ತಪ್ಪದೆ ಮಾಡಿ:
1. ಧನುರಾಸನ:
ಚರ್ಮದ ಆರೈಕೆಗಾಗಿ ಯೋಗದ ಈ ಭಂಗಿಯು ನಿಮಗೆ ಹೊಳೆಯುವ ಮೈಬಣ್ಣವನ್ನು ನೀಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಭಂಗಿಯನ್ನು ನೀವು ತಪ್ಪದೆ ಪ್ರತಿದಿನ ಅಭ್ಯಾಸ ಮಾಡುವುದರಿಂದ ಕಿಬ್ಬೊಟ್ಟೆಯ ಭಾಗದ ಮೇಲೆ ತೀವ್ರವಾದ ಒತ್ತಡವನ್ನು ಹಾಕಲು ಸಹಾಯ ಮಾಡುತ್ತದೆ, ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಈ ಭಂಗಿಯು ಮುಖ ಮತ್ತು ಶ್ರೋಣಿಯ ಭಾಗದಲ್ಲಿ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಕಿಬ್ಬೊಟ್ಟೆಯಿಂದ ಒತ್ತಡವನ್ನು ಬಿಡುಗಡೆ ಮಾಡುತ್ತದೆ ಮತ್ತು ಅದನ್ನು ಬಲಪಡಿಸುತ್ತದೆ.
ಈ ಆಸನದ ನಿಯಮಿತ ಅಭ್ಯಾಸವು ಸಂತಾನೋತ್ಪತ್ತಿ ಅಂಗಗಳನ್ನು ಬಲಪಡಿಸುತ್ತದೆ. ಇದು ಅಜೀರ್ಣ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳುವ ಮೂಲಕ, ಧನುರಾಸನವು ನಿಮಗೆ ಹೊಳೆಯುವ ಮತ್ತು ಆರೋಗ್ಯಕರ ಚರ್ಮವನ್ನು ಸಹ ನೀಡಲು ಸಹಾಯ ಮಾಡುತ್ತದೆ.
ಮಾಡುವ ವಿಧಾನ:
- ಮೊದಲಿಗೆ ನೀವು ನೆಲದ ಮೇಲೆ ಚಪ್ಪಟೆಯಾಗಿ ಮಲಗಿ.
- ನಿಮ್ಮ ಮೊಣಕಾಲು ಸೊಂಟದ ಅಗಲವನ್ನು ದೂರ ಇರಿಸಿ ನಿಮ್ಮ ಕಾಲುಗಳನ್ನು ಮೊಣಕಾಲಿನ ಮೇಲಿಂದ ಬಾಗಿಸಿ. ನಿಮ್ಮ ಕೈಗಳನ್ನು ಹಿಂದೆ ಚಾಚಿ ಮತ್ತು ನಿಮ್ಮ ಎರಡು ಪಾದಗಳನ್ನು ಹಿಡಿಯಿರಿ.
- ಉಸಿರನ್ನು ಒಳಕ್ಕೆಳೆದುಕೊಂಡು ನಿಮ್ಮ ಇಡೀ ದೇಹವನ್ನು ನೆಲದಿಂದ ಮೇಲಕ್ಕೆತ್ತಿ, ಹೊಕ್ಕುಳಿನ ಮೇಲೆ ಸಮತೋಲನ ಸಾಧಿಸಿ.
- ಹಾಗೆಯೇ ಉಸಿರನ್ನು ಹೊರಬಿಟ್ಟು ನಿಧಾನವಾಗಿ ಈ ಭಂಗಿಯನ್ನು ಬಿಡಬೇಕು.
2. ಪಶ್ಚಿಮೋತ್ತಾನಾಸನ:
ಬೆನ್ನುಮೂಳೆ, ಭುಜಗಳು ಮತ್ತು ಸ್ನಾಯು ಸೆಳೆತಗಳನ್ನು ಹಿಗ್ಗಿಸಲು ಇದು ಒಂದು ಸುಂದರವಾದ ಆಸನವಾಗಿದೆ. ಇದು ಬೆನ್ನಿನ ಕೆಳಭಾಗದಲ್ಲಿನ ಒತ್ತಡವನ್ನು ಬಿಡುಗಡೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಇಷ್ಟೇ ಅಲ್ಲದೆ ಈ ಯೋಗ ಭಂಗಿಯು ಮುಖದ ಮೇಲಿನ ಮೊಡವೆಗಳಂತಹ ಅನೇಕ ಚರ್ಮದ ಅಸ್ವಸ್ಥತೆಗಳನ್ನು ದೂರ ಮಾಡುತ್ತದೆ.
ಈ ಯೋಗ ಭಂಗಿಯು ಒತ್ತಡವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಮಾತ್ರವಲ್ಲದೇ, ಇದು ರಕ್ತವನ್ನು ಶುದ್ಧೀಕರಿಸುತ್ತದೆ, ಚರ್ಮದಲ್ಲಿರುವ ಕಪ್ಪು ಕಲೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಪಶ್ಚಿಮೋತ್ಥಾನವು ಚರ್ಮದ ಆರೈಕೆಗೆ ಪರಿಪೂರ್ಣ ಯೋಗವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಮಾಡುವ ವಿಧಾನ:
- ಮೊದಲಿಗೆನಿಮ್ಮ ಕಾಲುಗಳನ್ನು ನೇರವಾಗಿ ಮುಂದಕ್ಕೆ ಚಾಚಿ ನೆಲದ ಮೇಲೆ ಕುಳಿತುಕೊಳ್ಳುವ ಮೂಲಕ ಈ ಯೋಗ ಭಂಗಿಯನ್ನು ಪ್ರಾರಂಭಿಸಿ.
- ನಿಮ್ಮ ಪಾದಗಳನ್ನು ಒಟ್ಟಿಗೆ ಇರಿಸಿ ಮತ್ತು ನಿಮ್ಮ ಪಾದಗಳನ್ನು ನಿಮ್ಮ ಕಡೆಗೆ ಬಾಗಿಸಿ. ಉಸಿರನ್ನು ಒಳಕ್ಕೆಳೆದುಕೊಂಡು ಬೆನ್ನೆಲುಬನ್ನು ಮೇಲಕ್ಕೆ ನೇರಗೊಳಿಸಬೇಕು.
- ನಂತರ ಉಸಿರನ್ನು ಹೊರಬಿಟ್ಟು, ನಿಮ್ಮ ದೇಹದ ಮೇಲ್ಭಾಗವನ್ನು ಮುಂದಕ್ಕೆ ಬಾಗಿಸಿ, ಸೊಂಟದಿಂದ ಬಾಗಿಸಿ, ಮುಂದಕ್ಕೆ ಬಾಗುವಾಗ ನೇರವಾದ ಬೆನ್ನೆಲುಬನ್ನು ಕಾಯ್ದುಕೊಳ್ಳಬೇಕು.
3. ಅಧೋ ಮುಖ ಸ್ವಾನಾಸನ:
ಈ ಆಸನವು ಇಡೀ ದೇಹವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಇದು ತೋಳುಗಳು ಮತ್ತು ಭುಜಗಳನ್ನು ಬಲಪಡಿಸುತ್ತದೆ, ಬೆನ್ನುಮೂಳೆ, ಕರುಗಳು ಮತ್ತು ಸ್ನಾಯು ಸೆಳೆತಗಳನ್ನು ಸಡಿಲಗೊಳಿಸುತ್ತವೆ ಹಾಗೂ ನಿಮ್ಮ ಮೆದುಳು ಮತ್ತು ಮುಖಕ್ಕೆ ರಕ್ತದ ಹರಿವನ್ನು ತರುವ ಮೂಲಕ ಇಡೀ ದೇಹವನ್ನು ಶಕ್ತಿಯುತಗೊಳಿಸುತ್ತದೆ ಎಂದು ಯೋಗ ತಜ್ಞೆ ಸಮೀಕ್ಷಾ ಶೆಟ್ಟಿ ಹೇಳುತ್ತಾರೆ.
ಮಾಡುವ ವಿಧಾನ:
- ನಿಮ್ಮ ಕೈಗಳು ಮತ್ತು ಮೊಣಕಾಲುಗಳನ್ನು ಕೆಳಗೆ ಇರಿಸಿ ನೆಲದ ಮೇಲೆ ಈ ಯೋಗ ಭಂಗಿಯನ್ನು ಮಾಡಲು ಪ್ರಾರಂಭಿಸಿ.
- ನಿಮ್ಮ ಮೊಣಕಾಲುಗಳನ್ನು ನೆಲದಿಂದ ಮೇಲೆತ್ತುವ ಮೂಲಕ ನಿಮ್ಮ ಕಾಲುಗಳನ್ನು ನೇರಗೊಳಿಸಿ ಮತ್ತು ನಿಮ್ಮ ಹಿಮ್ಮಡಿಗಳನ್ನು ಸಾಧ್ಯವಾದಷ್ಟು ದೂರಕ್ಕೆ ತಳ್ಳಿ.
- ನಿಮ್ಮ ಅಂಗೈಗಳನ್ನು ಬಳಸಿಕೊಂಡು ನೆಲದಿಂದ ದೂರ ತಳ್ಳುವ ಮೂಲಕ ಬೆನ್ನುಮೂಳೆಯನ್ನು ವಿಸ್ತರಿಸಿ.
- ಈ ಭಂಗಿಯಲ್ಲಿ 5 ರಿಂದ 9 ಉಸಿರಾಟಗಳವರೆಗೆ ಇರುವುದು ಉತ್ತಮ.
4. ಮತ್ಸ್ಯಾಸನ:
ಮೀನಿನ ಭಂಗಿಯು ಬೆನ್ನನ್ನು ಬಾಗಿಸುವ ಭಂಗಿಗಳಲ್ಲಿ ಒಂದಾಗಿದೆ, ಇದನ್ನು ಆರಂಭಿಕರು ಸಹ ಸುಲಭವಾಗಿ ಮಾಡಬಹುದು. ಇದು ತಾಜಾ ಮತ್ತು ಟೋನ್ಡ್ ಚರ್ಮವನ್ನು ಪಡೆಯಲು ಅತ್ಯುತ್ತಮ ಯೋಗ ಭಂಗಿಗಳಲ್ಲಿ ಒಂದಾಗಿದೆ, ಏಕೆಂದರೆ ಇದು ತಲೆಯ ಭಾಗದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಮಾಡುವ ವಿಧಾನ:
- ಪದ್ಮಾಸನ ಯೋಗದ ಭಂಗಿಯಲ್ಲಿ ಮೊದಲು ಕುಳಿತುಕೊಳ್ಳಿ.
- ನಿಧಾನವಾಗಿ ಹಿಂದಕ್ಕೆ ಬಾಗಿ ನಿಮ್ಮ ತಲೆಯನ್ನು ನೆಲದ ಮೇಲೆ ಇರಿಸಿ.
- ಆನಂತರ ನೀವು ನಿಮ್ಮ ತಲೆಯ ಮೇಲ್ಭಾಗದಿಂದ ನೆಲವನ್ನು ಸ್ಪರ್ಶಿಸುವಾಗ, ನಿಮ್ಮ ಎದೆಯನ್ನು ಮೇಲಕ್ಕೆ ಎತ್ತಿ.
- ಈ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಇರಿ.
5. ಹಲಾಸನ:
ಈ ಯೋಗ ಭಂಗಿಯು ದೇಹದ ಒಟ್ಟಾರೆ ರಕ್ತ ಪರಿಚಲನೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ಶಾಂತತೆಯ ಸಂವೇದನೆಯನ್ನು ಪ್ರಚೋದಿಸುತ್ತದೆ ಮತ್ತು ನಿಮ್ಮನ್ನು ನಿರಾಳ ಮನಸ್ಸಿನ ಸ್ಥಿತಿಯಲ್ಲಿ ಇರಿಸುತ್ತದೆ ಹಾಗೂ ಇದು ಚರ್ಮದ ಆರೈಕೆಗೆ ಪರಿಪೂರ್ಣವಾದ ಯೋಗದ ಭಂಗಿಯಾಗಿದೆ.
"ಇದು ಬರಿ ಕೆಟ್ಟ ಚರ್ಮವನ್ನು ಸುಧಾರಿಸುವುದಲ್ಲದೆ, ನಿಮ್ಮ ನಿದ್ರೆಯನ್ನು ಸುಧಾರಿಸುವಲ್ಲಿ ಸಹ ಈ ಯೋಗ ಭಂಗಿ ತುಂಬಾನೇ ಸಹಾಯಕವಾಗಿದೆ. ನಿದ್ರೆಯನ್ನು ಪ್ರಚೋದಿಸಲು ಅಥವಾ ನಿದ್ರಾಹೀನತೆಯನ್ನು ನಿಭಾಯಿಸಲು ಈ ಭಂಗಿಯು ಪ್ರಯೋಜನಕಾರಿಯಾಗಿದೆ. ಈ ಆಸನದ ಎಲ್ಲಾ ಸಕಾರಾತ್ಮಕ ಪರಿಣಾಮಗಳು ನಿಮ್ಮ ಚರ್ಮದ ಮೇಲೆ ಪ್ರತಿಫಲಿಸುತ್ತವೆ" ಎಂದು ಸಮೀಕ್ಷಾ ಶೆಟ್ಟಿ ಹೇಳುತ್ತಾರೆ.
ಮಾಡುವ ವಿಧಾನ:
- ನಿಮ್ಮ ಬೆನ್ನಿನ ಮೇಲೆ ಮಲಗಿ, ಅಂಗೈಗಳು ಮೇಲ್ಛಾವಣಿಗೆ ಅಭಿಮುಖವಾಗಿರಬೇಕು.
- ನಂತರ ನಿಧಾನವಾಗಿ ನಿಮ್ಮ ಕಾಲುಗಳನ್ನು 90 ಡಿಗ್ರಿಗಳಷ್ಟು ಮೇಲಕ್ಕೆತ್ತಿ ಮತ್ತು ನೆಲವನ್ನು ಸ್ಪರ್ಶಿಸಲು ಅವುಗಳನ್ನು ನಿಮ್ಮ ತಲೆಯ ಮೇಲೆ ತೆಗೆದುಕೊಳ್ಳಿ.
- ಈ ಭಂಗಿಯನ್ನು ಒಂದು ನಿಮಿಷಗಳ ಕಾಲದವರೆಗೆ ಹಾಗೆ ಕಾಯ್ದುಕೊಳ್ಳಿ, ನಂತರ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ.
6. ಸರ್ವಾಂಗಾಸನ:
ಇದು ನಿಮ್ಮ ಚರ್ಮ ಮತ್ತು ಅದರ ಹೊಳಪಿನ ಮೇಲೆ ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಮಧ್ಯಂತರ ಮಟ್ಟದ ಭಂಗಿಯಾಗಿದೆ. ಈ ಭಂಗಿಯನ್ನು ಕರಗತ ಮಾಡಿಕೊಳ್ಳುವುದು ತುಂಬಾ ಕಷ್ಟವಲ್ಲ, ನಿಯಮಿತ ಅಭ್ಯಾಸವು ಮುಖದ ಭಾಗಕ್ಕೆ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮುಖದ ಮಂದತೆ, ಮೊಡವೆ ಮತ್ತು ಸುಕ್ಕುಗಳಂತಹ ಚರ್ಮದ ಪರಿಸ್ಥಿತಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಮಾಡುವ ವಿಧಾನ:
- ಮೊದಲಿಗೆನಿಮ್ಮ ಬೆನ್ನಿನ ಮೇಲೆ ಮಲಗಿ, ಮೇಲ್ಛಾವಣಿಗೆ ಅಭಿಮುಖವಾಗಿ ಮಲಗಿ.
- ನಿಮ್ಮ ಕೈಗಳಿಂದ ಬೆನ್ನನ್ನು ಬೆಂಬಲಿಸುವ ಮೂಲಕ ನಿಮ್ಮ ಕಾಲುಗಳು ಮತ್ತು ಸೊಂಟವನ್ನು ನಿಧಾನವಾಗಿ ಮೇಲಕ್ಕೆ ಎತ್ತಬೇಕು.
- ಈ ಯೋಗ ಭಂಗಿಯಲ್ಲಿ ಕೆಲವು ನಿಮಿಷಗಳ ಕಾಲ ಇರಿ. ನಂತರ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ ಬನ್ನಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ