Weight Loss: ತೂಕ ಇಳಿಸೋಕೆ ಈ 6 ವಿಧಾನ ಪ್ರಯತ್ನಿಸಿ..ತೆಳ್ಳಗಾಗದಿದ್ರೆ ಕೇಳಿ!

Belly Fat: ನಿಮ್ಮ ಸೊಂಟದ ಸುತ್ತಳತೆಯನ್ನು ಟೇಪಿನಿಂದ ಅಳೆಯುವ ಮೂಲಕ, ನಿಮ್ಮ ಕಿಬ್ಬೊಟ್ಟೆಯ ಬೊಜ್ಜನ್ನು ಅಳೆಯಬಹುದು. ಗಂಡಸರಲ್ಲಿ ಹೊಟ್ಟೆಯ ಸುತ್ತಳತೆ 40 ಇಂಚು, ಹೆಂಗಸರಲ್ಲಿ 35 ಇಂಚು ಇದ್ದರೆ, ಅದನ್ನು ಕಿಬ್ಬೊಟ್ಟೆಯ ಬೊಜ್ಜು ಎಂದು ಪರಿಗಣಿಸಲಾಗುತ್ತದೆ.

Photo: Google

Photo: Google

  • Share this:

ಯಾರೂ ಡೊಳ್ಳು ಹೊಟ್ಟೆಯನ್ನು ಹೊಂದಲು ಬಯಸುವುದಿಲ್ಲ. ಬೊಜ್ಜಿಲ್ಲದ ಹೊಟ್ಟೆಯನ್ನು ಬಯಸುವುದಕ್ಕೆ ಲಿಂಗ ಭೇದವೂ ಇಲ್ಲ. ಬೊಜ್ಜು ತುಂಬಿದ ಹೊಟ್ಟೆ ಅಥವಾ ಸೊಂಟ ದೇಹದ ಸೌಂದರ್ಯವನ್ನು ಕೆಡಿಸುತ್ತದೆ ಮಾತ್ರವಲ್ಲ, ಆರೋಗ್ಯಕ್ಕೂ ಹಾನಿಕಾರಕ. ಹೊಟ್ಟೆಯ ಬೊಜ್ಜಿಗೂ , ಟೈಪ್ 2 ಡಯಾಬಿಟೀಸ್ ಮತ್ತು ಹೃದಯದ ಕಾಯಿಲೆಗಳಿಗೆ ಸಂಬಂಧ ಇದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಹಾಗಾಗಿ ಬೊಜ್ಜು ಇಳಿಸುವುದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ.


ನಿಮ್ಮ ಸೊಂಟದ ಸುತ್ತಳತೆಯನ್ನು ಟೇಪಿನಿಂದ ಅಳೆಯುವ ಮೂಲಕ, ನಿಮ್ಮ ಕಿಬ್ಬೊಟ್ಟೆಯ ಬೊಜ್ಜನ್ನು ಅಳೆಯಬಹುದು. ಗಂಡಸರಲ್ಲಿ ಹೊಟ್ಟೆಯ ಸುತ್ತಳತೆ 40 ಇಂಚು, ಹೆಂಗಸರಲ್ಲಿ 35 ಇಂಚು ಇದ್ದರೆ, ಅದನ್ನು ಕಿಬ್ಬೊಟ್ಟೆಯ ಬೊಜ್ಜು ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ? ಇಲ್ಲಿವೆ ಆರು ಪರಿಹಾರಗಳು.


1. ಸಕ್ಕರೆ ಮತ್ತು ಸಿಹಿ ಪಾನೀಯಗಳನ್ನು ತ್ಯಜಿಸಿ


ಸಿಹಿ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಜೊತೆಗೆ ನಿಮ್ಮ ದೇಹದ ತೂಕವನ್ನು ಅದು ಹೆಚ್ಚಿಸುತ್ತದೆ.
ಸಕ್ಕರೆ ಚಯಾಪಚಯ ಕ್ರಿಯೆಗೆ ಹಾನಿಕಾರಕ ಎಂಬುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಅಧಿಕ ಸಕ್ಕರೆ ಸೇವನೆ, ಹೊಟ್ಟೆ ಮತ್ತು ಲಿವರ್ನ ಸುತ್ತ ಬೊಜ್ಜನ್ನು ಉಂಟು ಮಾಡುತ್ತದೆ.


ನಿತ್ಯದ ಆಹಾರದಲ್ಲಿ ಅತ್ಯಂತ ಕಡಿಮೆ ಸಕ್ಕರೆ ಸೇವಿಸಿ. ಸಿಹಿ ಸೋಡಾ, ಹಣ್ಣಿನ ರಸ ಮತ್ತು ಅಧಿಕ ಸಕ್ಕರೆಯುಳ್ಳ ಸ್ಪೋರ್ಟ್ಸ್‌ ಡ್ರಿಂಕ್ ಸೇರಿದಂತೆ, ಎಲ್ಲಾ ಸಿಹಿ ಪಾನೀಯಗಳನ್ನು ಸಂಪೂರ್ಣವಾಗಿ ತ್ಯಜಿಸಿ. ಸಿಹಿ ಉತ್ಪನ್ನ ಕೊಳ್ಳುವ ಮೊದಲು ಅದರ ಲೇಬಲ್‍ನಲ್ಲಿ ನಮೂದಿಸಿರುವ ಸಕ್ಕರೆ ಪ್ರಮಾಣವನ್ನು ಓದಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ಆದರೆ ಸಿಹಿ ತಿನ್ನಬಾರದು ಎಂಬ ನಿಯಮ ಹಣ್ಣುಗಳಿಗೆ ಅನ್ವಯವಾಗುವುದಿಲ್ಲ.


2. ಹೆಚ್ಚು ಪ್ರೋಟೀನ್ ಸೇವಿಸಿ


ಪ್ರೋಟೀನ್ ತೂಕ ಇಳಿಸಲು ಅಗತ್ಯವಿರುವ ಅತ್ಯಂತ ಅಗತ್ಯ ಸೂಕ್ಷ್ಮ ಪೋಷಕಾಂಶ. ಅದು 60% ರಷ್ಟು ತಿನ್ನುವ ಬಯಕೆಗಳನ್ನು ಕಡಿಮೆ ಮಾಡುತ್ತದೆ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಸುಮಾರು 441ಕ್ಕೂ ಕಡಿಮೆ ಕ್ಯಾಲೋರಿಗಳನ್ನು ತಿನ್ನುವಂತೆ ಮಾಡುತ್ತದೆ ಎಂಬುವುದು ಅಧ್ಯಯನಗಳಿಂದ ತಿಳಿದು ಬಂದಿದೆ. ಹೆಚ್ಚು ಪ್ರೋಟೀನ್ ತಿನ್ನುವವರಲ್ಲಿ ಕಿಬ್ಬೊಟ್ಟೆಯ ಬೊಜ್ಜು ಕಡಿಮೆ ಇರುವುದು ಅಧ್ಯಯನವೊಂದರಿಂದ ತಿಳಿಸುಬಂದಿದೆ. ಮೊಟ್ಟೆ, ಮೀನು, ದ್ವಿದಳ ಧಾನ್ಯಗಳು, ಡ್ರೈ ಫ್ರೂಟ್ಸ್, ಮಾಂಸ ಮತ್ತು ಹಾಲಿನ ಉತ್ಪನ್ನಗಳಂತಹ ಅಧಿಕ ಪ್ರೊಟೀನ್ ಉಳ್ಳ ಆಹಾರಗಳನ್ನು ಸೇವಿಸಿ.


3. ಕಾರ್ಬೋಹೈಡ್ರೇಟ್‍ ಸೇವನೆ ಕಡಿಮೆ ಮಾಡಿ


ಕಡಿಮೆ ಕಾರ್ಬೋಹೈಡ್ರೇಟ್‍ಗಳ ಸೇವನೆ ತೂಕ ಇಳಿಸಲು ಅತ್ಯಂತ ಸಹಕಾರಿ. ಜನರು ಕಡಿಮೆ ಕಾರ್ಬೋಹೈಡ್ರೇಟ್‍ಗಳನ್ನು ತಿಂದಾಗ, ಅವರ ಹಸಿವು ಕಡಿಮೆಯಾಗಿ, ತೂಕ ಕಡಿಮೆ ಆಗುತ್ತದೆ. ಅಲ್ಲದೆ ಕಡಿಮೆ ಕೊಬ್ಬಿನ ಆಹಾರ ಕ್ರಮಕ್ಕಿಂತ, ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಕ್ರಮ ತೂಕ ಇಳಿಸಲು ಹೆಚ್ಚು ಸಹಕಾರಿ ಎಂಬುವುದು ಹಲವಾರು ಅಧ್ಯಯನಗಳಿಂದ ತಿಳಿದು ಬಂದಿದೆ.


ಸಕ್ಕರೆ , ಕ್ಯಾಂಡಿ, ವೈಟ್ ಬ್ರೆಡ್‍ನಂತಹ ಸಂಸ್ಕರಿತ ಕಾರ್ಬ್‍ಗಳಿಂದ ದೂರವಿರಿ. ಕೆಲವರು ತೂಕ ಇಳಿಸುವ ಪ್ರಕ್ರಿಯೆಯಲ್ಲಿ ದಿನಕ್ಕೆ 50 ಗ್ರಾಂ ಕಾರ್ಬ್ ಕಡಿತ ಮಾಡುತ್ತಾರೆ. ಕಡಿಮೆ ಕಾರ್ಬೋಹೈಡ್ರೇಟ್‌ ಸೇವನೆಯಿಂದ ತೂಕ ಇಳಿಸುವುದರ ಜೊತೆಗೆ ಇತರ ಆರೋಗ್ಯ ಲಾಭಗಳು ಕೂಡ ಇವೆ. ಉದಾದಹಣೆಗೆ, ಕಡಿಮೆ ಕಾರ್ಬ್‌ ತಿನ್ನುವುದು ಟೈಪ್ 2 ಡಯಾಬಿಟೀಸ್ ಇರುವ ರೋಗಿಗಳಿಗೆ ಲಾಭದಾಯಕ. ಕಾರ್ಬೋಹೈಡ್ರೇಟ್‍ಗಳ ಸೇವನೆ ಕಡಿಮೆ ಮಾಡುವುದರಿಂದ ಕಿಬ್ಬೊಟ್ಟೆ ಮತ್ತು ಲಿವರ್ ಸುತ್ತಲಿನ ಫ್ಯಾಟ್ ಗಣನೀಯವಾಗಿ ಇಳಿಯುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.


4. ಹೆಚ್ಚು ಫೈಬರ್ ಉಳ್ಳ ಆಹಾರ ಸೇವಿಸಿ


ಹೆಚ್ಚು ಫೈಬರ್‌ಯುಕ್ತ ಆಹಾರ ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ. ಆದರೆ ಅದು ಯಾವ ರೀತಿಯ ಫೈಬರ್ ಎಂಬುವುದು ಮುಖ್ಯ. ಕರಗುವ ಮತ್ತು ವಿಶಿಯಸ್ ಫೈಬರ್‌ಗಳು ನಿಮ್ಮ ತೂಕದ ಮೇಲೆ ಪ್ರಭಾವ ಬೀರುತ್ತವೆ. ಮುಖ್ಯವಾಗಿ ಕರಗುವ ಫೈಬರ್ ನಿಮ್ಮ ಹೊಟ್ಟೆಯ ಬೊಜ್ಜು ಇಳಿಯಲು ಸಹಕಾರಿ ಎಂಬುವುದು ತಿಳಿದು ಬಂದಿದೆ.ದಿನಕ್ಕೆ 14 ಗ್ರಾಂ ಫೈಬರ್ ಸೇವನೆಯಿಂದ, ಕ್ಯಾಲೋರಿ ಸೇವನೆ 10% ನಷ್ಟು ಕಡಿಮೆ ಆಗುತ್ತದೆ ಮತ್ತು 4 ತಿಂಗಳಲ್ಲಿ ಸುಮಾರು 2 ಕೆಜಿಯಷ್ಟು ತೂಕ ಕಡಿಮೆ ಆಗುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಹಣ್ಣು, ತರಕಾರಿ, ದ್ವಿದಳ ಧಾನ್ಯಗಳಲ್ಲಿ ಅಧಿಕ ಫೈಬರ್ ಇರುತ್ತದೆ.


5. ನಿತ್ಯವೂ ವ್ಯಾಯಾಮ ಮಾಡಿ


ವ್ಯಾಯಾಮ ತೂಕ ಇಳಿಸಲು ಮಾತ್ರವಲ್ಲ, ಎಲ್ಲಾ ರೀತಿಯ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಕಾರಿ. ಆದರೆ ಒಂದೇ ಭಾಗದ ವ್ಯಾಯಾಮದಿಂದ ಬೊಜ್ಜು ಇಳಿಕೆ ಸಾಧ್ಯವಿಲ್ಲ. ವಿವಿಧ ವ್ಯಾಯಾಮಗಳನ್ನು ಕ್ರಮಬದ್ಧವಾಗಿ ಮಾಡಿದಾಗ ನಿರೀಕ್ಷಿತ ಫಲಿತಾಂಶ ಸಿಗುತ್ತದೆ. ನಡಿಗೆ, ಓಟ, ಈಜು, ತೂಕ ಎತ್ತುವುದು ಮತ್ತು ಕಾರ್ಡಿಯೋ ವ್ಯಾಯಾಮಗಳು ಹೊಟ್ಟೆಯ ಬೊಜ್ಜನ್ನು ಕರಗಿಸಬಲ್ಲವು.


6. ಆಹಾರಕ್ರಮದ ಬಗ್ಗೆ ನಿಗಾ ಇಡಿ


ನಾವು ಏನನ್ನು ತಿನ್ನುತ್ತೇವೆ ಎಂಬುವುದು ಬಹಳ ಮುಖ್ಯ, ಕೆಲವರು ಆ ಬಗ್ಗೆ ಗಮನ ನೀಡುವುದಿಲ್ಲ. ನೀವು ಅಧಿಕ ಪ್ರೊಟೀನ್‌ ಮತ್ತು ಕಡಿಮೆ ಕಾರ್ಬ್ ಆಹಾರ ಕ್ರಮವನ್ನು ಅನುಸರಿಸುತ್ತಿದ್ದೀರಿ ಎಂದು ಅಂದುಕೊಳ್ಳುತ್ತಿರಬಹುದು. ಆದರೆ ಅದರ ಮೇಲೆ ನಿಗಾ ಇಡದಿದ್ದರೆ, ನೀವು ಯಾವುದನ್ನು ಹೆಚ್ಚು ಸೇವಿಸಿದ್ದೀರಿ ಮತ್ತು ಯಾವುದನ್ನು ಕಡಿಮೆ ಸೇವಿಸಿದ್ದೀರಿ ಎಂದು ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಹಾಗಂತ ಎಲ್ಲವನ್ನೂ ತೂಕ ಮಾಡಿ ತಿನ್ನಬೇಕು ಎಂದಲ್ಲ. ಆದರೆ ಕೆಲವು ದಿನಗಳಿಗೊಮ್ಮೆ ನಿಮ್ಮ ಆಹಾರ ಕ್ರಮವನ್ನು ಗಮನಿಸುತ್ತಾ ಇದ್ದರೆ, ತೂಕ ಇಳಿಸುವ ಪ್ರಕ್ರಿಯೆ ಸುಲಭವಾಗುತ್ತದೆ.


First published: