ತ್ವಚೆ (Skin) ಚೆನ್ನಾಗಿರಬೇಕು, ಹೊಳಪಾಗಿರಬೇಕು.. ಆರೋಗ್ಯವಾಗಿರಬೇಕು (Healthy) ಅನ್ನೋದು ಎಲ್ಲರ ಆಸೆ. ಆದ್ರೆ ಅನೇಕರಿಗೆ ಚರ್ಮದ ಸಮಸ್ಯೆಗಳಿರುತ್ತವೆ. ಡ್ರೈಸ್ಕಿನ್, ಮೊಡವೆ (pimple), ಕಾಂತಿರಹಿತ ತ್ವಚೆ, ಕಪ್ಪು ಕಲೆ ಹೀಗೆ ಸಾಕಷ್ಟು ತೊಂದರೆಗಳಿರುತ್ತವೆ. ಅದನ್ನು ಹೇಗೆ ಹೋಗಲಾಡಿಸುವುದು ಅನ್ನೋದ್ರ ಬಗ್ಗೆ ಚಿಂತೆ ಮಾಡುತ್ತಿರುತ್ತಾರೆ. ಆದರೆ ತ್ವಚೆಯ ಇಂಥ ಸಮಸ್ಯೆಗಳನ್ನು ಹೋಗಲಾಡಿಸಲು ಆಹಾರ (Food) ಹಾಗೂ ಜೀವನಪದ್ಧತಿಯಲ್ಲಿ (Lifestyle) ಬದಲಾವಣೆ ಮಾಡಿಕೊಳ್ಳುವುದು ಮುಖ್ಯ ಎನ್ನುತ್ತಾರೆ ತಜ್ಞರು.
ವಿಶೇಷ ಕಾರ್ಯಕ್ರಮಗಳಲ್ಲಿ, ಮದುವೆ, ಪಾರ್ಟಿ ಅಥವಾ ಯಾವುದೇ ಪ್ರಮುಖ ಸಂದರ್ಭದಲ್ಲಿ ಜನರು ಹೊಳಪಿನ ತ್ವಚೆಗಾಗಿ ಸಾಕಷ್ಟು ಶ್ರಮ ವಹಿಸುತ್ತಾರೆ. ತಮ್ಮ ಚರ್ಮವನ್ನು ಶ್ರದ್ಧೆಯಿಂದ ನೋಡಿಕೊಳ್ಳುತ್ತಾರೆ. ಆದರೆ ಈ ಬದ್ಧತೆ ಬಹಳ ಕಾಲ ಉಳಿಯೋದಿಲ್ಲ.
ಬದಲಾಗಿ ಆ ಕಾರ್ಯಕ್ರಮದಲ್ಲಿ ಚೆನ್ನಾಗಿ ಕಾಣಿಸಬೇಕು ಅನ್ನೋದಷ್ಟೇ ಮುಖ್ಯವಾಗಿರುತ್ತದೆ. ಹಾಗಿದ್ರೆ ವಾರ, ತಿಂಗಳು ಮತ್ತು ವರ್ಷ ಎನ್ನದೇ ಯಾವಾಗಲೂ ಆರೋಗ್ಯಕರ ಚರ್ಮವನ್ನು ಹೊಂದಲು ಏನು ಮಾಡಬೇಕು? ಈ ಕುರಿತು ಪೌಷ್ಟಿಕತಜ್ಞರಾದ ನ್ಮಾಮಿ ಅಗರ್ವಾಲ್ ಅವರು ಕೆಲವೊಂದಿಷ್ಟು ರಹಸ್ಯಗಳನ್ನು ಹಂಚಿಕೊಳ್ಳುತ್ತಾರೆ.
ನ್ಮಾಮಿ ಅಗರ್ವಾಲ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಉತ್ತಮ ಚರ್ಮದ ಆರೋಗ್ಯಕ್ಕಾಗಿ ದಿನನಿತ್ಯದ ಜೀವನದಲ್ಲಿ ಮಾಡಬೇಕಾದ 5 ವಿಷಯಗಳು ಯಾವವು ಅನ್ನೋದನ್ನು ಹಂಚಿಕೊಂಡಿದ್ದಾರೆ. ಹಾಗಿದ್ರೆ ಅವುಗಳು ಯಾವುವು ಅನ್ನೋದನ್ನು ನೋಡೋಣ.
1. ಹೈಡ್ರೇಶನ್ : ಹೊಳೆಯುವ ಚರ್ಮವನ್ನು ಪಡೆಯಲು ಹೆಚ್ಚು ನೀರು ಕುಡಿಯುವುದು ಮುಖ್ಯ. ದೇಹ ಹೈಡ್ರೇಟ್ ಆಗಿರುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ.
ಅಲ್ಲದೇ ಆರೋಗ್ಯಕರ ಚರ್ಮವನ್ನು ನಿರ್ವಹಿಸಲು ಮತ್ತು ಒಳಗಿನಿಂದ ಹೊಳಪನ್ನು ಉಂಟು ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ದಿನಕ್ಕೆ ಕನಿಷ್ಠ ಮೂರು ಲೀಟರ್ ನೀರು ಕುಡಿಯಬೇಕು.
ಅದನ್ನು ನೀವು ದಿನವೂ ಕುಡಿಯುತ್ತೀರೆಂಬುದನ್ನು ಖಚಿತಪಡಿಸಿಕೊಳ್ಳಿ. ಇದು ಚರ್ಮವನ್ನು ಪುನರ್ಯೌವನಗೊಳಿಸುತ್ತದೆ. ಚರ್ಮದ ವಿನ್ಯಾಸವನ್ನು ನಿಯಂತ್ರಿಸುತ್ತದೆ.
ಅಲ್ಲದೇ ತ್ವಚೆಯ ಸುಕ್ಕುಗಳನ್ನು ನಿವಾರಿಸುತ್ತದೆ. ನ್ಮಾಮಿ ಅಗರ್ವಾಲ್ ಅವರು ಎಳನೀರು ಹಾಗೂ ಮಜ್ಜಿಗೆಯನ್ನು ಹೆಚ್ಚು ಸೇವಿಸಲು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಇದು ಜಗತ್ತಿನ ಅತಿ ದುಬಾರಿ ತರಕಾರಿ; ಕೆಜಿಗೆ 85 ಸಾವಿರದಿಂದ 1 ಲಕ್ಷ ರೂಪಾಯಿ
2. ನೆಲ್ಲಿಕಾಯಿ ಸೇವನೆ: ಪೌಷ್ಟಿಕ ತಜ್ಞರ ಪ್ರಕಾರ ನೆಲ್ಲಿಕಾಯಿ, ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದು "ನಿಮ್ಮ ಚರ್ಮ, ಕೂದಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು.
ಏಕೆಂದರೆ ನೆಲ್ಲಿಕಾಯಿ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಟಾಕ್ಸಿನ್‌ಗಳ ವಿರುದ್ಧ ಹೋರಾಡುತ್ತದೆ. ಇದು ಕಾಂತಿಯುತ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ.
ಆಮ್ಲಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳು ಇರುವುದರಿಂದ ಅವು ಅಕಾಲಿಕ, ವಯಸ್ಸಾದ ಲಕ್ಷಣಗಳನ್ನು, ಚರ್ಮದ ಗೆರೆಗಳು, ಕಪ್ಪು ಕಲೆಗಳು ಮತ್ತು ಸುಕ್ಕುಗಳನ್ನು ನಿವಾರಿಸುತ್ತವೆ.
3. ಗುಣಮಟ್ಟದ ನಿದ್ರೆ: ಸೌಂದರ್ಯಕ್ಕೆ ನಿದ್ರೆ ಅತ್ಯಗತ್ಯ ಎನ್ನುತ್ತಾರೆ ನ್ಮಾಮಿ ಅಗರ್ವಾಲ್. ನೀವು ಒಳ್ಳೆಯ ನಿದ್ದೆಯನ್ನು ಮಾಡುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಗಳನ್ನು ಮಾಯವಾಗುತ್ತವೆ. ಅಲ್ಲದೇ ನಿದ್ರೆಯು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ.
4. ಹಣ್ಣು ಮತ್ತು ತರಕಾರಿ: ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿದ ಸಮತೋಲಿತ ಆಹಾರವು ನಿಮ್ಮ ಚರ್ಮದ ಆರೋಗ್ಯವನ್ನು ಒಳಗಿನಿಂದ ಸುಧಾರಿಸುತ್ತದೆ. ಆರೋಗ್ಯಕರ ಆಹಾರವನ್ನು ತಿನ್ನುವುದರೊಂದಿಗೆ ಸ್ಪಷ್ಟವಾದ ಮೈಬಣ್ಣವು ಪ್ರಾರಂಭವಾಗುತ್ತದೆ ಎಂಬುದಾಗಿ ತಜ್ಞರು ಸಲಹೆ ನೀಡುತ್ತಾರೆ.
5. ಕೇಸರಿಯ ನೀರು: ನ್ಮಾಮಿ ಅಗರ್ವಾಲ್ ಅವರು ಹೊಳೆಯುವ ಮತ್ತು ಕಾಂತಿಯುತ ಚರ್ಮವನ್ನು ಪಡೆಯಲು ಕೇಸರಿಯ ಒಂದು ಎಳೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ಅದನ್ನು ಕುಡಿಯಲು ಸೂಚಿಸುತ್ತಾರೆ. ಕೇಸರಿಯು ಮೈಬಣ್ಣವನ್ನು ಕಾಂತಿಯುಕ್ತವನ್ನಾಗಿಸುತ್ತದೆ.
ಒಟ್ಟಾರೆ ನಿಮ್ಮ ಆಹಾರದಲ್ಲಿ ಹಾಗೂ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಇದನ್ನೂ ಓದಿ: ಗರ್ಭಿಣಿಯರೇ ಎಚ್ಚರ! ನೀವು ಪ್ಯಾರಾಸಿಟಮಲ್ ಮಾತ್ರೆ ತಿಂತೀರಾ? ಹಾಗಿದ್ದರೆ ಅಡ್ಡಪರಿಣಾಮ ಇಲ್ಲಿ ತಿಳಿಯಿರಿ
ಅದರಲ್ಲೂ ಮೇಲೆ ಹೇಳಿರುವ ಎಲ್ಲಾ ಟಿಪ್ಸ್ ಕೂಡ ಸುಲಭದಲ್ಲಿ ಮಾಡಬಹುದಾದಂಥದ್ದು. ಹಾಗಾಗಿ ಹೊಳಪಿನ ತ್ವಚೆ ಬೇಕು ಎನ್ನುವವರು ಇದನ್ನು ಟ್ರೈ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ