Periods Tips: ಹೀಗೆಲ್ಲಾ ಆಗ್ತಿದೆ ಅಂದ್ರೆ ನಾಳೆನೇ ನೀವು ಪಿರಿಯಡ್ಸ್​ ಆಗ್ತೀರ ಎಂದರ್ಥ

Period Signs You Must Know: ಹಲವು ಲಕ್ಷಣಗಳು ಮುಟ್ಟಾಗುವ ಕೆಲ ದಿನಗಳ ಮುಂಚೆಯೇ ಕಂಡುಬಂದರೆ ಕೆಳ ಹೊಟ್ಟೆಯಲ್ಲಿ ಆಗುವ ಸೆಳೆತ ಮುಟ್ಟು ಒಂದೆರಡು ದಿನಗಳಲ್ಲೇ ಆಗುವ ಸೂಚನೆಯನ್ನು ನೀಡುತ್ತದೆ ಎನ್ನಲಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿ ಹೆಣ್ಣು (Women) ತನ್ನ ಜೀವಮಾನದಲ್ಲಿ ಅನುಭವಿಸುವ ಒಂದು ಸಹಜ ಪ್ರಕ್ರಿಯೆಯೇ ಮುಟ್ಟು (Periods) ಅಥವಾ ಋತುಚಕ್ರ. ಇದೊಂದು ಸ್ವಾಭಾವಿಕವಾದ, ಸಹಜವಾದ ಶಾರೀರಿಕ ಪ್ರಕ್ರಿಯೆಯಾಗಿದೆ. ಮುಟ್ಟು ಎಂದರೆ ನಿಜವಾಗಿಯೂ ಏನಾಗುತ್ತದೆ ಎಂಬ ಸಂದೇಹ ಈಗಲೂ ಹಲವರಲ್ಲಿದೆ ಎಂದರೂ ತಪ್ಪಾಗಲಿಕ್ಕಿಲ್ಲ.  ಒಂದು ಹೆಣ್ಣಿಗೆ ಮುಟ್ಟಾಯಿತೆಂದರೆ ಆಗ ಅವಳ ಗರ್ಭಾಶಯದಿಂದ ಅವಳ ಯೋನಿಯ ಮೂಲಕ ರಕ್ತ ಬಿಡುಗಡೆಯಾಗುತ್ತದೆ. ಇದನ್ನೆ ಮುಟ್ಟು, ಋತುಚಕ್ರ ಅಥವಾ ಪಿರಿಯಡ್ಸ್ ಎಂದು ಕರೆಯುತ್ತಾರೆ. ಇದು ಆ ಹೆಣ್ಣು ತನ್ನ ಪ್ರೌಢಾವಸ್ಥೆಯಿಂದ ಮುಂದಿನ ಹಂತಕ್ಕೆ ಹೋಗುತ್ತಿದ್ದಾಳೆ, ಹೊಸ ಜೀವನ ತನ್ನಲ್ಲಿ ರೂಪಗೊಳ್ಳುವಿಕೆಗೆ ಶಾರೀರಿಕವಾಗಿ ಆಕೆ ಸಿದ್ದಳಾಗಿದ್ದಾಳೆ ಎಂಬುದನ್ನು ಸಂಕೇತಿಸುತ್ತದೆ.

ಪಿರಿಯಡ್ಸ್ ಬಗ್ಗೆ ಕಲಿಯಲು ಬಹಳಷ್ಟಿದೆ. ಏಕೆಂದರೆ ಮುಟ್ಟಿನ ಬಗ್ಗೆ ಬಹಳಷ್ಟು ಹುಡುಗಿಯರಿಗೆ ಅವಶ್ಯಕವಾದ ಪ್ರಮಾಣದಷ್ಟು ತಿಳುವಳಿಕೆಯಾಗಲಿ ಅವುಗಳಿಂದುಂಟಾಗುವ ಸಮಸ್ಯೆಗಳ ಬಗ್ಗೆಯಾಗಲಿ ತಿಳಿದಿರುವುದಿಲ್ಲ. ಹಾಗಾಗಿ ಇಂದಿಗೂ ಸಾಕಷ್ಟು ಹೆಣ್ಣು ಮಕ್ಕಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಮುಟ್ಟಿನ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. 

ಹಾಗಾಗಿ ಮುಟ್ಟಿನ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುವುದು ಉತ್ತಮ. ಇದರಿಂದ ಹೆಣ್ಣು ಮಾನಸಿಕವಾಗಿ ಸಜ್ಜಾಗಬಲ್ಲಳು. ಕೆಲವರು ಮುಟ್ಟು ಯಾವಾಗ ಆಗಬಹುದೇನೋ ಎಂಬ ಆತಂಕದಲ್ಲಿರುತ್ತಾರೆ. ಅಂಥವರು ತಮ್ಮ ಶರೀರ ನೀಡುವ ಕೆಲ ಸಂಕೇತಗಳನ್ನು, ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು ನಾಳೆಯೋ ನಾಡಿದ್ದೊ ಮುಟ್ಟಾಗುವ ಬಗ್ಗೆ ತಿಳಿಯಬಹುದೆನ್ನಲಾಗುತ್ತದೆ. ಹಾಗಾಗಿಯೇ ಈ ಲೇಖನದಲ್ಲಿ ಮಹಿಳೆಯರಿಗೆ ಮುಟ್ಟಾಗುವ ಸಮಯ ಅತಿ ಹತ್ತಿರ ಬಂದಾಗ ಅವರ ದೇಹದಲ್ಲಾಗುವ ಕೆಲ ಬದಲಾವಣೆಗಳು ಯಾವುವು ಎಂಬುದರ ಬಗ್ಗೆ ತಿಳಿಸಲಾಗಿದೆ. ಬಹುತೇಕವಾಗಿ ಈ ಸೂಚನೆಗಳು ಹೆಣ್ಣು ಮುಟ್ಟಾಗುವ ಒಂದೆರಡು ದಿನಗಳ ಹಿಂದೆಯೇ ಕಂಡುಬರುತ್ತವೆ ಎನ್ನಲಾಗಿದೆ. 

ಮೊಡವೆ ಉಂಟಾಗುವಿಕೆ : ಸಾಮಾನ್ಯವಾಗಿ ಮೊಡವೆಗಳು ಹೆಣ್ಣಿಗೆ ಪುರುಷರಿಗಿಂತ ಬೇಗ ಉಂಟಾಗುತ್ತದೆ. ಏಕೆಂದರೆ ಇದು ಹಾರ್ಮೋನುಗಳ ಬೆಳವಣಿಗೆಯನ್ನು ಸೂಚಿಸುತ್ತದೆ. ಅದರಂತೆ ಮುಟ್ಟಾಗುವ ಸಂದರ್ಭದಲ್ಲಿ ಹಾರ್ಮೋನುಗಳು ಸಾಕಷ್ಟು ಸಕ್ರಿಯವಾದಾಗ ಚರ್ಮದಲ್ಲಿ ಎಣ್ಣೆಯ ಉತ್ಪತ್ತಿಯು ವೇಗಗೊಳುತ್ತದೆ. ಈ ಎಣ್ಣೆ ಅಂಶವು ಚರ್ಮದ ರಂಧ್ರಗಳಲ್ಲಿ ಸಂಗ್ರಹಗೊಳ್ಳುವ ಮೂಲಕ ಮೊಡವೆಗಳು ಉಂಟಾಗುತ್ತವೆ. ಇದನ್ನು ಸೈಕ್ಲಿಕಲ್ ಆಕ್ನೆ ಅಥವಾ ಚಕ್ರೀಯ ಮೊಡವೆಗಳು ಎಂದು ಕರೆಯುತ್ತಾರೆ. ಮುಟ್ಟಗುವ ಕೆಲ ಸಮಯದ ಮುಂಚೆ ಅಥವಾ ಮುಟ್ಟಾದ ಸಂದರ್ಭದಲ್ಲಿ ಹಲವು ಮಹಿಳೆಯರಲ್ಲಿ ಮೊಡವೆಗಳುಂಟಾಗುತ್ತವೆ. 

ಸ್ತನಗಳು ಮೃದುವಾಗುವಿಕೆ : ಮುಟ್ಟಾಗುವ ಕೆಲ ಸಮಯದ ಮುಂಚೆಯೇ ಹೆಣ್ಣು ತನ್ನ ಸ್ತನಗಳಲ್ಲಿ ಒಂದು ರೀತಿಯ ಅಡಚಣೆಯಾದಂತಹ ಇಲ್ಲವೇ ನೋವಿನ ಅನುಭವ ಪಡೆಯುತ್ತಾಳೆ. ಸ್ತನಗಳು ಮೃದುತ್ವದಿಂದ ಕೂಡಿರುತ್ತವೆ. ಕೆಲವು ಮಹಿಳೆಯರು ಮುಟ್ಟಾಗುವ ಮೊದಲು ಸ್ತನಗಳ ಆಕಾರ ಹಾಗೂ ಗಾತ್ರಗಳಲ್ಲಿ ಬದಲಾವಣೆಯಾಗುವುದನ್ನು ಗಮನಿಸಬಹುದು. ಶರೀರದಲ್ಲಿ ಹಾರ್ಮೋನು ಮಟ್ಟಗಳಲಾಗುವ ಏರುಪೇರುಗಳಿಂದ ಈ ರೀತಿಯ ಬದಲಾವಣೆಗಳಾಗುತ್ತವೆ ಎನ್ನಲಾಗಿದೆ. ಮುಟ್ಟಿನ ಸ್ವಲ್ಪ ಸಮಯದ ಮುಂಚೆಯೇ ಮಹಿಳೆಯರ ಪ್ರೊಜೆಸ್ಟಿರಾನ್ ಹಾಗೂ ಈಸ್ಟ್ರೋಜನ್ ಹಾರ್ಮೋನುಗಳ ಮಟ್ಟ ಏರುವುದರಿಂದ ಸ್ತನಗಳು ಮೃದುತ್ವತೆಯನ್ನು ಪಡೆಯುತ್ತವೆ ಎನ್ನಲಾಗಿದೆ. ನಿಮಗೆ ಮುಟ್ಟಾಗುವುದು ಎಂದು ಸೂಚಿಸುವ ಒಂದು ಸಾಮಾನ್ಯ ಸಂಕೇತ ಇದಾಗಿದೆ. 

ಆಯಾಸ ಆಗುವಿಕೆ : ಮಹಿಳೆಯರಲ್ಲಿ ಮುಟ್ಟಿನ ಸಮಯ ಹತ್ತಿರ ಬಂದಿದೆ ಎಂದು ಸೂಚಿಸುವ ಇನ್ನೊಂದು ಸಂಕೇತವೇ ಇದು. ಈ ಸಂದರ್ಭದಲ್ಲಿ ದೇಹದಲ್ಲಿ ಸಾಕಷ್ಟು ಆಯಾಸದ ಅನುಭವವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಶರೀರದಲ್ಲಿರುವ ಸಿರಾಟಿನಿನ್ ಎಂಬ ಹಾರ್ಮೋನಿನ ಮಟ್ಟದಲ್ಲಿ ಆಗುವ ವ್ಯತ್ಯಾಸ. ನಿಮಗೆ ಸಾಕಷ್ಟು ದಣಿವಾಗಿರುವಂತೆ ಅನಿಸುವುದಲ್ಲದೆ ನಿಮ್ಮಲ್ಲಿ ಶಕ್ತಿಯ ಕೊರತೆಯಾಗಿದೆ ಎಂಬ ಅನುಭೂತಿ ಉಂಟಾಗುತ್ತದೆ. 

ಇದೂ ಸಹ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು ಆತಂಕ ಪಡುವಂತಹ ಯಾವುದೇ ಅಗತ್ಯವಿರುವುದಿಲ್ಲ. ಆದಾಗ್ಯೂ ನಿಮ್ಮ ಬಳಲಿಕೆ ವಿಪರೀತವಾಗಿದ್ದಲ್ಲಿ ಅಥವಾ ತಡೆದುಕೊಳ್ಳಲಾಗದಂತಹ ಸ್ಥಿತಿಗೆ ತಲುಪಿದಲ್ಲಿ ವೈದ್ಯರನ್ನು ಸಂಪರ್ಕಿಸಿ. 

ಹೊಟ್ಟೆ ಉಬ್ಬರದ ಅನುಭವ : ಒಮ್ಮೊಮ್ಮೆ ನಿಮ್ಮ ಹೊಟ್ಟೆ ಭಾರಿ ಊಟ ಸೇವನೆ ಮಾಡಿರುವಂತಹ ಅನುಭವ ನೀಡುತ್ತದೆಯೆ? ಹೊಟ್ಟೆ ಉಬ್ಬರದ ಅನುಭವ ನಿಮಗಾಗುತ್ತದೆಯೆ? ಹಾಗಿದ್ದರೆ ಇದೂ ಸಹ ಒಂದು, ಮುಟ್ಟು ಹತ್ತಿರದಲ್ಲಿದೆ ಎಂಬುದನ್ನು ಸೂಚಿಸುವ ಸಂಕೇತವಾಗಿದೆ. ಪ್ರೊಜೆಸ್ಟಿರಾನ್ ಹಾಗೂ ಈಸ್ಟ್ರೋಜನ್ ಹಾರ್ಮೋನುಗಳ ಪ್ರಮಾಣದಲ್ಲಾಗುವ ವ್ಯತ್ಯಾಸವು ಶರೀರದಲ್ಲಿ ಭಾರಿ ಪ್ರಮಾಣದ ಉಪ್ಪು ಹಾಗೂ ನೀರು ಶೇಖರಣೆಯಾಗುವಂತೆ ಮಾಡುತ್ತದೆ. ಇದರ ಪರಿಣಾಮದಿಂದಾಗಿಯೇ ಹೊಟ್ಟೆ ಉಬ್ಬರದ ಅನುಭವ ಉಂಟಾಗುತ್ತಿರುತ್ತದೆ. ಇದೊಂದು ತಾತ್ಕಾಲಿಕ ಸ್ಥಿತಿಯಾಗಿದ್ದು ಮುಟ್ಟಿನ ಸಮಯ ಕಳೆದ ನಂತರ ಇದು ಹೊರಟು ಹೋಗುತ್ತದೆ. ಹೀಗಾಗಿ ಇದಕ್ಕೂ ಚಿಂತಿಸುವ ಅಗತ್ಯವಿಲ್ಲವೆಂದೇ ಹೇಳಬಹುದು.

ಮನಸ್ಥಿತಿಗಳಲ್ಲಿ ಬದಲಾವಣೆ : ಮುಟ್ಟಾಗುವ ಕೆಲವೆ ಸಮಯದ ಹಿಂದೆ ಶರೀರದಲ್ಲಿರುವ ಸಿರಾಟಿನಿನ್ ಹಾರ್ಮೋನುಗಳ ಪ್ರಮಾಣದಲ್ಲಿ ಕುಂಠಿತವಾಗುವುದರಿಂದ ಮನಸ್ಥಿತಿಯಲ್ಲಾಗುವ ಬದಲಾವಣೆಗಳನ್ನು ಕೆಲ ಮಹಿಳೆಯರು ಅನುಭವಿಸುತ್ತಾರೆ. ಚಿಕ್ಕ-ಪುಟ್ಟ ವಿಷಯಗಳಿಗೆ ಸಿಟ್ಟು ಬರುವುದು, ಸಹನೆ ಇಲ್ಲದಿರುವುದು ಅಥವಾ ಒಮ್ಮೊಮ್ಮೆ ವಿಪರೀತವಾದ ಭಾವನೆಗಳ ಸುಳಿಗಳಲ್ಲಿ ಸಿಗುವುದು ಈ ರೀತಿಯ ಮನಸ್ಥಿತಿಯ ಬದಲಾವಣೆಗಳು ಮಹಿಳೆಯರಲ್ಲಿ ಮುಟ್ಟು ಬರುವ ಮುಂಚೆ ಕಾಣಬಹುದಾಗಿದೆ. ಇದು ತಾತ್ಕಾಲಿಕವಾಗಿರುತ್ತದೆ ಹಾಗೂ ನಂತರ ಸರಿ ಹೋಗುತ್ತದೆ. 

ನಿದ್ರೆ ಬಾರದಿರುವಿಕೆ : ಈಗಾಗಲೇ ಹೇಳಿರುವಂತೆ ಎರಡು ಮುಖ್ಯ ಹಾರ್ಮೋನುಗಳಾದ ಪ್ರೊಜೆಸ್ಟಿರಾನ್ ಹಾಗೂ ಈಸ್ಟ್ರೋಜನ್ ಮಟ್ಟಗಳಲ್ಲಿ ವ್ಯತ್ಯಾಸಗಳಾಗುವುದರಿಂದ ಇದು ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಮುಟ್ಟು ಹತ್ತಿರವಿದ್ದಾಗ ಕೆಲ ಮಹಿಳೆಯರಲ್ಲಿ ಯಾವುದೇ ನೈಜ ಕಾರಣಗಳಿಲ್ಲದೆ ನಿದ್ರೆ ಬರುವುದಕ್ಕೆ ಸಾಕಷ್ಟು ಅಡಚಣೆಯಾಗುತ್ತದೆ. 

ಇದನ್ನೂ ಓದಿ: ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿದ್ರೆ ಪಿರಿಯಡ್ಸ್​ ಹತ್ತಿರ ಬಂದಿದೆ ಎಂದರ್ಥ

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು : ಸಾಮಾನ್ಯವಾಗಿ ಮುಟ್ಟಾಗುವ ಸಂದರ್ಭದಲ್ಲಿ ಹೆಣ್ಣಿನ ಶರೀರದಲ್ಲಿರುವ ಕೆಲವು ಹಾರ್ಮೋನುಗಳ ಮಟ್ಟಗಳಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಶರೀರದ ಜೀರ್ಣಕ್ರಿಯೆ ಎಂಬುದು ಒಂದು ಸೂಕ್ಷ್ಮ ಪ್ರಕ್ರಿಯೆಯಾಗಿರುವುದರಿಂದ ಹಾರ್ಮೋನುಗಳಲ್ಲಾಗುವ ವ್ಯತ್ಯಾಸದ ಪ್ರಭಾವ ಅದರ ಮೇಲೆ ಬೀರುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಕೆಲವು ಮಹಿಳೆಯರು ಮುಟ್ಟು ಉಂಟಾಗುವ ಮುಂಚೆ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಸ್ವಲ್ಪ ಸ್ಮಸ್ಯೆಗಳನ್ನು ಎದುರಿಸುತ್ತಾರೆ. ಡಯಾರಿಯಾ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳು ತಲೆದೋರಬಹುದು.

ತಲೆನೋವು : ಈಗಾಗಲೇ ತಿಳಿಸಿರುವಂತೆ ಮುಟ್ಟಾಗುವ ಸಂದರ್ಭದಲ್ಲಿ ಹೆಣ್ಣು ಶಾರೀರಿಕವಾಗಿ ಅದರಲ್ಲೂ ವಿಶೇಷವಾಗಿ ಶರೀರದೊಳಗೆ ಹಲವು ಬದಲಾವಣೆಗಳನ್ನು ಅನುಭವಿಸುತ್ತಾಳೆ. ಅದಕ್ಕೆ ತಕ್ಕಂತೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಲಕ್ಷಣಗಳು ಕಾಣುತ್ತವೆ. ಅದರಂತೆ ಕೆಲ ಮಹಿಳೆಯರಲ್ಲಿ ಮುಟ್ಟಾಗುವಿಕೆ ಹತಿರದಲ್ಲಿದ್ದಾಗ ತಲೆನೋವು ಉಂಟಾಗುತ್ತಿರುತ್ತದೆ. ಇದೂ ಸಹ ಹಾರ್ಮೋನುಗಳ ವ್ಯತ್ಯಾಸದಿಂದಲೇ ಬರುವ ಸಮಸ್ಯೆ. 

ವಿವಿಧ ಭಕ್ಷ್ಯಗಳ ತಿನ್ನುವ ಬಯಕೆ : ಕೆಲ ಮಹಿಳೆಯರಲ್ಲಿ ಮುಟ್ಟಾಗುವಿಕೆ ಹತ್ತಿರವಾದಂತೆ ಅವರಲ್ಲಿ ವೈವಿಧ್ಯಮಯವಾದ ತಿನ್ನುವ ಕಡುಬಯಕೆ ಉಂಟಾಗುತ್ತದೆ. ಕೆಲವರಿಗೆ ಅತಿಯಾದ ಸಿಹಿ ತಿನ್ನಬೇಕೆನಿಸಿದರೆ ಕೆಲವರಿಗೆ ಖಾರವಾದ ತಿಂಡಿಗಳನ್ನು ಆಸ್ವಾದಿಸುವ ಬಯಕೆ ಉಂಟಾಗುತ್ತದೆ. 

ಲೈಂಗಿಕ ಆಸಕ್ತಿ : ಸಾಮಾನ್ಯವಾಗಿ ಲೈಂಗಿಕ ಆಸಕ್ತಿಗೆ ಹಾರ್ಮೋನುಗಳೇ ಪ್ರಮುಖ ಕಾರಣ. ಅದರಲ್ಲೂ ಮುಟ್ಟಾಗುವ ಸಂದರ್ಭದಲ್ಲಿ ಹಾರ್ಮೋನುಗಳಲ್ಲಿ ಬದಲಾವಣೆಗಳಾಗುವುದರಿಂದ ಹಲವು ಮಹಿಳೆಯರಿಗೆ ಮುಟ್ಟು ಸನಿಹಕ್ಕೆ ಬಂದಂತೆ ಲೈಂಗಿಕ ಕ್ರಿಯೆಯ ಆಸಕ್ತಿ ಹೆಚಾಗತೊಡಗುತ್ತದೆ. 

ಹೊಟ್ಟೆಯ ಕೆಳ ಭಾಗದಲ್ಲಿ ಸೆಳೆತ : ಮೇಲೆ ಹೇಳಿದ ಹಲವು ಲಕ್ಷಣಗಳು ಮುಟ್ಟಾಗುವ ಕೆಲ ದಿನಗಳ ಮುಂಚೆಯೇ ಕಂಡುಬಂದರೆ ಕೆಳ ಹೊಟ್ಟೆಯಲ್ಲಿ ಆಗುವ ಸೆಳೆತ ಮುಟ್ಟು ಒಂದೆರಡು ದಿನಗಳಲ್ಲೇ ಆಗುವ ಸೂಚನೆಯನ್ನು ನೀಡುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ: ಡಯಾಬಿಟಿಸ್​ ಇರುವವರು ವೈನ್ ಕುಡಿಯೋ ಮುಂಚೆ ಈ ಸ್ಟೋರಿ ಓದಿ

ಮಂದತೆ : ನೀವು ಸಾಮಾನ್ಯವಾಗಿ ಸಕ್ರಿಯರಾಗಿರುತ್ತೀರಿ ಹಾಗೂ ಚಟುವಟಿಕೆಯುಕ್ತರಾಗಿರುತ್ತೀರಿ. ಆದರೆ ಮುಟ್ಟಾಗುವ ಸಮಯ ಬರುತ್ತಿದ್ದಂತೆಯೆ ನಿಮ್ಮಲ್ಲಿ ಮಂದತ್ವ ಕಾಣಿಸಬಹುದು. ಸಂಶೋಧಕರ ಪ್ರಕಾರ, ಇದೂ ಸಹ ಮುಟ್ಟು ಹತ್ತಿರದಲ್ಲಿರುವುದನ್ನು ಸೂಚಿಸುವ ಒಂದು ಸಂಕೇತವಾಗಿದ್ದು ಇದಕ್ಕೆ ಮುಖ್ಯ ಕಾರಣ ನೀವು ಅನುಭವಿಸುತ್ತಿರಬಹುದಾದ ಆಯಾಸ ಅಥವಾ ನಿದ್ರೆಯ ಕೊರತೆಯಾಗಿರಬಹುದು. 
Published by:Sandhya M
First published: