ಮನುಷ್ಯನ ರಕ್ತದಲ್ಲೂ Plastic! ಪ್ಲಾಸ್ಟಿಕ್ಕೇ ಊಟ-ಉಸಿರಾಟ ಆಗಿರೋದೇ ಕಾರಣ!

ಈ ಸಂಶೋಧನೆಯು ಪರೀಕ್ಷಿಸಿದ 10 ಜನರಲ್ಲಿ ಸುಮಾರು ಎಂಟು ಜನರ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳನ್ನು ಹೊಂದಿದೆ ಎಂದು ಕಂಡು ಹಿಡಿದಿದೆ.

ಪ್ಲಾಸ್ಟಿಕ್ / Plastic

ಪ್ಲಾಸ್ಟಿಕ್ / Plastic

  • Share this:
ಈಗಂತೂ ಈ ಪ್ಲಾಸ್ಟಿಕ್ (Plastic) ಎನ್ನುವುದು ಪ್ರಾಣಿಗಳಿಗೆ ಮತ್ತು ನಮ್ಮ ಪರಿಸರಕ್ಕೆ (Environment) ಎಷ್ಟು ಮಾರಕ ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದರೂ ಸಹ ಇದನ್ನು ಜನರು ಬಳಸದೆ ಇರುತ್ತಿಲ್ಲ. ಈಗ ಈ ಪ್ಲಾಸ್ಟಿಕ್ ಮನುಷ್ಯರ ರಕ್ತದಲ್ಲಿ (Human Blood) ಸಹ ಕಂಡು ಬಂದಿದೆ ಎಂದರೆ ನಿಮಗೆ ಸ್ವಲ್ಪ ಶಾಕ್ ಆಗಬಹುದು. ಹೌದು.. ಮಾನವನ ರಕ್ತದಲ್ಲಿ ಪ್ಲಾಸ್ಟಿಕ್ (Microplastics) ಇರುವಿಕೆಯನ್ನು ಹುಡುಕುವ ವಿಶ್ವದ ಮೊದಲ ಅಧ್ಯಯನವು ನಡೆದಿದ್ದು ಪರೀಕ್ಷಿಸಿದವರಲ್ಲಿ ಶೇಕಡಾ 77 ರಷ್ಟು ಜನರಲ್ಲಿ ಈ ಕಣಗಳು ಪತ್ತೆಯಾಗಿರುವ ಸಂಗತಿಯನ್ನು ಹೊಸ ಸಂಶೋಧನೆಯು ಕಂಡುಕೊಂಡಿದೆ. ಈಮೂಲಕ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಪಿಇಟಿ ಪ್ಲಾಸ್ಟಿಕ್, ಸಾಮಾನ್ಯವಾಗಿ ಪಾನೀಯ ಬಾಟಲಿಗಳು, ಆಹಾರದ ಪ್ಯಾಕೇಜಿಂಗ್ ಮತ್ತು ಬಟ್ಟೆಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ, ಇದು ಮಾನವನ ರಕ್ತದಲ್ಲಿ ಪ್ಲಾಸ್ಟಿಕ್ ನ ಅತ್ಯಂತ ಪ್ರಚಲಿತ ರೂಪವಾಗಿದೆ ಎಂದು ಹೇಳಲಾಗುತ್ತಿದೆ.

ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು
ಪ್ಲಾಸ್ಟಿಕ್ ಕಣಗಳು ಗಾಳಿಯಿಂದ ಮತ್ತು ಆಹಾರ ಮತ್ತು ಪಾನೀಯದ ಮೂಲಕ ದೇಹವನ್ನು ಪ್ರವೇಶಿಸಬಹುದು ಎಂದು ಲೇಖಕರು ಹೇಳಿದರು. ನೆದರ್‌ರ್ಲ್ಯಾಂಡ್ಸ್ ವ್ರಿಜೆ ಯೂನಿವರ್ಸಿಟಿ ಆಮ್ಸ್ಟರ್ಡ್ಯಾಮ್ ನ ಪರಿಸರ ವಿಷಶಾಸ್ತ್ರ ಮತ್ತು ನೀರಿನ ಗುಣಮಟ್ಟ ಮತ್ತು ಆರೋಗ್ಯದ ಪ್ರೊಫೆಸರ್ ಡಿಕ್ ವೆಥಾಕ್ ಅವರು ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ "ಈ ಸಂಶೋಧನೆಗಳು ಖಂಡಿತವಾಗಿಯೂ ಆತಂಕಕಾರಿಯಾಗಿವೆ, ಏಕೆಂದರೆ ಜನರ ರಕ್ತದಲ್ಲಿ ಕಂಡು ಬರುವಷ್ಟು ಪ್ಲಾಸ್ಟಿಕ್ ಅನ್ನು ಸೇವಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ" ಎಂದು ಹೇಳಿದರು. "ಅಂತಹ ಕಣಗಳು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು" ಎಂದು ಅವರು ಹೇಳಿದರು.

ಎಷ್ಟು ಜನರ ಮೇಲೆ ಸಂಶೋಧನೆ?
ಸಂಶೋಧನಾ ತಂಡವು ಐದು ರೀತಿಯ ಪ್ಲಾಸ್ಟಿಕ್ ಗಾಗಿ 22 ಜನರ ರಕ್ತವನ್ನು ಪರೀಕ್ಷಿಸಿತು. ಅವುಗಳೆಂದರೆ ಪಾಲಿಮಿಥೈಲ್ ಮೆಥಾಕ್ರೈಲೇಟ್ (ಪಿಎಂಎಂಎ), ಪಾಲಿಪ್ರೊಪಿಲೀನ್ (ಪಿಪಿ), ಪಾಲಿಸ್ಟೈರೀನ್ (ಪಿಎಸ್), ಪಾಲಿಎಥಿಲೀನ್ (ಪಿಇ), ಮತ್ತು ಪಾಲಿಥಿಲೀನ್ ಟೆರೆಫ್ಥಾಲೇಟ್ (ಪಿಇಟಿ) ಆಗಿವೆ.

22 ರಕ್ತದಾನಿಗಳಲ್ಲಿ ಸುಮಾರು 17 ಜನರು ತಮ್ಮ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳ ಪರಿಮಾಣಾರ್ಹ ದ್ರವ್ಯರಾಶಿಯನ್ನು ಹೊಂದಿದ್ದರು ಎಂದು ಫಲಿತಾಂಶಗಳು ಕಂಡು ಕೊಂಡಿವೆ.

ಪ್ಲಾಸ್ಟಿಕ್ ಕ್ಯಾರಿಯರ್ ಬ್ಯಾಗ್ ಉತ್ಪಾದನೆಗೆ ಬಳಕೆ
ಪಿಇಟಿಯ ನಂತರ, ವಿವಿಧ ರೀತಿಯ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುವ ಪಾಲಿಸ್ಟೈರೀನ್, ಪರೀಕ್ಷಿಸಲಾದ ರಕ್ತದ ಮಾದರಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪ್ಲಾಸ್ಟಿಕ್ ಆಗಿತ್ತು. ರಕ್ತದಲ್ಲಿ ಅತ್ಯಂತ ವ್ಯಾಪಕವಾಗಿ ಕಂಡು ಬರುವ ಮೂರನೇ ಪ್ಲಾಸ್ಟಿಕ್ ಪಾಲಿಥಿಲೀನ್ ಆಗಿದ್ದು, ಪ್ಲಾಸ್ಟಿಕ್ ಕ್ಯಾರಿಯರ್ ಬ್ಯಾಗ್ ಗಳ ಉತ್ಪಾದನೆಯಲ್ಲಿ ನಿಯಮಿತವಾಗಿ ಬಳಸಲಾಗುವ ಒಂದು ವಸ್ತುವಾಗಿದೆ.

ಒಂದೇ ರಕ್ತದ ಮಾದರಿಯಲ್ಲಿ ಮೂರು ವಿಭಿನ್ನ ರೀತಿಯ ಪ್ಲಾಸ್ಟಿಕ್ ಅನ್ನು ಕಂಡು ಕೊಳ್ಳಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಪರೀಕ್ಷೆಗೊಳಗಾದವರ ರಕ್ತದಲ್ಲಿ ಶೇಕಡಾ 50 ರಷ್ಟು ಪಿಇಟಿ ಕಂಡು ಬಂದರೆ, ಪಾಲಿಸ್ಟೈರೀನ್ ಶೇಕಡಾ 36 ರಷ್ಟು ಕಂಡು ಬಂದಿದೆ.

10 ಜನರಲ್ಲಿ 8 ಜನರ ರಕ್ತದಲ್ಲಿ ಪತ್ತೆ
ಪ್ರೊಫೆಸರ್ ವೆಥಾಕ್ ಅವರು "ಈ ಸಂಶೋಧನೆಯು ಪರೀಕ್ಷಿಸಿದ 10 ಜನರಲ್ಲಿ ಸುಮಾರು ಎಂಟು ಜನರ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳನ್ನು ಹೊಂದಿದೆ ಎಂದು ಕಂಡು ಹಿಡಿದಿದೆ. ಆದರೆ ಪ್ಲಾಸ್ಟಿಕ್ ಕಣಗಳ ಉಪಸ್ಥಿತಿಯ ಸುರಕ್ಷಿತ ಅಥವಾ ಅಸುರಕ್ಷಿತ ಮಟ್ಟ ಯಾವುದು ಎಂದು ಅದು ನಮಗೆ ಹೇಳುವುದಿಲ್ಲ.

ವೆಥಾಕ್ ಅವರು ತಮ್ಮ ಸಂಶೋಧನಾ ಯೋಜನೆಗಳ ಪರಿಣಾಮವಾಗಿ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಿದರು. "ಹೌದು, ನನ್ನ ಕುಟುಂಬವು ಸಾಧ್ಯವಾದಷ್ಟು ಈ ಪ್ಲಾಸ್ಟಿಕ್ ಗಳ ಬಳಕೆಯನ್ನು ತಪ್ಪಿಸಲು ಪ್ರಯತ್ನಿಸುತ್ತದೆ, ವಿಶೇಷವಾಗಿ ಆಹಾರವನ್ನು ಮತ್ತು ಈ ಪಾನೀಯಗಳನ್ನು ಹಾಕಿ ಕೊಡುವ ಪ್ಲಾಸ್ಟಿಕ್ ಗಳು” ಎಂದು ಹೇಳಬಹುದು.

ಇದನ್ನೂ ಓದಿ: Aadhaar card Ration card Link: ಬೇಗನೆ ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿ, ಹೇಗೆ ಮಾಡುವುದು ಎಂದು ಇಲ್ಲಿ ತಿಳಿಯಿರಿ

"ಪ್ಲಾಸ್ಟಿಕ್ ಕಣಗಳಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಲು ನೀವು ಮಾಡಬಹುದಾದ ಹಲವಾರು ವಿಷಯಗಳಿವೆ." ಈ ಅಧ್ಯಯನವನ್ನು ಕಾಮನ್ ಸೀಸ್ ಎಂಬ ಸಂಸ್ಥೆಯಿಂದ ನಡೆಸಲಾಗಿದ್ದು ಈ ಮೂಲಕ ಆ ಸಂಸ್ಥೆಯು ವಿಶ್ವದ ಸಾಗರಗಳಲ್ಲಿ ಅಗಾಧ ಪ್ರಮಾಣದ ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಕೊನೆಗೊಳಿಸಲು ಕರೆ ನೀಡಿತು.

ಪ್ಲಾಸ್ಟಿಕ್ ಊಟ ಉಸಿರಾಟ!
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಜೋ ರಾಯ್ಲ್ ಅವರು "ಈ ಸಂಶೋಧನೆಯು ಅತ್ಯಂತ ಕಳವಳಕಾರಿಯಾಗಿದೆ, ನಾವು ಈಗಾಗಲೇ ಪ್ಲಾಸ್ಟಿಕ್ ತಿನ್ನುತ್ತಿದ್ದೇವೆ, ಕುಡಿಯುತ್ತಿದ್ದೇವೆ ಮತ್ತು ಉಸಿರಾಡುತ್ತಿದ್ದೇವೆ. ಇನ್ನೂ, ಪ್ಲಾಸ್ಟಿಕ್ ಉತ್ಪಾದನೆಯು 2040 ರ ವೇಳೆಗೆ ದ್ವಿಗುಣಗೊಳ್ಳಲಿದೆ” ಎಂದು ಹೇಳಿದರು.

ಇದನ್ನೂ ಓದಿ: QR Code Scan ಮಾಡುವಾಗ ಹುಷಾರ್! ನಿಮ್ಮ ಹಣಕ್ಕೆ ಕನ್ನ ಬೀಳದಿರಲು ಹೀಗೆ ಮಾಡಿ

"ಈ ಎಲ್ಲಾ ಪ್ಲಾಸ್ಟಿಕ್ ಗಳು ನಮ್ಮ ದೇಹದಲ್ಲಿ ಏನು ಮಾಡುತ್ತಿವೆ ಎಂದು ತಿಳಿಯುವ ಹಕ್ಕನ್ನು ನಾವು ಹೊಂದಿದ್ದೇವೆ, ಅದಕ್ಕಾಗಿಯೇ ನಾವು ರಾಷ್ಟ್ರೀಯ ಪ್ಲಾಸ್ಟಿಕ್ ಹೆಲ್ತ್ ಇಂಪ್ಯಾಕ್ಟ್ ರಿಸರ್ಚ್ ಫಂಡ್ ಮೂಲಕ ಪ್ಲಾಸ್ಟಿಕ್ ನಿಂದಾಗುವ ಆರೋಗ್ಯದ ಪರಿಣಾಮಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಸ್ಪಷ್ಟಪಡಿಸಲು ತುರ್ತಾಗಿ ಹೆಚ್ಚಿನ ಸಂಶೋಧನೆಗೆ ಧನ ಸಹಾಯ ನೀಡುವಂತೆ ವಿಶ್ವದಾದ್ಯಂತದ ವ್ಯಾಪಾರ, ಸರ್ಕಾರ ಮತ್ತು ಲೋಕೋಪಕಾರಿಗಳನ್ನು ಕೇಳುತ್ತಿದ್ದೇವೆ” ಎಂದು ಹೇಳಿದರು. ಈ ಸಂಶೋಧನೆಯು ‘ಎನ್ವಿರಾನ್ಮೆಂಟ್ ಇಂಟರ್ನ್ಯಾಷನಲ್ ಜರ್ನಲ್’ ನಲ್ಲಿ ಪ್ರಕಟವಾಗಿದೆ.
Published by:guruganesh bhat
First published: