Indian Tourism: ಮಳೆಗಾಲದಲ್ಲಿ ಟೂರ್ ಹೋಗಲು ಪ್ಲ್ಯಾನ್ ಮಾಡ್ತಾ ಇದ್ರೆ ಈ ಪ್ರವಾಸಿ ತಾಣಗಳಿಗೆ ಹೋಗಿ ಬನ್ನಿ

ನಮ್ಮ ದೇಶದಲ್ಲಿ ಕೆಲವು ಮಳೆಗಾಲದಲ್ಲಿ ನೋಡಲೇಬೇಕಾದಂತಹ ಅಪರೂಪದ ಪ್ರವಾಸಿ ತಾಣಗಳಿವೆ. ಮಳೆಗಾಲದಲ್ಲಿ ವಿಶೇಷ ಅನುಭವಗಳನ್ನು ನೀಡುವ ಆ ತಾಣಗಳು ನಿಮಗೆ ವಿಸ್ಮಯ ಉಂಟು ಮಾಡುವುದು ಖಂಡಿತಾ. ನೀವು ಮಳೆಗಾಲದಲ್ಲೂ ಪ್ರವಾಸ ಹೋಗಲು ಬಯಸುವುದಾದರೆ ಮತ್ತು ಅಂತಹ ಪ್ರವಾಸಿ ಸ್ಥಳಗಳನ್ನು ನೋಡುವ ಆಸೆ ನಿಮಗಿದ್ದರೆ, ಅಂತಹ ಕೆಲವು ತಾಣಗಳ ಕುರಿತ ಮಾಹಿತಿಯನ್ನು ಇಲ್ಲಿ ನಿಮಗಾಗಿ ನೀಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲದಲ್ಲಿ (Monsoon) ನಮ್ಮ ಸುತ್ತಲಿನ ಪ್ರಕೃತಿಯ (Nature) ಸೌಂದರ್ಯ ದುಪ್ಪಟ್ಟಾಗುತ್ತದೆ ಎಂಬುವುದು ನಾವು ನೀವೆಲ್ಲರೂ ಒಪ್ಪುವಂತ ಮಾತು. ತುಂಬಿ ಹರಿಯುವ ನದಿಗಳು (River), ಹೊಳೆಗಳು, ಹಚ್ಚ ಹಸಿರಿನ ಪರಿಸರ ಜನರ ಕಣ್ಣಿಗೆ ತಂಪು ನೀಡುತ್ತವೆ ಅಲ್ಲವೇ? ಮಳೆಗಾಲದಲ್ಲಿ ಪ್ರಕೃತಿಯ ಚೆಲುವನ್ನು ಮೆಚ್ಚದವರು ತುಂಬಾ ವಿರಳ. ಬಹಳಷ್ಟು ಮಂದಿ ಮಳೆಗಾಲದಲ್ಲಿ ಪ್ರವಾಸ (Tour) ಹೋಗುವುದನ್ನು ಇಷ್ಟಪಡುವುದಿಲ್ಲ. ಆದರೆ ನಿಮಗೆ ಗೊತ್ತೆ? ನಮ್ಮ ದೇಶದಲ್ಲಿ ಕೆಲವು ಮಳೆಗಾಲದಲ್ಲಿ ನೋಡಲೇಬೇಕಾದಂತಹ ಅಪರೂಪದ ಪ್ರವಾಸಿ ತಾಣಗಳಿವೆ (Tourist Spots). ಮಳೆಗಾಲದಲ್ಲಿ ವಿಶೇಷ ಅನುಭವಗಳನ್ನು ನೀಡುವ ಆ ತಾಣಗಳು ನಿಮಗೆ ವಿಸ್ಮಯ ಉಂಟು ಮಾಡುವುದು ಖಂಡಿತಾ. ನೀವು ಮಳೆಗಾಲದಲ್ಲೂ ಪ್ರವಾಸ ಹೋಗಲು ಬಯಸುವುದಾದರೆ ಮತ್ತು ಅಂತಹ ಪ್ರವಾಸಿ ಸ್ಥಳಗಳನ್ನು ನೋಡುವ ಆಸೆ ನಿಮಗಿದ್ದರೆ, ಅಂತಹ ಕೆಲವು ತಾಣಗಳ ಕುರಿತ ಮಾಹಿತಿಯನ್ನು ಇಲ್ಲಿ ನಿಮಗಾಗಿ ನೀಡಲಾಗಿದೆ.

1. ಸಿಯಾಂಗ್ ರಿವರ್ ಫೆಸ್ಟಿವಲ್ , ಅರುಣಾಚಲ ಪ್ರದೇಶ
ಬ್ರಹ್ಮಪುತ್ರಾದ ಭಾಗವಾಗಿರುವ ಅರುಣಾಚಲ ಪ್ರದೇಶದ ಸಿಯಾಂಗ್ ನದಿಯಲ್ಲಿ, ರಿವರ್ ರಾಫ್ಟಿಂಗ್ ನಂತಹ ಸಾಹಸಮಯ ವಾಟರ್ ಸ್ಪೋರ್ಟ್ಸ್ ಗಳನ್ನು ಆಡಲು ಮತ್ತು ಟ್ರೆಕ್ಕಿಂಗ್ ಇತ್ಯಾದಿಗಳನ್ನು ಮಾಡಲು ಅವಕಾಶವಿದೆ. ಸಿಯಾಂಗ್ ರಿವರ್ ಫೆಸ್ಟಿವಲ್ ಅನ್ನು , ಯೊಮ್ಗೋ ರಿವರ್ ಫೆಸ್ಟಿವಲ್ ಎಂದು ಕೂಡ ಕರೆಯುತ್ತಾರೆ. ಹೆಸರಿಗೆ ತಕ್ಕಂತೆ ಈ ಉತ್ಸವವನ್ನು ಸಿಯಾಂಗ್ ನದಿಯ ಬಳಿ ಆಚರಿಸಲಾಗುತ್ತದೆ.

ಅರುಣಾಚಲ ಪ್ರದೇಶದ ಪರಿಸರ ಪ್ರವಾಸೋದ್ಯಮ ಮತ್ತು ರಾಜ್ಯದ ಸಂಸ್ಕೃತಿ, ಸಂಪ್ರದಾಯ, ಕರಕುಶಲತೆ ಇತ್ಯಾದಿಗಳಿಗೆ ಪ್ರಚಾರ ಒದಗಿಸುವುದೇ ಈ ಉತ್ಸವದ ಆಚರಣೆಯ ಮುಖ್ಯ ಗುರಿಯಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ, ನೀವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದು, ಆಹಾರ ಉತ್ಸವದಲ್ಲಿ ಸ್ಥಳೀಯ ಖಾದ್ಯಗಳನ್ನು ಸವಿಯಬಹುದು, ವಿಭಿನ್ನ ಬಗೆಯ ಜಲ ಕ್ರೀಡೆ ಮತ್ತು ಆಟಗಳಲ್ಲಿ ಭಾಗವಹಿಸಬಹುದು. ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿರುವ ಆಲೋದಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತದೆ.

2. ಮಹಾರಾಷ್ಟ್ರ ಪುರುಷ್‍ವಾಡಿಯ ಮಿಂಚು ಹುಳಗಳ ಉತ್ಸವ
ಮುಂಬೈ ಅಥವಾ ಪುಣೆಯಿಂದ ವಾರಾಂತ್ಯ ವಿಹಾರಕ್ಕೆ ಹೋಗಲು ಸೂಕ್ತವಾದ ಜಾಗವಿದು. ಪುರುಷ್‍ವಾಡಿ ಮಹಾರಾಷ್ಟ್ರದ ಒಂದು ಸಣ್ಣ ಗ್ರಾಮವಾಗಿದ್ದು, ಮಳೆಗಾಲದ ಋತುವಿನಲ್ಲಿ ಪ್ರವಾಸಿಗರಿಗೆ ವಿಶೇಷವಾದ ಮತ್ತು ಅಷ್ಟೇ ವಿಭಿನ್ನವಾದ ಅನುಭವವನ್ನು ನೀಡುತ್ತದೆ.
ಪ್ರತೀ ವರ್ಷ ಈ ಗ್ರಾಮದಲ್ಲಿ, ಮಳೆಗಾಲ ಆರಂಭವಾಗುವ ಅವಧಿಯಲ್ಲಿ, ಅಂದರೆ ಮೇ ಅಥವಾ ಜೂನ್ ತಿಂಗಳುಗಳಲ್ಲಿ ಮಿಂಚು ಹುಳಗಳ ಉತ್ಸವವನ್ನು ಆಯೋಜಿಸಲಾಗುತ್ತದೆ.

ಇದು ಮಿಂಚು ಹುಳಗಳ ಸಮಾಗಮ ನಡೆಯುವ ಅವಧಿಯಾಗಿದೆ. ಹಾಗಾಗಿ ಆ ಅವಧಿಯಲ್ಲಿ ಇಲ್ಲಿ ಪ್ರವಾಸಿಗರು, 2000 ಕ್ಕೂ ಹೆಚ್ಚು ಜಾತಿಯ ಮಿಂಚು ಹುಳಗಳು ಸೃಷ್ಟಿಸುವ ಅದ್ಭುತವನ್ನು ವೀಕ್ಷಿಸಬಹುದು. ಮಿಂಚು ಹುಳಗಳ ಗುಂಪುಗಳು ತಮ್ಮ ಬೆಚ್ಚಗಿನ ದೀಪಗಳಿಂದ ಇಡೀ ಗ್ರಾಮವನ್ನು ಬೆಳಗಿಸುವ ದೃಶ್ಯವನ್ನು ಕಾಣುವುದು ನಿಜಕ್ಕೂ ಒಂದು ಅಲೌಕಿಕ ಅನುಭವ ಎನ್ನಬಹುದು.

3. ಮಧ್ಯ ಪ್ರದೇಶದ ಮಾಂಡುವಿನ ನೀರಿನ ಸ್ಥಳಗಳು
ಮಧ್ಯ ಪ್ರದೇಶದಲ್ಲಿರುವ ಮಾಂಡು, 15 ನೇ ಶತಮಾನದ ಇತಿಹಾಸವನ್ನು ಹೊಂದಿದೆ. ಆ ಪ್ರದೇಶದಲ್ಲಿ ಐತಿಹಾಸಿಕ ಸಾಮ್ರಾಜ್ಯದ ಅವಶೇಷಗಳು 20 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹರಡಿವೆ. ನೀವು ಮಾಂಡುವಲ್ಲಿ ಕಾಣುವ ಪ್ರತಿಯೊಂದು ಐತಿಹಾಸಿಕ ಕಟ್ಟಡಗಳು, ಅಫ್ಘಾನ್ ವಾಸ್ತು ಶಿಲ್ಪದಲ್ಲಿ ನಿರ್ಮಿಸಲಾಗಿದ್ದು, ಪ್ರವಾಸಿಗರು ಜಹಾಜ್ ಮಹಲ್, ಅಶ್ರಫಿ ಮಹಲ್, ಜಮಿಯಾ ಮಸೀದಿ, ರೇವಾ ಕುಂಡ್, ರಾಣಿ ರೂಪ್‍ಮತಿ ಮಂಟಪ, ಹಿಂದೋಲಾ ಮಹಲ್ ಮತ್ತು ಬಾಜ್ ಬಹಾದ್ದೂರ್ ಅರಮನೆಯ ವಾಸ್ತು ಶಿಲ್ಪದ ಸೌಂದರ್ಯವನ್ನು ಕಂಡು ಆನಂದಿಸಬಹುದು.

ಇದನ್ನೂ ಓದಿ: The Hemp Cafe: ಸೆಣಬಿನಿಂದ ತಯಾರಾದ ಆರೋಗ್ಯಕರ ಖಾದ್ಯಗಳನ್ನು ನೀವೂ ಸವಿಯಬೇಕಾ? ಹಾಗಿದ್ರೆ ಈ ಕೆಫೆಗೆ ಭೇಟಿ ಕೊಡಿ

ಈ ವಿನ್ಯಾಸಗಳು, ಅತ್ಯಂತ ವಿಶಿಷ್ಟವಾಗಿವೆ. ಏಕೆಂದರೆ, ನೀರು ಅವುಗಳ ವಿನ್ಯಾಸದ ಅವಿಭಾಜ್ಯ ಅಂಗವಾಗಿ ಇರುವ ರೀತಿಯಲ್ಲಿ ಅವುಗಳನ್ನು ನಿರ್ಮಿಸಲಾಗಿದೆ. ಮತ್ತು ಆ ಎಲ್ಲಾ ಸ್ಥಳಗಳು ಸಣ್ಣ ಕಾಡುಗಳು, ಹೊಲಗಳು ಮತ್ತು ಸರೋವರಗಳಿಂದ ಸುತ್ತುವರೆದಿವೆ. ಮಾಂಡುವಿನ ಕೊಳಗಳು ಮತ್ತು ಕಾಲುವೆಗಳು ಮಳೆಗಾಲದಲ್ಲಿ ತುಂಬಿಕೊಂಡಿರುತ್ತವೆ, ಜೊತೆಗೆ ಹಚ್ಚಹಸಿರು ಕೂಡ ಇರುವುದರಿಂದ, ಮಳೆಗಾಲದಲ್ಲಿ ಮಾಂಡುವಿನಲ್ಲಿರುವ ಐತಿಹಾಸಿಕ ಕಟ್ಟಡಗಳನ್ನು ನೋಡುವುದೇ ಕಣ್ಣಿಗೆ ಸೊಬಗು.

4. ಮುಂಬೈನ ಕ್ವೀನ್ಸ್ ನೆಕ್ಲೆಸ್‍ನಲ್ಲಿರುವ ಮಳೆಗಾಲದ ಸೂರ್ಯಾಸ್ತ
ನೀವು ಯಾವತ್ತಾದರೂ, ಮುಂಬೈ ನಗರಿಗೆ ಹೋದರೆ, ಅದರಲ್ಲೂ ಮಳೆಗಾಲದಲ್ಲಿ ಹೋದರೆ, ಕ್ವೀನ್ಸ್ ನೆಕ್ಲೆಸ್‍ಗೆ ಭೇಟಿ ನೀಡುವುದನ್ನು ಮಾತ್ರ ಮರೆಯದಿರಿ. ಇಲ್ಲಿನ ಸೂಯಾಸ್ತದ ನೋಟ ಅತ್ಯದ್ಭುತವಾಗಿರುತ್ತದೆ, ಇಲ್ಲಿನ ಮಿನುಗುವ ರಾತ್ರಿಯ ನೋಟ ಕೂಡ ಕಣ್ಣಿಗೆ ಹಬ್ಬ ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆ. ಮರೀನ್ ಡ್ರೈವ್ ಅನ್ನು ಕ್ವೀನ್ಸ್ ನೆಕ್ಲೆಸ್ ಎಂದು ಕರೆಯಲು ಕಾರಣ, ನಾವು ಈ ಜಾಗವನ್ನು ರಾತ್ರಿಯ ವೇಳೆ ಎಲ್ಲಿಯಾದರೂ ಎತ್ತರದ ಬಿಂದುವಿನಿಂದ ನೋಡಿದರೆ, ಅದರ ಆಕಾರ ಮತ್ತು ಅಲ್ಲಿನ ಜಗಮಗಿಸುವ ಬೀದಿ ದೀಪಗಳು ರಾಣಿಯ ಹಾರದಲ್ಲಿನ ಮುತ್ತು ರತ್ನಗಳಂತೆ ಕಾಣುತ್ತವೆ.

ಈ ಕ್ವೀನ್ಸ್ ನೆಕ್ಲೆಸ್‍ನ ಕೊನೆಯಲ್ಲಿ ಯೂ ಬಾರ್ ಎಂಬ ಸ್ಥಳವಿದ್ದು, ಅದು ಅರೇಬಿಯನ್ ಸಮುದ್ರ ಮತ್ತು ಮರೈನ್ ಡ್ರೈವ್‍ನ ಅತ್ಯುತ್ತಮ ನೀಳ ನೋಟವನ್ನು ನೀಡುತ್ತದೆ. ಹಾಗಾಗಿ, ಮಳೆಗಾಲದಲ್ಲಿ ಸೂರ್ಯಾಸ್ತವನ್ನು ನೋಡಿ ಆನಂದಿಸಲು ಅದು ಅತ್ಯಂತ ಸೂಕ್ತ ಜಾಗವಾಗಿದೆ.

5. ಮೇಘಾಲಯದ ಚಿರಾಪುಂಜಿಯ ಮಂಜಿನಿಂದ ಆವೃತ ಗ್ರಾಮಗಳು
ಚಿರಾಪುಂಜಿಯನ್ನು ಸೊಹ್ರಾ ಎಂದು ಕೂಡ ಕರೆಯುತ್ತಾರೆ. ಈ ತಾಣ ನಮ್ಮ ದೇಶದ ಈಶಾನ್ಯ ರಾಜ್ಯವಾದ ಮೇಘಾಲಯದ ಹೃದಯ ಭಾಗದಲ್ಲಿ ಇದೆ. ಖಾಸಿ ಬೆಟ್ಟಗಳ ಮನಮೋಹಕ ಕಣಿವೆಗಳು, ಕೊಂಚವೂ ಮಾಲಿನ್ಯತೆ ಇಲ್ಲದ ನದಿಗಳು, ನಾವು ಅಚ್ಚರಿಯಿಂದ ನೋಡುವಂತೆ ಮಾಡುವ ಜಲಪಾತಗಳು ಪ್ರವಾಸಿಗರ ಪಾಲಿಗೆ ಸ್ವರ್ಗದಂತೆ ಕಾಣುತ್ತದೆ. ಇಲ್ಲಿ ವರ್ಷಪೂರ್ತಿ ಬೀಳುವ ಮಳೆಯಲ್ಲಿ ಕಾಣಸಿಗುವ ನಿಸರ್ಗದ ಸೌಂದರ್ಯವನ್ನು ನೋಡುವುದು ಪ್ರತಿಯೊಬ್ಬ ಪರಿಸರ ಪ್ರೇಮಿಗೂ ಇಷ್ಟವಾಗುತ್ತದೆ. ಮಳೆಗಾಲದಲ್ಲಿ ನಿಸರ್ಗ ಸೌಂದರ್ಯದ ಸಂಪೂರ್ಣ ಆನಂದ ಪಡೆಯುವ ಆಸೆ ಇದ್ದರೆ ಖಂಡಿತಾ ಇಲ್ಲಿಗೆ ಭೇಟಿ ನೀಡಬೇಕು.

ಒಂದೊಮ್ಮೆ ಭೂಮಿಯ ಮೇಲಿನ ಅತ್ಯಂತ ತೇವಭರಿತ ಸ್ಥಳ ಎಂದು ಕರೆಯಲ್ಪಡುತ್ತಿದ್ದ ಚಿರಾಪುಂಜಿಯು, ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಮಳೆಯಾಗುವ ಜಾಗ ಎಂಬ ಸ್ಥಾನವನ್ನು ಹೊಂದಿದೆ. ಕೇವಲ ಪರ್ವತ, ನದಿಗಳು ಮತ್ತು ಜಲಪಾತಗಳು ಮಾತ್ರ ಇಲ್ಲಿನ ಆಕರ್ಷಣೆಗಳಲ್ಲ, ಬೇರಿನ ಸೇತುವೆಗಳು, ಮರದ ಮನೆಗಳು, ವ್ಯೂ ಪಾಯಿಂಟ್‍ಗಳು, ಗುಹೆಗಳು ಮತ್ತಿತರ ಇನ್ನೂ ಸಾಕಷ್ಟು ವೈಶಿಷ್ಟ್ಯಗಳನ್ನು ಇಲ್ಲಿ ಕಾಣಬಹುದು.

6. ಗೋವಾದ ದೂಧ್ ಸಾಗರ ಜಲಪಾತ
ದೇಶಿ ಮತ್ತು ವಿದೇಶಿ ಪ್ರವಾಸಿಗರ ಪಾಲಿನ ಸ್ವರ್ಗ ಎಂದೆನಿಸಿಕೊಂಡಿರುವ ಗೋವಾದಲ್ಲಿ ಕೇವಲ ಕಡಲ ಕಿನಾರೆಗಳು, ಪುರಾತನ ಚರ್ಚ್‍ಗಳು ಮತ್ತು ಸಮುದ್ರ ಆಹಾರ, ಸ್ಥಳೀಯ ವೈನ್ ಮಾತ್ರ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ ಎಂದು ನೀವು ಭಾವಿಸಿದ್ದರೆ, ನಿಮ್ಮ ಆಲೋಚನೆ ಖಂಡಿತಾ ತಪ್ಪು. ಗೋವಾದಲ್ಲಿ ಸುಂದರ, ಅತ್ಯಾಕರ್ಷಕ ಜಲಪಾತಗಳು ಕೂಡ ಇವೆ.

ದೂಧ್ ಸಾಗರ್ ಜಲಪಾತ ಅವುಗಳಲ್ಲಿ ಒಂದು. ದೇಶದ ಅತ್ಯಂತ ಎತ್ತರದ ಜಲಪಾತಗಳ ಪೈಕಿ ಒಂದೆಂದು ಹೆಸರುವಾಸಿ ಆಗಿರುವ ಈ ಜಲಪಾತ, ಚಾರಣಕ್ಕೆ ಸೂಕ್ತವಾದ ಜಾಗವೆಂದು ಖ್ಯಾತವಾಗಿದೆ. ದೂಧ್ ಸಾಗರ್ ಜಲಪಾದ ಹಾದಿಯುದ್ದಕ್ಕೂ, ಶ್ರೀಮಂತ ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು, ಅದ್ಭುತ ದೃಶ್ಯಾವಳಿಗಳನ್ನು ಮತ್ತು ಹಳೆಯ ರೈಲ್ವೇ ಟ್ರ್ಯಾಕ್ ಹೊಂದಿರುವುದನ್ನು ಕಾಣಬಹುದು.

ಮೂರು ತೊರೆಗಳು, ನಾಲ್ಕು ಹಂತವುಳ್ಳ ಈ ದೂಧ್ ಸಾಗರ ಜಲಪಾತ 600 ಮೀಟರ್ ಎತ್ತರವನ್ನು ಹೊಂದಿದೆ. ಮಳೆಗಾಲದ ಋತುವಿನಲ್ಲಂತೂ ಹಚ್ಚ ಹಸಿರಿನಿಂದ ತುಂಬಿದ ಇಲ್ಲಿನ ಪ್ರಕೃತಿ ಸೌಂದರ್ಯವು ಇಮ್ಮಡಿಯಾಗಿ, ಪ್ರವಾಸಿಗರಿಗೆ ವಿಶೇಷ ಆನಂದವನ್ನು ನೀಡುತ್ತದೆ.

7. ಕರ್ನಾಟಕದ ಆಗುಂಬೆಯ ಮಳೆಕಾಡುಗಳು
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಆಗುಂಬೆ ಒಂದು ಸಣ್ಣ ಗ್ರಾಮ. ಈ ಗ್ರಾಮವು ತನ್ನ ದಟ್ಟ ಕಾಡುಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿನ ಮಳೆಕಾಡುಗಳು ಅತ್ಯಂತ ವಿಷಪೂರಿತ ಕಾಳಿಂಗ ಸರ್ಪಗಳಿಗೂ ಕೂಡ ನೆಲೆಯಾಗಿವೆ. ಭಾರತದ ಏಕೈಕ ಮಳೆಕಾಡು ಸಂಶೋಧನಾ ಕೇಂದ್ರ ಇಲ್ಲಿದೆ.

ಇದನ್ನೂ ಓದಿ: Bachelor Party: ಬ್ಯಾಚುಲರ್ ಪಾರ್ಟಿ ಮಾಡಲು ಭಾರತದ ಈ ಸ್ಥಳಗಳೇ ಬೆಸ್ಟ್

ಇಲ್ಲಿನ ದಟ್ಟ ಮಳೆಕಾಡುಗಳಲ್ಲಿ ಗುಪ್ತ ಜಲಪಾತಗಳು ಮತ್ತು ವಿಹಂಗಮ ನೋಟಗಳು ಸಾಕಷ್ಟಿದ್ದು, ಪಶ್ಚಿಮ ಘಟ್ಟಗಳ ಭವ್ಯ ಸೌಂದರ್ಯವನ್ನು ಬಿಂಬಿಸುತ್ತವೆ. ಈ ಮಳೆಕಾಡುಗಳು, ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಭಾಗವಾಗಿದ್ದು, ದೇಶದಲ್ಲಿ ವಾರ್ಷಿಕವಾಗಿ ಅತೀ ಹೆಚ್ಚು ಮಳೆ ಬೀಳುವ ಎರಡನೆಯ ತಾಣವಾಗಿ ಖ್ಯಾತಿ ಹೊಂದಿವೆ. ಈ ಸ್ಥಳ ವಿಭಿನ್ನ ಬಗೆಯ ಸಸ್ತನಿಗಳು, ಪಕ್ಷಿಗಳು ಮತ್ತು ಸರಿಸೃಪಗಳ ನೆಲೆಯಾಗಿದೆ.
Published by:Ashwini Prabhu
First published: