HOME » NEWS » Lifestyle » SELLING THE EIFFEL TOWER AND FLYING DRONES ITS ALL FRAUDSTER MODEL RH

ಐಫೆಲ್ ಗೋಪುರ ಮಾರಿದ್ದೂ, ಡ್ರೋಣ್​ಗಳನ್ನು ಹಾರಿಸಿದ್ದೂ… ನಯವಂಚಕರ ನಮೂನೆಗಳು

ಅತಿರಂಜನೀಯ, ಅತಿಭ್ರಮೆಯಾಧಾರಿತ ಕಲ್ಪನೆಗಳು ಇಂತಹವರ ನಡೆ-ನುಡಿಗಳ ಹೆಗ್ಗುರುತಾಗಿರುತ್ತದೆ. ಸಂಭ್ರಮ ಎನ್ನುವಂತಹ ಮಾನಸಿಕ ಸ್ಥಿತಿಯೇ ಸದಾ ಪ್ರಬಲವಾಗಿರುತ್ತದೆ. ಇಂತಹವರು ಉದ್ದೇಶಪೂರ್ವಕವಾಗಿ ಅಪರಾಧ ಮಾಡುತ್ತಾರೆ ಎನ್ನುವುದು ಕಷ್ಟ.  ಮನೋಒತ್ತಡ ಮತ್ತು ದುರ್ಬಲತೆಯ ಪರಿಣಾಮದ ಫಲವಾಗಿಯೂ ಅತಿವಿಜೃಂಬಣೆಯ ಭಾವಗಳಿಂದ ನರಳುತ್ತಿರುತ್ತಾರೆ.

news18-kannada
Updated:July 21, 2020, 7:05 AM IST
ಐಫೆಲ್ ಗೋಪುರ ಮಾರಿದ್ದೂ, ಡ್ರೋಣ್​ಗಳನ್ನು ಹಾರಿಸಿದ್ದೂ… ನಯವಂಚಕರ ನಮೂನೆಗಳು
ಡಾ. ಅ.ಶ್ರೀಧರ.
  • Share this:
ನಯವಂಚನೆ ಎನ್ನುವಂತಹ ನಡೆ-ನುಡಿಗಳು ಕೆಲವರಲ್ಲಿಅವಿಭಾಜ್ಯ ವ್ಯಕ್ತಿತ್ವದ ಲಕ್ಷಣ. ಇದು ಎಷ್ಟೋ ಸಲ ಅಪರಾಧಗಳ ಮೂಲಕವಷ್ಟೇ ವ್ಯಕ್ತಗೊಳ್ಳುವುದು. ಇಂತಹ ಲಕ್ಷಣ ಇತ್ತೀಚಿನದೇನಲ್ಲಾ ಎನ್ನುವುದಕ್ಕೆ ಮಹಾಭಾರತದಲ್ಲಿ ಶಕುನಿಯ ಕೃತ್ಯಗಳು ಅತ್ಯುತ್ತಮ ನಿದರ್ಶನ.

ಹಾಗೆಯೇ, ಇತ್ತೀಚಿನ ವಾರಗಳಲ್ಲಿ ಪ್ರಸರಣಗೊಂಡಿರುವ ಪ್ರಮುಖ ಸುದ್ಧಿ ಒಂದೆಂದರೇ ಪ್ರತಾಪ ಎನ್ನುವ ಯುವಕನ ಡ್ರೋನ್ ಪ್ರಲಾಪಗಳು. ಈ ಹುಡುಗ ಮಂಡ್ಯ ಜಿಲ್ಲೆಯ ಗ್ರಾಮವೊಂದರ ನಿವಾಸಿ. ಬಡತನದ ನಡುವೆಯು ಅಪಾರ ವೈಜ್ಞಾನಿಕ ತಿಳಿವಳಿಕೆ ಪಡೆದಿರುವಂತವ ಎನ್ನುವುದನ್ನು ಬಿಂಬಿಸುವಂತಹ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಮಾತಿನ ಮೂಲಕವೇ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾದ. ಆತನ ವೈಜ್ಞಾನಿಕ ಸಾಧನೆ, ತಿಳಿವಳಿಕೆಗಳೆಲ್ಲವು ನಯ ವಿನಯದ ವರ್ತನೆಗಳ ಮೂಲಕವಷ್ಟೇ ಹೊರಬರುತ್ತಿದೆ ಎನ್ನುವುದರತ್ತ  ಗಮನ ಹರಿಸದ ಸಂಘ-ಸಂಸ್ಥೆಗಳು ಅವನಿಗೆ ಸನ್ಮಾನ ಮಾಡಿದ್ದೂ ಮಾಡಿದ್ದೆ. ಇದರಿಂದಾಗಿ ಅವನಿಗೊಂದು ಜನಪ್ರಿಯತೆ, ಮನ್ನಣೆ ಮತ್ತುನಾನಾ ರೀತಿಯಲ್ಲಿಉತ್ತೇಜನಗಳು ದೊರಕಿದವು. ಇದೇ ಅವನ ನಯವಂಚನೆ, ಭ್ರಮೆಯಾಧಾರಿತ ಅದ್ಭುತ ಕಲ್ಪನೆಗಳಿಗೆ ನೆಲೆಯಾಗುವುದರೊಂದಿಗೆ ಜನಪ್ರಿಯತೆ ಎನ್ನುವ ಶ್ರೀರಕ್ಷೆಯೂ ಆಗಿತ್ತು. ಆದರೆ ಇವೆಲ್ಲವು ಮಾನಸಿಕ ದುರ್ಬಲತೆಯ ಲಕ್ಷಣಗಳು ಎನ್ನುವುದು ಬಹುಶಃ ಅವನಿಗೂತಿಳಿದಿರಲಾರದು.

ಸಾಧನೆಗಿಂತ ಪ್ರತಾಪನ ಪ್ರಲೋಭ ಮತ್ತು ಪರಿತಾಪದ ಮಾತುಗಳು-ಬಾಲ್ಯದ ಬಡತನ, ನಿಂದನೆ, ನಿರಾಕರಣೆ, ಹತಾಶೆ- ಎನ್ನುವಂತಹದೆಲ್ಲವನ್ನು ಸಣ್ಣ ವಯಸ್ಸಿನಲ್ಲಿಯೇ ತುಂಬಾ ಅನುಭವಿಸಬೇಕಾಯಿತು ಎನ್ನುವಂತಹ ಮಾತುಗಳನ್ನು ದೊಡ್ಡ ಬಂಡವಾಳವಾಗಿಸಿಕೊಂಡ. ಮುಗ್ಧ ಜನರ ಮನಸನ್ನು ಕರಗಿಸಿಬಲ್ಲ ಗುಣ ಇದರಲ್ಲಿದೆ ಎನ್ನುವುದು ಅವನಿಗೆ ಬಹಳ ಚೆನ್ನಾಗಿ ತಿಳಿದಿತ್ತು.  ಆದರೆ ಜನ ಸಾಮಾನ್ಯರಿಗೆ ಇಂತಹ ವ್ಯಕ್ತಿಗಳ ಮಾತುಗಳ ಬಗ್ಗೆ ಸಂದೇಹ ಬರುವುದು ಅಪರೂಪ. ಆದರೆ ಈ ಮನೋಲಕ್ಷಣಗಳು ಮಾನಸಿಕವಾಗಿ ಸದೃಢವಾಗಿ ಇರುವವರಲ್ಲಿ ಕಾಣಿಸಿಕೊಳ್ಳದು ಎನ್ನುವುದು ಬಾರದಿರುವುದು ಸಾಮಾನ್ಯ.

ಆತ್ಮವಂಚನೆಯ ಭಾವಗಳು ಮನದಾಳದಲ್ಲಿ ಕಂಡಿದ್ದರೂ ಅವುಗಳು ಹೊರಬರದಂತೆ ತಡೆಯುವುದಕ್ಕಾಗಿ ಮಹಾಸಾಧಕ, ಅಪ್ರತಿಮ, ಮೇಧಾವಿ ಎನ್ನುವಂತಹ ಬಿರುದುಗಳನ್ನು ಸೃಷ್ಟಿಸಿಕೊಳ್ಳುವುದು ಇಂತಹವರಲ್ಲರಿವುದೇ ಸಾಮಾನ್ಯ ಮಾದರಿ. ಆದರೆ ಆ ಮಾದರಿಯ ಚಟುವಟಿಕೆಗಳು ಹೆಚ್ಚು ದಿನ ಮುಂದುವರೆಯುವುದಿಲ್ಲ ಎನ್ನುವುದಂತೂನಿಜ.
ಅತಿ ಪ್ರಚಂಡರು ಎನ್ನಿಸಿಕೊಂಡಂತಹ ನಯವಂಚಕರೂ ಸಹ ಜನರು ಮತ್ತು ಪೊಲೀಸರಿಂದ ತಪ್ಪಿಸಿಕೊಂಡು ಬದುಕುವುದು ಅಸಾಧ್ಯ ಎನ್ನುವುದೇ ನಿಜ. ಇದನ್ನು ಬೆಂಬಲಿಸುವಂತಹ ಉತ್ತಮವಾದ ಉದಾಹರಣೆ ಸುಮಾರು 95 ವರ್ಷಗಳ ಹಿಂದೆ ನಡೆಯಿತು.

ಈಡೀ ವಿಶ್ವದಲ್ಲಿ ವಿಸ್ಮಯ ಮೂಡಿಸಿದಂತಹ ವಂಚನೆಯ ಪ್ರಕರಣವಿದು. ಪ್ಯಾರಿಸಿನಲ್ಲಿರುವ ಪ್ರಸಿದ್ಧ ಐಫೆಲ್ ಗೋಪುರವನ್ನೇ ಮಾರಾಟ ಮಾಡಲು ಪ್ರಯತ್ನಿಸಿದ ವಂಚಕನೊಬ್ಬನ ರೋಚಕ ಕೃತ್ಯ. ಅದೂ ಅಲ್ಲದೇ ಒಂದು ಸಲ ಅಲ್ಲಾ, ಎರಡು ಬಾರಿ ಮಾರಾಟ ಮಾಡಿದಂತಹ ಸಂಗತಿ. ಆಸ್ಟ್ರಿಯದಲ್ಲಿ ಜನಿಸಿದ ಮೂವತ್ತೈದರ ವಿಕ್ಟರ್ ಲುಸ್ಟಿಗ್ ತನ್ನ ಮಾತಿನ ಮೂಲಕವೇ ಕಬ್ಬಿಣದ ಗೋಪುರವೊಂದನ್ನು ಅರಗಿಸುವ ಕಾರ್ಯಕ್ಕೆ ಕೈ ಹಾಕಿದ್ದ. ಈತ ಅಮೆರಿಕವೂ ಸೇರಿದಂತ ಹಲವಾರು ದೇಶಗಳಲ್ಲಿ ನಾನಾ ರೀತಿಯ ವಂಚನೆಗಳನ್ನು ಮಾಡಿದ್ದವ.

ಬಹಳ ಸುಲಭವಾಗಿ ಪೊಲೀಸರನ್ನು ಮರಳು ಮಾಡಬಲ್ಲ ಕೌಶಲ್ಯ ಅವನಲ್ಲಿತ್ತು. ಪ್ಯಾರಿಸ್ ನಗರದ ನಗರಾಡಳಿತ ಮಂಡಿಲಿಯು ವಿಶ್ವವಿಖ್ಯಾತಿ ಪಡೆದಿರುವ ಪ್ರತಿಷ್ಠಿತ ಐಫೆಲ್ ಗೋಪುರದ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಾರ್ವತ್ರಿಕವಾಗಿ ಹಂಚಿಕೊಳ್ಳುತ್ತಿದ್ದಂತಹ ಸಮಯವದು. ಇದರ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿದ್ದಂತಹ ಮಾಹಿತಿಗಳು ವಿಕ್ಟರ್ ಗಮನ ಸೆಳೆದಿತ್ತು. ಈ ಸಂಗತಿಯನ್ನೇ ಕೇಂದ್ರವಾಗಿರಿಸಿಕೊಂಡು ಗೋಪುರವನ್ನು ಕೆಡವುದರ ಆಲೋಚನೆ ಅವನಲ್ಲಿ ಮೂಡಿತ್ತು. ಕೆಡವುದರಿಂದ ಬಿದ್ದ ಕಟ್ಟಡದ ಸಾಮಗ್ರಿಗಳನ್ನು ಮಾರುವ ಯೋಜನೆ ಅವನ ಮನಸಿಗೆ ಬಂತು. ಇದನ್ನು ಕಾರ್ಯರೂಪಕ್ಕೆ ತರಲು ನಗರದ ಅತಿಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ವಾಸ್ತವ್ಯ ಹೂಡಿ ಆ ನಗರದ ಹಳೇ ಕಬ್ಬಿಣದ ಸಾಮಗ್ರಿಗಳನ್ನು ಕೊಳ್ಳುವ ಹೆಸರಾಂತ ಕೆಲವರನ್ನು ಕರೆಸಿಕೊಂಡು ಗೋಪುರ ದುರಸ್ಥಿಗೆ ಬಂದಿದೆ. ಅದನ್ನು ಸರಿಪಡಿಸುವಷ್ಟು ಸೌಲಭ್ಯಗಳು ನಗರಾಡಳಿತದಲ್ಲಿ ಇಲ್ಲವಾದುದರಿಂದ ಅದನ್ನು ಕೆಡಗುವುದು ಅನಿವಾರ್ಯವಾಗಿದೆ. ಹೀಗಾಗಿ ಗೋಪುರವನ್ನು ಮಾರುವುದರ ಮೂಲಕ ಕೆಡವುವ ಕೆಲಸ ಸುಲಭವಾಗುತ್ತದೆ. ಇಂತಹದೊಂದು ಕೆಲಸವನ್ನು ನಿಮ್ಮಲ್ಲಿ ಯಾರಿಗಾದರೂ ವಹಿಸಿಕೊಡುವಂತಹ ಅಧಿಕಾರ ನನ್ನಲ್ಲಿರುವುದರಿಂದ ನಿಮ್ಮನ್ನು ಸಂಪರ್ಕಿಸುತ್ತಿದ್ದೇನೆ ಎನ್ನುವುದರ ಮೂಲಕ ಅವರ ಮನಸನ್ನು ವಶ ಪಡಿಸಿಕೊಂಡ.ಹಾಗೆಯೇ, ಈ ವಿಷಯ ಬಹಳ ಸೂಕ್ಷ್ಮವಾಗಿರುವುದರಿಂದ ಗೌಪ್ಯವಾಗಿ ಇಡಬೇಕು ಎನ್ನುವ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಾ ತನ್ನ ಬಗ್ಗೆ ಮತ್ತಷ್ಟು ನಂಬಿಕೆ ಹುಟ್ಟಿಸಿದ. ವಿಕ್ಟರನ ಈ ಮಾತುಗಳಿಗೆ ಮಾರುಹೋದವನೆಂದರೇ ಅದೇ ಊರಿನ ಹಳೇ ಕಬ್ಬಿಣ ಸಾಮಗ್ರಿಗಳ ವ್ಯಾಪಾರಿ ಪೊಯಿಸ್ಸನ್. ವಿಕ್ಟರ್ ವ್ಯಾಪಾರಿಯ ಮನಸನ್ನು ಗೆಲ್ಲುವುದರೊಂದಿಗೆ ತನ್ನ ಬದುಕಿನ ಸ್ಥಿತಿಗತಿಗಳ ಬಗ್ಗೆಅನುಕಂಪವನ್ನೂ ಗಳಿಸುವುಲ್ಲಿ ಯಶಸ್ವಿಯಾಗಿದ್ದ. ಇದನ್ನೇ ಕಾರಣವಾಗಿಸಿಕೊಂಡು ಲಂಚದ ಬೇಡಿಕೆಯನ್ನುಇಟ್ಟಿದ್ದ. ಇವೆಲ್ಲವನ್ನು ಸರಾಗವಾಗಿ ನಂಬಿದ ಪೊಯಿಸ್ಸನ್ ವಿಕ್ಟರನ ಲಂಚದ ಬೇಡಿಕೆಯನ್ನುಈಡೇರಿಸಿದ್ದ. ಹಣ ಕೈ ತಲುಪುತ್ತಿದ್ದಂತೆಯೇ ವಿಕ್ಟರ್ ಅದರೊಂದಿಗೆ ಕಣ್ಮರೆಯಾಗಿದ್ದ. ಆದರೆ, ಮತ್ತೆ ಒಂದು ವರ್ಷ ನಂತರ ಅದೇ ಮಾರಾಟದ ಕ್ರಿಯೆಯನ್ನು ಮತ್ತೊಮ್ಮೆ ಮಾಡಲುತಯಾರಾಗಿ ಬಂದಿದ್ದ. ಆದರೆ ಪೊಲೀಸರಿಗಿದು ತಿಳಿಯುತ್ತಿದೆ ಎನ್ನುವಷ್ಟರಲ್ಲಿಯೇ ತಪ್ಪಿಸಿಕೊಂಡು ಅಮೆರಿಕ ಸೇರಿದ್ದ.

ಅಚ್ಚರಿಯ ಸಂಗತಿ ಎಂದರೆ ಮೊದಲ ಸಲ ಹಣ ಕಳೆದುಕೊಂಡಿದ್ದವ ಪೊಲೀಸರಿಗೆ ದೂರು ಕೊಡದಿರುವುದು. ಇದಕ್ಕೆ ಕಾರಣ ಅವನ ಅಂತಸ್ತು ಮತ್ತು ಮರ್ಯಾದೆ ಉಳಿಸಿಕೊಳ್ಳುವುದು ಆಗಿನ ಸ್ಥಿತಿಯಲ್ಲಿ ಬಹಳ ಮುಖ್ಯವಾಗಿತ್ತು. ಇನ್ನು ವಿಕ್ಟರನ ಬಗ್ಗೆ ಹೇಳುವುದಾದರೇ ಆತ ಅಮೆರಿಕದಲ್ಲಿ ಕುಕೃತ್ಯಗಳನ್ನು ಹೆಚ್ಚು ದಿನ ಮುಂದುವರೆಸಿಕೊಂಡು ಹೋಗಲು ಪೊಲೀಸರು ಬಿಡಲಿಲ್ಲ. ಅವನ ಅಂತ್ಯ ಕಂಡಿದ್ದು ಸರೆಮನೆಯಲ್ಲಿ ಕೈದಿಯಾಗಿ ಸಮಯ ಕಳೆಯುತ್ತಿದ್ದಾಗ. ನಯವಂಚಕರು ಮಾನಸಿಕ ದುರ್ಬಲತೆ ಉಳ್ಳವರಾಗಿರುವ ಸಾಧ್ಯತೆಗಳೂ ಸಾಮಾನ್ಯವೇ.

ಇದನ್ನು ಓದಿ: ಭಾಗ 7 | ನೋವು, ನೋವು, ನೋವು… ಸಹಿಸಲಾರದೀ ನೋವು!

ಅತಿರಂಜನೀಯ, ಅತಿಭ್ರಮೆಯಾಧಾರಿತ ಕಲ್ಪನೆಗಳು ಇಂತಹವರ ನಡೆ-ನುಡಿಗಳ ಹೆಗ್ಗುರುತಾಗಿರುತ್ತದೆ. ಸಂಭ್ರಮ ಎನ್ನುವಂತಹ ಮಾನಸಿಕ ಸ್ಥಿತಿಯೇ ಸದಾ ಪ್ರಬಲವಾಗಿರುತ್ತದೆ. ಇಂತಹವರು ಉದ್ದೇಶಪೂರ್ವಕವಾಗಿ ಅಪರಾಧ ಮಾಡುತ್ತಾರೆ ಎನ್ನುವುದು ಕಷ್ಟ.  ಮನೋಒತ್ತಡ ಮತ್ತು ದುರ್ಬಲತೆಯ ಪರಿಣಾಮದ ಫಲವಾಗಿಯೂ ಅತಿವಿಜೃಂಬಣೆಯ ಭಾವಗಳಿಂದ ನರಳುತ್ತಿರುತ್ತಾರೆ. ಇಂತಹದೊಂದುಸ್ಥಿತಿಯಲಿ ಪ್ರದರ್ಶಿಸುವ ವರ್ತನೆಗಳು ಅಪರಾಧದ ಮೂಲಕ ಹೊರಬರಬಲ್ಲದು. ಈ ಸ್ಥಿತಿಗಳಿಗೆ ಬಾಲ್ಯದ ಬವಣೆ, ಸಂಕಟ ಅಥವಾ ಕುಟುಂಬದ ಸಮಸ್ಯೆಗಳು ಕಾರಣವಾಗಿರಬಲ್ಲದು.

ಲೇಖಕರು: ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ http://www.bruhanmati.com/
Published by: HR Ramesh
First published: July 21, 2020, 7:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories