Summer Health Care: ಬೇಸಿಗೆಯಲ್ಲಿ ಏನು ಮರೆತರೂ ಕಲ್ಲಂಗಡಿ ಹಣ್ಣು ತಿನ್ನೋದು ಮಾತ್ರ ಮರಿಬೇಡಿ, ಈ ಟೈಮಲ್ಲಿ ತಿಂದ್ರೆ ಸಿಕ್ಕಾಪಟ್ಟೆ ಪ್ರಯೋಜನ!
ಕಲ್ಲಂಗಡಿ ಹಣ್ಣು ಯಾರಿಗೆ ಗೊತ್ತಿಲ್ಲ ಹೇಳಿ? ಈ ಬೇಸಿಗೆ ಬಂತು ಅಂದ್ರೆ ಕಲ್ಲಂಗಡಿ ಹಣ್ಣಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಎಲ್ಲರ ಕೈಗೆ ಎಟುಕುವಂತೆ ಇರುವ ಈ ಕಲ್ಲಂಗಡಿ ಹಣ್ಣು ತಿನ್ನವುದು ಬಾಯಿಗೇನೋ ರುಚಿ. ಆದರೆ ಇದರಿಂದ ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ...
ಬೇಸಿಗೆ ಕಾಲ (Summer) ಬಂತೆಂದರೆ ಕಲ್ಲಂಗಡಿ ಹಣ್ಣಿನದ್ದೇ (Watermelon) ರಾಜ್ಯಭಾರ. ಬಿಸಿಲಿನ ಬೇಗೆಯಲ್ಲಿ ದೇಹಕ್ಕೆ (Body) ತಂಪೆರೆಯುವ, ಅತಿ ಸಿಹಿಯೂ (Sweet) ಅಲ್ಲದ, ಸಪ್ಪೆಯೂ ಅಲ್ಲದ ಈ ಹಣ್ಣು ತಿನ್ನಲು ಅತ್ಯಂತ ರುಚಿಕರ. ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಈ ಹಣ್ಣನ್ನು, ಸುಮಾರು 5,000 ವರ್ಷಗಳ ಹಿಂದೆ, ಈಜಿಪ್ಟ್ನಲ್ಲಿ (Egypt) ಮೊದಲು ಬೆಳೆಯಲಾಯಿತು ಎನ್ನಲಾಗುತ್ತದೆ. ಅತ್ಯಧಿಕ ಪೋಷಕಾಂಶಗಳು (Nutrients) ಮತ್ತು ಆ್ಯಂಟಿ ಆಕ್ಸಿಡೆಂಟ್ಗಳನ್ನು (Antioxidants) ಹೊಂದಿರುವ ಈ ಹಣ್ಣು ಹಲವಾರು ಕಾಯಿಲೆಗಳ ವಿರುದ್ಧ ನಮಗೆ ರಕ್ಷಣೆ ನೀಡುತ್ತದೆ. ಬೆಂಗಳೂರಿನ ಕ್ಲೌಡ್ 9 ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಹೆಚ್ಓಡಿ ಮತ್ತು ಮುಖ್ಯ ಕ್ಲಿನಿಕಲ್ ನ್ಯೂಟ್ರೀಶಿಯನಿಸ್ಟ್ ಅಭಿಲಾಶ ವಿ. ಅವರು ಕಲ್ಲಂಗಡಿ ಹಣ್ಣಿನ ಲಾಭದಾಯಕ ಅಂಶಗಳ ಕುರಿತು ಇಲ್ಲಿ ತಿಳಿಸಿದ್ದಾರೆ.
ಪ್ರತಿಯೊಬ್ಬರಿಗೂ ಸುರಕ್ಷಿತ ಹಣ್ಣು
ಕಲ್ಲಂಗಡಿ ಹಣ್ಣಿನಲ್ಲಿ ಅತ್ಯಂತ ಕಡಿಮೆ ಕ್ಯಾಲೊರಿ ಮತ್ತು ಕಡಿಮೆ ಸೋಡಿಯಂ ಇದೆ. ಹಾಗಾಗಿ ಯಾರೂ ಬೇಕಾದರೂ ಈ ಹಣ್ಣನ್ನು ನಿಶ್ಚಿಂತೆಯಿಂದ ತಿನ್ನಬಹುದು.
ಪೋಷಕಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ಗಳ ಆಗರ
ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಬಿ6, ಪೊಟ್ಯಾಶಿಯಂ ಮತ್ತು ಸೂಪರ್ ಆ್ಯಂಟಿಆಕ್ಸಿಡೆಂಟ್ಗಳಾದ ಲೈಕೋಪಿನ್ ಮತ್ತು ಬೀಟಾ ಕೆರೋಟಿನ್ ಹೇರಳವಾಗಿದೆ.
ಹೃದಯದ ಆರೋಗ್ಯಕ್ಕೆ ಅತ್ಯುತ್ತಮ
ಆ್ಯಂಟಿಆಕ್ಸಿಡೆಂಟ್ಗಳು ಕೋಶಗಳಿಗೆ ಹಾನಿಯಾಗದಂತೆ ಮತ್ತು ಕ್ಯಾನ್ಸರ್ ಅಪಾಯವನ್ನು ತಡೆಯುತ್ತವೆ. ಅದು ಹೃದಯದ ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿ ಹಾಗೂ ಅಪಧಮನಿಗೆ ಅಡಚಣೆ ಆಗುವುದನ್ನು ಕೂಡ ತಪ್ಪಿಸಬಲ್ಲವು.
ಇದನ್ನೂ ಓದಿ:
ಕಣ್ಣು ಮತ್ತು ಚರ್ಮದ ಆರೋಗ್ಯಕೆ ಉತ್ತಮ
ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾದ ನೀರಿನಂಶ, ವಿಟಮಿನ್ ಬಿ 6 ಮತ್ತು ವಿಟಮಿನ್ ಸಿ ಇದ್ದು, ಅವು ಕೊಲಾಜೆನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಆ ಮೂಲಕ ಚರ್ಮ ಸುಂದರ ಹಾಗೂ ಮೃದುವಾಗಿರುವಂತೆ ನೋಡಿಕೊಳ್ಳುತ್ತವೆ.
ಅಧ್ಯಯನಗಳಿಂದ ತಿಳಿದು ಬಂದಿರುವ ಪ್ರಕಾರ, ಕಲ್ಲಂಗಡಿ ಹಣ್ಣಿನಲ್ಲಿರುವ ಲೈಕೋಪೀನ್ ಅಂಶ, ಸೂರ್ಯನಿಂದ ರಕ್ಷಣೆ ನೀಡುವ ಪರಿಣಾಮವನ್ನು ಹೊಂದಿದೆ. ಹಾಗಾಗಿ, ಚರ್ಮಕ್ಕೆ ಸೂರ್ಯನಿಂದ ಹಾನಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ ವಿಟಮಿನ್ ಎ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಮ್ಯಾಕ್ಯುಲರ್ ಡಿಜನರೇಶನ್ ಅನ್ನು ಕೂಡ ತಡೆಯಬಲ್ಲದು.
ವ್ಯಾಯಾಮದ ನಂತರದ ಸ್ನಾಯು ನೋವು ನಿವಾರಕ
ಕಲ್ಲಂಗಡಿ ಹಣ್ಣು , ವ್ಯಾಯಾಮ ಮಾಡುವಾಗ ಮತ್ತು ವ್ಯಾಯಾಮದ ನಂತರ ಉಂಟಾಗುವ ಸ್ನಾಯು ನೋವನ್ನು ತಡೆಯಬಲ್ಲದು. ಅದಕ್ಕೆ ಕಾರಣ, ಕಲ್ಲಂಗಡಿ ಹಣ್ಣಿನಲ್ಲಿ ಇರುವ ಪೊಟ್ಯಾಶಿಯಂ. ವ್ಯಾಯಾಮಕ್ಕೆ ಮುನ್ನ ಅಥವಾ ವ್ಯಾಯಾಮ ಮಾಡಿದ ಬಳಿಕ ಒಂದು ಬಟ್ಟಲು ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಸೇವಿಸುವುದರಿಂದ ಸ್ನಾಯುಗಳ ಆರೋಗ್ಯದ ಮೇಲೆ ರಕ್ಷಣಾತ್ಮಕ ಪರಿಣಾಮ ಬೀರುವುದು ಸಾಧ್ಯ.
ಗರ್ಭಾವಸ್ಥೆಯಲ್ಲಿ ಮುಂಜಾನೆಯ ಸುಸ್ತು ನಿವಾರಣೆ
ಕಲ್ಲಂಗಡಿ ಹಣ್ಣಿನಲ್ಲಿ ಹೇರಳ ಪ್ರಮಾಣದ ನೀರಿನ ಅಂಶವಿದೆ. ಗರ್ಭಿಣಿಯರು ಈ ಹಣ್ಣನ್ನು ಸೇವಿಸುವುದರಿಂದ ಗರ್ಭಾವಸ್ಥೆಯ ಆರಂಭ ಮೂರು ತಿಂಗಳಲ್ಲಿ ಡೀಹೈಡ್ರೇಶನ್ ಆಗದಂತೆ ತಡೆಯಬಹುದು. ಅಷ್ಟೇ ಅಲ್ಲ, ಎರಡನೇ ಮತ್ತು ಮೂರನೇ ತಿಂಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮುಂಜಾನೆಯ ಸುಸ್ತು ಮತ್ತು ಎದೆ ಉರಿಯನ್ನು ತಡೆಯಬಲ್ಲದು.
ಕಲ್ಲಂಗಡಿ ಹಣ್ಣಿನಲ್ಲಿರುವ ಮಿನರಲ್ಗಳು, ಗರ್ಭಾವಸ್ಥೆಯ ಮೂರನೇ ತಿಂಗಳಲ್ಲಿ ಕಾಣಿಸಿಕೊಳ್ಳುವ ಕಾಲಿನ ಸ್ನಾಯುಗಳ ಸೆಳೆತವನ್ನು ನಿವಾರಿಸಲು ಸಹಾಯ ಮಾಡಬಲ್ಲದು. ಕಲ್ಲಂಗಡಿ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಂಶ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ. ಈ ಹಣ್ಣಿನಲ್ಲಿರುವ ನೀರಿನಂಶ ಮತ್ತು ಸುಲಭವಾಗಿ ಜೀರ್ಣವಾಗುವ ಫೈಬರ್, ಗರ್ಭಾವಸ್ಥೆಯಲ್ಲಿ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿ.
ಇದನ್ನೂ ಓದಿ:
ಕಲ್ಲಂಗಡಿ ಹಣ್ಣನ್ನು ಸೇವಿಸುವ ವಿಧಾನ
• ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಹಾಗೆಯೇ ತಿನ್ನುವುದು.
• ಪಾಪ್ಸಿಕಲ್ಗಳು ಅಥವಾ ಮನೆಯಲ್ಲಿಯೇ ತಯಾರಿಸಿದ ಸೋರ್ಬೆಟ್ಗಳು ಮತ್ತು ಐಸ್ ಕ್ಯಾಂಡಿ
• ಸೌತೆಕಾಯಿ, ಮಾವಿನ ಹಣ್ಣು, ಕ್ಯಾರೆಟ್ಗಳು, ಕಿತ್ತಳೆ ಹಣ್ಣು ಮತ್ತಿತರ ಪೌಷ್ಟಿಕಾಂಶಯುಕ್ತ ಹಣ್ಣುಗಳ ಜೊತೆ ಸೇರಿಸಿ ಸಲಾಡ್ ಮಾಡಿ.
• ಕಲ್ಲಂಗಡಿ ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ, ಸ್ಮೂದಿ ಮತ್ತು ಜ್ಯೂಸ್ಗಳನ್ನು ತಯಾರಿಸಿ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ