Schizophrenia: ಏನಿದು ಸ್ಕಿಜೋಫ್ರೆನಿಯಾ? ಇಂಚಿಂಚೂ ವಿವರ ಇಲ್ಲಿದೆ ನೋಡಿ

ಸ್ಕಿಜೋಫ್ರೆನಿಯಾ ಬರಲು ನಿಖರವಾದ ಕಾರಣಗಳು ಯಾವುವು ಎಂಬುದು ಇಂದಿಗೂ ನಿಖರವಾಗಿ ತಿಳಿದುಬಂದಿಲ್ಲ. ಆದರೂ ವಿಜ್ಞಾನಿಗಳು ಹಾಗೂ ಸಂಶೋಧಕರು ಕೆಲವು ಗಮನಾರ್ಹ ಅಂಶಗಳನ್ನು ಹುಡುಕಿದ್ದು ಇವು ಸ್ಕಿಜೋಫ್ರೆನಿಯಾ ಬರಲು ಹೆಚ್ಚಿನ ಪಾತ್ರವಹಿಸುತ್ತವೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಒಮ್ಮೊಮ್ಮೆ ವೈದ್ಯರು ಈತ ಅಥವಾ ಆಕೆ ಸ್ಕಿಜೋಫ್ರೆನಿಯಾದಿಂದ (Schizophrenia)  ಬಳಲುತ್ತಿದ್ದಾರೆಂದು ನೀವು ಎಲ್ಲಿಯಾದರೂ ಕೇಳಿರಬಹುದು ಅಥವಾ ಈ ಪದದ ಬಗ್ಗೆ ಪುಸ್ತಕಗಳಲ್ಲಿ ಓದಿರಬಹುದು ಅಲ್ಲವೆ? ಹಾಗಾದರೆ, ಇದು ಏನು ಎಂಬ ಸಂದೇಹ ಸಹಜವಾಗಿ ನಿಮ್ಮಲ್ಲಿ ಮೂಡಿರಲೂ ಬಹುದು. ಸ್ಕಿಜೋಫ್ರೆನಿಯಾ ಒಂದು ಮನೋವ್ಯಾಧಿ ಅಂದರೆ ಮಾನಸಿಕವಾಗಿ ಉದ್ಭವವಾಗುವ ವ್ಯಾಧಿಯಾಗಿದೆ. ಮಾನಸಿಕ ಸಮಸ್ಯೆಗಳಡಿಯಲ್ಲಿ ಇದನ್ನು ಪರಿಗಣಿಸಬಹುದು. ಸ್ಕಿಜೋಫ್ರೆನಿಯಾ ಮನೋವ್ಯಾಧಿಯು ಗಂಭೀರವಾದ ಮಾನಸಿಕ ಸ್ಥಿತಿಯಾಗಿದ್ದು ಇದರ ಪ್ರಭಾವ ಮನುಷ್ಯನ ಯೋಚನಾ ಲಹರಿ, ಚಟುವಟಿಕೆ, ಅವನು ಅಥವಾ ಅವಳು ತನ್ನನ್ನು ವ್ಯಕ್ತಪಡಿಸುವ ರೀತಿ, ವಾಸ್ತವಿಕ ಅಂಶಗಳನ್ನು ಸ್ವೀಕರಿಸುವ ಬಗೆ ಹಾಗೂ ಅದನ್ನು ಇತರರೊಂದಿಗೆ ಯಾವ ರೀತಿ ಜೋಡಿಸಿ ನೋಡುವ ಬಗೆಗಳ ಮೇಲೆ ಹೆಚ್ಚಾಗಿ ಬೀರುತ್ತದೆ. ಹಾಗಾಗಿ ಇದೊಂದು ಗಂಭೀರ ಮಾನಸಿಕ ಅಸ್ವಸ್ಥತೆ (Mental Illness) ಎಂದೇ ಹೇಳಬಹುದು.

  ಸಾಮಾನ್ಯವಾಗಿ ಮಾನಸಿಕ ಸ್ಥಿತಿಗಳಲ್ಲಿ ಸಾಕಷ್ಟು ಬಗೆಗಳಿವೆ. ಇಂದಿನ ಒತ್ತಡದ ಜೀವನಶೈಲಿ ಖಂಡಿತವಾಗಿಯೂ ಸಾಕಷ್ಟು ಜನರು ಕೆಲವು ಮಾನಸಿಕ ಅಸ್ವಸ್ಥೆಗಳಿಂದ ಬಳಲುವಂತೆ ಮಾಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ, ಸ್ಕಿಜೋಫ್ರೆನಿಯಾ ಎಂಬುದು ಸಾಮಾನ್ಯವಾಗಿರುವ ಮಾನಸಿಕ ಕಾಯಿಲೆ ಎಂದು ಹೇಳಲು ಸಾಧ್ಯವಿಲ್ಲ, ಕಾರಣ ಅದರಿಂದಾಗುವ ವಿಪರೀತ ಪರಿಣಾಮಗಳು. ಸ್ಕಿಜೋಫ್ರೆನಿಯಾದಿಂದ ಬಳಲುವ ಜನರು ಸಾಮಾನ್ಯವಾಗಿ ಸಮಾಜದಲ್ಲಿ ಅಷ್ಟೊಂದು ಉತ್ತಮ ಅಥವಾ ಇತರರಂತೆ ಸಾಮಾನ್ಯ ಮಟ್ಟದಲ್ಲಿ ಬದುಕಲು ಬಹಳಷ್ಟು ಕಷ್ಟಪಡುವುದನ್ನು ನೋಡಲಾಗಿದೆ.

  ಮನಸ್ಥಿತಿಯನ್ನು ನಿಯಂತ್ರಣದಲ್ಲಿರಿಸಿ
  ಅವರು ಸದಾ ಕಾಲ ಆತಂಕದಲ್ಲಿರುವಂತೆ, ತಮ್ಮನ್ನು ತಾವೇ ಕಳೆದುಕೊಂಡಿರುವಂತೆ ಹಾಗೂ ನೈಜತೆಯಿಂದ ಬಲು ದೂರದಲ್ಲಿರುವಂತೆ ಕಂಡುಬರುತ್ತಾರೆ. ಹಾಗಾಗಿ ಅವರಿಗೆ ಸಾಮಾನ್ಯ ಜೀವನಶೈಲಿ ಎಂಬುದು ಸಹ ಒಂದು ಸವಾಲೇ ಹೌದು. ಇನ್ನೊಂದು ದುರಂತದ ಸಂಗತಿ ಎಂದರೆ ಈ ಮಾನಸಿಕ ಸ್ಥಿತಿಗೆ ಯಾವುದೇ ಔಷಧಿಗಳಿಲ್ಲ. ಆದರೂ ಕೆಲ ಚಿಕಿತ್ಸೆಯ ಮೂಲಕ ಈ ಮನಸ್ಥಿತಿಯನ್ನು ತಕ್ಕ ಮಟ್ಟಿಗೆ ನಿಯಂತ್ರಣದಲ್ಲಿ ಇರಿಸಿ ಬದುಕಲು ಸಾಧ್ಯವಿರುವುದೇ ಒಂದು ವರದಾನ ಎಂತಲೂ ಹೇಳಬಹುದು.

  ವಾಸ್ತವ ಜಗತ್ತೇ ಮರೆತುಹೋಗುತ್ತೆ
  ಕೆಲವರು ಸ್ಕಿಜೋಫ್ರೆನಿಯಾ ಸ್ಥಿತಿಯನ್ನು ಜನಪ್ರೀಯವಾದ ಬಹುವ್ಯಕ್ತಿತ್ವ ಅಥವಾ ಸ್ಪ್ಲಿಟ್ ಪರ್ಸನಾಲಿಟಿ ಡಿಸಾರ್ಡರ್ ಎಂದು ತಿಳಿದಿದ್ದಾರೆ. ಆದರೆ ಇದು ಅದಲ್ಲ. ಬದಲಾಗಿ ಈ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಕಲ್ಪನೆ ಹಾಗೂ ವಾಸ್ತವದ ಮಧ್ಯೆ ವ್ಯತ್ಯಾಸ ಗುರುತಿಸದಂತಾಗುತ್ತಾನೆ ಅಥವಾ ಆಗುತ್ತಾಳೆ. ಒಮ್ಮೊಮ್ಮೆ ಅವರ ಕಾಲ್ಪನಿಕತೆ ಎಷ್ಟು ಪ್ರಬಲವಾಗಿರುತ್ತದೆ ವಾಸ್ತವ ಜಗತ್ತನೇ ಮರೆತು ಬಿಡುತ್ತಾರೆ. ಅವರಿಗೆ ಎಲ್ಲವೂ ಕಲ್ಪನೆ, ಗೊಂದಲ ಹಾಗೂ ವಿವಿಧ ಬಗೆಯ ಸದ್ದುಗಳಿಂದ ಕೂಡಿರುವ ಯಾವುದೋ ಭಿನ್ನ ಜಗತ್ತಂತೆ ಭಾಸವಾಗುತ್ತದೆ. ಅವರ ನಡವಳಿಕೆ, ಮಾತು, ವ್ಯವಹಾರ ಇತರರಲ್ಲಿ ಗೊಂದಲ ಹಾಗೂ ಸಾಕಷ್ಟು ಅಚ್ಚರಿ-ಆತಂಕಗಳನ್ನುಂಟು ಮಾಡಿದರೂ ಆಶ್ಚರ್ಯವಿಲ್ಲ.

  ಸ್ಕಿಜೋಫ್ರೆನಿಯಾ ಎಲ್ಲರಲ್ಲೂ ಒಂದೆ ರೀತಿಯಲ್ಲಿರುತ್ತದೆಯೆ?
  ಈ ಮನೋವ್ಯಾಧಿಯು ಅದರಿಂದ ಬಳಲುತ್ತಿರುವವರೆಲ್ಲರಲ್ಲೂ ಒಂದೇ ರೀತಿಯಲ್ಲಿ ಇರುವುದಿಲ್ಲ, ಬದಲಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಇದು ವ್ಯತ್ಯಾಸವನ್ನು ಹೊಂದಿರುತ್ತದೆ. ಒಮ್ಮೊಮ್ಮೆ ಇದು ಅತಿರೇಕವಾಗಿ ವ್ಯಕ್ತಿಯು ಹುಚ್ಚುಚ್ಚನಂತೆ ವ್ಯವಹರಿಸುವುದನ್ನು ಕಾಣಬಹುದು. ಆಗ ಅದನ್ನು ಒಂದು ಎಪಿಸೋಡ್ ಎಂದು ಕರೆಯುತ್ತಾರೆ. ಹಾಗಾಗಿ ಈ ಮಾನಸಿಕ ಸ್ಥಿತಿಯಲ್ಲಿ ಕೆಲವರು ಕೇವಲ ಒಂದು ಎಪಿಸೋಡ್ ಅನುಭವಿಸಿದರೆ ಇನ್ನು ಕೆಲವರು ತಮ್ಮ ಜೀವನಾವಧಿಯಲ್ಲಿ ಹಲವು ಈ ರೀತಿಯ ಎಪಿಸೋಡ್ ಗಳನ್ನು ಅನುಭವಿಸುತ್ತಾರೆ. ಈ ನಡುವೆ ಪ್ರತಿ ಎಪಿಸೋಡುಗಳ ಮಧ್ಯೆ ಅವರು ಸಾಮಾನ್ಯ ಜೀವನಶೈಲಿಯನ್ನು ಹೊಂದಿರಬಹುದು.

  ಸ್ಕಿಜೋಫ್ರೆನಿಯಾ ಅತಿ ತೀವ್ರವಾಗಬಹುದು ಹಾಗೂ ಸ್ವಲ್ಪ ಸುಧಾರಿಸಲೂ ಬಹುದು. ಹಾಗಾಗಿ ಅದನ್ನು ಎರಡು ಸೈಕಲ್ ಗಳಲ್ಲಿ ಅಳೆಯುತ್ತಾರೆ. ಅವುಗಳೆಂದರೆ ರಿಲ್ಯಾಪ್ಸಸ್ ಮತ್ತು ರಿಮಿಶನ್ ಸೈಕಲ್ ಗಳು.

  ಸ್ಕಿಜೋಫ್ರೆನಿಯಾ ಆರಂಭಿಕ ಲಕ್ಷಣಗಳು
  ಈ ಮನೋವ್ಯಾಧಿಯು ತನ್ನ ಆರಂಭಿಕ ಲಕ್ಷಣಗಳನ್ನು ಪುರುಷರಲ್ಲಿ ಅವರು 20ರ ಪ್ರಾಯದಲ್ಲಿದ್ದಾಗ ತೋರಿಸುತ್ತದೆ. ಆದರೂ ಇದು ಹೆಚ್ಚಾಗಿ ಮಹಿಳೆಯರಲ್ಲಿ ಅವರು 20 ಅಥವಾ 30ರ ಪ್ರಾಯದಲ್ಲಿದ್ದಾಗ ಹೆಚ್ಚಾಗಿ ಬಾಧಿಸುತ್ತದೆ. ಸ್ಕಿಜೋಫ್ರೆನಿಯಾ ಮೊದಲ ಬಾರಿಗೆ ಬಂದು ಅದು ಪೂರ್ಣವಾಗಿ ರೂಪಗೊಳ್ಳುವ ನಡುವಿನ ಅವಧಿಯನ್ನು ಪ್ರೊಡ್ರೊಮಲ್ ಅವಧಿ ಎಂದು ಕರೆಯುತ್ತಾರೆ. ಇದು ದಿನಗಳ ಕಾಲ, ವಾರಗಳ ಕಾಲ ಅಥವಾ ವರ್ಷಗಳ ಕಾಲ ಇರಬಹುದು.

  ಇದನ್ನು ಗುರುತಿಸುವುದು ತುಸು ಕಷ್ಟ
  ಏಕೆಂದರೆ ಇದು ಇಂಥದ್ದೆ ಆದ ಯಾವುದೇ ನಿರ್ದಿಷ್ಟ ಲಕ್ಷಣ ಗೋಚರಿಸುವಂತೆ ಮಾಡುವುದಿಲ್ಲ. ಆದರೆ ಆಗಾಗ ಯುವ ಜನರ ವ್ಯವಹಾರದಲ್ಲಿ ಕೆಲವು ಅತಿರೇಕದ ಬದಲಾವಣೆಗಳಾಗುವುದನ್ನು ನೀವು ಗಮನಿಸಬಹುದು. ಮಂಕಾಗುವುದು, ವಿಪರೀತವಾಗಿ ಕೋಪಿಸಿಕೊಳ್ಳುವುದು, ನಿದ್ರೆ ಮಾಡಲು ಕಷ್ಟಪಡುವುದು, ಗಮನವಿಲ್ಲದೆ ಇರುವುದು ಮುಂತಾದ ಲಕ್ಷಣಗಳು ಕಾಣಿಸಬಹುದು. ಹೀಗೆಂದ ಮಾತ್ರಕ್ಕೆ ಅವನು ಅಥವಾ ಅವಳಿಗೆ ಸ್ಕಿಜೋಫ್ರೆನಿಯಾ ಆಗಿದೆ ಎಂದು ಭಯ ಪಡುವ ಅಗತ್ಯವಿಲ್ಲ. ಯಾವುದಕ್ಕೂ ವೈದ್ಯರ ಬಳಿ ತೋರಿಸುವುದು ಉತ್ತಮ.

  ಕೆಲವು ತೀವ್ರವಾದ ಮಾನಸಿಕ ಲಕ್ಷಣಗಳು
  ಕಲ್ಪನೆಗಳು : ಸ್ಕಿಜೋಫ್ರೆನಿಯಾದ ಧನಾತ್ಮಕ ಲಕ್ಷಣಗಳಲ್ಲಿ ಇದೂ ಒಂದು. ಈ ಸಂದರ್ಭದಲ್ಲಿ ವ್ಯಕ್ತಿಯು ಭ್ರಮೆಯನ್ನೇ ಸರ್ವಸ್ವ ಎಂದು ಕೊಂಡಿರುತ್ತಾನೆ. ಆ ವ್ಯಕ್ತಿಗೆ ವಾಸ್ತವ ಅಂಶಗಳನ್ನು ಪರಿಚಯಿಸಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಆ ವ್ಯಕ್ತಿ ಇರುವುದಿಲ್ಲ. ಉದಾಹರಣಗೆ, ಆ ವ್ಯಕ್ತಿಗೆ ತನ್ನ ಸುತ್ತಲಿರುವವರು ಅವನ ಮನಸ್ಸಿನಲ್ಲಿರುವ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದು ತಮ್ಮ ಆಲೋಚೆನಗಳನ್ನು ಹೇರುತ್ತಿದ್ದಾರೆ ಎಂಬುದು ಅತ್ಯಂತ ದೃಢವಾಗಿರುತ್ತದೆ.

  ಭ್ರಮೆಗಳು : ತನಗೆ ಯಾರೋ ಸ್ಪರ್ಶಿಸುತ್ತಿದ್ದಾರೆ ಅಥವಾ ಯಾರದ್ದೋ ಕೂಗು ಇಲ್ಲವೆ ಏನೋ ಶಬ್ದ ಕೇಳುತ್ತಿರುವ ಭ್ರಮೆಗಳುಂಟಾಗುವುದು. ಇದರಲ್ಲಿ ಸಾಮಾನ್ಯವಾಗಿ ಸ್ಕಿಜೋಫ್ರೆನಿಯಾ ದಿಂದ ಬಳಲುತ್ತಿರುವ ವ್ಯಕ್ತಿಗಳು ತಮ್ಮ ಬಗ್ಗೆ ಇನ್ನ್ಯಾರೋ ಮಾತಾಡುತ್ತಿದ್ದಾರೆ, ಆದೇಶ ನೀಡುತ್ತಿದ್ದಾರೆ, ಯಾವುದೋ ಶಬ್ದ ಕೇಳುತ್ತಿರುವಂತಹ ಲಕ್ಷಣಗಳನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಕೆಲ ವಿರಳ ಸಂದರ್ಭದಲ್ಲಿ ಕೆಲವರು ವಾಸ್ತವವಲ್ಲದ ಯಾವುದೋ ದೃಶ್ಯಾವಳಿ, ಯಾರದ್ದೋ ಉಪಸ್ಥಿತಿಯಿರುವಿಕೆಯನ್ನು ನೋಡುತ್ತಾರೆ.

  ಕ್ಯಾಟಟೋನಿಯಾ : ಇದು ಇನ್ನೊಂದು ರೀತಿಯ ವಿಚಿತ್ರ ಲಕ್ಷಣವಾಗಿದೆ. ಈ ಸ್ಥಿತಿಯಲ್ಲಿ ವ್ಯಕ್ತಿ ಮಾತನಾಡದೆ ಸುಮ್ಮನಾಗಿ ಬಿಡುತ್ತಾನೆ. ಯಾರೂ ಎಷ್ಟೇ ಮಾತನಾಡಿಸಿದರೂ, ಅಲುಗಾಡಿಸಿದರೂ ಯಾವ ವ್ಯತ್ಯಾಸವೂ ಆಗುವುದಿಲ್ಲ. ಬದಲಾಗಿ ಒಂದು ಸ್ಥಳದಲ್ಲಿ ನಿಶ್ಚಲನಾಗಿ ಕುಳಿತುಬಿಡುವುದು.

  ಇದನ್ನೂ ಓದಿ: Period Myths: ಪಿರಿಯಡ್ಸ್‌ ಬಗ್ಗೆ ಇರೋ ಈ ಮಾತುಗಳೆಲ್ಲಾ ಬರೀ ಸುಳ್ಳು!

  ಕಡಿಮೆ ಸ್ತರದಲ್ಲಿರುವ ಮಾನಸಿಕ ಲಕ್ಷಣಗಳು
  ಕ್ಯಾಟಟೋನಿಯಾದಿಂದ ಬಳಲುತ್ತಿರುವವರೆಲ್ಲರೂ ತೀವ್ರವಾದ ಲಕ್ಷಣಗಳನ್ನೇ ತೋರಿಸುತ್ತಾರೆಂದೇನೂ ಇಲ್ಲ. ಹಲವಾರು ಈ ಸ್ಥಿತಿಯಿಂದ ಬಳಲುತ್ತಿರುವವರು ಕಡಿಮೆ ಮಟ್ಟದಲ್ಲಿಯೂ ಕೆಲವು ಲಕ್ಷಣಗಳನ್ನು ತೋರಿಸುತ್ತಾರೆ. ಇದನ್ನು ಸಾಮಾನ್ಯವಾಗಿ ನೆಗೆಟಿವ್ ಸಿಂಪ್ಟಮ್ಸ್ ಎಂದು ಕರೆಯುತ್ತಾರೆ. ಈ ಮುಂಚೆ ವಿವರಿಸಲಾಗಿರುವ ತೀವ್ರವಾದ ಲಕ್ಷಣಗಳನ್ನು ಪಾಸಿಟಿವ್ ಸಿಂಪ್ಟಮ್ಸ್ ಎಂದು ಕರೆಯುತ್ತಾರೆ. ಹಾಗಾದರೆ, ಕಡಿಮೆ ಸ್ತರದ ಲಕ್ಷಣಗಳು ಯಾವುದು ಎಂಬುದನ್ನು ಈಗ ತಿಳಿಯೋಣ.

  * ಭಾವನೆಗಳ ಕೊರತೆ : ಸಾಮಾನ್ಯ ಸ್ಥಿತಿಯುಳ್ಳ ಜನರು ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಆದರೆ ಸ್ಕಿಜೋಫ್ರೆನಿಯಾದಿಂದ ಬಳಲುತ್ತಿರುವವರು ಕಡಿಮೆ ಸ್ತರದ ಲಕ್ಷಣಗಳಲ್ಲಿ ಈ ರೀತಿಯ ಭಾವನೆಗಳ ಕೊರತೆಯನ್ನು ಹೊಂದಿದ್ದು ಅವರಲ್ಲಿ ಪರಿಸ್ಥಿತಿಗೆ ತಕ್ಕಂತೆ ಯಾವ ಭಾವನೆಗಳು ಹೊರಹೊಮ್ಮುವುದಿಲ್ಲ.

  * ಏಕಾಂತತೆ : ಎಲ್ಲರೊಡನೆ ಬೆರೆಯದೆ ಏಕಾಂತತೆಯಲ್ಲೇ ಇರುವುದು. ಸದಾ ಆತಂಕದ ಛಾಯೆಯಲ್ಲಿ ಒಂದು ಮೂಲೆಯಲ್ಲಿ ಸುಮ್ಮನೆ ಕೂರುವುದು

  * ಹೆಚ್ಚು ಮಾತನಾಡದಿರುವುದು, ಯಾರೊಂದಿಗೂ ಸಾಮಾನ್ಯವಾಗಿ ಬೆರೆಯದೆ ಇರುವುದು

  * ಶಕ್ತಿ ಇಲ್ಲದಿರುವಿಕೆ, ನಿರುತ್ಸಾಹ

  * ಜೀವನ ಅಥವಾ ಬದುಕಿನಲ್ಲಿ ಆಸಕ್ತಿ, ಚೈತನ್ಯ ಕಳೆದುಕೊಂಡಿರುವುದು

  * ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ

  ಸ್ಕಿಜೋಫ್ರೆನಿಯಾ ಬರಲು ಕಾರಣಗಳು
  ಸ್ಕಿಜೋಫ್ರೆನಿಯಾ ಬರಲು ನಿಖರವಾದ ಕಾರಣಗಳು ಯಾವುವು ಎಂಬುದು ಇಂದಿಗೂ ನಿಖರವಾಗಿ ತಿಳಿದುಬಂದಿಲ್ಲ. ಆದರೂ ವಿಜ್ಞಾನಿಗಳು ಹಾಗೂ ಸಂಶೋಧಕರು ಕೆಲವು ಗಮನಾರ್ಹ ಅಂಶಗಳನ್ನು ಹುಡುಕಿದ್ದು ಇವು ಸ್ಕಿಜೋಫ್ರೆನಿಯಾ ಬರಲು ಹೆಚ್ಚಿನ ಪಾತ್ರವಹಿಸುತ್ತವೆ ಎನ್ನಲಾಗಿದೆ.

  ಇದನ್ನೂ ಓದಿ: Lazy Day Benefits: ಸೋಮಾರಿತನದಿಂದಲೂ ಇದೆ ಇಷ್ಟೆಲ್ಲ ಪ್ರಯೋಜನ!

  ಅನುವಂಶಿಯತೆ : ಇದೊಂದು ಹೆರಿಡೆಟರಿ ಸಮಸ್ಯೆಯಾಗಿದ್ದು ಕುಟುಂಬ ಯಾರಾದರೂ ಬಾಧಿತರಿಂದ ಬರಬಹುದಾದ ಸಾಧ್ಯತೆಯಿದೆ.

  ಮೆದುಳಿನ ಕಾರ್ಯವೈಖರಿ : ಮೆದುಳಿನಲ್ಲಿ ಹಲವಾರು ರಾಸಾಯನಿಕಗಳಿದ್ದು ಪ್ರತಿ ಕ್ಷಣವೂ ಏನಾದರೊಂದು ಸಂಕೇತ-ಸಂದೇಶಗಳು ವಿನಿಮಯವಾಗುತ್ತಲೇ ಇರುತ್ತವೆ. ಒಮ್ಮೊಮ್ಮೆ ಇದಕ್ಕೆ ವಿಪರೀತವಾದ ಅಡೆ-ತಡೆಗಳುಂಟಾದಾಗ ಸ್ಕಿಜೋಫ್ರೆನಿಯಾ ಆಗುವ ಸಾಧ್ಯತೆಯಿದೆ.

  ಪರಿಸರ : ಒಮ್ಮೊಮ್ಮೆ ಕೆಲ ವೈರಾಣು ಸೋಂಕುಗಳು, ಅಥವಾ ನಶೆ ಬರಿಸುವ ಡ್ರಗ್ಸ್ ಗಳೂ ಸಹ ಸ್ಕಿಜೋಫ್ರೆನಿಯಾ ಉಂಟಾಗಲು ಕಾರಣವಾಗಬಹುದು.
  Published by:ಗುರುಗಣೇಶ ಡಬ್ಗುಳಿ
  First published: