ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ: ಇದು ನಮ್ಮ ನಿಮ್ಮೆಲ್ಲರ ಕತೆ

news18
Updated:September 1, 2018, 3:39 PM IST
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ  ಸುಮ್ಮನೆ: ಇದು ನಮ್ಮ ನಿಮ್ಮೆಲ್ಲರ ಕತೆ
news18
Updated: September 1, 2018, 3:39 PM IST
ಸುಷ್ಮಾ ಎನ್​. ಚಕ್ರೆ


ಆಗಷ್ಟೆ ಹೊರಗೆ ಮಳೆ ಬಿಟ್ಟಿತ್ತು. ಅದಾಗಲೇ ನಾಲ್ಕೈದು ಬಾರಿ ಕಬ್ಬಿಣದ ಟ್ರಂಕು, ಬ್ಯಾಗನ್ನು ಜಗಲಿಗೆ ತಂದಿಟ್ಟುಕೊಂಡ ಅವಳು ಇನ್ನೇನು ಕೊಡೆ ಬಿಚ್ಚಬೇಕೆನ್ನುವಷ್ಟರಲ್ಲಿ ಮನೆಯ ಸೂರು ಕಿತ್ತುಹೋಗುವಂತೆ ಮಳೆ ಹೊಯ್ಯತೊಡಗಿತ್ತು.

ಸಣ್ಣಗೆ ಜಿನುಗುತ್ತಿದ್ದ ಮಳೆಯಲ್ಲೇ ಪಕ್ಕದ ಮನೆಯ ಓಮ್ನಿ ಕಾರು ಹತ್ತಿ ಕುಳಿತ ಆಕೆಗೆ ಜಗಲಿಯಲ್ಲಿ ನಿಂತು ಕೈಬೀಸುತ್ತಿದ್ದ ಅಜ್ಜಿ, ಆಯಿ, ತಮ್ಮ, ತಂಗಿಯ ಮುಖ ನೋಡುತ್ತಿದ್ದಂತೆ ಕಣ್ಣಂಚಲ್ಲಿ ನೀರು ಜಿನುಗಿತ್ತು. ಪಕ್ಕದಲ್ಲಿ ಕುಳಿತಿದ್ದ ಅಪ್ಪಯ್ಯನ ಹೆಗಲಿಗೆ ತಲೆಯೊತ್ತಿ ಕುಳಿತು ಕಾರಿನಲ್ಲಿ ಬಸ್​ ಸ್ಟಾಪಿನೆಡೆಗೆ ಹೊರಟು ಅದಾಗಲೇ ಎರಡು ವರ್ಷವಾಯಿತು.

ಹಳ್ಳಿಯಲ್ಲಿ ಓದಿದ ಅದೆಷ್ಟೋ ಹೆಣ್ಣುಮಕ್ಕಳು ಪೇಟೆಯಲ್ಲಿ ಕಾಲೇಜು ವಿದ್ಯಾಭ್ಯಾಸಕ್ಕೆಂದೋ, ಉದ್ಯೋಗಕ್ಕೆಂದೋ ಬರುವಾಗ ಇದೇ ರೀತಿ ಕಣ್ಣೀರು ಹಾಕುತ್ತಾರೆ. ಗಂಡನ ಮನೆಗೆ ಹೋಗೋವಾಗ ಮಾತ್ರ ಕಣ್ಣೀರು ಹಾಕ್ತಿದ್ದ ಹುಡುಗೀರೆಲ್ಲ ಬೆಂಗಳೂರಿನ ಬಸ್​ ಹತ್ತುವಾಗ ಕಣ್ಣು ಒದ್ದೆ ಮಾಡಿಕೊಂಡು ಹೊರಡುತ್ತಾರೆ. ಇದು ಎಲ್ಲ ಹಳ್ಳಿ-ಹಳ್ಳಿಗಳ ಕಥೆ ಅಂದರೂ ತಪ್ಪಿಲ್ಲ.

ಬೆಂಗಳೂರನ್ನು ಬೆರಗುಗಣ್ಣಿಂದ ನೋಡುತ್ತ ಆ ಬೆರಗಿನಿಂದ ಹೊರಬರುವಷ್ಟರಲ್ಲಿ ಹತ್ತಾರು ಗೆಳೆಯರಾಗಿಬಿಟ್ಟಿರುತ್ತಾರೆ. ಬೆಂಗಳೂರಲ್ಲಿ ಕೆಲಸಕ್ಕೆ ಸೇರಿ ತಿಂಗಳಾಗುವುದರೊಳಗೆ ಬೆಂಗಳೂರು ನಮ್ಮದೇ ಅನಿಸತೊಡಗಿರುತ್ತದೆ. ಎಲ್ಲಿಂದಲೋ ಬಂದವರು ರೂಂಮೇಟ್​ಗಳಾಗುತ್ತಾರೆ, ವಾರ ಕಳೆಯುವಷ್ಟರಲ್ಲಿ ನಮ್ಮವರೇ ಆಗಿಬಿಡುತ್ತಾರೆ.


Loading...

ಎಲ್ಲಿಂದಲೋ ಬಂದವರು:

ಒಂದೇ ಪಿಜಿಯಲ್ಲೋ, ಮನೆಯಲ್ಲೋ ವಾಸ ಮಾಡುವ ಹುಡುಗೀರೊಳಗೆ ಬಹುಬೇಗ ಆತ್ಮೀಯತೆ ಬೆಳೆದುಬಿಡುತ್ತದೆ. ಯಾರಾದರೊಬ್ಬರು ಊರಿಗೆ ಹೋಗಿಬಂದರೆ ನಾವೇ ಹೋಗಿಬಂದಷ್ಟು ಖುಷಿ. ಊರಿನಿಂದ ಬಂದ ತಿಂಡಿ-ತಿನಿಸುಗಳನ್ನೆಲ್ಲ ಹರಡಿಕೊಂಡು ಹರಟುತ್ತ ಕುಳಿತರೆ ಗಂಟೆಗಳೆಲ್ಲ ನಿಮಿಷ ಮಾತ್ರ. ದೊಡ್ಡದೊಂದು ಬಾಕ್ಸಿನಲ್ಲಿ ಎಲ್ಲರ ಮನೆಯಿಂದ ಬಂದ ತಿಂಡಿಯನ್ನೆಲ್ಲ ಹಾಕಿಟ್ಟುಕೊಂಡು ರಾತ್ರಿ ಆಫೀಸಿನಿಂದ ಮನೆಗೆ ಹೋದಾಗ ತಿನ್ನುವ ಖುಷಿಯೇ ಬೇರೆ.

ಅವಳ ಮನೆಯ ಚಕ್ಕುಲಿ, ಇವಳ ಮನೆಯ ಹೋಳಿಗೆ, ಪಕ್ಕದ ರೂಮಿನವರು ತಂದ ಮಾವು, ಪೇರಳೆ ಹಣ್ಣು ಬಟ್ಟಲಲ್ಲಿ ಸ್ಪರ್ಧೆಗೆ ಕುಳಿತಿರುತ್ತದೆ. ಹರಿವಾಣದಲ್ಲಿ ಹಣ್ಣುಗಳನ್ನೆಲ್ಲ ರಾಶಿಹಾಕಿಕೊಂಡು ಹಾಲ್​ನಲ್ಲಿಟ್ಟುಕೊಂಡು ಕುಳಿತರೆ ಒಬ್ಬೊಬ್ಬರ ಆಫೀಸಿನ ಕತೆಯೂ ಬಿಚ್ಚಿಕೊಳ್ಳುತ್ತದೆ. ಈ ಮಧ್ಯೆ ಮನೆಯ ನೆನಪಾಗಿ ಯಾರಾದರೂ ಕಣ್ಣೀರಿಟ್ಟರೆ ಐದಾರು ಕೈಗಳು ಸಮಾಧಾನಪಡಿಸುತ್ತವೆ. ಗಾಸಿಪ್​, ತುಂಟಾಟ, ಬೇಸರ, ಪಾರ್ಟಿ, ಹಬ್ಬ, ಔಟಿಂಗ್​ ಎಲ್ಲದಕ್ಕೂ ಜೊತೆಯಾಗುವ ಜೀವಗಳು ಒಂಟಿತನವನ್ನು ಮೀರಿ ಹೊಸ ಸಂಬಂಧವನ್ನು ಬೆಸೆದುಕೊಳ್ಳಲು ಕಾರಣವಾಗುತ್ತವೆ.ಊರು ಹಲವು, ಒಂದೇ ಸೂರು:

ಅಮ್ಮ ಮಾಡಿದ ಅಡುಗೆಯಲ್ಲಿ ಎಲ್ಲವೂ ಸರಿಯಿದ್ದರೂ ಕೊಂಕು ಹುಡುಕುವ ನಾವು ಮಾರ್ಕೆಟೆಲ್ಲ ಸುತ್ತಾಡಿ ಕೆಸುವಿನ ಎಲೆ ತಂದು ಪತ್ರೊಡೆ ಮಾಡಲು ತಯಾರಿ ನಡೆಸುತ್ತೇವೆ. ಅಮ್ಮನ ಟಿಪ್ಸ್- ಯೂಟ್ಯೂಬ್​ ವಿಡಿಯೋ ಮಿಕ್ಸ್​ ಆಗಿ ಪತ್ರೊಡೆ ಹದ ತಪ್ಪಿದರೂ ನಾವು ಮಾಡಿದ್ದೆಂಬ ಭಾವನೆಯೇ ಹಿತವಾಗಿರುತ್ತದೆ. ಗದಗಿನವಳ ರೊಟ್ಟಿ, ಉಡುಪಿಯವಳ ಸಾರು, ಮಂಗಳೂರಿನವಳ ನೀರ್​ದೋಸೆ, ಮಲೆನಾಡಿನ ಉಪ್ಪಿನಕಾಯಿ, ಗೊಜ್ಜು, ತೊಕ್ಕುಗಳು ಬೆಂಗಳೂರಿನ ರೈಸ್​ಬಾತ್​ ನಡುವೆ ಹೋರಾಟ ನಡೆಸುತ್ತವೆ.ಯಾವ್ಯಾವುದೋ ಊರಿಂದ ಬಂದವರಿಗೆ ಬೆಂಗಳೂರು ಎಲ್ಲವನ್ನೂ ಕಲಿಸುತ್ತದೆ. ಅಕ್ಕಪಕ್ಕದ ಊರವರನ್ನೇ ಗುಂಪಿಗೆ ಸೇರದವರಂತೆ ನೋಡುತ್ತಿದ್ದ ಹಳ್ಳಿಯ ಹುಡುಗೀರಿಗೆ ಬೆಂಗಳೂರಿನಲ್ಲಿ ತಮಿಳುನಾಡು, ಕೇರಳ, ಉತ್ತರ ಭಾರತ, ಆಂಧ್ರದವರು ಎಲ್ಲರೂ ಒಂದೇ ಎನ್ನುವ ಜ್ಞಾನೋದಯವಾಗುತ್ತದೆ. ಇಂತಹ ನೂರಾರು ನೆನಪುಗಳೊಂದಿಗೆ, ಹೊಸಬರ ಪರಿಚಯದ ಅನುಭವದೊಂದಿಗೆ ನಾವು ಪಕ್ವವಾಗುತ್ತಲೇ ಹೋಗುತ್ತೇವೆ. ಅಷ್ಟಾದರೂ ಊರಿಗೆ ಹೋಗಿ ವಾಪಾಸು ಬರುವಾಗ ಕಣ್ಣಂಚಲ್ಲಿ ಹನಿ ಒಸರುತ್ತದೆ. ಬೆಂಗಳೂರಲ್ಲಿ ಇದ್ದು ಏಳೆಂಟು ವರ್ಷಗಳೇ ಕಳೆದರೂ 'ಅಲ್ಲಿರುವುದು ನಮ್ಮನೆ' ಎಂದು ಮನಸು ಊರಿನತ್ತಲೇ ವಾಲುತ್ತದೆ.  ಬೆಂಗಳೂರನ್ನು ಬಿಡಲಾರದೆ ಊರಿಗೆ ಹೋಗಲಾರದೆ ಸಂದಿಗ್ಧತೆಯಲ್ಲೇ ಇನ್ನೊಂದು ಐದತ್ತು ವರ್ಷ ಕಳೆದುಬಿಡುತ್ತೇವೆ!
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ