ಎಷ್ಟು ಪ್ರಮಾಣದ ಮದ್ಯ ದೇಹಕ್ಕೆ ಒಳ್ಳೆಯದು? ಇಲ್ಲಿದೆ ಆಲ್ಕೋಹಾಲ್ ಮೇಲಿನ ವಿಶೇಷ ವರದಿ

news18
Updated:August 30, 2018, 1:46 PM IST
ಎಷ್ಟು ಪ್ರಮಾಣದ ಮದ್ಯ ದೇಹಕ್ಕೆ ಒಳ್ಳೆಯದು? ಇಲ್ಲಿದೆ ಆಲ್ಕೋಹಾಲ್ ಮೇಲಿನ ವಿಶೇಷ ವರದಿ
news18
Updated: August 30, 2018, 1:46 PM IST
-ನ್ಯೂಸ್ 18 ಕನ್ನಡ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಯಾರಿಗೆ ತಾನೆ ತಿಳಿದಿಲ್ಲ. ಆದರೂ ಅಮಲಿನಲ್ಲಿ ತೇಲುವವರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕನಿಷ್ಠ ಪ್ರಮಾಣದಲ್ಲಿ ಕುಡಿಯುತ್ತಿದ್ದೇನೆ, ಹಾಗಾಗಿ ಆರೋಗ್ಯವಾಗಿರುವೆ ಎಂದು ನೀವು ಭಾವಿಸಿದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಪ್ರತಿನಿತ್ಯ ಸೇವಿಸುವ ಒಂದು ಪೆಗ್ ಆಲ್ಕೋಹಾಲ್​​ ಕೂಡ ಅನಾರೋಗ್ಯಕ್ಕೆ ನೀವು ಮಾಡಿಕೊಡುವ ದಾರಿಯಾಗಿರುತ್ತದೆ ಎಂದು ಇತ್ತೀಚೆಗೆ ಅಧ್ಯಯನ ತಂಡವೊಂದು ತಿಳಿಸಿದೆ.

ಮದ್ಯಪಾನದ ಮೇಲೆ ಬರೋಬ್ಬರಿ 22 ವರ್ಷಗಳ ಕಾಲ ಅಧ್ಯಯನ ನಡೆಸಿದ ಸಂಶೋಧಕರು 195 ದೇಶಗಳನ್ನು ಸುತ್ತಿ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಇದಕ್ಕಾಗಿ ಈಗಾಗಲೇ ಆಲ್ಕೋಹಾಲ್​ ಮೇಲೆ ಪ್ರಕಟಗೊಂಡ 592 ಅಧ್ಯಯನ ವರದಿಗಳನ್ನು ಅಭ್ಯಸಿಸಿ, 694 ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಸಂಶೋಧಕರಿಗೆ ತಿಳಿದು ಬಂದ ಅಚ್ಚರಿ ವಿಷಯವೆಂದರೆ ಕಡಿಮೆ ಪ್ರಮಾಣದಲ್ಲೂ ಆಲ್ಕೋಹಾಲ್ ಸೇವಿಸಿದರೆ ಅನಾರೋಗ್ಯ ಮಾತ್ರ ಕಟ್ಟಿಟ್ಟ ಬುತ್ತಿ ಎಂಬುದು.

ಈ ಅಧ್ಯಯನ ತಂಡದಲ್ಲಿದ್ದ ಕೆಂಬ್ರಿಡ್ಜ್ ವಿಶ್ವ ವಿದ್ಯಾಲಯದ ಸಂಖ್ಯಾಶಾಸ್ತ್ರಜ್ಞ ಡೇವಿಡ್‌ ಸ್ಪೀಗೆಲ್ಟರ್‌ ಹೇಳುವಂತೆ 'ನಮ್ಮ ದೇಹದೊಳಗೆ ಆಲ್ಕೋಹಾಲ್ ಪ್ರವೇಶಿಸಿದರೆ ಆರೋಗ್ಯಕ್ಕೆ ಮಾರಕ. ಅದಕ್ಕೆ ಕನಿಷ್ಠ ಅಥವಾ ಗರಿಷ್ಠ ಎಂಬ ಮಿತಿಗಳಿರುವುದಿಲ್ಲ' ಎಂದು ತಿಳಿಸಿದ್ದಾರೆ.

195 ದೇಶಗಳ ಮದ್ಯಪಾನಿಗಳನ್ನು ಭೇಟಿಯಾಗಿರುವ ಅಧ್ಯಯನ ತಂಡ ಯಾವ್ಯಾವ ದೇಶದವರು ಎಷ್ಟು ಪ್ರಮಾಣದಲ್ಲಿ ಆಲ್ಕೋಹಾಲ್ ದಾಸರಾಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಇದಕ್ಕಾಗಿ ಆಯಾ ದೇಶಗಳಲ್ಲಿ ಮಾರಾಟವಾದ ಮದ್ಯದ ಪ್ರಯಾಣವನ್ನು ಮಾನದಂಡವಾಗಿ ಬಳಸಿಕೊಳ್ಳಲಾಗಿತ್ತು. ವಿಶ್ವದಲ್ಲಿ ಮಾರಾಟವಾಗುವ ಮದ್ಯದ ಒಟ್ಟು ಪ್ರಮಾಣವನ್ನು ಜನಸಂಖ್ಯೆಯಿಂದ ವಿಭಾಗಿಸಿದರೆ, ಪ್ರತಿ ವ್ಯಕ್ತಿ ದಿನವೊಂದಕ್ಕೆ 10 ಗ್ರಾಂನಷ್ಟು ಶುದ್ಧ ಆಲ್ಕೋಹಾಲ್ ಸೇವಿಸುತ್ತಾರೆ ಎಂಬ ಲೆಕ್ಕ ದೊರಕುತ್ತದೆ. 100 ಗ್ರಾಂ ವೈನ್ ಕುಡಿದರೆ 10 ಗ್ರಾಂ ಆಲ್ಕೋಹಾಲ್ ದೇಹ ಸೇರುತ್ತದೆ. ಬಿಯರ್​ನಿಂದ 10 ಗ್ರಾಂ ಆಲ್ಕೋಹಾಲ್ ಸೇರಬೇಕಾದರೆ 340 ಗ್ರಾಂ ಬಿಯರ್ ಮತ್ತು ಕೇವಲ 28 ಗ್ರಾಂ ವಿಸ್ಕಿಯಿಂದ 10 ಗ್ರಾಂ ಆಲ್ಕೋಹಾಲ್ ದೇಹ ಸೇರುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಈ ವರದಿ ಪ್ರಕಾರ 2016ರಲ್ಲಿ ಶೇ.39ರಷ್ಟು ಪುರುಷರು ಮತ್ತು ಶೇ.25ರಷ್ಟು ಮಹಿಳೆಯರು ಖಾಯಂ ಕುಡಿತದ ಚಟಕ್ಕೆ ಒಳಗಾಗಿದ್ದಾರೆ. ವಿಶ್ವದ 700 ಕೋಟಿ ಜನಸಂಖ್ಯೆ ಪೈಕಿ ಪ್ರತಿನಿತ್ಯ 240 ಕೋಟಿ ಜನರು ಆಲ್ಕೋಹಾಲ್ ಸೇವಿಸುತ್ತಿದ್ದಾರೆ. ಒಂದು ದೇಶದ ಮದ್ಯ ವ್ಯಸನಿಗಳ ಪ್ರಮಾಣವು ಆಯಾ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಗತಿಗಳ ಮೇಲೆ ನಿರ್ಧರಿಸಲ್ಪಟ್ಟಿದೆ. ಹೆಚ್ಚು ಆರ್ಥಿಕವಾಗಿ ಪ್ರಬಲವಾಗಿರುವ ದೇಶಗಳ ಜನರು ಹೆಚ್ಚು ಆಲ್ಕೋಹಾಲ್ ಸೇವಿಸುತ್ತಿದ್ದಾರೆ ಎಂದು ಈ ಅಧ್ಯಯನ ತಂಡ ತಿಳಿಸಿದೆ.

ಎಷ್ಟು ಪ್ರಮಾಣದ ಆಲ್ಕೋಹಾಲ್ ದೇಹಕ್ಕೆ ಒಳ್ಳೆಯದು?
Loading...

ಲ್ಯಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಂತೆ, ಪ್ರತಿ ವರ್ಷ ಆಲ್ಕೋಹಾಲ್​ನಿಂದ 28 ಲಕ್ಷ ಜನರು ಸಾವಿಗೀಡಾಗಿದ್ದಾರೆ. ಪ್ರತಿವರ್ಷ ಹೆಚ್ಚು ಜನರ ಸಾವಿಗೆ ಕಾರಣವಾಗುವ ಜಾಗತಿಕ ಸಮಸ್ಯೆಗಳ ಪೈಕಿ ಆಲ್ಕೋಹಾಲ್ ಏಳನೇ ಸ್ಥಾನದಲ್ಲಿದೆ. 2016 ರಲ್ಲಿ ಶೇ. 6.8 ಮಂದಿ ಪುರುಷರು ಮತ್ತು ಶೇ.2.2 ಮಹಿಳೆಯರು ಮದ್ಯಪಾನದಿಂದ ಸಾವನ್ನಪ್ಪಿದ್ದಾರೆ. 15ರಿಂದ 49ರ ವಯಸ್ಸಿನ ವ್ಯಕ್ತಿಗಳ ಅನಾರೋಗ್ಯಕ್ಕೆ ಆಲ್ಕೋಹಾಲ್ ಸೇವನೆ ಮುಖ್ಯ ಕಾರಣ ಎನ್ನಲಾಗಿದೆ.

ಆಲ್ಕೋಹಾಲ್ ಸೇವನೆ ಮತ್ತು ಧೂಮಪಾನಗಳ ನಡುವೆ ಪ್ರಮುಖ ವ್ಯತ್ಯಾಸವಿದೆ. ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಆಲ್ಕೋಹಾಲ್ ಬಗ್ಗೆ ಇದೇ ಮಾತನ್ನು ಹೇಳಿದರೆ ಯಾರೂ ನಂಬುವುದಿಲ್ಲ. ನಿಯಮಿತ ಮದ್ಯಪಾನದಿಂದ ತೊಂದರೆ ಇಲ್ಲ ಎಂಬುದನ್ನು ಜನರು ನಂಬಿದ್ದಾರೆ ಎಂದು ವಾಷಿಂಗ್‌ಟನ್‌ ವಿಶ್ವ ವಿದ್ಯಾಲಯದ ಹೆಲ್ತ್‌ ಮೆಟ್ರಿಕ್‌ ಸೈನ್ಸಸ್‌ ಪ್ರಾಧ್ಯಾಪಕ ಎಮ್ಯಾನುಯೆಲಾ ಗಕಿಡೊ ತಿಳಿಸಿದರು.

ಮದ್ಯಪಾನಿಗಳು ಕೂಡ ಈ ಹಿಂದಿನ ಹಲವಾರು ಸಂಶೋಧನೆಗಳನ್ನು ನಂಬಿದ್ದಾರೆ. ಈ ಹಿಂದೆ ಅನೇಕ ಸಂಶೋಧನೆಯಲ್ಲಿ ನಿರ್ದಿಷ್ಟ ಪ್ರಮಾಣದ ಆಲ್ಕೋಹಾಲ್ ಸೇವಿಸಿದರೆ ಸಮಸ್ಯೆ ಇಲ್ಲ ಎಂದು ತಿಳಿಸಲಾಗಿತ್ತು. ಇದನ್ನೆ ತಮ್ಮ ವಾದಕ್ಕೆ ಬಳಸಿಕೊಳ್ಳುತ್ತಿರುವ ಮದ್ಯಪ್ರಿಯರು ಕುಡಿತದಿಂದ ಹೊರ ಬರುವ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ತಿಳಿಸಿದರು.

ಪ್ರತಿನಿತ್ಯ ಸ್ವಲ್ಪ ಮದ್ಯವನ್ನು ಸತತ ಒಂದು ವರ್ಷಗಳ ಕಾಲ ಸೇವಿಸಿದರೆ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಹೊಸ ವರದಿ ಹೇಳುವಂತೆ ಹಿಂದೆ ಆಲ್ಕೋಹಾಲ್ ಸೇವಿಸುತ್ತಿದ್ದ ಒಂದು ಲಕ್ಷ ಜನರಲ್ಲಿ 914 ಮಂದಿ ಅನಾರೋಗ್ಯಕ್ಕೀಡಾಗಿದ್ದರು. ಈ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ 918ಕ್ಕೆ ಏರಿಕೆಯಾಗಿದೆ.

ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ನಿಯಮಿತ ಬಿಯರ್ ಸೇವನೆಯಿಂದ ಹೃದ್ರೋಗಗಳು ಕಡಿಮೆಯಾಗುತ್ತದೆ ಎಂದು ನಂಬಲಾಗುತ್ತದೆ. ಇಲ್ಲ ಮದ್ಯಪಾನದಿಂದ ದಪ್ಪವಾಗಬಹುದು ಎಂಬ ನಂಬಿಕೆಗಳಿವೆ. ಆದರೆ ಇವೆಲ್ಲಾ ಮದ್ಯ ವ್ಯಸನವನ್ನು ಸಮರ್ಥಿಸಿಕೊಳ್ಳಲಿರುವ ಕೆಲ ಕುಂಟು ನೆಪಗಳಷ್ಟೇ ಎಂದು ವರದಿ ತಿಳಿಸಿದೆ. ನೀವೂ ಕೂಡ ಮದ್ಯಪಾನಿಗಳಾಗಿದ್ದರೆ , ದಿನ ಎಷ್ಟು ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುತ್ತೀರಿ ಎಂಬುದನ್ನು ಲೆಕ್ಕ ಮಾಡಿಕೊಳ್ಳಿ. ಏಕೆಂದರೆ ಮದ್ಯಪಾನ ಎಂಬುದು ಯಾವುದೇ ಪ್ರಮಾಣದಲ್ಲಿದ್ದರೂ ಆರೋಗ್ಯಕ್ಕೆ ಹಾನಿಕಾರಕ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...