Relationship: ನಿಮ್ಮ ಸಂಗಾತಿ ಮತ್ತೊಬ್ಬರ ಜೊತೆ ಸಂಬಂಧ ಇಟ್ಕೊಂಡಿದ್ರೆ ನಿಭಾಯಿಸೋದು ಹೇಗೆ?

ದಾಂಪತ್ಯದಲ್ಲಿ ನಿಮ್ಮ ಗಂಡ ಅಥವಾ ಹೆಂಡತಿ ನಿಮಗೆ ಗೊತ್ತಿಲ್ಲದೆಯೇ ಬೇರೆಯವರ ಜೊತೆಯಲ್ಲಿ ಸಂಬಂಧ ಹೊಂದಿದ್ದರೆ, ನಿಮಗೆ ತುಂಬಾನೇ ಕಿರಿಕಿರಿ ಅನ್ನಿಸುತ್ತದೆ, ನೋವುಂಟಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಾಂಪತ್ಯವು(Marriage) ಒಂದು ರೀತಿಯಲ್ಲಿ ಎರಡು ಚಕ್ರಗಳ ಮತ್ತು ಎರಡು ಎತ್ತುಗಳ ಸಹಾಯದಿಂದ ಹೋಗುವ ಎತ್ತಿನ ಗಾಡಿ ಇದ್ದಂತೆ ಎಂದು ಹೇಳಬಹುದು. ಬರೀ ದಾಂಪತ್ಯವಲ್ಲದೆ, ಬೇರೆ ಯಾವುದೇ ಸಂಬಂಧವು(Relationship) ಗಟ್ಟಿಯಾಗಿ ಸುದೀರ್ಘವಾಗಿ ಬಾಳಿಕೆ ಬರಲು ಪರಸ್ಪರರಲ್ಲಿ ಆ ನಂಬಿಕೆಯೆಂಬುದು(Trust) ತುಂಬಾನೇ ಮುಖ್ಯವಾಗುತ್ತದೆ.

ಇಂತಹ ದಾಂಪತ್ಯದಲ್ಲಿ ನಿಮ್ಮ ಗಂಡ ಅಥವಾ ಹೆಂಡತಿ ನಿಮಗೆ ಗೊತ್ತಿಲ್ಲದೆಯೇ ಬೇರೆಯವರ ಜೊತೆಯಲ್ಲಿ ಸಂಬಂಧ ಹೊಂದಿದ್ದರೆ, ನಿಮಗೆ ತುಂಬಾನೇ ಕಿರಿಕಿರಿ ಅನ್ನಿಸುತ್ತದೆ, ನೋವುಂಟಾಗುತ್ತದೆ. ನಿಮ್ಮ ಸಂಗಾತಿಯು ವಿಶ್ವಾಸಘಾತುಕನಾಗಿದ್ದಾನೆ ಅಥವಾ ವಿಶ್ವಾಸಘಾತುಕಳಾಗಿದ್ದಾಳೆ ಎಂದು ಗೊತ್ತಾದ ಕ್ಷಣದಿಂದ ನಿಮಗೆ ಆ ಸಂಬಂಧದಲ್ಲಿ ಯಾವುದೇ ರೀತಿಯ ಖುಷಿ ಇರುವುದಿಲ್ಲ.

ಒಬ್ಬ ವ್ಯಕ್ತಿಯು ತಮ್ಮ ದಾಂಪತ್ಯವನ್ನು ಬಿಟ್ಟು ಅದರ ಹೊರಗಿನ ವ್ಯಕ್ತಿಯೊಂದಿಗೆ ಸಂಬಂಧದಲ್ಲಿ ಇರುವಾಗ ಅದು ತುಂಬಾನೇ ತೊಂದರೆಯನ್ನು ಉಂಟು ಮಾಡಬಹುದು. ಈ ರೀತಿಯ ದ್ರೋಹಗಳು ಭಾವನಾತ್ಮಕವಾಗಿ ನಮ್ಮ ಬಾಂಧವ್ಯದ ಮೇಲೆ ಮತ್ತು ನಮ್ಮ ನಡುವಿನ ಅನ್ಯೋನ್ಯತೆಯನ್ನು ಹಾಳು ಮಾಡುತ್ತವೆ.

ಹೀಗೆ ದಾಂಪತ್ಯದಲ್ಲಿ ನಿಮಗೆ ನಿಮ್ಮ ಸಂಗಾತಿಯಿಂದ ಯಾವುದಾದರೂ ಚಿಕ್ಕ ಪುಟ್ಟ ಮೋಸ, ದ್ರೋಹ ಮತ್ತು ಸುಳ್ಳು ಹೇಳುವುದಾಗಿರಬಹುದು ನಡೆದರೆ ನೀವು ತಕ್ಷಣಕ್ಕೆ ಏನು ಮಾಡುತ್ತೀರಿ. ನೀವು ನಿಮ್ಮ ಮನಸ್ಸಿಗೆ ಮತ್ತು ನಿಮ್ಮ ದಾಂಪತ್ಯಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಆ ದ್ರೋಹ, ಮೋಸವನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿರಿ.

ಇದನ್ನೂ ಓದಿ: Dressing Room: ನಿಮ್ಮ ಅಂದದಷ್ಟೇ ಸುಂದರ ಹಾಗೂ ಸ್ವಚ್ಛವಾಗಿರಲಿ ನಿಮ್ಮ ಡ್ರೆಸ್ಸಿಂಗ್ ರೂಮ್

1. ಸ್ವೀಕಾರ ಮಾಡಿ

ವಿಶ್ವಾಸಘಾತುಕ ಸಂಗಾತಿಯು ನೀಡಿದ ಆ ನೋವು ಕಡಿಮೆಯಾಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ. ದುಃಖದ ಛಾಯೆ ಸಾಮಾನ್ಯವಾಗಿ ಬೇಗ ಹೋಗುವುದಿಲ್ಲ. ನಂತರ ಉದ್ವೇಗ, ಭಯದ ಭಾವನೆ, ನೋವು ಅನುಭವಿಸುವುದು, ಗೊಂದಲಕ್ಕೊಳಗಾಗುವುದು ಮತ್ತು ನಿರಾಶೆ ಮತ್ತು ಖಿನ್ನತೆಯ ಭಾವನೆ ಇವೆಲ್ಲವೂ ಬರುವುದು ಸಹಜ.

ಏನಾಯಿತು ಎಂಬುದನ್ನು ಒಪ್ಪಿಕೊಳ್ಳಲು ಮತ್ತು ಅವರನ್ನು ಕ್ಷಮಿಸಲು ಅವರ ಪರಿಸ್ಥಿತಿಯನ್ನು ಮೊದಲಿಗೆ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಸಂಗಾತಿಯು ನಿಮಗೆ ಅನ್ಯಾಯ ಮಾಡಿದ್ದಾರೆ ಮತ್ತು ನಿಮ್ಮ ಬೆನ್ನ ಹಿಂದೆ ನಿಮಗೆ ಮೋಸ ಮಾಡಿದ್ದಾರೆ ಎಂದು ಒಪ್ಪಿಕೊಳ್ಳುವುದು ನಿಮ್ಮಲ್ಲಿರುವ ಕರುಣೆ, ಸಂಯಮ ಮತ್ತು ಸದ್ಭಾವನೆಯನ್ನು ಎತ್ತಿ ತೋರಿಸುತ್ತದೆ.

ನೀವು ನಿಮ್ಮ ಸಂಗಾತಿಯನ್ನು ಕ್ಷಮಿಸಲು ಮತ್ತು ನಿಮ್ಮ ದಾಂಪತ್ಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದರೂ, ಅಪನಂಬಿಕೆಯ ಭಾವನೆಗಳು ಮತ್ತು ಅಹಿತಕರ ಭಾವನೆಗಳು ಸಂಪೂರ್ಣವಾಗಿ ನಿಮ್ಮ ಮನಸ್ಸಿನಿಂದ ಅಷ್ಟು ಸುಲಭವಾಗಿ ಹೋಗುವುದಿಲ್ಲ.

2. ಸಂಗಾತಿಯನ್ನು ಕ್ಷಮಿಸಿ

ಪರಿಸ್ಥಿತಿಯ ಬಗ್ಗೆ ಕೋಪಗೊಳ್ಳುವುದು ಸಹಜ, ಕೋಪದ ಸ್ಥಿತಿಯಲ್ಲಿ ಸಂಗಾತಿಯನ್ನು ನೋಯಿಸುವ ಪ್ರವೃತ್ತಿ ಸಹ ಸಾಮಾನ್ಯವಾಗಿರುತ್ತದೆ. ನೀವು ಹೊರಗೆ ಹೋಗಿ ಮೂರನೆಯವರ ಹತ್ತಿರ ನಿಮ್ಮ ಸಂಗಾತಿ ಮಾಡಿದ ದ್ರೋಹದ ಬಗ್ಗೆ ಮಾತನಾಡುವುದು ಮತ್ತು ಅವರ ಬಗ್ಗೆ ಇರುವ ಕೋಪದಿಂದ ದುಡುಕಿನ ನಿರ್ಧಾರ ತೆಗೆದುಕೊಳ್ಳುವಂತೆ ಆಗುತ್ತದೆ.

ನೀವು ಅನುಭವಿಸುವ ನೋವನ್ನು ಮತ್ತು ನಿಮ್ಮ ಸಂಗಾತಿಯ ಬಗ್ಗೆ ನೀವು ಹೊಂದಿರುವ ಕೋಪ ಮತ್ತು ದ್ವೇಷವನ್ನು ಮೊದಲು ಒಪ್ಪಿಕೊಳ್ಳಿ. ನಾವೆಲ್ಲರೂ ಬೇರೆಯವರ ತಪ್ಪುಗಳನ್ನು ಗುರುತಿಸುವುದು ತುಂಬಾ ಸುಲಭ, ಆದರೆ ಅದನ್ನು ಕ್ಷಮಿಸಲು ನಾವು ಕಲಿತರೆ ಒಳ್ಳೆಯದು ಮತ್ತು ಪ್ರಜ್ಞಾ ಪೂರ್ವಕ ಪ್ರಯತ್ನ ಸಹ ಮಾಡಬೇಕು.

ದಾಂಪತ್ಯ ದ್ರೋಹಕ್ಕಾಗಿ ಸಂಗಾತಿಯನ್ನು ಕ್ಷಮಿಸುವುದು ಅಷ್ಟು ಸುಲಭದ ಮಾತಲ್ಲ, ಮೋಸದಿಂದ ಆದ ನೋವು, ಹುಟ್ಟಿಕೊಂಡ ಭಾವನೆಗಳನ್ನು ತಿಳಿಗೊಳಿಸುವುದಕ್ಕೆ ಸಮಯ ಬೇಕು, ಇದು ದೀರ್ಘ ಸಮಯ ತೆಗೆದುಕೊಳ್ಳಬಹುದಾದ ಪ್ರಕ್ರಿಯೆಯಾಗಿದೆ. ಹೀಗೆ ಕ್ಷಮಿಸಿ ಮುಂದೆ ಸಾಗುವುದರಿಂದ ಮೋಸ ಮಾಡಿದ ವ್ಯಕ್ತಿಯು ತನ್ನ ತಪ್ಪನ್ನು ತಿದ್ದಿಕೊಂಡು ಸಕಾರಾತ್ಮಕವಾಗಿ ಮುಂದುವರಿಯಬಹುದು.

3. ಸ್ವಯಂ ಕಾಳಜಿ ವಹಿಸುವುದು

ನಿಮ್ಮ ಸಂಗಾತಿಯ ಮೋಸ, ದ್ರೋಹದಿಂದ ಆದ ನೋವಿನಿಂದ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತೀರಿ ಮತ್ತು ನಿಮಗೆ ಆ ಸಮಯದಲ್ಲಿ ಕೋಪ ಬರುವುದು ಸಹಜ ಮತ್ತು ವಿಭಿನ್ನವಾಗಿ ಪ್ರತಿಕ್ರಿಯಿಸುವುದು ಸಹ ಸಾಮಾನ್ಯವಾಗಿರುತ್ತದೆ. ವಾಕರಿಕೆ, ಹೊಟ್ಟೆಯ ನೋವು, ತಲೆ ನೋವು, ತುಂಬಾ ಕಡಿಮೆ ಅಥವಾ ಹೆಚ್ಚು ನಿದ್ರೆ, ಏಕಾಗ್ರತೆಯಲ್ಲಿ ಕಷ್ಟ, ತುಂಬಾ ಕಡಿಮೆ ತಿನ್ನುವುದು ಅಥವಾ ಹೆಚ್ಚು ತಿನ್ನುವುದು ಹೀಗೆ ಹಲವಾರು ಸಮಸ್ಯೆಗಳು ಆಗುತ್ತವೆ.

ಆದರೆ ಆರಂಭಿಕ ಹಂತ ಮುಗಿದ ನಂತರ, ನೀವು ಆರೋಗ್ಯಕರವಾಗಿ ತಿನ್ನಬೇಕು, ದಿನಚರಿಯನ್ನು ಪಾಲಿಸಬೇಕು, ನಿಯಮಿತವಾಗಿ ಮಲಗಬೇಕು, ಸಾಕಷ್ಟು ನೀರು ಕುಡಿಯಬೇಕು ಮತ್ತು ವ್ಯಾಯಾಮ ಮಾಡಬೇಕು. ಇದರಿಂದ ಆತಂಕ ಮತ್ತು ಖಿನ್ನತೆ ಕಡಿಮೆಯಾಗುತ್ತದೆ.

ನೀವು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಜನರು ಬಲವಾದ ಅಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ. ಇನ್ನೊಬ್ಬ ವ್ಯಕ್ತಿಯ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ಬೇರೆ ಯಾರಿಗೂ ನಿಖರವಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ನಿಮ್ಮ ಕೌಟುಂಬಿಕ ವಿಚಾರಗಳನ್ನು ನೀವು ಖಾಸಗಿಯಾಗಿಡುವುದು ಉತ್ತಮ.

4. ಸಮಯ ತೆಗೆದುಕೊಳ್ಳಿ

ಕೆಲವೊಮ್ಮೆ ಎಂಥಾ  ದೊಡ್ಡ ಸಮಸ್ಯೆಗಳನ್ನು ಸಮಯವೇ ಪರಿಹರಿಸುತ್ತೆ ಎಂಬುದನ್ನು ನಾವೆಲ್ಲಾರೂ ನೋಡಿರುತ್ತೇವೆ. ನೀವು ತಕ್ಷಣದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕಾಗಿಲ್ಲ ಮತ್ತು ನೀವು ಏನು ಮಾಡಲು ಬಯಸುತ್ತೀರಿ ಎಂಬುದರ ಬಗ್ಗೆ ಯೋಚಿಸಿದ ನಂತರ, ಒಂದು ಯೋಜನೆಯನ್ನು ಮಾಡಿ ಮತ್ತು ಅದನ್ನು ಕಾರ್ಯಗತ ಗೊಳಿಸುವುದು ಮತ್ತಷ್ಟು ಸುಲಭವಾಗುತ್ತದೆ.

ನೀವು ಈ ವಿಷಯಗಳನ್ನು ಯೋಚಿಸಲು ಸಮಯ ತೆಗೆದುಕೊಳ್ಳುವಾಗ, ಆಘಾತದಿಂದ ಉಂಟಾಗುವ ನಿರಾಕರಣೆಯ ವಿವಿಧ ಹಂತಗಳನ್ನು ನೀವು ಎದುರಿಸುತ್ತೀರಿ, ಕೋಪದ ಭಾವನೆ ಬರಬಹುದು, ನೀವು ಧಿಕ್ಕಾರವನ್ನು ಅನುಭವಿಸಬಹುದು ಮತ್ತು ನೀವು ಪಶ್ಚಾತ್ತಾಪ ಸಹ ಪಡೆಯಬಹುದು.

ದಾಂಪತ್ಯ ದ್ರೋಹವು ನಿಮ್ಮ ಸಂಗಾತಿಯ ಕ್ರಿಯೆಯೇ ಆಗಿತ್ತು, ಹೊರತು ನಿಮ್ಮ ಕ್ರಿಯೆಯಾಗಿರಲಿಲ್ಲ ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಆದ್ದರಿಂದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿರಿ.

ಇದನ್ನೂ ಓದಿ: Body Care: ಇಳಿ ವಯಸ್ಸಿನಲ್ಲಿ ಕಾಡುವ ದೈಹಿಕ ಸಮಸ್ಯೆಗಳಿಂದ ದೂರವಿರಬೇಕೇ..? ಈ ಅಧ್ಯಯನದಲ್ಲಿ ಹೇಳಿರುವಂತೆ ಮಾಡಿ..

5. ಸಹಾಯ ಪಡೆಯಿರಿ

ನಿಮ್ಮ ಸಂಗಾತಿಯಿಂದ ಮೋಸ ಹೋದಂತೆ ನೀವು ಪ್ರತ್ಯೇಕ ಮತ್ತು ಒಂಟಿತನವನ್ನು ಅನುಭವಿಸುತ್ತೀರಿ. ಆದ್ದರಿಂದ, ಬೆಂಬಲಕ್ಕಾಗಿ ನಿಮ್ಮ ಸುತ್ತಲಿನವರ ಸಹಾಯ ಪಡೆಯುವುದಕ್ಕೆ ಹೆದರಬೇಡಿ. ನಿಮ್ಮನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವ ಜನರೊಂದಿಗೆ ಸಾಕಷ್ಟು ಸಮಯ ಕಳೆಯಿರಿ. ತರಬೇತಿ ಪಡೆದ ವೃತ್ತಿಪರರೊಂದಿಗೆ ಭೇಟಿಯಾಗುವುದು ನಿಮ್ಮ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂದು ತಿಳಿದುಕೊಳ್ಳಲು ತುಂಬಾ ಸಹಾಯ ಮಾಡುತ್ತದೆ.

ಸಂಗಾತಿಯ ಮೋಸದ ಬಗ್ಗೆ ತಿಳಿದಾಗ ಆರಂಭಿಕ ದಿನಗಳು ತುಂಬಾನೇ ಯಾತನಾಮಯವಾಗಿರುತ್ತವೆ. ಆದರೆ ಈ ಸಲಹೆಗಳನ್ನು ಅನುಸರಿಸುವುದು ಮತ್ತು ವೃತ್ತಿಪರ ಮಾರ್ಗದರ್ಶನವನ್ನು ಪರಿಗಣಿಸುವುದು, ನಿಮ್ಮ ಕಾನೂನು ಹಕ್ಕುಗಳನ್ನು ತಿಳಿದುಕೊಳ್ಳುವುದು ಖಂಡಿತವಾಗಿಯೂ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
Published by:Latha CG
First published: