ಈ ದೇಶದಲ್ಲಿ ಇನ್ನೂ ಸಹ ಹಸಿಮಾಂಸ ಭಕ್ಷಕರಿದ್ದಾರೆ !

news18
Updated:July 19, 2018, 10:14 PM IST
ಈ ದೇಶದಲ್ಲಿ ಇನ್ನೂ ಸಹ ಹಸಿಮಾಂಸ ಭಕ್ಷಕರಿದ್ದಾರೆ !
news18
Updated: July 19, 2018, 10:14 PM IST
ಆದಿಮಾನವರು ಪ್ರಾಣಿಗಳನ್ನು ಬೇಟೆಯಾಡಿ ಹಸಿಮಾಂಸ ತಿನ್ನುತ್ತಿದ್ದರು ಎಂಬುದು ಗೊತ್ತಿದೆ. ಆದರೆ ಕಾಲಕ್ಕನುಗುಣವಾಗಿ ಆಹಾರ ಪದ್ದತಿ ಬದಲಿಸಿಕೊಂಡ ಮಾನವನಿಗೆ ಇಂದು ಉಪ್ಪು ಹುಳಿ ಖಾರ ಇಲ್ಲದೆ ಆಹಾರ ಗಂಟಲಿನಿಂದ ಇಳಿಯಲ್ಲ. ಅಂತದ್ರಲ್ಲಿ ಆಫ್ರಿಕಾ ಖಂಡದ ಒಂದು ದೇಶದ ಜನರು ಈಗಲೂ ಹಸಿಮಾಂಸ ತಿನ್ನುತ್ತಿದ್ದಾರೆ ಎಂದರೆ ನಂಬಲೇಬೇಕು. ಅದು ಕೂಡ ಅಭಿವೃದ್ಧಿ ಹೊಂದುತ್ತಿರುವ ಸಣ್ಣ ರಾಷ್ಟ್ರ ಇಥಿಯೋಪಿಯಾದಲ್ಲಿ ಎಂಬುದೇ ಅಚ್ಚರಿ.

ಇಥಿಯೋಪಿಯಾ ಜನರು ದನ, ಮೇಕೆ , ಕುರಿ , ಕೋಳಿ ಸೇರಿದಂತೆ ಎಲ್ಲ ಪ್ರಾಣಿಗಳ ಮಾಂಸವನ್ನು ಬೇಯಿಸದೇ ತಿನ್ನುತ್ತಾರೆ. ಇದರಲ್ಲಿ ಹಳ್ಳಿಗಾಡಿನ ಜನರಿಂದ ಹಿಡಿದು ಪಟ್ಟಣಗಳಲ್ಲಿ ವಾಸಿಸುತ್ತಿರುವ ಸುಶಿಕ್ಷಿತರು ಕೂಡ ಇದ್ದಾರೆ ಎನ್ನುವುದೇ ವಿಶೇಷ. ಕಾಲಗಳು ಉರುಳಿದರೂ ಇಲ್ಲಿನ ಜನರು ತಮ್ಮ ಆಹಾರ ಸಂಸ್ಕೃತಿಯ ಭಾಗವಾಗಿ ಹಸಿಮಾಂಸವನ್ನು ತಿನ್ನುವುದನ್ನು ಮುಂದುವರೆಸಿದ್ದಾರೆ.

ನಮ್ಮ ದೇಶದಲ್ಲಿ ಕಾಣಸಿಗುವ ಮಾಂಸದ ಅಂಗಡಿಗಳಂತೆ ಈ ದೇಶದ ಹೋಟೆಲ್ , ರೆಸ್ಟೋರೆಂಟ್​ಗಳಲ್ಲೂ  ಮಾಂಸದ ಸ್ಟಾಲ್​ಗಳು ಕಾಣಸಿಗುತ್ತದೆ. ಇನ್ನೇನು ಹಸಿ ಮಾಂಸದ ರುಚಿಯನ್ನು ಸವಿಯಬೇಕು ಅನಿಸಿದರೆ , ಅಲ್ಲೇ ಮಾಂಸವನ್ನು ತುಂಡರಿಸಿ ನೀಡಲಾಗುತ್ತದೆ.

ಅದರಲ್ಲೂ ಇಥಿಯೋಪಿಯಾದ ರಾಜಧಾನಿ ಅಡೀಸ್​​ನ ಅಬಾಬಾ ನಗರದಲ್ಲಿ 24 ಗಂಟೆಯೂ ಹಸಿ ಮಾಂಸ ದೊರೆಯುವ ಸ್ಟಾಲ್​ಗಳಿವೆ. ವಾರಂತ್ಯದಲ್ಲಂತೂ ಈ ನಗರದ ರೆಸ್ಟೋರೆಂಟ್​ಗಳು ಮಾಂಸ ಪ್ರಿಯರಿಂದ ತುಂಬಿ ತುಳುಕುತ್ತಿರುತ್ತದೆ. ರಜಾ ದಿನಗಳು ಮತ್ತು ಹಬ್ಬದ ಸಂಭ್ರಮಗಳಂತೂ ಇಥಿಯೋಪಿಯನ್ನರು ವಿವಿಧ ಪ್ರಾಣಿಗಳ ಹಸಿಮಾಂಸ ಖಾದ್ಯಗಳನ್ನು ಚಪ್ಪರಿಸುತ್ತಾರೆ.


ಈ ದೇಶದ ಹಸಿ ಮಾಂಸಹಾರ ಪದ್ಧತಿಗೆ ಒಂದು ಹಿನ್ನಲೆ ಕೂಡ ಇದೆ. ಗುಜೆರಾ ಎಂಬ ಸಮುದಾಯವು ಇಥಿಯೋಪಿಯಾದಲ್ಲಿ ಹಸಿ ಮಾಂಸ ಸೇವನೆಯನ್ನು ಪ್ರಾರಂಭಿಸಿದ್ದರು ಎನ್ನಲಾಗುತ್ತದೆ. ಇಂದು ಈ ಆಹಾರ ಪದ್ದತಿಯು ಇಥಿಯೋಪಿಯನ್ನರ ಜೀವನ ಶೈಲಿಯ ಭಾಗವಾಗಿದೆ. ಅದರಲ್ಲೂ ತಮ್ಮ ಹಬ್ಬ ಮತ್ತು ಸಂತೋಷ ಕೂಟದಲ್ಲಿ ಹಸಿ ಮಾಂಸ ಖಡ್ಡಾಯವಂತೆ.

ಶುಭ ಸಂಭ್ರಮದ ವೇಳೆ ಇಥಿಯೋಪಿಯನ್ನರು ವಿಶೇಷವಾಗಿ ಕ್ರಿಫ್ಟೋ ಎಂಬ ವಿಶೇಷ ಆಹಾರ ತಯಾರಿಸುತ್ತಾರೆ.  ಬರ್ಗರ್​ ರೂಪದಲ್ಲಿರುವ ಈ ಆಹಾರವನ್ನು ಹಸಿ ಬೀಫ್​ನೊಂದಿಗೆ ತಿನ್ನಲಾಗುತ್ತದೆ. ಇದನ್ನು ಅರ್ಧ ಬೇಯಿಸಿ ಸೇವಿಸುವ ಕೂಡ ಕೆಲವರು ಸೇವಿಸುತ್ತಾರೆ.
Loading...

ಇಲ್ಲಿನ ಜನರ ಮತ್ತೊಂದು ಮುಖ್ಯ ಖಾದ್ಯ ಎಂದರೆ ಇಂಜೆರಾ. ಇದನ್ನು ಇಥಿಯೋಪಿಯನ್ನರ ರಾಷ್ಟ್ರೀಯ ಆಹಾರ ಎನ್ನಲಾಗುತ್ತದೆ. ದೋಸೆಯಂತಿರುವ ಇದಕ್ಕೆ ಹಸಿ ಚಿಕನ್ ಅಥವಾ ಬೀಫ್​ ಸೇರಿಸಿ ತಿನ್ನಲಾಗುತ್ತದೆ.ಇಥಿಯೋಪಿಯ ಅಲ್ಲದೆ ಆಫ್ರಿಕಾದ ಇತರೆ ರಾಷ್ಟ್ರಗಳ ಆಹಾರ ಪದ್ದತಿಯಲ್ಲೂ ಇಂಜೆರಾ ಖಾದ್ಯ ಕಾಣ ಸಿಗುತ್ತದೆ.

ಫಿರ್​ಫಿರ್, ಗಾಟ್, ಎನ್​ಸೆಟೆ ಸೇರಿದಂತೆ ಹಲವಾರು ಖಾದ್ಯ ಈ ದೇಶದಲ್ಲಿದ್ದು, ಎಲ್ಲವನ್ನೂ ಹಸಿ ಮಾಂಸದೊಂದಿಗೆ  ಸೇವಿಸುತ್ತಾರೆ. ಹಸಿ ಮಾಂಸವನ್ನು ತಿನ್ನಲ್ಲೆಂದೇ ಇಲ್ಲಿನ ಜನರು ಖಾರ ಮತ್ತು ಹುಳಿಯಿಂದ ಕೂಡಿದ ಕೆಚಪ್​ಗಳನ್ನು ತಯಾರಿಸುತ್ತಾರೆ. ಮಾಂಸದ ತುಂಡುಗಳನ್ನು ಕೆಚಪ್​ನಲ್ಲಿ ಅದ್ದಿ ತಿನ್ನುತ್ತಾರೆ. ಮಾಂಸದೂಟದೊಂದಿಗೆ ಮದ್ಯಪಾನವು ಈ ದೇಶದಲ್ಲಿ ಸಾಮಾನ್ಯವಾಗಿದ್ದು, ಮಾಂಸಹಾರದ ಅಂತ್ಯಕ್ಕೆ ವೈನ್​, ಬಿಯರ್ ಅಥವಾ ಸೋಡಾ ಸೇವಿಸುವುದು ಇಲ್ಲಿನ ಆಹಾರ ಪದ್ಧತಿಯ ಭಾಗವಾಗಿಸಿಕೊಂಡಿದ್ದಾರೆ.

ಇಥಿಯೋಪಿಯನ್ನರು ಹಲವು ಶತಮಾನಗಳಿಂದ ಮಾಂಸಹಾರಕ್ಕೆಂದೇ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಹಬ್ಬಗಳಲ್ಲಿ ಹಸಿ ಮಾಂಸದ ವಿವಿಧ ಖಾದ್ಯಗಳ ರುಚಿಗಳನ್ನು ಸವಿಯುತ್ತಾರೆ. ಮದುವೆ ಸಮಾರಂಭಗಳಲ್ಲಿ ಹಸಿ ಮಾಂಸದೊಂದಿಗೆ ಸ್ಥಳೀಯ ಮದ್ಯವಾದ ತೇಜ್​ ಅನ್ನು ಕುಡಿದು ಸಂಭ್ರಮಿಸುತ್ತಾರೆ.

ದೇಶದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿನ ಭಾಗ ಕ್ರಿಶ್ಚಿಯನ್​ ಧರ್ಮವದರಿದ್ದು, ಇದರಲ್ಲಿ ಶೇ.43ರಷ್ಟು ಜನರು ಸಂಪ್ರದಾಯವಾದಿ ಕ್ರೈಸ್ತರಾಗಿದ್ದಾರೆ. ಹಾಗೆಯೇ ಶೇ.33ಕ್ಕಿಂತ ಹೆಚ್ಚು ಮುಸಲ್ಮಾನರಿದ್ದಾರೆ. ಧರ್ಮ ಮತ್ತು ಆಚಾರ ವಿಚಾರದಲ್ಲಿ ವಿಭಿನ್ನತೆ ಹೊಂದಿದ್ದರೂ ಹಸಿ ಮಾಂಸ ಸೇವನೆಯಲ್ಲಿ ಎಲ್ಲಾ ಧರ್ಮೀಯರು ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಇಲ್ಲಿನ ಆಹಾರ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ.

ಹಸಿ ಮಾಂಸ ಸೇವನೆಯಿಂದ ಅನಾರೋಗ್ಯದ ಸಮಸ್ಯೆಗಳಿಗೆ ಇಲ್ಲಿನ ಜನರು ಗುರಿಯಾಗುತ್ತಿದ್ದರೂ, ತಮ್ಮ ಆಹಾರ ಪದ್ಧತಿಯನ್ನು ಬದಲಿಸಲು ಸುತಾರಂ ಒಪ್ಪುತ್ತಿಲ್ಲ ಎನ್ನುತ್ತಾರೆ ವೈದ್ಯರೊಬ್ಬರು. ಈ ಬಗ್ಗೆ ವಿಶ್ವದ ಗಮನ ಸೆಳೆಯಲು 'ಬಿಬಿಸಿ' ಸೇರಿದಂತೆ ಹಲವು ಮಾಧ್ಯಮಗಳು ವರದಿ ಬಿತ್ತರಿಸಿದ್ದು, ಆದರೂ ಶತಮಾನಗಳಿಂದ ತಮ್ಮ ಬಾಯಿ ರುಚಿಯನ್ನು ಹೆಚ್ಚಿಸಿರುವ ಆಹಾರ ಸಂಸ್ಕೃತಿಯನ್ನು ತ್ಯಜಿಸಲು ಮಾತ್ರ ಇಥಿಯೋಪಿಯನ್ನರು ಸಿದ್ಧರಿಲ್ಲ.

ಜಾಗತೀಕರಣದ ಫಲವಾಗಿ ಒಂದು ದೇಶದ ಆಹಾರ ಇನ್ನೊಂದು ಪ್ರದೇಶದಲ್ಲಿ ಸಿಗುತ್ತಿರುವ ಈ ಶತಮಾನದಲ್ಲಿ ಇನ್ನೂ ಹಸಿಮಾಂಸವನ್ನು ತಿನ್ನುತ್ತಿರುವುದು ಮಾತ್ರ ಅಚ್ಚರಿಗೆ ಕಾರಣವಾಗಿದೆ.
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...