ಈದ್ ಉಲ್-ಫಿತರ್ (Eid al-Fitr) ಜಗತ್ತಿನಾದ್ಯಂತ ಮುಸ್ಲಿಮರು (Muslims) ಸಂಭ್ರಮದಿಂದ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಈದ್ (Eid) ಪವಿತ್ರ ರಂಜಾನ್ (Ramadan) ತಿಂಗಳ ಅಂತ್ಯವನ್ನು ಸೂಚಿಸುತ್ತದೆ. "ಸಿಹಿಗಳ ಹಬ್ಬ" ಅಥವಾ "ಸ್ವೀಟ್ ಈದ್" ಎಂದು ಕೂಡ ಈ ಹಬ್ಬವನ್ನು ಕರೆಯಲಾಗುತ್ತದೆ. ಬಗೆಬಗೆಯ ಸಿಹಿ ತಿಂಡಿಗಳಿಲ್ಲದೆ ಹಬ್ಬ ಮುಗಿಯುವುದೇ ಇಲ್ಲ. ಬೆಳಗ್ಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಮತ್ತು ಝಕಾತ್ ಅಲ್-ಫಿತ್ರಾವನ್ನು (ದಾನ) ನೀಡುವ ಮೂಲಕ ಹಬ್ಬ ಆರಂಭವಾಗುತ್ತದೆ. ನಂತರ ಸ್ನೇಹಿತರು ಮತ್ತು ಕುಟುಂಬಗಳು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲು ಒಟ್ಟಿಗೆ ಸೇರುತ್ತಾರೆ. ಸಹಜವಾಗಿ ಹಬ್ಬ ಎಂದರೆ ಹಲವು ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈದ್ ಉಲ್-ಫಿತರ್ ಹಬ್ಬದಲ್ಲೂ ಕೂಡ ವಿಧವಿಧವಾದ ಖಾದ್ಯ, ಸಿಹಿತಿನಿಸುಗಳನ್ನು ಮಾಡುತ್ತಾರೆ.
ಪ್ರತಿ ಮುಸ್ಲಿಂ ಸಂಸ್ಕೃತಿಯು ಈದ್ ಉಲ್-ಫಿತರ್ ಅನ್ನು ವಿಭಿನ್ನವಾಗಿ ಆಚರಿಸುತ್ತದೆ. ಉದಾಹರಣೆಗೆ, ಟರ್ಕಿಯಲ್ಲಿ, ಮಕ್ಕಳಿಗೆ ಕ್ಯಾಂಡಿ ಮತ್ತು ಸಕ್ಕರೆ ಲೇಪಿತ ಬಾದಾಮಿ ನೀಡಿದರೆ, ಮೊರೊಕ್ಕನ್ನರಿಗೆ, ಫೆಕ್ಕಾಸ್, ಕಾಬ್ ಎಲ್ ಗಜಲ್ ಮತ್ತು ಘೋರಿಬಾ ಬಹ್ಲಾದಂತಹ ಸಿಹಿ ತಿಂಡಿಗಳಿಲ್ಲದೆ ಹಬ್ಬ ಅಪೂರ್ಣ. ಮತ್ತು ಇಂಡೋನೇಷ್ಯಾದಲ್ಲಿ, ಆಶೀರ್ವಾದ ಮತ್ತು ಕ್ಷಮೆಯ ಸಂಕೇತವೆಂದು ಪರಿಗಣಿಸಲಾದ ಕೇತುಪತ್ನಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.
ಹಾಗಾದರೆ ಪ್ರಪಂಚದಾದ್ಯಂತದ ಈದ್ ಉಲ್-ಫಿತರ್ ಹಬ್ಬದಂದು ಯಾವೆಲ್ಲಾ ಭಕ್ಷ್ಯಗಳನ್ನು ತಯಾರಿಸುತ್ತಾರೆ ಎಂದು ನೋಡೋಣ
1) ಕ್ಯೂ ಲ್ಯಾಪಿಸ್:
ಕ್ಯೂ ಲ್ಯಾಪಿಸ್ ಅಕ್ಕಿ ಹಿಟ್ಟು, ತೆಂಗಿನ ಹಾಲು, ಟಪಿಯೋಕಾ ಹಿಟ್ಟು ಮತ್ತು ಸಕ್ಕರೆಯಿಂದ ಮಾಡಿದ ಸಿಹಿ ತಿಂಡಿ ಆಗಿದೆ. ಜೆಲ್ಲಿ ತರಹದ ಈ ತಿಂಡಿಯು ಇಂಡೋನೇಷ್ಯಾದಲ್ಲಿ ಹೆಚ್ಚು ಪ್ರಸಿದ್ಧಿ. ಅಲ್ಲದೆ ಇದು ನೆರೆಯ ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಸಹ ಜನಪ್ರಿಯವಾಗಿದೆ. ಇದನ್ನು ಉತ್ತಮ ಮಸಾಲೆಗಳೊಂದಿಗೆ ಸ್ಟೀಮ್ ಮಾಡಿ ತಯಾರಿಸುತ್ತಾರೆ. ಕ್ಯೂ ಲ್ಯಾಪಿಸ್ ತಯಾರಿಸುವುದು ಕಷ್ಟ ಎಂದೆನಿಸಿದರೂ ಇದರ ರುಚಿ ಎಲ್ಲವನ್ನೂ ಮರೆಸಿಬಿಡುತ್ತದೆ.
ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಫಟಾಫಟ್ ಅಂತ ಮಾಡಿ ಅವಲಕ್ಕಿ ಒಗ್ಗರಣೆ
2) ಬೋಲಾನಿ:
ಬೋಲಾನಿಯು ಅಫ್ಘಾನಿಸ್ತಾನದ ಪಾಕಪದ್ಧತಿ. ಈ ಪ್ಯಾನ್-ಫ್ರೈಡ್ ಪೇಸ್ಟ್ರಿ ಆಲೂಗೆಡ್ಡೆ, ಸ್ಪ್ರಿಂಗ್ ಈರುಳ್ಳಿ ಮತ್ತು ಕುಂಬಳಕಾಯಿ ಅಥವಾ ಮಾಂಸಗಳ ಮಿಶ್ರಣದಿಂದ ಕೂಡಿರುತ್ತದೆ. ಅಫ್ಘಾನಿಸ್ತಾನದಲ್ಲಿ ಹೆಚ್ಚು ಜನಪ್ರಿಯವಾದ ಬೋಲಾನಿಯನ್ನು ಸಾಂಪ್ರದಾಯಿಕವಾಗಿ ಕ್ಯಾರೆಟ್ ಜಾಮ್, ಹಸಿರು ಚಟ್ನಿ ಅಥವಾ ಮೊಸರಿನ ಜೊತೆ ಬಡಿಸಲಾಗುತ್ತದೆ.
3) ಶಾಹಿ ತುಕ್ಡಾ:
ಇಂಡಿಯನ್ ಬ್ರೆಡ್ ಫಡ್ಡಿಂಗ್ ಎಂದೂ ಕರೆಯಲ್ಪಡುವ ಈ ರುಚಿಕರವಾದ ಸಿಹಿ ಖಾದ್ಯವನ್ನು ಬ್ರೆಡ್, ಹಾಲು, ಸಕ್ಕರೆ, ತುಪ್ಪ ಅಥವಾ ಬೆಣ್ಣೆ, ಕೇಸರಿ ಮತ್ತು ಏಲಕ್ಕಿ ಬಳಸಿ ತಯಾರಿಸಲಾಗುತ್ತದೆ. ಇದು ಭಾರತ ಮತ್ತು ಪಾಕಿಸ್ತಾನದಲ್ಲಿ ಜನಪ್ರಿಯ ಈದ್ ಭಕ್ಷ್ಯವಾಗಿದೆ. ಶಾಹಿ ತುಕ್ಡಾ ಬಗ್ಗೆ ಹಲವಾರು ಪುರಾವೆಗಳಿದ್ದು, ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್ ಇದನ್ನು 16 ನೇ ಶತಮಾನದಲ್ಲಿ ಆಗ್ನೇಯ ಏಷ್ಯಾಕ್ಕೆ ಪರಿಚಯಿಸಿದನು ಎಂದು ಹೇಳಲಾಗುತ್ತದೆ.
4) ಮಾಮೌಲ್:
ಇದು ಪಶ್ಚಿಮ ಏಷ್ಯಾದ ಪೂರ್ವ ಮೆಡಿಟರೇನಿಯನ್ ಭಾಗದ ರುಚಿಕರ ತಿಂಡಿಯಾಗಿದೆ. ಮಾಮೌಲ್ ಸಾಮಾನ್ಯವಾಗಿ ಖರ್ಜೂರಗಳು, ವಾಲ್ನಟ್ಗಳು ಮತ್ತು ಪಿಸ್ತಾಗಳಿಂದ ತುಂಬಿರುತ್ತವೆ. ಈ ಕುಕೀಗಳನ್ನು ಈದ್ಗೆ ಮುಂಚಿತವಾಗಿ ಅತಿಥಿಗಳಿಗೆ ಚಹಾ ಅಥವಾ ಕಾಫಿಯೊಂದಿಗೆ ನೀಡಲು ತಯಾರಿಸುತ್ತಾರೆ.
5) ತುಫಾಹಿಜೆ:
ಕ್ಯಾರಮೆಲೈಸ್ಡ್ ವಾಲ್ನಟ್ಗಳು ಮತ್ತು ಹಾಲಿನ ಕೆನೆ ಮತ್ತು ಸೇಬುಗಳಿಂದ ಮಾಡಲಾಗುತ್ತದೆ. ಬೋಸ್ನಿಯಾ ಮತ್ತು ಬಾಲ್ಕನ್ಸ್ ಪ್ರದೇಶದಲ್ಲಿ ತುಫಾಹಿಜೆಯಿಲ್ಲದೇ ಹಬ್ಬ ಮುಗಿಯುವುದೇ ಇಲ್ಲ.
6) ಅಸಿಡಾ:
ಮೊರಾಕೊದಲ್ಲಿ, ಈದ್ ಆಚರಣೆಯನ್ನು ಬೆಳಗ್ಗೆ ಈ ಸಿಹಿ ಖಾದ್ಯವನ್ನು ಸೇವಿಸುವ ಮೂಲಕ ಪ್ರಾರಂಭಿಸಲಾಗುತ್ತದೆ. ಅಸಿಡಾವನ್ನು ಬೆಣ್ಣೆ, ಜೇನುತುಪ್ಪ ಅಥವಾ ಖರ್ಜೂರದ ಸಿರಪ್ನೊಂದಿಗೆ ತಯಾರಿಸಲಾಗುತ್ತದೆ. ಅಸಿಡಾವು ಲಿಬಿಯಾ, ಓಮನ್, ಸೌದಿ ಅರೇಬಿಯಾ ಮತ್ತು ಯೆಮೆನ್ನಂತಹ ಅರೇಬಿಯನ್ ಪೆನಿನ್ಸುಲಾ ದೇಶಗಳಲ್ಲಿ ಜನಪ್ರಿಯವಾಗಿವೆ.
7) ಲೋಕಮ್:
ಸಾಮಾನ್ಯವಾಗಿ ಟರ್ಕಿಶ್ ಡಿಲೈಟ್ ಎಂದು ಕರೆಯಲ್ಪಡುವ ಈ ಜೆಲ್ಲಿಯನ್ನು ಕಾರ್ನ್ಸ್ಟಾರ್ಚ್, ಸಕ್ಕರೆ ಮತ್ತು ರೋಸ್ ವಾಟರ್ನಿಂದ ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಈ ಮಿಠಾಯಿಯು ಟರ್ಕಿಯಲ್ಲಿ ಈದ್ ಆಚರಣೆಯ ಸಮಯದಲ್ಲಿ ಇರಲೇಬೇಕು. ಇದು ಬೋಸ್ನಿಯಾ ಮತ್ತು ರೊಮೇನಿಯಾದಲ್ಲಿ ಸಹ ಪ್ರಸಿದ್ಧವಾಗಿದೆ, ಅಲ್ಲಿ ಇದನ್ನು ಸ್ಥಳೀಯವಾಗಿ ರಾಹತ್ ಲೋಕಮ್ ಎಂದು ಕರೆಯುತ್ತಾರೆ.
ಇದನ್ನೂ ಓದಿ: Sunday Special: ಮಂಗಳೂರು ಶೈಲಿಯಲ್ಲಿ ಚಿಕನ್ ಗೀ ರೋಸ್ಟ್ ಮಾಡೋದು ಹೀಗೆ..
8) ಬೀಫ್ ರೆಂಡಾಂಗ್:
ಬೀಫ್ ರೆಂಡಾಂಗ್ ಕ್ಯಾರಮೆಲೈಸ್ಡ್ ಮಾಂಸ, ತೆಂಗಿನಕಾಯಿ, ಮಸಾಲೆಯೊಂದಿಗೆ ತಯಾರಾಗುತ್ತದೆ. ಇದನ್ನು ಸಾಮಾನ್ಯವಾಗಿ ಅನ್ನ, ಸಲಾಡ್ ಜೊತೆ ಬಡಿಸಲಾಗುತ್ತದೆ. ರೆಂಡಾಂಗ್ ಸಾಂಪ್ರದಾಯಿಕವಾಗಿ ಇಂಡೋನೇಷಿಯನ್ ಖಾದ್ಯವಾಗಿದ್ದರೂ, ಇದು ಮಲೇಷ್ಯಾ, ಬ್ರೂನಿ ಮತ್ತು ಸಿಂಗಾಪುರದಲ್ಲಿ ಜನಪ್ರಿಯವಾಗಿದೆ.
9) ಶೀರ್ ಖುರ್ಮಾ:
ಶ್ಯಾವಿಗೆಯಿಂದ ತಯಾರಿಸಲ್ಪಟ್ಟ ಈ ಅದ್ಭುತ ಪಾಯಸ ಆಗ್ನೇಯ ಏಷ್ಯಾದಲ್ಲಿ ಈದ್ ಹಬ್ಬದ ಪ್ರಮುಖ ಸಿಹಿ ಪದಾರ್ಥ. ರೋಸ್ ವಾಟರ್, ಡ್ರೈ ಪ್ರೂಟ್ಸ್, ಕೇಸರಿ ಮತ್ತು ಏಲಕ್ಕಿಯಂತಹ ಪರಿಮಳಯುಕ್ತ ಮಸಾಲೆಗಳೊಂದಿಗೆ ಈ ಸಿಹಿಭಕ್ಷ್ಯವನ್ನು ಸಾಮಾನ್ಯವಾಗಿ ಬೆಳಿಗ್ಗೆ ಈದ್ ಪ್ರಾರ್ಥನೆಯ ನಂತರ ನೀಡಲಾಗುತ್ತದೆ.
10) ಟ್ಯಾಗಿನ್:
ಟ್ಯಾಗಿನ್ ತರಕಾರಿಗಳು, ಡ್ರೈ ಪ್ರೂಟ್ಸ್, ಮಾಂಸಗಳು, ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ಮಾಡಲಾಗುತ್ತದೆ. ಸಾಂಪ್ರದಾಯಿಕ ಅರಬ್-ಬರ್ಬರ್ ಭಕ್ಷ್ಯವು ಮೊರೊಕೊ ಮತ್ತು ಅಲ್ಜೀರಿಯಾ, ಲಿಬಿಯಾ, ಟುನೀಶಿಯಾ ಮತ್ತು ಯುಎಇಯಲ್ಲಿ ಹಬ್ಬದ ಪ್ರಧಾನ ಪಾಕವಿಧಾನವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ