Ramadan 2022: ರಂಜಾನ್ ಸಂದರ್ಭದಲ್ಲಿ ಅರ್ಧಚಂದ್ರದ ಮಹತ್ವ ಹಾಗೂ ಪವಿತ್ರ ತಿಂಗಳಿನ ಆರಂಭ ಹೇಗೆ ಗುರುತಿಸುತ್ತಾರೆ..?

ಇಸ್ಲಾಂ ಪರಿಪಾಲಿಸುವವರು ಅಂದರೆ ಮುಸ್ಲಿಂ ಧರ್ಮದವರಿಗೆ ರಂಜಾನ್ (Ramadan) ಒಂದು ಪವಿತ್ರ ಆಚರಣೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜಗತ್ತಿನಲ್ಲಿ ಪ್ರಸ್ತುತ ಅಭ್ಯಾಸ ಮಾಡಲಾಗುತ್ತಿರುವ ಪ್ರತಿಯೊಂದು ಧರ್ಮವೂ ವಿಶೇಷವಾಗಿದ್ದು, ಅದಕ್ಕೆಂದೇ ಮೀಸಲಾದ ಕೆಲವು ವಿಶೇಷ ಆಚರಣೆಗಳಿರುತ್ತವೆ. ಜಗತ್ತಿನ ಅತಿ ದೊಡ್ಡ ಧರ್ಮಗಳಲ್ಲಿ ಎರಡನೇ ಸ್ಥಾನದಲ್ಲಿರುವ ಇಸ್ಲಾಂ (Islam) ಧರ್ಮವನ್ನು ನಂಬಿ ಪರಿಪಾಲಿಸುತ್ತಿರುವವರ ಸಂಖ್ಯೆ ಜಗತ್ತಿನಾದ್ಯಂತ ಸುಮಾರು 1.8 ಬಿಲಿಯನ್ ಜನರಿದ್ದಾರೆ ಎಂದು ಹೇಳಲಾಗುತ್ತದೆ. ಇಸ್ಲಾಂ ಪರಿಪಾಲಿಸುವವರು ಅಂದರೆ ಮುಸ್ಲಿಂ ಧರ್ಮದವರಿಗೆ ರಂಜಾನ್ (Ramadan) ಒಂದು ಪವಿತ್ರ ಆಚರಣೆಯಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳು (Month) ಅವಧಿಯಲ್ಲಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಕುರಾನ್ (Quran) ಅನ್ನು ಪ್ರವಾದಿ ಮೊಹ್ಮದ್ ಅವರಿಗೆ ಬೋಧಿಸಲಾಯಿತೆಂಬ ನಂಬಿಕೆಯಿದೆ. ಹಾಗಾಗಿ, ಈ ಒಂದು ತಿಂಗಳ ಕಾಲ ಉತ್ತಮ ಆರೋಗ್ಯ ಸ್ಥಿತಿಯಲ್ಲಿರುವ ಎಲ್ಲ ಮುಸ್ಲಿಮರು ಉಪವಾಸ ಮಾಡಬೇಕಾಗಿರುವುದು ಒಂದು ಕಡ್ಡಾಯ ಸಂಪ್ರದಾಯವಾಗಿದ್ದು ಈ ಆಚರಣೆಯು ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳ ಪೈಕಿ ಒಂದಾಗಿದೆ.

ಚಿಕ್ಕ ಮಕ್ಕಳು, ಅನಾರೋಗ್ಯದಿಂದ ಬಳಲುತ್ತಿರುವವರು, ಪ್ರಯಾಣದಲ್ಲಿರುವವರು, ಗರ್ಭಧರಿಸಿದ, ಬಾಣಂತನದಲ್ಲಿರುವ ಹಾಗೂ ಋತುಚಕ್ರ ಅನುಭವಿಸುತ್ತಿರುವ ಮಹಿಳೆಯರನ್ನು ಮಾತ್ರ ಕಡ್ಡಾಯ ಉಪವಾಸದ ಆಚರಣೆಯಿಂದ ವಿನಾಯಿತಿ ನೀಡಲಾಗಿದೆ.

ಮುಸ್ಲಿಮರಿಗೆ ಇದೊಂದು ತಿಂಗಳು ಪವಿತ್ರ ಅವಧಿಯಾಗಿದ್ದು ಪ್ರತಿಯೊಬ್ಬರೂ ತಮ್ಮ ದಿನದ ಉಪವಾಸವನ್ನು ಸೂರ್ಯಾಸ್ತದ ಸಮಯಕ್ಕೆ ಅಂತ್ಯಗೊಳಿಸುತ್ತಾರೆ ಹಾಗೂ ತದನಂತರ ಪರಸ್ಪರರು ಸಾಮಾಜಿಕವಾಗಿ ಒಟ್ಟಾಗಿ ತರಾವೀ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇದು ರಾತ್ರಿಯವರೆಗೂ ನಡೆಯುತ್ತದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅರ್ಧಚಂದ್ರ ಗೋಚರವಾಗುವುದು ಒಂದು ಮಹತ್ವದ ಅಂಶವಾಗಿದೆ.

ಇದನ್ನೂ ಓದಿ: Ramadan 2022: ರಂಜಾನ್ ಹಬ್ಬಕ್ಕೆ ಯಾವ ದೇಶದಲ್ಲಿ ಯಾವ ಖಾದ್ಯ ಮಾಡ್ತಾರೆ?

ಅರ್ಧಚಂದ್ರ ಏಕೆ ಮಹತ್ವ..?

ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಕಾರ 9ನೇ ತಿಂಗಳಿನಲ್ಲಿ ಅರ್ಧ ಚಂದ್ರನ ಗೋಚರ ಉಪವಾಸದ ಅವಧಿಯ ಪ್ರಾರಂಭ ಹಾಗೂ ಮುಕ್ತಾಯವನ್ನು ಸೂಚಿಸುತ್ತದೆ ಎನ್ನಲಾಗಿದೆ. ರಂಜಾನ್ ಬರುವ ಸಂದರ್ಭದಲ್ಲಿ ಮುಂಚಿತವಾಗಿಯೇ ಇಸ್ಲಾಂ ಧರ್ಮದ ಮಹತ್ವದ ಸ್ಥಾನಗಳಾದ ಮಧ್ಯ ಪ್ರಾಚ್ಯ ರಾಷ್ಟ್ರ ಹಾಗೂ ಇತರೆ ದೇಶಗಳಲ್ಲಿರುವ ಇಸ್ಲಾಂ ಧರ್ಮದ ಧಾರ್ಮಿಕ ಮುಖಂಡರು ಅರ್ಧ ಚಂದ್ರ ಕಾಣಿಸುವುದನ್ನು ಖಚಿತಪಡಿಸಿಕೊಳ್ಳಲು ರಾತ್ರಿಯಲ್ಲಿ ಆಗಸವನ್ನು ಗಮನಿಸಲು ಪ್ರಾರಂಭಿಸುತ್ತಾರೆ.

ಇಸ್ಲಾಮಿಕ್ ಕ್ಯಾಲೆಂಡರಿನ ಪ್ರಕಾರ, ರಂಜಾನ್ ತಿಂಗಳಿನ ಮುಂಚೆ ಸಂಭವಿಸುವ ತಿಂಗಳು ಶಬಾನ್ ಆಗಿದ್ದು ಇದರ ಅಂತ್ಯದ ವೇಳೆಗೆ ಅರ್ಧಚಂದ್ರದ ಪ್ರಥಮ ಗೋಚರಿಕೆಯನ್ನು ಗಮನಿಸುವ ಅಧಿಕೃತ ಧಾರ್ಮಿಕ ಸಮಿತಿಗಳು ಆ ಬಗ್ಗೆ ದಿನವನ್ನು ಗೊತ್ತುಪಡಿಸಿ ಜನರಿಗೆ ಉಪವಾಸ ಆರಂಭಿಸುವ ದಿನದ ಬಗ್ಗೆ ತಿಳಿಸುತ್ತವೆ ಹಾಗೂ ಆ ನಿಗದಿತ ದಿನದಿಂದ ಮುಸ್ಲಿಮರು ತಮ್ಮ ಪವಿತ್ರ ಉಪವಾಸ ಆಚರಣೆಯನ್ನು ಪ್ರಾರಂಭಿಸುತ್ತಾರೆ. ಇದು ಸಾವಿರಾರು ವರ್ಷಗಳಿಂದ ಇದೇ ರೀತಿಯಲ್ಲಿ ನಡೆದುಕೊಂಡು ಬಂದ ಪದ್ಧತಿ ಎನ್ನಲಾಗಿದೆ.

ಅರ್ಧ ಚಂದ್ರ ರಂಜಾನ್ ಹಬ್ಬದ ಮಹತ್ವದ ಸಂಕೇತ:

ಅರ್ಧ ಚಂದ್ರವು ರಂಜಾನ್ ಹಬ್ಬದಲ್ಲಿ ಒಂದು ಮಹತ್ವದ ಸಂಕೇತವಾಗಿದ್ದು ಈ ಹಬ್ಬದ ಆಚರಣೆ ಪ್ರಯುಕ್ತ ಮಾಡಲಾಗುವ ಅಲಂಕಾರದಲ್ಲೂ ಅರ್ಧಚಂದ್ರಾಕೃತಿಯನ್ನು ಮುಸ್ಲಿಮರು ಬಳಸುವುದನ್ನು ಕಾಣಬಹುದಾಗಿದೆ. ಇದು ಒಂದು ರೀತಿಯಲ್ಲಿ ಕ್ರೈಸ್ತರು ಕ್ರಿಸ್ಮಸ್ ಹಬ್ಬದಲ್ಲಿ ನಕ್ಷತ್ರದ ಸಂಕೇತವನ್ನು ಬಳಸಿಕೊಳ್ಳುವ ರೀತಿಯಲ್ಲೇ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ಬಗೆಯಲ್ಲಿ ಅರ್ಧ ಚಂದ್ರ ಆಕೃತಿಯನ್ನು ಮುಸ್ಲಿಮರು ತಮ್ಮ ಅಲಂಕಾರಗಳಲ್ಲಿ ಬಳಸಿಕೊಳ್ಳುತ್ತಾರೆ.

ರಂಜಾನ್ ಆರಂಭವನ್ನು ಲೆಕ್ಕಹಾಕುವ ಬಗೆ:

ಸಾಮಾನ್ಯವಾಗಿ ಸೌದಿ ಅರೇಬಿಯಾ ದೇಶದ ಸುಪ್ರೀಂ ಕೋರ್ಟಿನ ಅರ್ಧ ಚಂದ್ರ ಗಮನಿಸುವ ಸಮಿತಿಯು ಈ ಬಗ್ಗೆ ಎಲ್ಲ ಮುಸ್ಲಿಮರಿಗೆ ಅಧಿಕೃತವಾಗಿ ಮಾಹಿತಿ ನೀಡುತ್ತದೆ. ಈ ಸಂದರ್ಭದಲ್ಲಿ ಸೌದಿ ಅರೇಬಿಯಾದ ಖಗೋಳ ವೀಕ್ಷಕರ ತಂಡವೊಂದು ಹೌತಾತ್ ಸುದೈರ್ ಎಂಬ ಗ್ರಾಮದಲ್ಲಿ ಅರ್ಧ ಚಂದ್ರನ ಮೊದಲ ದರ್ಶನದ ಬಗ್ಗೆ ನಿಗಾ ಇಟ್ಟಿರುತ್ತಾರೆ. ಈ ಗ್ರಾಮವು ಸೌದಿ ಅರೇಬಿಯಾದ ರಿಯಾದ್, ಸುದೈರ್ ಹಾಗೂ ಕಾಸಿಮ್ ಎಂಬ ಪ್ರದೇಶಗಳ ಭೌಗೋಳಿಕ ರೇಖೆಗಳು ಒಂದೇ ಕಡೆ ಛೇದಕವಾಗುವ ಸ್ಥಳದಲ್ಲಿ ನೆಲೆಸಿದೆ.

ಇದನ್ನೂ ಓದಿ: Ramadan 2022: ರಂಜಾನ್ ಸಮಯದಲ್ಲಿನ ಉಪವಾಸದ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಸಮುದ್ರ ಮಟ್ಟಕ್ಕಿಂತ 900 ಮೀ. ಎತ್ತರದಲ್ಲಿರುವ ಈ ಸ್ಥಳವು ದೊಡ್ಡದಾದ ಬೆಟ್ಟಗುಡ್ಡಗಳಿಂದ ಸುತ್ತುವರೆದಿದ್ದು ನಗರದ ಕಲುಷಿತ ವಾತಾವರಣಕ್ಕಿಂತ ತುಂಬ ದೂರದಲ್ಲಿದೆ. ಹಾಗಾಗಿ ಈ ಸ್ಥಳವನ್ನು ತಂಡವು ಆಯ್ಕೆ ಮಾಡಿದ್ದು ಇಲ್ಲಿಂದ ಅರ್ಧ ಚಂದ್ರ ಕಾಣುವುದನ್ನು ಗಮನಿಸುತ್ತಾರೆ ಎನ್ನಲಾಗಿದೆ. ಬಾಹ್ಯಾಕಾಶ ಪರಿಣಿತರು ಈ ಸ್ಥಳವನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಏಪ್ರಿಲ್ 2 ರಂಜಾನ್ ತಿಂಗಳಿನ ಆರಂಭದ ದಿನ:

ಎಮಿರೇಟ್ ಸ್ಟೇಟ್ಸ್ ಮಾಧ್ಯಮ ವರದಿ ಮಾಡಿರುವಂತೆ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಕೇಂದ್ರದ ಪ್ರಕಾರ ಏಪ್ರಿಲ್ 2 ಅನ್ನು ರಂಜಾನ್ ಹಬ್ಬದ ಪವಿತ್ರ ತಿಂಗಳಿನ ಆರಂಭದ ದಿನ ಎಂದು ಗುರುತಿಸಿದೆ. ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಕೇಂದ್ರದ ನಿರ್ದೇಶಕರಾದ ಮೊಹ್ಮದ್ ಶಾವ್ಕತ್ ಓದೆ ಅವರ ಪ್ರಕಾರ, "ಬಹುತೇಕ ಎಲ್ಲ ಮುಸ್ಲಿಂ ದೇಶಗಳು ಶಬಾನ್ ತಿಂಗಳಿನ 29ನೇ ದಿನದಂದು ಆಗಸದಲ್ಲಿ ರಂಜಾನ್ ಪ್ರಾರಂಭಿಸುವ ಪ್ರಯುಕ್ತ ಅರ್ಧ ಚಂದ್ರ ಗೋಚರವಾಗುವುದನ್ನು ಗಮನಿಸುತ್ತವೆ" ಎಂದು ಹೇಳುತ್ತಾರೆ.

ಪ್ರತಿಯೊಂದು ಮುಸ್ಲಿಂ ದೇಶಗಳು ತಮ್ಮಲ್ಲಿರುವ ಅಧಿಕೃತ ಧಾರ್ಮಿಕ ಸಮಿತಿಗಳು, ನ್ಯಾಯಾಲಯ ಹಾಗೂ ಇತರೆ ಧಾರ್ಮಿಕ ಮುಖಂಡರ ಸಹಯೋಗದೊಂದಿಗೆ ರಂಜಾನ್ ಆರಂಭದ ದಿನಗಳನ್ನು ತಮ್ಮ ದೇಶದ ನಾಗರಿಕರಿಗಾಗಿ ಸ್ವತಃ ನಿರ್ಧರಿಸಬಹುದಾಗಿದೆಯಾದರೂ ಬಹುತೇಕ ಜನರು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಅದರ ಕ್ಯಾಲೆಂಡರಿನ ಅನ್ವಯ ಬರುವ ಎಲ್ಲ ಹಬ್ಬಗಳ ಆಚರಣೆಗಳಿಗಾಗಿ ಸೌದಿ ಅರೇಬಿಯಾ ದೇಶವನ್ನೇ ಅನುಸರಿಸುವುದನ್ನು ಸಾಮಾನ್ಯವಾಗಿ ಗಮನಿಸಬಹುದಾಗಿದೆ.

ವಿಜ್ಞಾನವು ಹಬ್ಬದ ಆಚರಣೆ ಬದಲಾಯಿಸಿದೆಯೇ..?

ಇಂದು ವಿಜ್ಞಾನವು ಸಾಕಷ್ಟು ಮುಂದುವರೆದಿದ್ದು ನಭೋ ಮಂಡಲದ ಪ್ರಸಂಗಗಳನ್ನು ಹೆಚ್ಚು ಕರಾರುವಕ್ಕಾಗಿ ಗಮನಿಸಲು ಶಕ್ತವಾಗಿರುವುದರಿಂದ ಈ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಅರ್ಧ ಚಂದ್ರ ಗೋಚರವನ್ನು ದೂರದರ್ಶಕಗಳನ್ನು ಬಳಸಿ ಹೆಚ್ಚು ವಸ್ತುನಿಷ್ಠವಾಗಿ ಗಮನಿಸಿ ನಿಖರ ದಿನಾಂಕವನ್ನು ಹೇಳಲು ಸಾಧ್ಯವಾಗಿದೆ.

ಈ ಸಂದರ್ಭದಲ್ಲಿ ಅರ್ಧ ಚಂದ್ರನು ಕೇವಲ ಕೆಲವೇ ನಿಮಿಷುಗಳ ಕಾಲ ಗೋಚರಿಸುವುದರಿಂದ ಅದನ್ನು ಗಮನಿಸುವವರು ಆದಷ್ಟು ಮೋಡಗಳಿಲ್ಲದ, ಕಲುಷಿತ ವಾತಾವರಣವಿಲ್ಲದ ಹಾಗೂ ಆಗಸದ ಸ್ಪಷ್ಟ ಚಿತ್ರಣ ನೀಡುವ ಸ್ಥಳದಲ್ಲಿ ತಮ್ಮನ್ನು ತಾವು ಇರುವಂತೆ ಖಚಿತಪಡಿಸಿಕೊಂಡು ಚಂದ್ರನ ವೀಕ್ಷಣೆ ಮಾಡಬೇಕಾಗಿರುತ್ತದೆ.

ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಕೇಂದ್ರವು ಅಬುಧಾಬಿಯಲ್ಲಿ ಈಗ ಇಸ್ಲಾಂ ಅನ್ವಯ ಅರ್ಧಚಂದ್ರ ವೀಕ್ಷಣ ಯೋಜನೆಯನ್ನು ಸ್ಥಾಪಿಸಿದ್ದು ಇದೀಗ ಅಂತಾರಾಷ್ಟ್ರೀಯ ಸಮುದಾಯಕ್ಕೆ ಇದು ಮಹತ್ವವಾಗಿ ರೂಪಗೊಂಡಿದೆ. ಇದು ಯಾವ ಯಾವ ಭಾಗಗಳಲ್ಲಿ ಬರಿಗಣ್ಣಿಗೆ ಅರ್ಧಚಂದ್ರ ಕಾಣುವನೆಂಬ ಅಂಶವನ್ನು ವಿವರಿಸುವ ಬಗ್ಗೆ ನಕ್ಷೆ ತಯಾರಿಸಿ ನೀಡುತ್ತದೆ. ಈ ಮೂಲಕ ಮುಸ್ಲಿಮರಿಗೆ ಇದು ಉತ್ತಮವಾಗಿ ಹಬ್ಬವನ್ನು ಆರಂಭಿಸುವ ಬಗ್ಗೆ ಮಾಹಿತಿ ನೀಡುತ್ತದೆ ಎನ್ನಲಾಗಿದೆ.
Published by:shrikrishna bhat
First published: