• Home
  • »
  • News
  • »
  • lifestyle
  • »
  • Weight Loss Story: 102 ಯಿಂದ 77 ಕೆಜಿಗೆ ತೂಕ ಇಳಿಸಿದ ರಾಮ್‌ ಮಲಂಪತಿ ಹೆಲ್ತಿ ಡಯೆಟ್‌ ಟಿಪ್ಸ್ ಇಲ್ಲಿದೆ

Weight Loss Story: 102 ಯಿಂದ 77 ಕೆಜಿಗೆ ತೂಕ ಇಳಿಸಿದ ರಾಮ್‌ ಮಲಂಪತಿ ಹೆಲ್ತಿ ಡಯೆಟ್‌ ಟಿಪ್ಸ್ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Weight Loss Journey: ಕೇವಲ 33ನೇ ವಯಸ್ಸಿನಲ್ಲಿ ಕೊಬ್ಬಿನ ಯಕೃತ್ತು, ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದ ರಾಮ್‌ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡಿದ್ದು ಹಾಗೂ 102 ಕೆಜಿಯಿಂದ 77 ಕೆಜಿಗೆ ತೂಕ ಇಳಿಸಿದ್ದು ಒಂದು ಸಾಧನೆ ಅಂತಲೇ ಹೇಳಬಹುದು.

  • Trending Desk
  • 3-MIN READ
  • Last Updated :
  • Share this:

ಕೋವಿಡ್‌ ಸಾಂಕ್ರಾಮಿಕವು (Covid) ಹಲವರ ಜೀವನವನ್ನು ಬದಲಿಸಿದೆ. ಅನೇಕರಿಗೆ ಅನಾರೋಗ್ಯವನ್ನು ದಾನವಾಗಿ ನೀಡಿದೆ. ಅದರಲ್ಲೂ ಬೊಜ್ಜು (Fat) ಅಥವಾ ಅಧಿಕ ಕೊಲೆಸ್ಟ್ರಾಲ್‌ ಅನ್ನೋದು ಕಳೆದ 2 ವರ್ಷಗಳಲ್ಲಿ ಬಹುತೇಕರು ಅನುಭವಿಸಿರುವ ಆರೋಗ್ಯ ಸಮಸ್ಯೆಯಾಗಿದೆ. ಮನೆಯಿಂದಲೇ ಕೆಲಸ, ಹೊರಗಡೆಯ ತಿಂಡಿ (food) , ಕಡಿಮೆ ದೈಹಿಕ ಚಟುವಟಿಕೆ ಹೀಗೆ ಜಡ ಜೀವನಶೈಲಿಯಿಂದಾಗಿ ತೂಕ ಏರಿಕೆ ಹಾಗೂ ಅದರಿಂದಾಗುವ ಆರೋಗ್ಯ (Health Problem) ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಹಾಗೆ ಆರೋಗ್ಯ ತೊಂದರೆಗೊಳಗಾದವರಲ್ಲಿ ರಾಮ್‌ ಮಲಂಪತಿ ಕೂಡ ಒಬ್ಬರು.


ಹೌದು., ಕೇವಲ 33ನೇ ವಯಸ್ಸಿನಲ್ಲಿ ಕೊಬ್ಬಿನ ಯಕೃತ್ತು, ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದ ರಾಮ್‌ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡಿದ್ದು ಹಾಗೂ 102 ಕೆಜಿಯಿಂದ 77 ಕೆಜಿಗೆ ತೂಕ ಇಳಿಸಿದ್ದು ಒಂದು ಸಾಧನೆ ಅಂತಲೇ ಹೇಳಬಹುದು.


ಕೋವಿಡ್‌ ಸಮಯದಲ್ಲಿ 20 ಕೆಜಿ ತೂಕ ಹೆಚ್ಚಾಗಿತ್ತು!


ಆಗಸ್ಟ್ 11, 2022 — ರಾಮ ಮಲಂಪತಿ ಜೀವನದಲ್ಲಿ ಮರೆಯಲಾಗದ ದಿನ. ಅವರ ಜೀವನವನ್ನೇ ಬದಲಾಯಿಸಲು ನಿರ್ಧಾರ ತೆಗೆದುಕೊಂಡ ದಿನ ಅದು.


ಎರಡು ವರ್ಷಗಳ ಕೋವಿಡ್‌ ನಂತರ, ಅವರ ಕಚೇರಿಯು ತಮ್ಮ ಉದ್ಯೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಲು ನಿರ್ಧರಿಸಿತು. ಆದ್ರೆ ಹೆಲ್ತ್‌ ಚೆಕಪ್‌ ನಡೆಸಿದ ಬಳಿಕ ರಾಮ್‌ ಗೆ ಶಾಕ್‌ ಕಾದಿತ್ತು.


ಅವರು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಕೊಬ್ಬಿನ ಯಕೃತ್‌ ಹೊಂದಿರುವ ಬಗ್ಗೆ ವರದಿ ನೀಡಿದ್ದವು. ಅಲ್ಲದೇ 2 ವರ್ಷಗಳ ಕಾಲ ವರ್ಕ್‌ ಫ್ರಂ ಹೋಮ್‌ ಮಾಡಿದ್ದರ ಪರಿಣಾಮ 20 ಕೆಜಿಗಿಂತ ತೂಕ ಹೆಚ್ಚಾಗಿತ್ತು.


ಇದಾದ ಬಳಿಕ ಬೆಂಗಳೂರಿನ ನಿವಾಸಿ ರಾಮ್‌ ತಮ್ಮ ಜೀವನ ಶೈಲಿಯನ್ನು ಬದಲಾಯಿಸಲು ನಿರ್ಧರಿಸಿದರು. ವೈದ್ಯರ ಸಲಹೆ ಪಡೆದು ಅದನ್ನು ಕಾರ್ಯರೂಪಕ್ಕೆ ತರಲು ಮುಂದಾದರು.


“ಎರಡು ವರ್ಷಗಳಿಂದ ಮನೆಯಲ್ಲಿದ್ದ ನನಗೆ ಯಾವುದೇ ದೈಹಿಕ ಚಟುವಟಿಕೆ ಇರಲಿಲ್ಲ. ಹೊರಗಿನಿಂದ ಆರ್ಡರ್ ಮಾಡಿ ಆಹಾರವನ್ನು ಸೇವಿಸಿ ನಾನು ಸಾಕಷ್ಟು ತೂಕ ಹೆಚ್ಚಿಸಿಕೊಂಡಿದ್ದೆ.
ಆದರೆ ನನಗೆ ನನ್ನ ಹೆಲ್ತ್‌ ರಿಪೋರ್ಟ್‌ ಆಘಾತ ನೀಡಿತ್ತು. ನಾನು ಕೊಬ್ಬಿನ ಯಕೃತ್ತು ಅಥವಾ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿರೀಕ್ಷೆ ಮಾಡಿರಲಿಲ್ಲ.


ತೂಕ ಇಳಿಸಿಕೊಳ್ಳಲು ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ವೈದ್ಯರು ಶಿಫಾರಸು ಮಾಡಿದರು. ಅವರ ಸಲಹೆಯನ್ನು ಅನುಸರಿಸಲು ನಾನು ದೃಢ ನಿರ್ಧಾರ ಕೈಗೊಂಡೆ” ಎಂಬುದಾಗಿ ರಾಮ್ ಹೇಳುತ್ತಾರೆ.


ಅವೆಲ್ಲದರ ಪರಿಣಾಮ ನಾಲ್ಕು ತಿಂಗಳ ಹಿಂದೆ 102.6 ಕೆಜಿ ತೂಗುತ್ತಿದ್ದ ರಾಮ್‌ ಇದೀಗ 77.5 ಕೆಜಿ ತೂಕ ಹೊಂದಿದ್ದಾರೆ.


ವಾಕಿಂಗ್‌ ನೊಂದಿಗೆ ಆಹಾರ ಕ್ರಮದಲ್ಲೂ ಬದಲಾವಣೆ


ಆಗಸ್ಟ್ 13 ರಿಂದ 15ರವರೆಗೆ ದೀರ್ಘ ವಾರಾಂತ್ಯ ಸಿಕ್ಕಿದ್ದರಿಂದ ಸಾಫ್ಟ್‌ವೇರ್ ಉದ್ಯೋಗಿ ರಾಮ್‌ ಸಮಯವನ್ನು ವ್ಯರ್ಥ ಮಾಡಲಿಲ್ಲ. 13ನೇ ತಾರೀಖಿನಂದು ವಾಕಿಂಗ್‌ಗೆ ತೆರಳಲು ಆರಂಭಿಸಿದ ಅವರು, ಆಹಾರ ಕ್ರಮದಲ್ಲೂ ಕೆಲ ಬದಲಾವಣೆ ಮಾಡಿಕೊಂಡರು.


"ಆಸ್ಪತ್ರೆಯಲ್ಲಿ, ನನಗೆ ಡಯಟ್ ಚಾರ್ಟ್ ನೀಡಿದರು. ಅದರ ಜೊತೆಗೇ ನಾನು ಕೆಲವೊಂದಷ್ಟು ಬದಲಾವಣೆ ಮಾಡಿಕೊಂಡೆ. ಅನ್ನವನ್ನು ಕಡಿಮೆ ಮಾಡಲು ನಿರ್ಧರಿಸಿದೆ ಹಾಗೂ ಹೊರಗಿನಿಂದ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿದೆ. ವಾಕಿಂಗ್ ನೊಂದಿಗೆ ನಾನು ಹೊಸ ಜೀವನಶೈಲಿ ಆರಂಭಿಸಿದೆ" ಎಂಬುದಾಗಿ ರಾಮ್‌ ಹೇಳುತ್ತಾರೆ.


ರಾಮ್‌ , ದಿನಕ್ಕೆ ಎರಡು ಬಾರಿ ವಾಕಿಂಗ್‌ ಮಾಡೋಕೆ ಪ್ರಾರಂಭಿಸಿದರು. ಅನ್ನದ ಬದಲಿಗೆ ರಾಗಿ ಮತ್ತು ಜೋಳಗಳ ಆಹಾರಗಳನ್ನು ಸೇವಿಸತೊಡಗಿದರು.


ಸಾಮಾನ್ಯ ಇಡ್ಲಿ ಮತ್ತು ದೋಸೆಗಳ ಬದಲಿಗೆ, ಅವರು ರಾಗಿ ದೋಸೆ, ರಾಗಿ ಮಾಲ್ಟ್ ಮತ್ತು ಜೋಳದ ರೊಟ್ಟಿಗಳನ್ನು ಸೇವಿಸಲು ಪ್ರಾರಂಭಿಸಿದರು.


"ನಾನು ಬಿರಿಯಾನಿಗಳು, ಪಿಜ್ಜಾಗಳು, ಬರ್ಗರ್‌ಗಳು, ಫ್ರೆಂಚ್ ಫ್ರೈಸ್ ಗಳನ್ನು ಹೆಚ್ಚಾಗಿ ತಿನ್ನುತ್ತಿದ್ದೆ. ಈ ಅನಾರೋಗ್ಯಕರ ಸೇವನೆಯು ನನ್ನ ತೂಕ ಹೆಚ್ಚಾಗಲು ಕಾರಣವಾಯ್ತು.


ಹಾಗಾಗಿ ನಾನು ಫುಡ್‌ ಆರ್ಡರ್‌ ಮಾಡೋದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಬದಲಿಗೆ, ನನ್ನ ಪತ್ನಿ ಭಾನುವಾರ ಮನೆಯಲ್ಲಿಯೇ ಬಿರಿಯಾನಿ ಮಾಡುತ್ತಿದ್ದಳು. ಅದನ್ನೂ ನಾನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಿದ್ದೆ. ಮಧ್ಯೆ ನನಗೆ ಹಸಿವಾದಾಗಲೆಲ್ಲ ಮಜ್ಜಿಗೆ ಸೇವಿಸಲು ಆರಂಭಿಸಿದೆ" ಎಂದು ರಾಮ್‌ ವಿವರಿಸುತ್ತಾರೆ.


ದಿನಕ್ಕೆ 2 ಬಾರಿ ವಾಕಿಂಗ್!


ವಾಕಿಂಗ್‌ ಆರಂಭಿಸಿದ ರಾಮ್‌, ಕ್ರಮೇಣ ತಮ್ಮ ವಾಕಿಂಗ್‌ ಸಮಯವನ್ನು ಹೆಚ್ಚಿಸಿದರು. ಅವರು ಬೆಳಿಗ್ಗೆ ಒಂದು ಗಂಟೆ ಹಾಗೂ ಸಂಜೆ ಇನ್ನೊಂದು ಗಂಟೆ ನಡೆಯುತ್ತಿದ್ದರು.


ಹೀಗೆ 2 ಗಂಟೆಗಳ ಕಾಲ ವಾಕಿಂಗ್‌ ಮಾಡೋದಕ್ಕೆ ಅವರು ತಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿತ್ತು. "ನಾನು ಬೆಳಿಗ್ಗೆ 9:30 ಕ್ಕೆ ಕೆಲಸಕ್ಕೆ ಲಾಗ್ ಇನ್ ಆಗಬೇಕಿತ್ತು. ಅದಕ್ಕಾಗಿ ನಾನು ಮೊದಲೆಲ್ಲ‌ 8 ಗಂಟೆಗೆ ಎದ್ದೇಳುತ್ತಿದ್ದೆ. ಆದ್ರೆ ವಾಕಿಂಗ್‌ ಮಾಡೋದಕ್ಕಾಗಿ ನಾನು ಬೆಳಗ್ಗೆ 6.30 ಕ್ಕೇ ಎದ್ದು 7 ಗಂಟೆಯಿಂದ 8 ಗಂಟೆವರೆಗೆ ವಾಕ್ ಮಾಡುತ್ತಿದ್ದೆ. ಸಂಜೆ ಕೆಲಸ ಮುಗಿಸಿ, ಸಾಯಂಕಾಲ 6 ಗಂಟೆಯಿಂದ 7 ರ ವರೆಗೆ ಮತ್ತೆ ಒಂದು ಗಂಟೆ ವಾಕಿಂಗ್‌ ಮಾಡುತ್ತಿದ್ದೆ ಎನ್ನುತ್ತಾರೆ ರಾಮ್.‌


ಈ ದಿನಚರಿಯ ಬಳಿಕ ಒಂದು ತಿಂಗಳೊಳಗೆ ರಾಮ್‌ ಗೆ ಫಲಿತಾಂಶ ಕಾಣತೊಡಗಿತು. “ಆರಂಭದಲ್ಲಿ 100 ಮೀಟರ್‌ಗಳಷ್ಟು ಜಾಗಿಂಗ್ ಮಾಡಲು ನನಗೆ ಕಷ್ಟವಾಯಿತು. ನಂತರ ರೂಢಿಯಾಗುತ್ತ ಬಂದಿತು. ಈಗ ನಾನು ಎಲ್ಲಿಯೂ ಬ್ರೇಕ್‌ ತೆಗೆದುಕೊಳ್ಳದೇನೇ 3 ಕಿ.ಮೀ ವರೆಗೆ ಸುಲಭವಾಗಿ ಜಾಗಿಂಗ್ ಮಾಡಬಲ್ಲೆ” ಎಂದು ರಾಮ್ ಹಂಚಿಕೊಳ್ಳುತ್ತಾರೆ.


“ನಾನು ಆಂಧ್ರಪ್ರದೇಶದ ಹಳ್ಳಿಯಲ್ಲಿ ಬೆಳೆದೆ. ಅಲ್ಲಿ ನಮಗೆ ದೊಡ್ಡ ಮೈದಾನವಿತ್ತು ಮತ್ತು ನಾನು ಇಡೀ ದಿನ ಆಡುತ್ತಿದ್ದೆ. ನನ್ನ ಇಂಜಿನಿಯರಿಂಗ್ ದಿನಗಳಲ್ಲಿಯೂ ನಾನು ಕ್ರಿಕೆಟ್ ಮತ್ತು ಫುಟ್ಬಾಲ್ ಆಡುತ್ತಿದ್ದೆ.


ಐದು ವರ್ಷಗಳ ಹಿಂದೆ ಮದುವೆಯಾದಾಗ ನನ್ನ ತೂಕ ಸುಮಾರು 80 ಕೆ.ಜಿ ಇತ್ತು. ಕಳೆದ 2 ವರ್ಷಗಳಿಂದ ನಾವು ಕಚೇರಿಗೆ ಹೋಗುವುದನ್ನು ನಿಲ್ಲಿಸಿದ್ದರಿಂದ, ಆ ಸಣ್ಣ ಚಟುವಟಿಕೆಯೂ ನಿಂತುಹೋಗಿದೆ. ಇದೇ ನನ್ನ ತೂಕ ಹೆಚ್ಚಾಗಲು ಕಾರಣವಾಯ್ತು" ಎನ್ನುತ್ತಾರೆ.


ಇದನ್ನೂ ಓದಿ: ಸಾಸಿವೆ ಸೊಪ್ಪನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ಯಾ?


ಭರವಸೆ ಕಳೆದುಕೊಳ್ಳಬೇಡಿ, ಸ್ಥಿರತೆ ಮುಖ್ಯ


ಫಲಿತಾಂಶಗಳು ನಿಧಾನವಾಗಿದ್ದರೂ ಸಹ ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಸಲಹೆ ನೀಡುತ್ತಾರೆ ರಾಮ್‌ ಮಲಂಪತಿ. ಏಕೆಂದರೆ ನಾನು ಈ ದಿನಚರಿಯೊಂದಿಗೆ ಮೂರು ತಿಂಗಳ ಸಮಯವನ್ನು ನೀಡಿದ್ದೇನೆ.


ಪ್ರತಿಯೊಬ್ಬರ ದೇಹ ಪ್ರಕೃತಿಯೂ ಬೇರೆ ಬೇರೆಯಾಗಿರುತ್ತವೆ. ಮೊದಲ ತಿಂಗಳಲ್ಲಿ ನೀವು ಫಲಿತಾಂಶಗಳನ್ನು ನೋಡದಿದ್ದರೆ ಭರವಸೆ ಕಳೆದುಕೊಳ್ಳಬೇಡಿ.


ಮಾಡುತ್ತಿರುವುದನ್ನು ಬಿಟ್ಟು ಬಿಡಬೇಡಿ. ಇಲ್ಲಿ ಸ್ಥಿರತೆಯೇ ಮುಖ್ಯವಾಗುತ್ತದೆ. ಮಾಡುತ್ತ ಹೋಗಬೇಕು ಅಂದಾಗ ಫಲಿತಾಂಶ ಸಿಕ್ಕೇ ಸಿಗುತ್ತದೆ. ನಾನು ಭಾನುವಾರದಂದೂ ವಾಕಿಂಗ್‌ಗೆ ಹೋಗುತ್ತೇನೆ ಮತ್ತು ಪ್ರತಿದಿನ 2.5 ಗಂಟೆಗಳ ವಾಕಿಂಗ್‌ ಅನ್ನು ತಪ್ಪದೇ ಮಾಡುತ್ತೇನೆ ಎಂಬುದಾಗಿ ಅವರು ಹೇಳುತ್ತಾರೆ.‌


ಮನೆಯ ಅಡುಗೆ ಬೆಸ್ಟ್!


ರಾಮ್‌ ಅವರ ತೂಕವನ್ನು ಇಳಿಸಿಕೊಂಡಿರುವುದರಿಂದ ಇದೇ ಆಹಾರ ಪದ್ಧತಿಯನ್ನು ಮುಂದುವರಿಸಲು ಯೋಜಿಸಿದ್ದಾರೆ. ತಮ್ಮ ಪತ್ನಿ ಮನೆಯಲ್ಲಿಯೇ ಆರೋಗ್ಯಕರ ಆಹಾರವನ್ನು ತಯಾರಿಸಿಕೊಟ್ಟಿರುವುದಾಗಿ ಹಾಗೂ ಅಂಥ ಆಹಾರ ಕ್ರಮದಿಂದಲೇ ತಾವು ತೂಕ ಇಳಿಸಿಕೊಳ್ಳಲು ಸಾಧ್ಯವಾಯ್ತು ಎಂಬುದಾಗಿ ಅವರು ಹೇಳುತ್ತಾರೆ.


“ನನ್ನ ತೂಕ ಇಳಿಸುವ ಪ್ರಯಾಣದಲ್ಲಿ ನನ್ನ ಪತ್ನಿ ನನಗೆ ಬೆನ್ನೆಲುಬಾಗಿ ನಿಂತಿದ್ದಳು. ಅವಳ ಬೆಂಬಲವು ನಿರ್ಣಾಯಕವಾಗಿದೆ. ನಾನು ಪ್ರತಿದಿನ ಆರೋಗ್ಯಕರ ಆಹಾರವನ್ನು ತಿನ್ನುತ್ತೇನೆ" ಎಂಬುದಾಗಿ ರಾಮ್‌ ಹೇಳಿಕೊಳ್ಳುತ್ತಾರೆ.


ಹಾಗಂತ ಅವರು ಎಲ್ಲವನ್ನೂ ತ್ಯಾಗ ಮಾಡಿದ್ದಾರೆ ಅಂತೇನಲ್ಲ. ವಾರಕ್ಕೊಮ್ಮೆ ದಮ್ ಬಿರಿಯಾನಿ ಮತ್ತು ಪಿಜ್ಜಾಗಳನ್ನೂ ತಿನ್ನುತ್ತಾರೆ. ಆದ್ರೆ ಎಲ್ಲವನ್ನೂ ಮನೆಯಲ್ಲಿಯೇ ಮಾಡುತ್ತಾರೆ. ಹೊರಗೆ ತಿನ್ನುವಾಗ, "ನಾವು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಬೇಕು" ಎಂದು ಅವರು ಸಲಹೆ ನೀಡುತ್ತಾರೆ.


"ನಾನು ಹೊರಗೆ ತಿನ್ನುವಾಗ, ಸಲಾಡ್ ಮತ್ತು ಸೂಪ್‌ ಗಳನ್ನು ಸೇವಿಸುತ್ತೇನೆ. ಅನ್ನವನ್ನು ಸೇವಿಸುವಾಗಲೂ, ನನ್ನ ಬಳಿ ಸಮಾನ ಪ್ರಮಾಣದ ತರಕಾರಿಗಳು, ಸಲಾಡ್‌ ಗಳು ಇರುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇನೆ.


ನೀವು ಒಂದು ಕಪ್ ಅನ್ನವನ್ನು ತೆಗೆದುಕೊಂಡರೆ, ಅದೇ ಪ್ರಮಾಣದ ತರಕಾರಿಗಳನ್ನು ತೆಗೆದುಕೊಳ್ಳಿ. ನಾವು ಎಲ್ಲವನ್ನೂ ಮನೆಯಲ್ಲಿಯೇ ಮಾಡಲು ಪ್ರಾರಂಭಿಸಿದ್ದೇವೆ, ಅದು ಆರೋಗ್ಯಕರವಾಗಿರುತ್ತದೆ" ಎಂದು ರಾಮ್ ಹೇಳುತ್ತಾರೆ.


ಆಹಾರ ಕ್ರಮ ಹೀಗಿರಲಿ!


ಇನ್ನು ತಮ್ಮ ಆಹಾರ ಕ್ರಮಗಳ ಬಗ್ಗೆ ಹೇಳಿಕೊಳ್ಳುವ ರಾಮ್‌, ಬೆಳಿಗ್ಗೆ 10 ಗಂಟೆಗೆ ಉಪಹಾರಕ್ಕೆ ಮೊಟ್ಟೆಯ ಬಿಳಿಭಾಗ, ರಾಗಿ ಮಾಲ್ಟ್ ಮತ್ತು ಸೇಬು ಅಥವಾ ದಾಳಿಂಬೆಯಂತಹ ಹಣ್ಣನ್ನು ಸೇವಿಸುವುದಾಗಿ ಹೇಳುತ್ತಾರೆ.


ಇದನ್ನೂ ಓದಿ: ರೋಗ ನಿರೋಧಕ ಶಕ್ತಿ, ಹೃದಯದ ಆರೋಗ್ಯಕ್ಕೆ ಹುಣಸೆ ಹಣ್ಣು ಉತ್ತಮ!


ಮಧ್ಯಾಹ್ನ 2 ಗಂಟೆಗೆ ಊಟದಲ್ಲಿ ತರಕಾರಿ ಉಪ್ಮಾ/ಒಂದು ಕಪ್ ಅನ್ನ/ಚಪಾತಿ/ರಾಗಿ ಅಥವಾ ಜೋಳದ ದೋಸೆ/ಚಿಕನ್ ಅಥವಾ ತರಕಾರಿ ಕರಿ ಜೊತೆಗೆ ಕ್ಯಾರೆಟ್ ಮತ್ತು ಸೌತೆಕಾಯಿ ಸಲಾಡ್ ತೆಗೆದುಕೊಳ್ಳುತ್ತಾರಂತೆ.


ಇನ್ನು ರಾತ್ರಿ ಊಟಕ್ಕೆ ತರಕಾರಿ ಕರಿಯೊಂದಿಗೆ ಚಪಾತಿ ಜೊತೆಗೆ ಫ್ರೂಟ್ ಸಲಾಡ್ ತೆಗೆದುಕೊಳ್ಳುತ್ತಾರಂತೆ. ಈ ನಡುವೆ ಸಾಕಷ್ಟು ಮಜ್ಜಿಗೆಯನ್ನು ಸೇವಿಸುವುದಾಗಿ ರಾಮ್‌ ಅವರು ಹೇಳಿಕೊಂಡಿದ್ದಾರೆ.


ಒಟ್ಟಾರೆಯಾಗಿ ಮನಸ್ಸಿದ್ದಲ್ಲಿ ಮಾರ್ಗ ಎಂಬಂತೆ ಆರೋಗ್ಯಕರ ಆಹಾರ ಕ್ರಮ ಹಾಗೂ ವಾಕಿಂಗ್‌ ನಿಂದಾಗಿ ತೂಕ ಇಳಿಸಿಕೊಂಡ ರಾಮ್‌ ಅವರು ಅನೇಕರಿಗೆ ಮಾದರಿಯಾಗುತ್ತಾರೆ.

Published by:Sandhya M
First published: