ಗರ್ಭಿಣಿಯರನ್ನು ಬೆದರಿಸಿ ಲೂಟಿಗಿಳಿದಿವೆಯಾ ಕೆಲ ಖಾಸಗಿ ಆಸ್ಪತ್ರೆಗಳು?

ಒಟ್ಟಿನಲ್ಲಿ ನಿಜವಾಗಲೂ ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದಲೇ ಸಿ ಸೆಕ್ಷನ್ ಅವಶ್ಯವಿದ್ದರೆ ಖಂಡಿತ ವೈದ್ಯರು ಆ ನಿರ್ಧಾರ ತೆಗೆದುಕೊಳ್ಬೇಕು. ಆದರೆ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಅನುಭವ ಇರುವ ವೈದ್ಯರ ಕೊರತೆ ಇದೆ.

zahir | news18
Updated:June 12, 2019, 6:36 PM IST
ಗರ್ಭಿಣಿಯರನ್ನು ಬೆದರಿಸಿ ಲೂಟಿಗಿಳಿದಿವೆಯಾ ಕೆಲ ಖಾಸಗಿ ಆಸ್ಪತ್ರೆಗಳು?
@DD News
  • News18
  • Last Updated: June 12, 2019, 6:36 PM IST
  • Share this:
ಈಗಿನ ಕಾಲದಲ್ಲಿ ಯಾವುದೇ ಕಾಂಪ್ಲಿಕೇಶನ್ ಇಲ್ಲದೇ ಒಂದು ಡೆಲಿವರಿ ಆಗೋದು ಅಂದರೆ ಅದೊಂದು ದೊಡ್ಡ ವರ ಎನ್ನುವಂತಾಗಿದೆ. ಯಾರನ್ನ ಕೇಳಿದರೂ ಸಿಜೇರಿಯನ್ ಆಗಿರೋದನ್ನ ಸರ್ವೇಸಾಮಾನ್ಯ ಎನ್ನುವಂತೆ ಹೇಳುತ್ತಾರೆ. ಆದ್ರೆ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳೋಕೆ ಖಾಸಗಿ ಆಸ್ಪತ್ರೆಗಳು ನಾರ್ಮಲ್ ಡೆಲಿವರಿ ಆಗುವ ಸಾಧ್ಯತೆಯಿದ್ದ ಸನ್ನಿವೇಶಗಳಲ್ಲೂ ಸಿ ಸೆಕ್ಷನ್​ಗೆ ಹೆಚ್ಚು ಒತ್ತು ಕೊಡುತ್ತಾರೆ ಅನ್ನುವ ಆರೋಪಗಳಿವೆ. ತಾಯಿ ಮತ್ತು ಮಗುವಿನ ಆರೋಗ್ಯಕ್ಕಿಂತ ಕಾಸು ಮಾಡೋದೇ ಮೂಲ ಉದ್ದೇಶ ಅನ್ನೋ ರೀತಿ ಆಗಿದೆ. 100 ರಲ್ಲಿ 80 ಮಹಿಳೆಯರು ಸಿಜೆರಿಯನ್ ಮೂಲಕವೇ ಮಗುವಿಗೆ ಜನ್ಮ ಕೊಡುತ್ತಿದ್ದಾರೆ ಅನ್ನೋ ವಿಚಾರ ದೊಡ್ಡ ಆತಂಕ ಸೃಷ್ಟಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಟ್ಟಾರೆ ಹೆರಿಗೆಗಳಲ್ಲಿ ಶೇಕಡಾ 15ರಿಂದ 20 ಮಾತ್ರ ಸಿ ಸೆಕ್ಷನ್ ಅಥವಾ ಸಿಜೇರಿಯನ್ ಆಗಿರಬೇಕು. ಉಳಿದದ್ದೆಲ್ಲಾ ನಾರ್ಮಲ್ ಡೆಲಿವರಿಯೇ ಆಗಬೇಕು. ಆದರೆ ಸಿ ಸೆಕ್ಷನ್ ಡೆಲಿವರಿಗಳ ಪ್ರಮಾಣ ವಿಶ್ವ ಆರೋಗ್ಯ ಸಂಸ್ಥೆಯ ನಿಗದಿತ ಪ್ರಮಾಣಕ್ಕಿಂತ ಅನೇಕ ಪಟ್ಟುಗಳಷ್ಟು ಹೆಚ್ಚಿದೆ. ಒಂದು ಅಂದಾಜಿನ ಪ್ರಕಾರ ಶೇಕಡಾ 80ರಷ್ಟು ಸಿ ಸೆಕ್ಷನ್​ಗಳು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತವೆ. ಸಾಮಾನ್ಯವಾಗಿ ಡೆಲಿವರಿ ಆಗುವ ಸಂದರ್ಭದಲ್ಲಿ ಮಗುವಿನ ಕುತ್ತಿಗೆಗೆ ಕರುಳಬಳ್ಳಿ ಸುತ್ತಿಕೊಂಡಿದೆ, ಮಗುವಿನ ಪೊಸಿಶನ್ ಸರಿಯಿಲ್ಲ ಎನ್ನುವ ಕಾರಣಗಳನ್ನು ನೀಡಿ ಸಿ ಸೆಕ್ಷನ್ ಮಾಡೋಕೆ ತಿಳಿಸಲಾಗುತ್ತದೆ. ಆದರೆ ನಿಖರವಾಗಿ ಅಪಾಯದ ಸನ್ನಿವೇಶ ಇರದ ಹೊರತು ಯಾವುದೇ ಗರ್ಭಿಣಿಗೆ ಸಿ ಸೆಕ್ಷನ್ ಮಾಡಬಾರದು ಅನ್ನುವುದನ್ನು ವೈದ್ಯರೇ ತಿಳಿಸಿ ಹೇಳಬೇಕು.

ದುರದೃಷ್ಟಕರ ವಿಚಾರ ಅಂದರೆ ನಾರ್ಮಲ್ ಡೆಲಿವರಿಗೆ ಪ್ರಯತ್ನವನ್ನೂ ಅನೇಕ ಗರ್ಭಿಣಿಯರು ಮಾಡುವುದಿಲ್ಲ. ತಮಗೆ ಇಂಥದ್ದೇ ಘಳಿಗೆ, ಕಾಲ ಮುಹೂರ್ತದಲ್ಲಿ ಮಗು ಜನಿಸಬೇಕು ಅನ್ನೋ ಡಿಮ್ಯಾಂಡ್ ಇಟ್ಟುಕೊಂಡೇ ಆಸ್ಪತ್ರೆಗಳಿಗೆ ಬರುತ್ತಾರೆ. ಸಿಜೇರಿಯನ್ ಸುಲಭ ಮಾರ್ಗವಾಗಿ ಇರುವಾಗ ಅಷ್ಟೆಲ್ಲಾ ನೋವು ತಿಂದು ನಾರ್ಮಲ್ ಡೆಲಿವರಿ ಯಾಕೆ ಬೇಕು ಅನ್ನೋ ಧೋರಣೆಯೂ ಅನೇಕ ಗರ್ಭಿಣಿಯರು ಮತ್ತು ಅವರ ಕುಟುಂಬಗಳಲ್ಲಿದೆ ಎನ್ನುತ್ತವೆ ಖಾಸಗಿ ಆಸ್ಪತ್ರೆಗಳು.

ಆದರೆ ಇತ್ತೀಚಿನ ಮಹಿಳೆಯರಲ್ಲಿ ಇರುವ ಅನೇಕ ಆರೋಗ್ಯ ಸಮಸ್ಯೆಗಳು ಮತ್ತು ಹದಗೆಟ್ಟ ಜೀವನಶೈಲಿ ಕೂಡಾ ನೈಸರ್ಗಿಕ ಪ್ರಸವಕ್ಕೆ ಅನುಕೂಲ ಆಗದಂಥಾ ಪರಿಸ್ಥಿತಿ ತಂದೊಡ್ಡಿವೆ ಅನ್ನೋದು ಕೂಡಾ ಅಷ್ಟೇ ಸತ್ಯ. ಸದಾ ಕುಳಿತೇ ಮಾಡುವ ಕೆಲಸಗಳು, ಮಾನಸಿಕ ಒತ್ತಡ, ಅನಾರೋಗ್ಯಕರ ಆಹಾರ ಅಭ್ಯಾಸ, ವ್ಯಾಯಾಮದ ಕೊರತೆ ಎಲ್ಲವೂ ಬಹು ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತವೆ. ವ್ಯಾಯಾಮ ಇಲ್ಲದಾಗ ದೇಹದ ಟಿಶ್ಶೂಗಳು ಗಟ್ಟಿಯಾಗಿರುತ್ತವೆ. ಹಾಗಾಗಿ ನಾರ್ಮಲ್ ಡೆಲಿವರಿ ಆಗೋದು ಕೂಡಾ ಕಷ್ಟ ಎನ್ನುವಂತಾಗಿರುತ್ತದೆ.

ಇದೆಲ್ಲದರ ನಡುವೆ ಬೆಂಗಳೂರಿನ ಕೆಲ ಪ್ರಸೂತಿ ತಜ್ಞರು ಒಟ್ಟಾಗಿ ಆದಷ್ಟು ನಾರ್ಮಲ್ ಡೆಲಿವರಿಗೆ ಪ್ರೋತ್ಸಾಹ ಕೊಡುವ ಕೆಲಸದಲ್ಲೂ ತೊಡಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬಳಿ ಬರುವ ಗರ್ಭಿಣಿಯರಿಗೆ ಅವರ ಜೀವನಶೈಲಿಯಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಳ್ಳಬೇಕು, ನೈಸರ್ಗಿಕ ಪ್ರಸವ ಆಗವುದಕ್ಕೆ ಅವರು ಪಾಲಿಸಬೇಕಾದ ಅಂಶಗಳೇನು ಅನ್ನುವುದನ್ನು ತಿಳಿಸಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಇವರ ಸಂಖ್ಯೆ ಕಡಿಮೆ ಅನ್ನೋದು ಸ್ವಲ್ಪ ಬೇಸರದ ವಿಚಾರ.

ಒಟ್ಟಿನಲ್ಲಿ ನಿಜವಾಗಲೂ ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದಲೇ ಸಿ ಸೆಕ್ಷನ್ ಅವಶ್ಯವಿದ್ದರೆ ಖಂಡಿತ ವೈದ್ಯರು ಆ ನಿರ್ಧಾರ ತೆಗೆದುಕೊಳ್ಬೇಕು. ಆದರೆ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಅನುಭವ ಇರುವ ವೈದ್ಯರ ಕೊರತೆ ಇದೆ. ಹೆಚ್ಚು ಅನುಭವ ಇಲ್ಲದ ವೈದ್ಯರು ನಾರ್ಮಲ್ ಡೆಲಿವರಿ ಸಂದರ್ಭದಲ್ಲಿ ಉಂಟಾಗಬಹುದಾದ ರಿಸ್ಕ್​ಗಳಿಗೆ ಭಯಪಡುತ್ತಾರೆ. ಇದನ್ನೆಲ್ಲಾ ತಡೆಯೋಕೆ ಸಿ ಸೆಕ್ಷನ್ ಮಾಡಿಬಿಡೋದೇ ಸುಲಭ ಎಂದು ಗರ್ಭಿಣಿಗೆ ಅದನ್ನೇ ಸೂಚಿಸುತ್ತಾರೆ. ಆದರೆ ಇದರಿಂದಾಗಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ದೀರ್ಘಕಾಲದಲ್ಲಿ ಉಂಟಾಗುವ ನಾನಾ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸೋದಿಲ್ಲ. ಮಗುವಿನ ಶ್ವಾಸಕೋಶದಲ್ಲಿ ನೀರು ತುಂಬೋದು, ತಾಯಿಗೆ ಬೆನ್ನು ಹೊಟ್ಟೆ ಮತ್ತು ಬೆನ್ನು ನೋವಿನ ಸಮಸ್ಯೆ ವರ್ಷಗಳವರಗೆ ಕಾಡೋದು ಇವೆಲ್ಲವೂ ಸಿ ಸೆಕ್ಷನ್​ನ ಸೈಡ್ ಎಫೆಕ್ಟ್ಸ್.

ಒಂಭತ್ತು ತಿಂಗಳು ಗರ್ಭದೊಳಗೆ ಮಗುವನ್ನು ಹೊತ್ತ ತಾಯಿ ಪ್ರಸವದ ಸಂದರ್ಭದಲ್ಲಿ ಅದಕ್ಕೆ ಏನಾದರೂ ಅಪಾಯದ ಸನ್ನಿವೇಶ ಇದೆ ಅಂತ ವೈದ್ಯರು ಹೇಳಿದರೆ ಯಾವ ಆಲೋಚನೆಯೂ ಮಾಡದೇ ಅವರು ಹೇಳಿದ್ದಕ್ಕೆಲ್ಲಾ ಒಪ್ಪುತ್ತಾರೆ. ಇಂಥಾ ಸೂಕ್ಷ್ಮ ಸನ್ನಿವೇಶವನ್ನು ಕೆಲ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ಎನ್ಕ್ಯಾಶ್ ಮಾಡಿಕೊಳ್ಳೋಕೆ ಹೋಗೋದು ಮಾತ್ರ ದುರದೃಷ್ಟಕರ.(ವರದಿ: ಸೌಮ್ಯ ಕಳಸ)
First published: June 12, 2019, 6:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading