ಒಂಟಿ ಹುಡುಗರ ಗೋಳು ಕೇಳೋರ್ಯಾರು?

ಬೆಂಗಳೂರಲ್ಲಿ ಒಬ್ಬಂಟಿ ಹುಡುಗಿಯರಾದರೂ ಹೇಗೋ ನೆಲೆ ಕಂಡುಕೊಂಡು ಬಿಡುತ್ತಾರೆ. ಆದರೆ, ಒಂಟಿಯಾಗಿ ಬೆಂಗಳೂರಿಗೆ ಬರುವ ಹುಡುಗರ ಸ್ಥಿತಿ ಇನ್ನೂ ಕಷ್ಟ. ಎಲ್ಲ ಹುಡುಗರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಜನ ಕಿಂಚಿತ್​ ಕನಿಕರವನ್ನೂ ತೋರುವುದಿಲ್ಲ.

news18
Updated:September 1, 2018, 4:32 PM IST
ಒಂಟಿ ಹುಡುಗರ ಗೋಳು ಕೇಳೋರ್ಯಾರು?
ಬೆಂಗಳೂರಲ್ಲಿ ಒಬ್ಬಂಟಿ ಹುಡುಗಿಯರಾದರೂ ಹೇಗೋ ನೆಲೆ ಕಂಡುಕೊಂಡು ಬಿಡುತ್ತಾರೆ. ಆದರೆ, ಒಂಟಿಯಾಗಿ ಬೆಂಗಳೂರಿಗೆ ಬರುವ ಹುಡುಗರ ಸ್ಥಿತಿ ಇನ್ನೂ ಕಷ್ಟ. ಎಲ್ಲ ಹುಡುಗರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಜನ ಕಿಂಚಿತ್​ ಕನಿಕರವನ್ನೂ ತೋರುವುದಿಲ್ಲ.
news18
Updated: September 1, 2018, 4:32 PM IST
ಸುಷ್ಮಾ ಎನ್​. ಚಕ್ರೆ

'ಕೆಲ್ಸಾನೂ ಬೇಡ, ಏನೂ ಬೇಡ. ಸುಮ್ನೆ ತೋಟ-ಮನೆ ನೋಡ್ಕೊಂಡು ಮನೇಲಿ ಇರು ಸಾಕು' ಅಂತ ಅಪ್ಪ ಆದೇಶ ಹೊರಡಿಸಿದ್ದರು. ಆದರೆ, ಅವನಿಗೆ ಅದು ಇಷ್ಟವಿರಲಿಲ್ಲ. ಬೇರೆ ಸ್ನೇಹಿತರಂತೆ ನಾನು ಕೂಡ ಪೇಟೆಯಲ್ಲಿ ಕೆಲಸ ಮಾಡಬೇಕೆಂಬ ಆಸೆ ಆತನಿಗೆ. ಹಾಗೂ ಹೀಗೂ ಮನೆಯಲ್ಲಿ ಒಪ್ಪಿಸಿದ್ದಾಯಿತು. ಕೆಲಸಕ್ಕೆಂದು ಬೆಂಗಳೂರಿನ ಕಡೆಗೆ ಬಂದಿದ್ದೂ ಆಯಿತು.

ರೂಂ ಮಾಡಿದರೆ ಅಡುಗೆ ಮಾಡಿಕೊಳ್ಳಬೇಕಲ್ಲ ಎಂಬ ತಲೆಬಿಸಿ. ಫ್ರೆಂಡ್ಸ್ ಜೊತೆಗೆ ಇರೋಣವೆಂದರೆ ಎಲ್ಲರೂ ಒಂದೊಂದು ದಿಕ್ಕಲ್ಲಿ ಆಫೀಸ್ಗೆ ಸೇರಿದ್ದರು. ಇನ್ನೇನೂ ಮಾರ್ಗವಿಲ್ಲದ ಕಾರಣ ಬಾಯ್ಸ್ ಪಿಜಿಗೆ ಸೇರುವ ನಿರ್ಧಾರ ಮಾಡಿದ ಆ ಹುಡುಗ. ಆದರೆ, ಬೆಂಗಳೂರಲ್ಲಿ ಹುಡುಗಿಯರಿಗೆ ಇರುವಷ್ಟು ಪಿಜಿಗಳು ಹುಡುಗರಿಗೆ ಇಲ್ಲ. ಮಾಲೀಕರಿಗೆ ಗೊತ್ತಿಲ್ಲದ ಹಾಗೆ ಹುಡುಗರು ರೂಮಿನೊಳಗೆ ಎಣ್ಣೆ ಪಾರ್ಟಿ ಮಾಡುತ್ತಾರೆ, ಯಾರ್ಯಾರನ್ನೋ ಕರೆದುಕೊಂಡು ಬರುತ್ತಾರೆ, ರಾತ್ರಿ ಲೇಟಾಗಿ ಬರ್ತಾರೆ. ಹಾಗಾಗಿ, ಕೆಲಸಕ್ಕೆ ಹೋಗೋ ಪುರುಷರಿಗೆ ಅವಕಾಶ ಕೊಡೋದಿಲ್ಲ. ಓದೋ ಗಂಡುಮಕ್ಕಳಿಗೆ ಮಾತ್ರ ಅವಕಾಶ ಅಂತೆಲ್ಲ ಮಾಲೀಕರು ಸಬೂಬು ಹೇಳುತ್ತಿದ್ದರು.

ಹಾಗೂಹೀಗೂ ಒಂದು ಪಿಜಿ ಸಿಕ್ಕಿತು. ನಾಲ್ಕೈದು ನಿಬಂಧನೆಗಳನ್ನು ವಿಧಿಸಿದ ನಂತರ ಅಂತೂಇಂತೂ ಆತನಿಗೆ ಇರಲು ಅವಕಾಶ ನೀಡಲು ಒಪ್ಪಿಗೆ ಸೂಚಿಸಿದರು. ಮೂರು ಜನ ಇರಬೇಕಾಗಿದ್ದ ರೂಂ ಅದು. ಒಬ್ಬೊಬ್ಬರದು ಒಂದೊಂದು ಶಿಫ್ಟ್ ಆಗಿದ್ದರಿಂದ ಜಾಗ ಚಿಕ್ಕದು ಎಂದೇನೂ ಅನಿಸುತ್ತಿರಲಿಲ್ಲ. ಹೊತ್ತೊತ್ತಿಗೆ ರುಚಿಯಾದ ತಿಂಡಿ, ಊಟ ಸಿಗುತ್ತಿತ್ತು. ಹಾಗೂಹೀಗೂ ಸುತ್ತಿ ಬಳಸಿ ಆತನ ಊರಿನ ಕಡೆಯವರಾರೋ ಮಾಲೀಕರಿಗೆ ಪರಿಚಯದವರಿದ್ದರಿಂದ ತುಸು ಹೆಚ್ಚೇ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದರು.ಅದೊಂದು ದಿನ ಆತ ಅದ್ಯಾವ ಮಗ್ಗುಲಲ್ಲಿ ಎದ್ದಿದ್ದನೋ ಗೊತ್ತಿಲ್ಲ. ಆ ದಿನ ಆತನಿಗೆ ರಜೆಯಿತ್ತು. ಬೆಳಗ್ಗೆ ಯಾರದೋ ಮನೆಯ ಕಾರ್ಯಕ್ರಮಕ್ಕೆ ಹೊರಟಿದ್ದ ಮನೆಯ ಮಾಲೀಕರು ಮನೆಯ ಕಡೆ ನಿಗಾ ಇಡುವಂತೆ ಆತನಿಗೆ ಸೂಚಿಸಿದ್ದರು. ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಆತನಿಗೆ ಮನೆಯ ಕಾಲಿಂಗ್ ಬೆಲ್ ರಿಂಗಾಯಿತು. ಕೆಳಹೋಗಿ ಬಾಗಿಲು ತೆರೆದರೆ ಆತನ ರೂಂಮೇಟ್ ಯಾವುದೋ ಹುಡುಗಿಯ ಜೊತೆಗೆ ನಿಂತಿದ್ದ. ಸೀದಾ ಒಳಬಂದ ರೂಂಮೇಟ್ ಈತನ ಬಳಿ ‘ಹೇಗೂ ಆಂಟಿ-ಅಂಕಲ್ ಬರೋದು ಲೇಟಾಗುತ್ತೆ. ಅವಳು ನನ್ ಫ್ರೆಂಡ್. ಸ್ವಲ್ಪ ಹೊತ್ತು ಇಲ್ಲಿ ಇದ್ದು ಹೋಗ್ತಾಳೆ’ ಅಂತ ಹೇಳಿದ. ಅವನಿಗೋ ಆಂಟಿ-ಅಂಕಲ್ ಹಾಕಿದ್ದ ನಿಬಂಧನೆಗಳೆಲ್ಲ ನೆನಪಾದವು. ಫ್ರೆಂಡ್ ಬಳಿ ಎಷ್ಟು ಹೇಳಿದರೂ ಆತ ಅರ್ಥ ಮಾಡಿಕೊಳ್ಳುವುದಿಲ್ಲ ಎಂದುಕೊಂಡು ‘ಸರಿ’ ಎಂದಷ್ಟೆ ಹೇಳಿ ಸುಮ್ಮನೆ ತನ್ನ ರೂಮಿಗೆ ಹೋದ.

ಸಂಜೆ ಆಂಟಿ-ಅಂಕಲ್ ಬಂದರು. ಒಳಗೆ ನೋಡಿದರೆ ಹುಡುಗಿ ಸೋಫಾ ಮೇಲೆ ಇಯರ್ ಫೋನ್ ಹಾಕಿಕೊಂಡು ಕೂತಿದ್ದಾಳೆ. ಆತನ ರೂಂಮೇಟ್ ಒಳಗೆಲ್ಲೋ ಹೋಗಿದ್ದ. ಒಳಗೆ ಬಂದ ಆಂಟಿ ‘ಯಾರಿದು?’ ಎಂದು ಏರುಧ್ವನಿಯಲ್ಲಿ ಕೇಳಿದರು. ಆತನಿಗೇನು ಉತ್ತರ ಕೊಡಬೇಕೋ ಗೊತ್ತಾಗಲಿಲ್ಲ. ಅಷ್ಟರಲ್ಲೇ ಬಂದ ರೂಂಮೇಟ್ ತನಗೇನೂ ಗೊತ್ತೇ ಇಲ್ಲವೆಂಬಂತೆ ಮೆಟ್ಟಿಲು ಹತ್ತಿ ರೂಮಿಗೆ ಹೋದ. ಆತ ಪೆಚ್ಚುಮೋರೆ ಹಾಕಿಕೊಂಡು ಆಂಟಿಯತ್ತ ನೋಡುತ್ತಾ ನಿಂತಿದ್ದ. ಆ ಹುಡುಗಿಗೆ ಪರಿಸ್ಥಿತಿ ಅರ್ಥವಾಯಿತೆಂದು ಕಾಣುತ್ತದೆ. ಸೈಲೆಂಟಾಗಿ ಹೊರಹೋಗಿ ಚಪ್ಪಲಿ ಹಾಕಿಕೊಂಡು ಗೇಟು ದಾಟಿ ಹೋಗೇಬಿಟ್ಟಳು.
Loading...

ಮಾರನೇ ದಿನ ಬೆಳಗ್ಗೆ ಆತನಿನ್ನೂ ಎದ್ದಿರಲಿಲ್ಲ... ರೂಂಮೇಟ್ ತಟ್ಟಿ ಎಬ್ಬಿಸಿದ. ಫ್ರೆಶ್ ಆಗಿ ತಿಂಡಿಗೆ ಕೆಳಹೋದಾಗ ಆಂಟಿ ಅಡುಗೆಮನೆ ಸೇರಿದ್ದರು. ಅಂಕಲ್ ಡೈನಿಂಗ್ ಟೇಬಲ್ ಬಳಿ ನಿಂತಿದ್ದರು. ಗುಡ್ ಮಾರ್ನಿಂಗ್ ಅಂಕಲ್ ಎಂದ ಆತನ ಕಡೆ ತೀಕ್ಷ್ಣ ನೋಟವೊಂದನ್ನು ಬೀರಿದ ಅವರು ‘ನಿನ್ನ ಮೇಲೆ ನಮಗೆ ನಂಬಿಕೆಯಿದೆ. ಆದರೆ, ನೀನ್ಯಾರೋ ಹುಡುಗಿಯನ್ನು ಕರೆದುಕೊಂಡು ಬಂದಿದ್ದನ್ನು ನೋಡಿ ನಾಳೆ ಇನ್ನೊಬ್ಬರು ಕರೆದುಕೊಂಡು ಬರ್ತಾರೆ. ಅದಕ್ಕೇ ಇಲ್ಲಿ ಸೇರುವ ಮೊದಲೇ ನಿನಗೆ ಕಂಡೀಷನ್ ಹಾಕಿದ್ದು. ನೀನು ನಾಳೆಯಿಂದ ಬೇರ್ಯಾವುದಾದರೂ ಪಿಜಿ ನೋಡ್ಕೋ’ ಅಂತ ಹೇಳಿ ಒಳಹೋದರು. ಅದ್ಯಾಕೋ ಆತನಿಗೆ ರೂಂಮೇಟ್ ಬಗ್ಗೆ ಚಾಡಿ ಹೇಳುವ ಮನಸಾಗಲಿಲ್ಲ. ಮೇಲೆ ಬರುತ್ತಿದ್ದಂತೆ ರೂಂಮೇಟ್ ‘ಸಾರಿ ಮಗಾ’ ಎಂದು ಹ್ಯಾಪುಮೋರೆ ಹಾಕಿಕೊಂಡ. ಮತ್ತೆ ನಾಳೆ ಹೊಸ ಪಿಜಿ ಹುಡುಕಬೇಕಲ್ಲ ಎಂಬ ತಲೆಬಿಸಿಯಿಂದ ಆತ ಬೇಗ ಬೇಗ ರೆಡಿಯಾಗಿ ಹೊರಕ್ಕೆ ಹೊರಟ.

 
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...