ತನ್ನದಲ್ಲದ ತಪ್ಪಿಗೆ ಕಮೋಡ್​ ಸೇರಿದ ಮೊಬೈಲ್​

news18
Updated:September 1, 2018, 4:31 PM IST
ತನ್ನದಲ್ಲದ ತಪ್ಪಿಗೆ ಕಮೋಡ್​ ಸೇರಿದ ಮೊಬೈಲ್​
news18
Updated: September 1, 2018, 4:31 PM IST
ಸುಷ್ಮಾ ಎನ್​. ಚಕ್ರೆ

ಅಕ್ಕಪಕ್ಕದ ಮನೆಯ ಹುಡುಗಿಯರೆಲ್ಲ ಪೇಟೆಯಲ್ಲಿ ಕಾಲೇಜಿಗೆ ಸೇರಿದ್ದರು. ಆಗ ನಾನಿನ್ನೂ ಹೈಸ್ಕೂಲಲ್ಲಿದ್ದೆ. ಅವರೆಲ್ಲ ಉದ್ದ ಕೂದಲನ್ನು ಕಟ್​ ಮಾಡಿಸಿಕೊಂಡು ಪೋನಿ ಹಾಕಿಕೊಂಡು ಸಲ್ವಾರ್​ ಧರಿಸಿ ಹೋಗುತ್ತಿದ್ದರೆ ನನಗೋ ನನ್ನ ಎರಡು ಜಡೆಗಳ ಮೇಲೆ ಜಿಗುಪ್ಸೆ ಬರುತ್ತಿತ್ತು. ನಾನೂ ಇನ್ನೊಂದೆರಡು ವರ್ಷಗಳಲ್ಲಿ ಕಾಲೇಜಿಗೆ ಹೋಗುತ್ತೇನೆ, ಆಗ ನನಗೂ ಯೂನಿಫಾರಂ ಇರುವುದಿಲ್ಲ, ನಾನೂ ಹೀಗೇ ಸ್ಟೈಲಾಗಿ ಕಾಲೇಜಿಗೆ ಹೋಗಬಹುದು ಎಂಬ ಯೋಚನೆಯೇ ಆ ದಿನ ಶಾಲೆಗೆ ಹೋಗಲು ಸ್ಫೂರ್ತಿ ತುಂಬುತ್ತಿತ್ತು.

ಪಿಯುಸಿ ಮುಗಿಸಿದಾಗ ಅಮ್ಮನ ಬಳಿ ಕೂದಲು ಗಿಡ್ಡ​ ಮಾಡಿಸುವ ಬಗ್ಗೆ ಹೇಳಿದ್ದೇ ತಡ... ಆ ದಿನ ಸಂಜೆಯವರೆಗೂ ಸಹಸ್ರನಾಮಾರ್ಚನೆ ಮಾಡಿದ್ದಳು. ಮನೆಯಿಂದಲೇ ಕಾಲೇಜಿಗೆ ಹೋದರೆ ನಾನು ಅಂದುಕೊಂಡ ಹಾಗೆ ಏನೂ ಮಾಡೋಕೆ ಆಗೋದಿಲ್ಲ ಅಂತ ನನಗೆ ಅಂದೇ ಗೊತ್ತಾಗಿಹೋಯಿತು. ಹಠ ಮಾಡಿ ದೂರದ ಮಂಗಳೂರಿನ ಕಾಲೇಜಿಗೆ ಸೇರಿದೆ. ಮಂಗಳೂರಿನಲ್ಲಿ ನೆಂಟರೆಲ್ಲ ಇದ್ದರೂ ಪಿಜಿಯಲ್ಲಿಯೇ ಇರುತ್ತೇನೆ ಎಂದು ಮನೆಯಲ್ಲಿ ಒಪ್ಪಿಸಿದೆ.

ಹೀಗೇ ಪಿಜಿ ಜೀವನ ಶುರುವಾಯಿತು. ಉದ್ದನೆಯ ಕೂದಲು ಕುದುರೆ ಬಾಲದಂತಾಯ್ತು. ಎರಡು ವಾರಕ್ಕೊಮ್ಮೆ ಬ್ಯೂಟಿ ಪಾರ್ಲರ್​ ಖಾಯಮ್ಮಾಯ್ತು. ಸಂಜೆ ಪಾರ್ಕಲ್ಲಿ ವಾಕಿಂಗ್​, ಬೆಳಗ್ಗೆ ಟೆರೇಸ್​ ಮೇಲೆ ಯೋಗ, ಕಲರ್​ಫುಲ್​ ಡ್ರೆಸ್ಸು.. ಲೈಫು ಸುಂದರವಾಗೇ ಇತ್ತು. ಇಷ್ಟೆಲ್ಲ ಇದ್ದಮೇಲೆ ಮೊಬೈಲ್​ ಇಲ್ಲದಿದ್ದರೆ ಹೇಗೆ... ಆಗೆಲ್ಲ ಬೇಸಿಕ್​ ಸೆಟ್​ಗಳ ಕಾಲ. ಇಡೀ ಪಿಜಿಯಲ್ಲಿ ಒಬ್ಬಳ ಬಳಿ ಮಾತ್ರ ಕ್ಯಾಮೆರಾಫೋನ್​ ಇತ್ತು. ಹಾಗಾಗಿ, ನಾನು ಕ್ಯಾಮೆರಾ ಇರುವ ಮೊಬೈಲೇ ಬೇಕೆಂದು ಹಠ ಮಾಡಿ ಮೊಬೈಲ್​ ಗಿಟ್ಟಿಸಿಕೊಂಡಿದ್ದೆ.ನನ್ನ ರೂಂಮೇಟ್​ ಬಾಯಿಜೋರು. ಅವಳ ಬಾಯಿಗೆ ಯಾರಾದರೂ ಬಿದ್ದರೆ ಮತ್ತೆ ಸುಧಾರಿಸಿಕೊಳ್ಳಲು ವಾರಗಳೇ ಬೇಕು. ಕಾಲೇಜಲ್ಲೆಲ್ಲ ನಮ್ಮ ಪಿಜಿ ಕಳ್ಳಿಯ ಪಿಜಿ ಎಂದೇ ಪ್ರಸಿದ್ಧಿ ಪಡೆದಿತ್ತು. ನಮ್ಮ ರೂಮಿಂದ ಎರಡು ರೂಮಿನಾಚೆ ಆ 'ಕಳ್ಳಿ'ಯ ರೂಮಿತ್ತು. ಯಾರ ರೂಮಿನಲ್ಲಿ ಏನೇ ಕಳ್ಳತನವಾದರೂ ಅದಕ್ಕೆ ಅವಳ ಕೈಚಳಕವೇ ಕಾರಣ ಎಂದು ಎಲ್ಲರಿಗೂ ಗೊತ್ತಿತ್ತು. ಆದರೂ ಯಾವುದೇ ನಿಖರವಾದ ಸಾಕ್ಷಿಯಿಲ್ಲದೆ ಅವಳೆದುರು ಮಾತನಾಡಲು ಯಾರಿಗೂ ಧೈರ್ಯ ಮಾಡುತ್ತಿರಲಿಲ್ಲ. ಸ್ವತಃ ಓನರ್​ಗೆ ಕೂಡ ಈ ವಿಷಯ ಗೊತ್ತಿದ್ದರೂ ತೇಪೆ ಹಚ್ಚಿ ಆ ವಿಷಯವನ್ನು ಮುಗಿಸಿಬಿಡುತ್ತಿದ್ದರು. ಆಕೆಯ ಕೈಚಳಕದ ಬಗ್ಗೆ ದಿನಕ್ಕೊಂದು ಕತೆಗಳನ್ನು ಕೇಳುತ್ತಿದ್ದ ನನಗೆ ಒಳಗೊಳಗೇ ಪುಕಪುಕ ಶುರುವಾಗಿತ್ತು.

ಯಾರಿಗೇನು ಬೇಕಾದರೂ ಮಾಡಲಿ, ನನ್ನ ತಂಟೆಗೆ ಮಾತ್ರ ಬರದಿದ್ದರಾಯಿತು ಎಂದುಕೊಂಡು ನಾನೇನೋ ಸುಮ್ಮನಿದ್ದೆ. ನನ್ನ ಸೇಫ್ಟಿಗಿರಲಿ ಎಂದು ಆಕೆ ಎದುರು ಸಿಕ್ಕಾಗಲೆಲ್ಲ ಒಂದು ಸ್ಮೈಲ್​ ಕೊಟ್ಟು ಗೆಳೆತನ ಇಟ್ಟುಕೊಂಡಿದ್ದೆ. ಅದೊಂದು ದಿನ ನಾನು ಸ್ನಾನ ಮಾಡುತ್ತಿದ್ದೆ. ರೂಮಿನಲ್ಲಿ ನನ್ನ ರೂಂಮೇಟ್​ ಜೊತೆಗೆ ಆ ಕಳ್ಳಿ ಜಗಳಕ್ಕೆ ನಿಂತಿದ್ದಳು. ಇಬ್ಬರ ಜಗಳ ತಾರಕಕ್ಕೇರಿತ್ತು. ಅವರಿಬ್ಬರ ಜಗಳದಲ್ಲಿ ನಾನು ಮೂಗುತೂರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ನನ್ನ ಆರನೇ ಸೆನ್ಸ್​ ಹೇಳುತ್ತಿತ್ತು. ಅದಕ್ಕೇ ಇನ್ನೊಂದು ಹತ್ತು ಚೊಂಬು ನೀರನ್ನು ತಲೆಮೇಲೆ ಹಾಕಿಕೊಂಡೆ. ಆದರೂ ಜಗಳ ನಿಲ್ಲಲಿಲ್ಲ.
Loading...ತಲೆಸ್ನಾನ ಮಾಡಿಕೊಂಡ ನಾನು ಬಟ್ಟೆ ಒಣಗಿಸುವ ನೆಪದಲ್ಲಿ ಟೆರೇಸಿಗೆ ಹೋದೆ. ಅಲ್ಲೇ ಸ್ವಲ್ಪ ಹೊತ್ತು ನಿಂತು ಕೂದಲು ಒಣಗಿಸಿಕೊಂಡು ಕೆಳಗೆ ಬಂದೆ. ನನ್ನ ರೂಂಮೇಟ್​ ಬಾತ್​ರೂಂ ಬಾಗಿಲು ಹಾಕಿಕೊಂಡು ಏನೋ ಸದ್ದು ಮಾಡುತ್ತಿದ್ದಳು. ಅಬ್ಬಾ, ಸದ್ಯ! ಜಗಳ ಮುಗಿದು ಎಲ್ಲ ಶಾಂತವಾಯಿತಲ್ಲ ಅಂತ ಹಾಗೇ ಹಾಸಿಗೆ ಮೇಲೆ ಒರಗಿಕೊಂಡು ಫ್ಯಾನ್​ ಆನ್​ ಮಾಡಿದೆ. ಬಾತ್​ರೂಂನಿಂದ ಹೊರಬಂದ ರೂಂಮೇಟ್​ ಯಾಕೋ ಸಪ್ಪಗಾಗಿದ್ದಳು. ಯಾಕೆ ಜಗಳವಾಗಿದ್ದು ಅಂತ ಅಂತ ಕೇಳಿದೆ.

ನನ್ನ ರೂಂಮೇಟ್​ ಮೊಬೈಲ್​ ಬೆಳಗ್ಗೆಯಿಂದ ಕಾಣಿಸುತ್ತಿರಲಿಲ್ಲ. ಅದನ್ನು ಆ ಕಳ್ಳಿನೇ ತಗೊಂಡಿದಾಳೆ ಅಂತ ಪಕ್ಕದ ರೂಮಿನವರು ಹೇಳಿದ್ರಂತೆ. ಇವಳು ಹೋಗಿ ಅವಳ ಬಳಿ ಜಗಳ ಆಡಿದ್ದಾಳೆ. ಆಮೇಲೆ ನಮ್ಮ ರೂಮಲ್ಲೇ ಮೊಬೈಲ್​ ಸಿಕ್ಕಿದೆ. ಅದು ಗೊತ್ತಾಗುತ್ತಿದ್ದಂತೆ ಆ ಕಳ್ಳಿ ನಮ್ಮ ರೂಮಿಗೆ ಬಂದು ಕ್ಲಾಸ್​ ತೆಗೆದುಕೊಂಡಿದ್ದಾಳೆ. ಇದಿಷ್ಟು ನಾನು ಸ್ನಾನಕ್ಕೆ ಹೋಗಿದ್ದಾಗ ನಡೆದ ವಿಷಯ. ಆದರೆ, ಆ ವಿಷಯ ಅಲ್ಲಿಗೇ ನಿಂತಿರಲಿಲ್ಲ...

ಇಷ್ಟೆಲ್ಲ ಹೇಳಿಸಿಕೊಂಡ ಮೇಲೆ ಮೊಬೈಲನ್ನು ನಿಜವಾಗಿಯೂ ತೆಗೆದುಕೊಂಡೇ ಹೋಗುತ್ತೇನೆ ಎಂದು ಆ 'ಕಳ್ಳಿ' ಅಲ್ಲೇ ಚಾರ್ಜಿಗೆ ಹಾಕಿದ್ದ ಮೊಬೈಲನ್ನು ತೆಗೆದುಕೊಂಡು ಹೊರಟಿದ್ದಾಳೆ. ಬಾಗಿಲ ಬಳಿಗೆ ಹೋಗುತ್ತಿದ್ದಂತೆ ಅದೇನನಿಸಿತೋ ಏನೋ... ಸೀದಾ ನಮ್ಮ ಬಾತ್​ರೂಮಿಗೆ ಹೋದವಳೇ ಆ ಮೊಬೈಲನ್ನು ಟಾಯ್ಲೆಟ್​ ಬೇಸಿನ್​ ಒಳಗೆ ಹಾಕಿ ಹೋಗಿದ್ದಾಳೆ! ತಕ್ಷಣ ಓಡಿದ ನನ್ನ ರೂಂ ಮೇಟ್​ ಯಾವುದೋ ಕೋಲು ತಂದು ಮೊಬೈಲ್​ ಎತ್ತಲು ಪ್ರಯತ್ನಿಸಿದರೂ ಅದು ಮೇಲೆ ಬಂದಿಲ್ಲ.. 'ಆ ಮೊಬೈಲನ್ನು ಎತ್ತೋಕೆ ಹೇಗೇ ಮನಸಾಗುತ್ತೆ? ಅವಳಿಗೆ ಅಷ್ಟೂ ಗೊತ್ತಾಗಲ್ವ.. ಹೋಗ್ಲಿಬಿಡು, ಅದಕ್ಕೆ ನೀರು ತಾಗಿ ಹೇಗೂ ಹಾಳಾಗಿರುತ್ತೆ. ಇನ್ನೇನು ಮಾಡೋಕಾಗುತ್ತೆ' ಅಂತ ನಾನೇನೋ ಸಮಾಧಾನ ಮಾಡಿದೆ. ಅಷ್ಟಕ್ಕೇ ಜೋರಾಗಿ ಅಳತೊಡಗಿದ ಅವಳು 'ಅವಳು ಟಾಯ್ಲೆಟಿಗೆ ಹಾಕಿದ್ದು ನನ್ನ ಮೊಬೈಲ್ ಅಲ್ಲ ಕಣೇ.. ನಿಂದು' ಅಂತ ಭಯದಿಂದ ನನ್ನತ್ತ ನೋಡಿದಳು. ಒಂದು ಕ್ಷಣ ರೂಮಿನಲ್ಲಿ ನಿಶ್ಯಬ್ದ.. ನಾನು ತಕ್ಷಣ ಬಾತ್​ರೂಂ ಕಡೆಗೆ ಓಡಿದೆ....

 

 
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ