ಬಸ್ಸಿನಲ್ಲಿ ಬಂದ ಬಾಕ್ಸ್​ ಎಲ್ಲೋಯ್ತು? ಕೊನೆಗೂ ಬಯಲಾಯ್ತು ಸತ್ಯ!

ಆಫೀಸ್​ ಮುಗಿಸಿ ಬಂದು ಮಲಗಿ ಮೂರ್ನಾಲ್ಕು ಗಂಟೆಯಾಗಿತ್ತೇನೋ.. ಕಿವಿಯ ಒಳಗೇ ಯಾರೋ ಸ್ಪೀಕರ್​ ಇಟ್ಟ ಹಾಗೆ ಮೊಳಗುತ್ತಿದ್ದ ಸದ್ದಿಗೆ ಥಟ್ ಅಂತ ಎದ್ದು ಕುಳಿತೆ. ನೈಟ್​ಶಿಫ್ಟ್​ ಮುಗಿಸಿ ಬಂದು ನೆಮ್ಮದಿಯಾಗಿ ನಿದ್ರೆ ಮಾಡೋಣವೆಂದರೆ ರೂಮಿನ ಹೊರಗೆ ಕಟ್ಟಿದ್ದ ಸ್ಪೀಕರ್​ನಲ್ಲಿ ಅಯ್ಯಪ್ಪಸ್ವಾಮಿಯ ಹಾಡು ಜೋರಾಗಿ ಮೊಳಗುತ್ತಿತ್ತು.

news18
Updated:September 2, 2018, 7:56 PM IST
ಬಸ್ಸಿನಲ್ಲಿ ಬಂದ ಬಾಕ್ಸ್​ ಎಲ್ಲೋಯ್ತು? ಕೊನೆಗೂ ಬಯಲಾಯ್ತು ಸತ್ಯ!
Mixed race girl looking out bedroom window
news18
Updated: September 2, 2018, 7:56 PM IST
ಸುಷ್ಮಾ ಎನ್​. ಚಕ್ರೆ

ಇದ್ದಕ್ಕಿದ್ದಂತೆ ಆ ಜೋರಾದ ಶಬ್ದಕ್ಕೆ ಎಚ್ಚರವಾಯ್ತು. ಬಂಕರ್​ನ ಮೇಲಿನ ಬೆಡ್​ನಲ್ಲಿ ಮಲಗುತ್ತಿದ್ದ ನಾನು ಕೆಳಗಿನ ಹಾಸಿಗೆಯಲ್ಲಿ ಮಲಗಿದ್ದವಳ ಕಡೆಗೆ ಮೊಬೈಲ್​ ಟಾರ್ಚ್​ ಬಿಟ್ಟೆ. ಕೈಕಾಲನ್ನೆಲ್ಲ ಊರಗಲ ಚಾಚಿಕೊಂಡು ಸುಖವಾಗಿ ಮಲಗಿದ್ದ ಗೆಳತಿ ಸಿರಿಯನ್ನು ನೋಡಿ ಯಾಕೋ ತಡೆದುಕೊಳ್ಳಲಾಗಲಿಲ್ಲ. ನಾನೊಬ್ಬಳೇ ಯಾಕೆ ಎದ್ದಿರಬೇಕು, ಅವಳನ್ನೂ ಎಬ್ಬಿಸಬೇಕು ಎಂದುಕೊಂಡು ಬಂಕರ್​ನ ಪಕ್ಕದಲ್ಲಿದ್ದ ಮೆಟ್ಟಿಲುಗಳನ್ನು ಕತ್ತಲೆಯಲ್ಲೇ ಇಳಿಯುವಾಗ ಮೆತ್ತಗಿರುವ ಯಾವುದೋ ವಸ್ತು ತಾಗಿದಂತಾಯಿತು. ಭಯದಿಂದ ಒಂದೇ ಸಲಕ್ಕೆ ನೆಲಕ್ಕೆ ಹಾರಿದ ನಾನು ಇನ್ನೇನು ಕೂಗಬೇಕು ಎನ್ನುವಷ್ಟರಲ್ಲಿ ಸಿರಿಯ ಕೂಗು ಕೇಳಿತು. ರೂಮಿನ ಉದ್ದಗಲಕ್ಕೂ ಹರಡಿಕೊಂಡಿದ್ದ ಆಕೆಯ ಕೈ ಮೇಲೆ ನಾನು ಕಾಲಿಟ್ಟಿದ್ದರಿಂದ ಅವಳ ನಿದ್ರಾಭಂಗವಾಗಿತ್ತು ಎಂದು ಆಮೇಲೆ ತಿಳಿಯಿತು. ನಾನು ಕೆಳಗಿಳಿದ ಉದ್ದೇಶ ಯಾವುದೇ ಸ್ವಂತ ಪ್ರಯತ್ನವಿಲ್ಲದೆ ನೆರವೇರಿದ ಖುಷಿಯಲ್ಲೇ ಮತ್ತೆ ಮೆಟ್ಟಿಲು ಹತ್ತಿ ಮೇಲಿನ ಹಾಸಿಗೆಯಲ್ಲಿ ಕುಳಿತೆ. ಕೆಳಗೆ ಕುಳಿತಿದ್ದ ಸಿರಿ ಸಿಟ್ಟಿನಿಂದ ನನ್ನ ಕಡೆಗೊಂದು ಆಕ್ರೋಶದ ದೃಷ್ಟಿ ಬೀರಿ ಮತ್ತೆ ಮುಸುಕೆಳೆದುಕೊಂಡಳು.

ಮನೆಯ ಎದುರಿದ್ದ ಗಣಪತಿ ದೇವಸ್ಥಾನದಲ್ಲಿ ಪ್ರತಿವರ್ಷ ಶಬರಿ ಮಲೆಗೆ ಹೋಗುವವರೆಲ್ಲ ಬಂದು ಭಜನೆ, ಪೂಜೆ ಮಾಡುವುದು ವಾಡಿಕೆ. ಆ ನೆಪದಲ್ಲಿ ನಮಗೂ ದೇವಸ್ಥಾನದಿಂದ ರುಚಿರುಚಿಯಾದ ಊಟ ಸಿಗುತ್ತಿತ್ತು ಎಂಬುದು ಬೇರೆ ವಿಚಾರ. ಸೂರ್ಯ ಕಣ್ಣು ಬಿಡುವ ಮುಂಚೆಯೇ ತಣ್ಣೀರಲ್ಲಿ ಸ್ನಾನ ಮಾಡಿ, ಕಪ್ಪು ಬಟ್ಟೆ ಸುತ್ತಿಕೊಂಡು ಭಜನೆಗೆ ಕೂರುತ್ತಿದ್ದ ಅಯ್ಯಪ್ಪ ಸ್ವಾಮಿ ಭಕ್ತರು ನಮ್ಮ ರೂಮಿನ ಎದುರು ಸ್ಪೀಕರ್​ ಕಟ್ಟಿಹೋಗುತ್ತಿದ್ದರು. ಈ ಬಾರಿಯಂತೂ ನಮ್ಮ ರೂಮಿನ ಕಡೆಗೇ ಅದರ ಮೂತಿ ತಿರುಗಿದ್ದರಿಂದ ನಮ್ಮ ಕಿವಿಯೊಳಗೇ ಕೂತು ಭಜನೆ ಮಾಡುತ್ತಿದ್ದಾರೇನೋ ಎಂಬಂತೆ ಅನಿಸುತ್ತಿತ್ತು. ಅಷ್ಟಾದರೂ ಯಾವ ತೊಂದರೆಯೂ ಇಲ್ಲದೆ ಸುಖ ನಿದ್ರೆ ಮಾಡುತ್ತಿದ್ದ ಸಿರಿಯ ಬಗ್ಗೆ ಅಸೂಯೆ ಒಂದೆಡೆಯಾದರೆ ನಿದ್ರೆ ಮಾಡಲಾಗದ ನನ್ನ ಪರಿಸ್ಥಿತಿಯ ಬಗ್ಗೆ ನನಗೇ ಅನುಕಂಪದ ಭಾವನೆ ಮೂಡುತ್ತಿತ್ತು.ನಮ್ಮೂರ್​ ಬಸ್ಸು ಫೇಮಸ್ಸು:

ಬೆಂಗಳೂರಿನಲ್ಲಿ ಐದಾರು ಪಿಜಿ ಹುಡುಕಿ ಈ ಪಿಜಿಗೆ ಬಂದಿದ್ದೆ. ಎದುರಲ್ಲಿ ಗಣಪತಿ ದೇವಸ್ಥಾನ, ಪಕ್ಕದಲ್ಲಿ ಬಾಯ್ಸ್​ ಪಿಜಿ, ಇನ್ನೊಂದು ಪಕ್ಕದಲ್ಲಿ ರೆಸ್ಟೋರೆಂಟ್​, ಐದು ಹೆಜ್ಜೆ ಆಚೆ ಇಟ್ಟರೆ ಹಣ್ಣಿನ ಅಂಗಡಿಯಿತ್ತು. ಅದಕ್ಕಿಂತ ಮುಖ್ಯವಾಗಿ ಪಿಜಿ ಹಿಂದಿನ ದೊಡ್ಡ ಮೈದಾನದಲ್ಲಿ ನಮ್ಮೂರಿನಿಂದ ಬರುವ ಬಸ್​ ಬಂದು ನಿಲ್ಲುತ್ತಿತ್ತು. ಬೆಳಗ್ಗೆ ಏಳುವುದು ಒಂದೆರಡು ಗಂಟೆ ತಡವಾದರೂ ಸಂಜೆಯವರೆಗೆ ಆ ಬಸ್ಸು, ಬಸ್ಸಿನ ಡ್ರೈವರ್ ಅಲ್ಲೇ ಇರುತ್ತಿದ್ದುದರಿಂದ ಊರಿನಿಂದ ಅಪ್ಪ ಕಳುಹಿಸಿದ ವಸ್ತುಗಳೆಲ್ಲ ನನಗಾಗಿ ಬಸ್​ನಲ್ಲೇ ಕಾಯುತ್ತಿತ್ತು. ಇದೆಲ್ಲ ನನಗೆ ಮಹತ್ವದ ಕಾರಣವೆನಿಸಿದ್ದರಿಂದ ಇದೇ ಪಿಜಿಯನ್ನು ಅಂತಿಮಗೊಳಿಸಿ ಠಿಕಾಣಿ ಹೂಡಿದ್ದಾಯಿತು.

ಊರಿನ ಮನೆಯಲ್ಲಿ ಯಾವುದೇ ಸಿಹಿತಿಂಡಿ, ಕುರುಕುಲು ತಿಂಡಿ ಮಾಡಿದರೂ ಅಪ್ಪ ಅಂದು ಸಂಜೆ ಅದನ್ನು ಬಸ್​ನಲ್ಲಿ ಕಳುಹಿಸುತ್ತಿದ್ದರು. ಊರಿಗೆ ಹೋಗಿಬಂದಾಗ ಮಾತ್ರ ತುಂಬಿರುತ್ತಿದ್ದ ನಮ್ಮ ರೂಮಿನ ತಿಂಡಿಗಳ ಬಾಕ್ಸ್​ ಈಗೀಗ ಖಾಲಿಯೇ ಆಗುತ್ತಿರಲಿಲ್ಲ. ವಾರಕ್ಕೆ ನಾಲ್ಕೈದು ದಿನವಾದರೂ ನಮ್ಮ ರೂಮಿನಲ್ಲಿ ಒಬ್ಬರಲ್ಲ ಒಬ್ಬರಿಗೆ ಮನೆಯಿಂದ ಪಾರ್ಸಲ್​ ಬರುತ್ತಿತ್ತು. ಮನೆಯಲ್ಲಿ ಬಿಟ್ಟ ಮಾವಿನಹಣ್ಣು, ಹಲಸಿನಹಣ್ಣು, ಪೇರಳೆಹಣ್ಣು, ಕೆಸವಿನ ಎಲೆಯ ಪತ್ರೊಡೆ ಹೀಗೆ ಆಯಾ ಕಾಲಕ್ಕೆ ಏನೇನೆಲ್ಲ ಆಗುತ್ತದೋ ಅದೆಲ್ಲ ನಮಗೂ ತಲುಪುತ್ತಿತ್ತು. ನಮಗೂ ನಮ್ಮ ಮನೆಯವರಿಗೂ ಕೊಂಡಿ ಬೆಸೆದಿದ್ದ ಆ ಬಸ್​ ಬಗ್ಗೆ ನನಗೆ ಅಭಿಮಾನ ಉಕ್ಕಿ ಬರುತ್ತಿತ್ತು. ಅದೇ ಕಾರಣದಿಂದ ಆ ಬಸ್​ನಲ್ಲಿ ಪ್ರಯಾಣ ಮಾಡಿದರೆ ಒಂದು ದಿನ ಮಲಗಿ ರೆಸ್ಟ್​ ಮಾಡಬೇಕಾಗುತ್ತದೆ ಎಂಬ ವಾಸ್ತವದ ಅರಿವಿದ್ದರೂ ಊರಿಗೆ ಹೋಗುವಾಗಲೆಲ್ಲ ಅದೇ ಬಸ್ ಹತ್ತಿ ಹೋಗುತ್ತಿದ್ದೆ. ಆ ಮೂಲಕ ಬಸ್​ಗೆ ನನ್ನ ಕೃತಜ್ಞತೆ ಸಲ್ಲಿಸುತ್ತಿದ್ದೆ! ಇದೇ ಕಾರಣಕ್ಕೆ ನಮ್ಮ ಪಿಜಿಯಲ್ಲಿ ನಾನು ನಗೆಪಾಟಲಿಗೆ ಈಡಾಗಿದ್ದೂ ಇದೆ.
Loading...

ನಾವೆಲ್ಲರೂ ಆ ಬಸ್​ ಡ್ರೈವರ್​, ಕಂಡಕ್ಟರ್​ ಮೇಲೆ ಯಾವ ಮಟ್ಟದ ನಂಬಿಕೆಯಿಟ್ಟಿದ್ದೆವು ಎಂದರೆ ಪಕ್ಕದ ರೂಮಿನವಳಂತೂ ಯಾರದೋ ಮದುವೆಗೆ ಮನೆಯಲ್ಲಿಟ್ಟಿದ್ದ ಚಿನ್ನದ ಸರವನ್ನು ಕೂಡ ಅದೇ ಬಸ್​ನಲ್ಲಿ ತರಿಸಿಕೊಂಡಿದ್ದಳು. ಚಿನ್ನವನ್ನೇ ಮುಟ್ಟಿಲ್ಲ ಎಂದಮೇಲೆ ಆ ಬಸ್​ನವರು ಎಷ್ಟು ಪ್ರಾಮಾಣಿಕರಿರಬಹುದು ಎಂದು ನಾವೆಲ್ಲರೂ ಗುಣಗಾನ ಮಾಡಿದ್ದೇ ಮಾಡಿದ್ದೆ. ಆದರೆ, ಆ ನಂಬಿಕೆ ಹೆಚ್ಚು ದಿನ ಉಳಿಯಲಿಲ್ಲ...

ಹುಟ್ಟುಹಬ್ಬದಂದೇ ಹಿಡಿಶಾಪ:

ನನ್ನ ಹುಟ್ಟುಹಬ್ಬಕ್ಕೆ ಬೇಕರಿ ತಿಂಡಿ ಬೇಡ, ಊರಿನಿಂದ ಏನಾದರೂ ಸ್ವೀಟ್​ ತರಿಸುವಂತೆ ಆಫೀಸಿನವರೆಲ್ಲ ಬೇಡಿಕೆಯಿಟ್ಟಿದ್ದರು. ಅದಕ್ಕೆಂದೇ ಅಮ್ಮನಿಗೆ ಹೇಳಿ ಬೆಲ್ಲದ ಕೊಬ್ಬರಿಮಿಠಾಯಿ​ ಮಾಡಿಕೊಡಲು ಹೇಳಿದ್ದೆ. ಅಮ್ಮ ನನ್ನ ಆಫೀಸಿನವರಿಗೆಲ್ಲ ಸ್ವೀಟ್​ ರೆಡಿ ಮಾಡಿ ದೊಡ್ಡದೊಂದು ಬಾಕ್ಸ್​ಗೆ ಹಾಕಿ, ಅದರ ಮೇಲೆ ಹ್ಯಾಪಿ ಬರ್ತ್​ಡೇ ಎಂದು ಬರೆದು ಬಸ್​ನಲ್ಲಿ ಕಳುಹಿಸಿದ್ದಳು. ನಾನೋ ಇಡೀ ಆಫೀಸಿನವರಿಗೆಲ್ಲ ನಮ್ಮಮ್ಮ ಮಾಡುವ ಸ್ವೀಟ್​ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದೆ. ಬೆಳಗ್ಗೆ 4.30ರಿಂದಲೇ ಭಜನೆ ಶುರುವಾಗುವುದರಿಂದ ಹೇಗಿದ್ದರೂ ಅಲಾರಂ ಇಡುವ ಅಗತ್ಯವಿಲ್ಲ ಎಂದುಕೊಂಡು ಮಲಗಿದ್ದೆ. ಅದ್ಯಾಕೋ ಆ ದಿನ ಭಜನೆಯ ಸದ್ದೇ ಕೇಳಲಿಲ್ಲ!

ವಿನ್ಯಾಸ: ಶಾಂತಕುಮಾರ್​


ತಿಂಡಿ ತಿನ್ನಲು 8 ಗಂಟೆಗೆ ಸಿರಿ ಎಬ್ಬಿಸಿದಾಗಲೇ ಎಚ್ಚರವಾಗಿದ್ದು. 6.30ಕ್ಕೆ ನಮ್ಮೂರಿನ ಬಸ್​ ಬಂದು ನಿಲ್ಲುವುದರಿಂದ ನೆಪಮಾತ್ರಕ್ಕೆ ಮುಖಕ್ಕೆ ನೀರು ಹಾಕಿಕೊಂಡು ಹಿಂದಿನ ಮೈದಾನದ ಕಡೆಗೆ ಹೊರಟೆ. ದೊಡ್ಡ ಬಾಕ್ಸ್​ನಲ್ಲಿ ಕೊಟ್ಟು ಕಳುಹಿಸಿದ್ದೇನೆ ಎಂದು ರಾತ್ರಿ ಅಮ್ಮ ಫೋನ್​ ಮಾಡಿದ್ದರಿಂದ ನನಗೊಬ್ಬಳಿಗೆ ತರಲು ಕಷ್ಟವಾಗಬಹುದು ಎಂದು ಸಿರಿಯನ್ನೂ ಜೊತೆಗೆ ಕರೆದುಕೊಂಡು ಹೋದೆ. ಊರಿನ ಬಸ್​ ಎಂದಿನಂತೆಯೇ ಮರದ ಕೆಳಗೆ ನಿಂತಿತ್ತು. ಬಾಗಿಲು ಹಾಕಿಕೊಂಡು ಡ್ರೈವರ್​ ಒಳಗೆ ಮಲಗಿದ್ದ. ಕಿಟಕಿಯಿಂದ ಕೂಗಿ ಎಬ್ಬಿಸಿದೆವು. ಬಾಗಿಲು ತೆರೆದು ಹೊರಗಿಳಿದ ಡ್ರೈವರ್​ ಯಾವ ಬಾಕ್ಸೂ ಪಾರ್ಸೆಲ್​ ಬಂದಿಲ್ಲ ಎಂದು ಹೇಳಿದ. ಕಂಡಕ್ಟರ್​ ಬಳಿ ಕೇಳಲು ಹೇಳಿದೆವು. ನಿಮ್ಮೂರಿನ ಸ್ಟಾಪಲ್ಲಿ ನಿನ್ನೆ ರಾತ್ರಿ ಬಸ್ಸೇ ನಿಲ್ಲಿಸಿಲ್ಲ ಎಂದು ಹೇಳಿ ಮತ್ತೆ ಹೋಗಿ ಮಲಗಿದ. ಇನ್ನೇನು ಮಾಡೋದು... ಬೇಕರಿಗೆ ಹೋಗಿ ಒಂದೆರಡು ಕೆಜಿ ಗೋಡಂಬಿ ಬರ್ಫಿ ತೆಗೆದುಕೊಂಡು ಆಫೀಸಿಗೆ ಹೋದೆ.

ಆಫೀಸಿನವರೆಲ್ಲ ವಿಶ್​ ಮಾಡಿ ರೇಗಿಸಿದ್ದೂ ಆಯಿತು. ಅದಾಗಿ ಎರಡು ದಿನಗಳಾದ ಮೇಲೆ ಸಿರಿಗೆ ಊರಿಂದ ಪಾರ್ಸಲ್​ ಬಂದಿತ್ತು. ತೆಗೆದುಕೊಳ್ಳಲು ಬಸ್​ ಬಳಿ ಹೋಗಿ ವಾಪಾಸಾಗುವಾಗ ಆ ಮರದ ಹಿಂದಿನ ಕಸದ ರಾಶಿಯಲ್ಲಿ ದೊಡ್ಡ ಖಾಲಿ ಬಾಕ್ಸ್​ ಬಿದ್ದಿತ್ತು. ಹತ್ತಿರ ಹೋಗಿ ನೋಡಿದರೆ ಅಮ್ಮ ಬರೆದಿದ್ದ ಹ್ಯಾಪಿ ಬರ್ತ್​ಡೇ ಎಂಬ ಅಕ್ಷರ ಮಸುಕಾಗಿ ಕಾಣುತ್ತಿತ್ತು. ಅಳು, ಅಸಹನೆ, ಬೇಸರ, ಹತಾಶೆ, ನೋವೆಲ್ಲ ಒಮ್ಮೆಲೇ ಒತ್ತಿಬಂದಿತ್ತು. ಹೋಗ್ಲಿಬಿಡು, ಅಮ್ಮ ಮಾಡಿದ ಸ್ವೀಟ್ಸ್​ ವೇಸ್ಟ್​ ಆಗ್ಲಿಲ್ವಲ್ಲ.. ಬಸ್​ನವರಾದ್ರೂ ತಿಂದ್ರಲ್ಲ ಅಂತ ಸಿರಿ ಸಮಾಧಾನ ಮಾಡುತ್ತಲೇ ಇದ್ದಳು; ನಾನು ಪಿಜಿಯಲ್ಲಿ ಸಿಕ್ಕವರಿಗೆಲ್ಲ ಬಸ್​ನವರ ಕಳ್ಳಬುದ್ಧಿಯ ಕತೆ ಹೇಳುತ್ತಲೇ ಇದ್ದೆ. ಈಗಳು ಹೊಸಬರು ಬಂದರೆ ಆ ಬಸ್​ನ ಕತೆ ಹೇಳುತ್ತೇನೆ. ಕೆಲವರು ನನ್ನೊಡನೆ ಕುಳಿತು ಹಿಡಿಶಾಪ ಹಾಕುತ್ತಾರೆ. ಇನ್ನು ಕೆಲವರು ನನ್ನ ಮುಂದೆಯೇ ಬಸ್​ನಿಂದ ಪಾರ್ಸಲ್​ ತಂದು ರೂಮಿಗೆ ನಡೆಯುತ್ತಾರೆ....
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...