ಈ ಪ್ರಕೃತಿಯ ವಿಸ್ಮಯ ಯಾರು ಬಲ್ಲರು ಹೇಳಿ. ಅದರಲ್ಲೂ ಹರಿಯುವ ನದಿಯನ್ನು ನೋಡಲು ಎಷ್ಟು ಚಂದ ಅಲ್ವಾ.. ಜಾಸ್ತಿ ಅಳವಿಲ್ಲದಿದ್ದರೂ ನದಿ ನೀರು ಕಂಡರೆ, ಅದರಲ್ಲಿ ಈಜಬೇಕು, (Swimming )ಆಟವಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಸಾಮಾನ್ಯವಾಗಿ ಮಳೆ ಇರಲಿ, ಬೇಸಿಗೆ ಕಾಲವಿರಲಿ , ಚಳಿಗಾಲವಿರಲಿ ನದಿ ನೀರು (River water) ಮಾತ್ರ ಯಾವತ್ತೂ ತಣ್ಣಗೆ ಇರುತ್ತದೆ. ಆದ್ರೆ ನೀವು ಎಂದಾದ್ರೂ ಕೊತಕೊತ ಕುದಿಯುವ ಬಿಸಿ ನೀರಿನ ನದಿಯನ್ನು(Bolling river) ಕಂಡಿದ್ದೀರಾ.? ಇಲ್ಲ, ಕೇಳಿದ್ದೀರಾ.? ಇಲ್ಲ ಅಲ್ವಾ? ಈ ಸ್ಟೋರಿ ಓದಿದ್ರೆ ಬಿಸಿ ನೀರಿನ ನದಿ ಇದೆಯೇ ಎಂದು ನಿಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಹೌದು, ಭೂಮಿ ಮೇಲೆ ಕುದಿಯುವ ನೀರಿನ ನದಿಯೂ ಇದೆ. ಈ ಪ್ರಕೃತಿ ವಿಸ್ಮಯದ (Nature Mystery )ಸಂಪೂರ್ಣ ಸ್ಟೋರಿ ಬಗ್ಗೆ ನಾವ್ ಹೇಳ್ತಿವಿ ಕೇಳಿ.
ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿರುವ ಜಗತ್ತಿನ ಏಕೈಕ ಕುದಿಯುವ ನೀರಿನ ನದಿ ಅಂದರೆ ಅದು ಶಾನಯ್-ಟಿಂಪಿಷ್ಕಾ. ಅಮೆಜಾನ್ ನದಿಯ ಉಪ ನದಿ ಆಗಿರುವ ಶಾನಯ್-ಟಿಂಪಿಷ್ಕಾ ಗೆ ಲಾ ಬೊಂಬಾ ಎಂಬ ಇನ್ನೊಂದು ಉಪ ಹೆಸರಿದೆ. ಶಾನಯ್-ಟಿಂಪಿಷ್ಕಾ ಎಂದರೆ ಸೂರ್ಯನ ಶಾಖದಿಂದ ಕುದಿಯುತ್ತಿರುವ ನೀರು ಎಂಬ ಅರ್ಥದಲ್ಲಿ ಬರುತ್ತದೆ. ಈ ನದಿಯ ನೀರು ಕುದಿಯಲು ಮೂಲ ಕಾರಣವೆಂದರೆ ಜಿಯೋಥರ್ಮಲ್. ಈ ಕುದಿಯುವ ನೀರಿನ ನದಿಯ ಉದ್ದ 6.4 ಕಿ.ಮೀ. ಇದ್ದು ಈ ನದಿಯ ನೀರಿನ ತಾಪಮಾನ 45 ಡಿಗ್ರಿ ಸೆ. ನಿಂದ 100 ಡಿಗ್ರಿ ಸೆ.ವರೆಗೆ ಇದೆ.
ಇದನ್ನೂ ಓದಿ: Protein Deficiency: ಪ್ರೋಟೀನ್ ಕೊರತೆ ಇದ್ರೆ ಈ ಹಣ್ಣುಗಳೇ ಪರಿಹಾರವಂತೆ
ಕುದಿಯುವ ನದಿ ಯಾವ ದೇಶದಲ್ಲಿದೆ?
ಕುದಿಯುವ ನದಿಯಾದ ಶಾನಯ್-ಟಿಂಪಿಷ್ಕಾ ಪೆರು ದೇಶದ ಹುನುನುಕೊ ಅರಣ್ಯದ ಭಾಗವಾದ ಮಾಯಂಟುಯಾಕು ಅಭಯಾರಣ್ಯದಲ್ಲಿದೆ. ಇಲ್ಲಿ ಮಳೆ ಇರಲಿ, ಬಿಸಿಲು ಇರಲಿ, ಚಳಿ ಇರಲಿ ಈ ನದಿ ಮಾತ್ರ ಸಾಧ್ಯ ಕುದಿಯುತ್ತಲೇ ಇರುತ್ತದೆ. ಈ ನದಿ ಪ್ರದೇಶದಲ್ಲಿ ಅಶಿನಿಂಕಾ ಎಂಬ ಸಮುದಾಯ ವಾಸ ಮಾಡುತ್ತದೆ.
ಕುದಿಯುವ ನದಿಯನ್ನು ಪರಿಚಯ ಮಾಡಿದವರು ಯಾರು ?
ಇಡೀ ವಿಶ್ವಕ್ಕೆ ಕುದಿಯುವ ನದಿ ನೀರಿನ ಬಗ್ಗೆ ಪರಿಚಯ ಮಾಡಿದವರು ಭೂವಿಜ್ಞಾನಿ, ಸಂರಕ್ಷಣಾವಾದಿ ಆಂಡ್ರೆಸ್ ರುಜೊ. ಪೆರುವಿನ ತಮ್ಮ ತಾತನಿಂದ ಕುದಿಯುವ ನದಿ ಬಗ್ಗೆ ಆಂಡ್ರೆಸ್ ರುಜೊ ಬಾಲ್ಯದಲ್ಲಿ ಒಂದು ಕಥೆ ಕೇಳಿದ್ದರು. ಅದು ನಿಜವೋ, ಸುಳ್ಳೋ ಎಂಬ ಅನುಮಾನ ಅವರ ತಲೆಯಲ್ಲಿ ಹೊಕ್ಕಿತು. ಮುಂದೆ ಜಿಯೋ ಫಿಸಿಕ್ಸ್ ನಲ್ಲಿ ಪಿ.ಎಚ್.ಡಿ ಮಾಡುವಾಗ ಕುದಿಯುವ ನದಿಯ ವೈಜ್ಞಾನಿಕ ಆಯಾಮಗಳ ಬಗ್ಗೆ ಆಂಡ್ರೆಸ್ ರುಜೊ ತಿಳಿದುಕೊಂಡರು. ಬಳಿಕ ನೇರವಾಗಿ ಪೆರುವಿನ ಅಮೇಜಾನ್ ಕಾಡಿಗೆ ತೆರಳಿ ಕುದಿಯುವ ನದಿಯನ್ನು ತಮ್ಮ ಕಣ್ಣಾರೆ ಕಂಡರು. ಅಲ್ಲಿನ ಸ್ಥಳವನ್ನು ಪರೀಕ್ಷಿಸಿ, ಸ್ಥಳೀಯರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಈ ಜಾಗದಲ್ಲಿ ಅರಣ್ಯನಾಶವಾಗುತ್ತಿದೆ, ಕುದಿಯುವ ನೀರಿನ ಬಗ್ಗೆ ಜಗತ್ತಿಗೆ ಪರಿಚಯಿಸಿದ ಆಂಡ್ರೆಸ್ ರುಜೊ ‘ಬಾಯ್ಲಿಂಗ್ ರಿವರ್ ಪ್ರಾಜೆಕ್ಟ್’ ಮೂಲಕ ನದಿ ಮತ್ತು ಸುತ್ತಮುತ್ತಿನ ಅರಣ್ಯವನ್ನು ಉಳಿಸಿ, ಬೆಳೆಸಲು ಹೋರಾಟ ನಡೆಸುತ್ತಿದ್ದಾರೆ.
ಜಿಯೋ ಥರ್ಮಲ್ ಎಂದರೇನು? ನದಿ ನೀರು ಕುದಿಯಲು ಹೇಗೆ ಸಾಧ್ಯ
ಕುದಿಯುವ ನದಿಗೆ ಜಿಯೋ ಥರ್ಮಲ್ ಎನರ್ಜಿ ಕಾರಣ ಎನ್ನಲಾಗಿದೆ. ಇದರ ಬಗ್ಗೆ ಸಂಶೋಧನೆಗಳು ನಡೆದಿದೆ. ಹತ್ತಿರದಲ್ಲಿ ಜ್ವಾಲಾಮುಖಿ ಇದ್ದಾಗ, ನದಿಯ ನೀರು ಬಿಸಿಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಆದರೆ, ಶಾನಯ್-ಟಿಂಪಿಷ್ಕಾ ನದಿಯ ಬಳಿ ಯಾವುದೇ ಜ್ವಾಲಾಮುಖಿ ಇಲ್ಲ. ನದಿಗೂ ಜ್ವಾಲಾಮುಖಿಗೂ ಸುಮಾರು 700 ಕಿ.ಮೀ ಅಂತರವಿದೆ. ಹೀಗಾಗಿ, ಜಿಯೋ ಥರ್ಮಲ್ ಎನರ್ಜಿ ಮೂಲಕವೇ ನದಿಯ ನೀರು ಬಿಸಿಯಾಗುತ್ತಿದೆ ಎಂಬುದು ಭೂವಿಜ್ಞಾನಿ, ಸಂರಕ್ಷಣಾವಾದಿ ಆಂಡ್ರೆಸ್ ರುಜೊ ಅವರ ಅಭಿಪ್ರಾಯವಾಗಿದೆ. ಭೂಮಿಯ ಒಳಭಾಗದ ಪದರಗಳಲ್ಲಿ ಶಾಖವಿರುತ್ತದೆ. ಹೀಗಾಗಿ, ಭೂಮಿಯ ಒಳಪದರಗಳಲ್ಲಿ ಇರುವ ನೀರು, ಮೇಲ್ಮೈನಲ್ಲಿರುವ ನೀರಿಗಿಂತ ಸಹಜವಾಗಿ ಬಿಸಿಯಿರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: Children: ಪೋಷಕರೇ ಗಮನಿಸಿ, ಮಕ್ಕಳಲ್ಲಿ ಹೆಚ್ಚಾಗ್ತಿದೆ ಲೈಂಗಿಕ ಆಸಕ್ತಿ; ಕೊರೊನಾ ನಂತರ ಕೆಟ್ಟ ಚಟಕ್ಕೆ ಬಿದ್ದ ವಿದ್ಯಾರ್ಥಿಗಳು
ಒಂದು ಮಾಹಿತಿಯ ಪ್ರಕಾರ ಹೇಳುವುದಾದರೆ ಮಳೆ ನೀರು ಅಮೆಜಾನ್ ಮಳೆಕಾಡಿನ ಮೇಲ್ಮೈಗೆ ಬಿದ್ದು, ಅದು ಆಳವಾಗಿ ಬೇರೂರಿರುವ ಮರಗಳ ಮೂಲಕ ಭೂಮಿಯ ಒಳ ಪದರಗಳಿಗೆ ಸೇರುತ್ತವೆ. ಅದೇ ನೀರು ಹೊರಪದರಕ್ಕೆ ಚಲಿಸಿ, ಭೂಶಾಖದಿಂದ ಬಿಸಿಯಾಗುತ್ತದೆ. ಬಳಿಕ ಬಿಸಿ ನೀರಿನ ಬುಗ್ಗೆಗಳ ಮೂಲಕ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತವೆ. ಬಿಸಿ ನೀರಿನ ಬುಗ್ಗೆಯ ವಿಸ್ತೃತ ರೂಪವೇ ಕುದಿಯುವ ನದಿ ಎಂದು ಹೇಳಲಾಗಿದೆ.
ಅನೇಕ ಸಸ್ತನಿಗಳು ಸಾವು
ಶಾನಯ್-ಟಿಂಪಿಷ್ಕಾ ಕುದಿಯುವ ನದಿಗೆ ಸಣ್ಣ ಸಸ್ತನಿಗಳು, ಸರೀಸೃಪಗಳು, ಉಭಯಚರಗಳು ಗೊತ್ತಿಲ್ಲದೇ ಬೀಳುತ್ತದೆ. ಬಿದ್ದ ತಕ್ಷಣ ಇವುಗಳು ಬೆಂದು ಹೋಗುತ್ತವೆ. ಅಷ್ಟೇ ಅಲ್ಲದೆ ಹಸಿ ಮೊಟ್ಟೆಯನ್ನು ಈ ನೀರಿಗೆ ಹಾಕಿದರೆ ಕ್ಷಣಾರ್ಧದಲ್ಲಿ ಬೇಯುತ್ತದೆ. ಅಷ್ಟರ ಮಟ್ಟಿಗೆ ಈ ನದಿ ನೀರು ಕೊತ ಕೊತ ಕುದಿಯುತ್ತದೆ.
”ಮದರ್ ಆಫ್ ದಿ ವಾಟರ್ಸ್’ ಎಂದು ಕರೆಯಲ್ಪಡುವ ಯುಕಾಮಾಮಾ ಎಂಬ ದೈತ್ಯ ಸರ್ಪ ಚೇತನದಿಂದ ಈ ಕುದಿಯುವ ನೀರಿನ ನದಿ ಹುಟ್ಟಿದ್ದು, ಈ ತಾಣ ಪ್ರಚಂಡ ಆಧ್ಯಾತ್ಮಿಕ ಶಕ್ತಿಯ ಸ್ಥಳವಾಗಿದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಏನೇ ಆಗ್ಲಿ ಈ ಪ್ರಕೃತಿಯ ವಿಸ್ಮಯಕ್ಕೆ ಎಲ್ಲರು ಬೆರಗಾಗುವುದಂತೂ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ