• Home
  • »
  • News
  • »
  • lifestyle
  • »
  • Weekend Story: ಯಾರನ್ನೂ ಸಣ್ಣವರೆಂದು ಗೇಲಿ ಮಾಡ್ಬೇಡಿ, ಈ ಕಥೆಯ ನೀತಿಯೇ ಅರ್ಥಪೂರ್ಣ

Weekend Story: ಯಾರನ್ನೂ ಸಣ್ಣವರೆಂದು ಗೇಲಿ ಮಾಡ್ಬೇಡಿ, ಈ ಕಥೆಯ ನೀತಿಯೇ ಅರ್ಥಪೂರ್ಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Panchatantra Stories: ನಾವು ಕೆಲವೊಮ್ಮೆ ಸಣ್ಣ ವಸ್ತು ಎಂದುಕೊಂಡದ್ದು ಸಹ ಮುಂದೊಂದು ದಿನ ದೊಡ್ಡ ಸಹಾಯಕ್ಕೆ ಬರುತ್ತದೆ. ಹಾಗೆಯೇ, ಸಮಾಜದಲ್ಲಿ ಯಾರೂ ದೊಡ್ಡವರಲ್ಲ ಮತ್ತು ಚಿಕ್ಕವರಲ್ಲ  ಎಂಬುದನ್ನ ನೆನಪಿಡಿ.

  • Share this:

ಪಂಚತಂತ್ರ ಕಥೆಗಳು ಕೇವಲ ಒಂದು ಕಥೆಯಾಗಿ ಮಾತ್ರ ಉಳಿದಿಲ್ಲ, ಅದು ಜೀವನಕ್ಕೆ ಬೇಕಾದ ಪಾಠಗಳನ್ನು ಹೇಳಿಕೊಡುತ್ತದೆ. ಪಂಚತಂತ್ರವು ಬಣ್ಣಬಣ್ಣದ ಸಣ್ಣ ನೀತಿ ಕಥೆಗಳು, ಪ್ರಾಣಿಗಳ ಕಥೆಗಳ ಮೂಲಕ ನಿಮಗೆ ಹಲವು ವಿಚಾರಗಳನ್ನು ತಿಳಿಸಿಕೊಡುತ್ತದೆ. ಮಕ್ಕಳಿಗೆ ಕಥೆ (child Story) ಹೇಳುವುದು ಕೇವಲ ಅವರ ಜೀವನಕ್ಕೆ ಸ್ಫೂರ್ತಿ ಮಾತ್ರವಲ್ಲದೇ, ನಮಗೂ ನಮ್ಮ ಜೀವನದ ಅವಲೋಕನ ಮಾಡಿಕೊಳ್ಳಲು ಒಂದು ಅವಕಾಶ ಎನ್ನಬಹುದು. ನಾವು ಜೀವನದಲ್ಲಿ ಕೆಲ ತಪ್ಪುಗಳ (mistakes) ಮೂಲಕ ಮಾತ್ರ ಪಾಠ ಕಲಿಯಬೇಕೆಂದೇನಿಲ್ಲ, ನಾವು ನೀತಿ ಕಥೆಗಳ ಮೂಲಕ ಸಹ ಪಾಠ ಕಲಿಯಬಹುದು. ನೀತಿ ಕತೆಯ ವಿಚಾರ ಬಂದಾಗ ನಮಗೆ ಮೊದಲು ನೆನಪಾಗುವುದು ಪಂಚತಂತ್ರ ಕಥೆಗಳು (Panchatantra Stories).


ಸುಂದರ ಕಥೆಯ ಮೂಲಕ ಬದುಕಿನ ಹಾದಿ ತೋರಿಸುತ್ತದೆ. ಹಾಗೆಯೇ, ನಾವು ಕೆಲವೊಮ್ಮೆ ಸಣ್ಣ ವಸ್ತು ಎಂದುಕೊಂಡದ್ದು ಸಹ ಮುಂದೊಂದು ದಿನ ದೊಡ್ಡ ಸಹಾಯಕ್ಕೆ ಬರುತ್ತದೆ. ಹಾಗೆಯೇ, ಸಮಾಜದಲ್ಲಿ ಯಾರೂ ದೊಡ್ಡವರಲ್ಲ ಮತ್ತು ಚಿಕ್ಕವರಲ್ಲ  ಎಂಬುದನ್ನ ನೆನಪಿಡಿ. ಇದನ್ನು ಮಕ್ಕಳಿಗೆ ಸಹ ಹೇಳಿಕೊಡಬೇಕು. ಆಗ ಮಾತ್ರ ಬೆಳೆದ ಮೇಲೆ ಎಲ್ಲರ ಜೊತೆ ಒಳ್ಳೆಯ ರೀತಿ ಬೆಳೆಯುತ್ತಾರೆ. ಆದರೆ, ಇದನ್ನು ನೀವು ಮಾತಿನಲ್ಲಿ ಹೇಳಿದರೆ ಸಾಕಾಗುವುದಿಲ್ಲ, ಅದರ ಬದಲು ಒಂದು ಸುಂದರ ಕಥೆಯ ಮೂಲಕ ಹೇಳಬಹುದು. ಆ ಕಥೆ ಇಲ್ಲಿದೆ.


ಆನೆಗಳು ಹಾಗೂ ಇಲಿಗಳ ಗುಂಪಿನ ಕಥೆ


ಒಂದು ಊರು, ಆ ಊರಿನಲ್ಲಿ ದೊಡ್ಡ ಕಾಡಿತ್ತು. ಆ ಕಾಡಿನ ಹೊರಭಾಗದಲ್ಲಿ ಒಂದು ಪುಟ್ಟ ಕೆರೆ. ಕಾಡಿನಲ್ಲಿ ಪ್ರಾಣಿಗಳು ಸಮೃದ್ದವಾಗಿ ಜೀವನ ನಡೆಸುತ್ತಿದ್ದವು. ಆ ಊರಿನ ಹೊರವಲಯದಲ್ಲಿ ಇಲಿಗಳ ಗುಂಪೊಂದು ವಾಸ ಮಾಡುತ್ತಿದ್ದವು. ಇದೆ ಊರಿನಲ್ಲಿ ಕೆಲ ಆನೆಗಳ ಹಿಂಡು ಸಹ ಇದ್ದವು. ಈ ಆನೆಗಳು ಅಲ್ಲಿನ ಕೆರೆಯಲ್ಲಿ ಪ್ರತಿದಿನ ನೀರು ಕುಡಿಯಲು ಬರುತ್ತಿದ್ದವು. ಆ ಕೆರೆಯ ಪಕ್ಕದಲ್ಲಿಯೇ ಇಲಿಗಳು ವಾಸ ಮಾಡುತ್ತಿದ್ದವು.  ಇಲಿಗಳು ವಾಸಿಸುವ ಸ್ಥಳ ಈ ಕೆರೆಗೆ ಹೋಗುವ ದಾರಿಯಲ್ಲಿ ಇದ್ದ ಕಾರಣ ಆನೆಗಳು ಕೆರೆಗೆ ಹೋಗುವಾಗ ತಮಗೆ ಅರಿವಿಲ್ಲದಂತೆ ಪ್ರತಿದಿನ ಪಾಪ ಒಂದು ಅಥವಾ ಎರಡು ಇಲಿಗಳನ್ನು ತುಳಿದು ಹೋಗುತ್ತಿದ್ದವು. ಇದರಿಂದ ಇಲಿಗಳ ಸಾವು ಹೆಚ್ಚಾಗುತ್ತಿದ್ದವು.


ಇದನ್ನೂ ಓದಿ: ಸಣ್ಣ ಸೂಚನೆಯನ್ನು ನಿರ್ಲಕ್ಷ್ಯ ಮಾಡಬೇಡಿ, ದುಷ್ಟರಿಂದ ದೂರವಿದ್ರೆ ಉತ್ತಮ


ಪ್ರತಿದಿನ ಇದೇ ರೀತಿ ನಡೆಯುತ್ತಿದ್ದರಿಂದ, ಇಲಿಗಳಿಗೆ ಸಂಕಷ್ಟ ಶುರುವಾಯಿತು. ಪ್ರತಿದಿನ ಇಲಿಗಳ ಸಾವನ್ನ ನೋಡುವುದು ಹೇಗೆ, ಅದನ್ನು ಕಡಿಮೆ ಮಾಡುವುದು ಹೇಗೆ ಎಂದು ಇಲಿಗಳು ಸಭೆ ಸೇರಿ ಚರ್ಚೆ ನಡೆಸಿದವು. ಕೊನೆಗೆ ಇಲಿಗಳ ರಾಜ, ಆನೆಗಳ ರಾಜನನ್ನ ಭೇಟಿ ಮಾಡಿ, ಈ ವಿಚಾರವನ್ನು ತಿಳಿಸಿ, ಮನವಿ ಮಾಡಲು ನಿರ್ಧರಿಸಿತು.




ಹಾಗೆಯೇ, ಇಲಿಗಳ ರಾಜ ಆನೆಗಳ ರಾಜ ಹಾಗೂ ಇತರ ಆನೆಗಳನ್ನು ಭೇಟಿ ಮಾಡಿ , ಆನೆಗಳೇ, ನೀವು ಪ್ರತಿದಿನ ಕೆರೆಗೆ ಹೋಗುವಾಗ ನಿಮಗೆ ತಿಳಿಯದೇ, ಅನೇಕ ಇಲಿಗಳು ನಿಮ್ಮ ಕಾಲಿನ ಅಡಿಯಲ್ಲಿ ಸಿಕ್ಕು ಪ್ರಾಣ ಬಿಡುತ್ತಿವೆ. ಇದು ನಮಗೆ ಚಿಂತೆಯ ವಿಚಾರವಾಗಿದೆ. ಹಾಗಾಗಿ ದಯವಿಟ್ಟು ನೀವು ನಿಮ್ಮ ಕೆರೆಗೆ ಹೋಗುವ ದಾರಿಯನ್ನು ಬದಲಾಯಿಸಿದರೆ ನಮಗೆ ಸಹಾಯವಾಗುತ್ತದೆ. ನಿಮಗೆ ಜೀವನಪೂರ್ತಿ ಕೃತಜ್ಞರಾಗಿರುತ್ತೇವೆ ಎಂದು ಹೇಳುತ್ತದೆ.


ಇಲ್ಲಿ ಯಾರೂ ಸಣ್ಣವರಲ್ಲ


ಅಲ್ಲದೇ, ನಿಮಗೆ ಕಷ್ಟ ಬಂದಾಗ ಅಥವಾ ಅವಶ್ಯಕತೆ ಇದ್ದಾಗ ಸಹ ನಾವು ಸಹಾಯಕ್ಕೆ ಬರುತ್ತೇವೆ ಎಂದು ಮನವಿ ಮಾಡಿಕೊಳ್ಳುತ್ತದೆ.  ಆದರೆ, ಈ ಆನೆಗಳ ರಾಜ, ನಾವು ಆನೆಗಳು,  ನೀವು ನಮಗೆ ಹೇಗೆ ಸಹಾಯ ಮಾಡಬಹುದು ಎಂದು ಗೇಲಿ ಮಾಡುತ್ತದೆ. ಆದರೆ ಇಲಿಗಳ ರಾಜನಿಗೆ ನಾವು ಬೇರೆ ದಾರಿಯನ್ನು ಬಳಸುತ್ತೇವೆ, ನಿಮಗೆ ತೊಂದರೆ ಆಗುವುದಿಲ್ಲ ಎಂದು ಪ್ರಾಮಿಸ್ ಮಾಡುತ್ತದೆ.


ಹೀಗೆ ದಿನಗಳ ಕಳೆಯುತ್ತದೆ. ಒಂದು ದಿನ, ಆನೆಗಳು ನೀರು ಕುಡಿಯಲು ಬಂದಾಗ, ಕೆಲ ಬೇಟೆಗಾರರು ಹಾಕಿದ್ದ ಬಲೆಗಳಲ್ಲಿ ಸಿಕ್ಕಿಕೊಳ್ಳುತ್ತವೆ. ಅದೆಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದರೂ ಆಗುವುದಿಲ್ಲ. ಸೋತು ಸುಮ್ಮನೆ ಕುಳಿತಿರುತ್ತದೆ. ಇದನ್ನು ನೋಡಿದ ಇಲಿಗಳು, ಆನೆಗಳ ಸುತ್ತ ಇದ್ದ ಬಲೆಯನ್ನು ಕಡಿದು, ಆನೆಗಳನ್ನು ಬಿಡಿಸುತ್ತವೆ. ಈ ರೀತಿ ಜೀವ ಉಳಿಸಿದ ಇಲಿಗಳಿಗೆ ಆನೆಗಳು ಧನ್ಯವಾದ ಹೇಳುತ್ತವೆ.


ಇದನ್ನೂ ಓದಿ: ಒಂದು ಸಣ್ಣ ತಪ್ಪು ದೊಡ್ಡ ಸಮಸ್ಯೆಗೆ ಕಾರಣ, ಸಹೋದರರ ಕಥೆ ಕೇಳಿ


ನೋಡಿ ಆನೆಯ ರಾಜ, ಇಲಿಗಳು ಸಣ್ಣ ಪ್ರಾಣಿ ಎಂದು ಗೇಲಿ ಮಾಡಿದ್ದ, ಆದರೆ ಇಲಿಗಳು ಆನೆಗಳ ಜೀವ ಉಳಿಸಿ ತಮ್ಮ ಶಕ್ತಿ ತೋರಿಸಿವೆ. ಹಾಗಾಗಿ ಯಾರೂ ಎಂದಿಗೂ ಸಣ್ಣವರಲ್ಲ ಎಂಬುದನ್ನ ಮರೆಯಬಾರದು.

Published by:Sandhya M
First published: