news18-kannada Updated:February 16, 2021, 11:37 AM IST
ಸಾಂದರ್ಭಿಕ ಚಿತ್ರ
ತಾಯ್ತನ ಎನ್ನುವುದು ಪ್ರತಿ ಹೆಣ್ಣು ಬಯಸುವ ಅತ್ಯಂತ ಸುಂದರವಾದ ಅನುಭವ ಹಾಗೂ ಹಂತ. ಗರ್ಭಾವಸ್ಥೆಯಲ್ಲಿಯೇ ತನ್ನ ಮಗುವಿನ ಬಗ್ಗೆ ಪ್ರತಿಯೊಬ್ಬ ತಾಯಿ ಅನೇಕ ಕನಸುಗಳನ್ನು ಕಟ್ಟಿಕೊಳ್ಳಲು ಶುರುಮಾಡುತ್ತಾಳೆ. ಗರ್ಭ ಧರಿಸಿದ ಬಳಿಕ ಮುಂದಿನ 9 ತಿಂಗಳುಗಳ ಕಾಲ ಆಕೆಗೆ ಒಂದು ರೀತಿಯ ಅಗ್ನಿಪರೀಕ್ಷೆ ಇದ್ದಂತೆ. ಮಗುವಿನ ಆಗಮನದ ನೀರಿಕ್ಷೆಯಲ್ಲಿ ಆಕೆ ಆ ಎಲ್ಲ ನೋವುಗಳನ್ನು ಮರೆತುಬಿಡುತ್ತಾಳೆ. ಗರ್ಭಿಣಿಯಾಗಿದ್ದ ವೇಳೆ ನೀವು ಯಾವ ಆಹಾರ ಸೇವಿಸುತ್ತೀರಿ ಮತ್ತು ಗರ್ಭಾವಸ್ಥೆಯಲ್ಲಿ ಅದು ಎಷ್ಟು ಮುಖ್ಯವಾಗುತ್ತದೆ ಗೊತ್ತಾ?
ಹೌದು, ಗರ್ಭಾವಸ್ಥೆಯಲ್ಲಿ ನೀವು ಪಡೆಯುವ ತೂಕವು ನಿಮ್ಮ ಆರೋಗ್ಯಕ್ಕೆ ಎಷ್ಟು ಅವಶ್ಯಕವೋ ಹಾಗೆಯೇ ಅದು ನಿಮ್ಮ ಮಗುವಿನ ಆರೋಗ್ಯಕ್ಕೂ ಅಗತ್ಯವಾಗಿರುತ್ತದೆ. ಏಕೆಂದರೆ ಗರ್ಭದೊಳಗಿನ ಭ್ರೂಣ ತಾಯಿಯ ಆಹಾರವನ್ನೇ ಪಡೆದು ಬೆಳೆಯುತ್ತಾ ಹೋಗುತ್ತದೆ. ಹೀಗಾಗಿ ಗರ್ಭಾವಸ್ಥೆಯಲ್ಲಿ ನಿಮ್ಮ ತೂಕದ ಬಗ್ಗೆ ಅಗತ್ಯ ಗಮನಹರಿಸುವುದು ಒಳಿತು ಮತ್ತು ನಿಮ್ಮ ವೈದ್ಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಆರೋಗ್ಯ ಮತ್ತು ತೂಕದ ಪರಿಶೀಲನೆ ಮಾಡಿಸಿಕೊಳ್ಳುವುದು ಅಗತ್ಯ.
ಒಂದು ನಿರ್ದಿಷ್ಟ ಮಟ್ಟಕ್ಕೆ ತೂಕವನ್ನು ಪಡೆಯುವುದು ಉತ್ತಮ. ಆದರೆ, ಹೆಚ್ಚಿನ ತೂಕ ಪಡೆಯುವುದು ನಿಮ್ಮ ಗರ್ಭಾವಸ್ಥೆಯಲ್ಲಿ ಅನೇಕ ತೊಡಕುಗಳಿಗೆ ಕಾರಣವಾಗಬಹುದು. ನಿಮ್ಮ ಹೆರಿಗೆಯ ನಂತರ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವುದು ಕಷ್ಟಕರ ಮತ್ತು ಸಮತೋಲಿತ ತೂಕವನ್ನು ಪಡೆಯದಿದ್ದರೆ ನಿಮ್ಮ ಮಗುವಿನ ಬೆಳವಣಿಗೆಯನ್ನು ಅಪಾಯಕ್ಕೆ ತಳ್ಳುತ್ತದೆ. ಆದ್ದರಿಂದ, ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವಿಸುವುದರಿಂದ ನಿಮ್ಮ ಮಗುವಿಗೆ ಅಗತ್ಯ ಪೋಷಕಾಂಶ ಪಡೆಯಲು ಹಾಗೂ ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗತ್ತದೆ.
ಚಿನ್ನದ ಪದಕ ಗೆದ್ದ ಕೂಲಿ ಕಾರ್ಮಿಕನ ಮಗಳ ಭವಿಷ್ಯಕ್ಕೆ ನೆರವಾದ ಮಾಜಿ ಸಚಿವ ಎಂ.ಬಿ.ಪಾಟೀಲ್
ಗರ್ಭಧಾರಣೆಯಲ್ಲಿ ತೂಕ ಹೆಚ್ಚಾಗುವಿಕೆ: ಎಷ್ಟು ತೂಕವಿದ್ದರೆ ಉತ್ತಮ?
ಗರ್ಭಾವಸ್ಥೆಯಲ್ಲಿ ಪ್ರತಿ ಗರ್ಭಿಣಿಯೂ ಅವರ ದೇಹದ ರಚನೆಗೆ ತಕ್ಕಂತೆ ತೂಕ ಹೆಚ್ಚಿಸಿಕೊಳ್ಳುತ್ತಾರೆ. ನೀವು ಎಷ್ಟು ತೂಕ ಹೊಂದಬೇಕೆಂಬುದರ ಬಗ್ಗೆ ಯಾವುದೇ ಮ್ಯಾಜಿಕ್ ಸಂಖ್ಯೆಯಿಲ್ಲ. ನಿಮಗೆ ಅಥವಾ ನಿಮ್ಮ ಮಗುವಿಗೆ ತುಂಬಾ ಕಡಿಮೆ ಹಾಗೂ ಹೆಚ್ಚಿನ ತೂಕವು ಆರೋಗ್ಯಕರವಲ್ಲ ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಗಳಿಸುವ ತೂಕವು ಗರ್ಭದಾರಣೆಯ ನಂತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದು ಬೆಳವಣಿಗೆ ಹಂತದಲ್ಲಿ ನಿಮ್ಮ ಮಗುವಿನ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಿಸುವಿಕೆಯು ನಿಮ್ಮ ಗರ್ಭಧಾರಣೆ ಮೊದಲಿದ್ದ ತೂಕ ಮತ್ತು ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಅನ್ನು ಆಧರಿಸಿದೆ. ಗರ್ಭಾವಸ್ಥೆಯಲ್ಲಿ ಶಿಫಾರಸು ಮಾಡಲಾದ ತೂಕವು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಫಲಿತಾಂಶಗಳನ್ನು ಉತ್ತಮಗೊಳಿಸುತ್ತದೆ. ಇದರಿಂದ ನಿಮ್ಮ ಆರೋಗ್ಯವು ಉತ್ತಮಗೊಂಡು, ನಿಮ್ಮ ಮಗು ಸೂಕ್ತ ಗಾತ್ರಕ್ಕೆ ಬೆಳೆಯುವ ಸಾಧ್ಯತೆಯಿದೆ. ಇದು ನಿಮ್ಮ ಮಗುವಿನ ಬೆಳವಣಿಗೆಗೆ ಹಾಗೂ ಗರ್ಭಧಾರಣೆಯ ಪೂರ್ವದಲ್ಲಿದ್ದ ತೂರಕ್ಕೆ ಮರಳಲು ಸುಲಭವಾಗುವಂತೆ ಮಾಡುತ್ತದೆ.ಭ್ರೂಣ ಮತ್ತು ತಾಯಿಯ ಆರೋಗ್ಯ ಮೇಲೆ ಯಾವುದೇ ಸಮಸ್ಯೆಯಾಗದಂತೆ ಆರೋಗ್ಯವಂತ ಮಗುವಿಗೆ ಜನ್ಮ ನೀಡುವ ಸಾಧ್ಯತೆಯನ್ನು ಹೆಚ್ಚಿಸಲು ಒಬ್ಬ ಮಹಿಳೆ ಗರ್ಭಾವಸ್ಥೆಯಲ್ಲಿ 10 ರಿಂದ 14 ಕೆಜಿ, ಸರಾಸರಿ 12 ಕೆಜಿ ತೂಕವನ್ನು ಪಡೆಯಬೇಕು. ಸಾಮಾನ್ಯವಾಗಿ ಗರ್ಭಿಣಿಯಾಗುವ ಮೊದಲು ಆರೋಗ್ಯಕರ ತೂಕ ಹೊಂದಿದ್ದ ಮಹಿಳೆಯರಿಗೆ ದಿನಕ್ಕೆ 2,200 ಕ್ಯಾಲೊರಿ ಮತ್ತು 2,900 ಕ್ಯಾಲೊರಿಗಳ ಅಗತ್ಯವಿರುತ್ತದೆ. ಮಗು ಬೆಳೆದಂತೆ ಕ್ಯಾಲೊರಿಗಳಲ್ಲಿ ಸ್ಥಿರವಾದ ಹೆಚ್ಚಳವು ಅತ್ಯುತ್ತಮ ಹಂತವಾಗಿದೆ.
ಅಲ್ಲದೆ ಗರ್ಭಾವಸ್ಥೆಯಲ್ಲಿ ನೀವು ಹೆಚ್ಚು ಆಹಾರ ಸೇವಿಸಬೇಕು ಮತ್ತು ನಿಮ್ಮ ಕ್ಯಾಲೊರಿ ಸೇವನೆಯನ್ನು 2 ಪಟ್ಟು ಹೆಚ್ಚಿಸಬೇಕು ಎಂಬುದು ಸಾಮಾನ್ಯ ವಿಚಾರ.
ಮೊದಲ ತ್ರೈಮಾಸಿಕದಲ್ಲಿ ಕ್ಯಾಲೊರಿ ಸೇವನೆಯನ್ನು ನಿಮ್ಮ ತೂಕ ಹೆಚ್ಚಿಸುವ ಗುರಿಯ ಪ್ರಕಾರ ಸರಿಹೊಂದಿಸಲಾಗುತ್ತದೆ. 2ನೇ ತ್ರೈಮಾಸಿಕದಲ್ಲಿ ದಿನಕ್ಕೆ 300-400 ಕ್ಯಾಲೊರಿಗಳನ್ನು ಮಾತ್ರ ಹೆಚ್ಚಿಸಲಾಗುವುದು ಮತ್ತು 3ನೇ ತ್ರೈಮಾಸಿಕದಲ್ಲಿ ನಿಮಗೆ ದಿನಕ್ಕೆ 450-500 ಹೆಚ್ಚುವರಿ ಕ್ಯಾಲೊರಿಗಳು ಬೇಕಾಗುತ್ತವೆ. ಆರೋಗ್ಯಕರ ಆಹಾರ ಸೇವಿಸುವುದು ಮತ್ತು ಸರಿಯಾದ ಪ್ರಮಾಣದ ಕ್ಯಾಲೊರಿಗಳನ್ನು ಪಡೆಯಲು ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆದುಕೊಳ್ಳುವುದು ಸೂಕ್ತ.
ಆರೋಗ್ಯಕರ ಗರ್ಭಧಾರಣೆ ಮತ್ತು ಆರೋಗ್ಯಕರ ಮಗುವಿಗೆ ತೂಕವನ್ನು ಪಡೆಯುವುದು ಅವಶ್ಯಕ. ಇದು ನಿಮ್ಮ ಸ್ವಂತ ಆರೋಗ್ಯಕ್ಕೂ ಅತ್ಯಗತ್ಯ. ಅಂತಿಮವಾಗಿ ಗರ್ಭಾವಸ್ಥೆಯಲ್ಲಿ ನಿಮಗೆ ಎಷ್ಟು ಪ್ರಮಾಣದ ತೂಕ ಹೆಚ್ಚಿಸಿಕೊಳ್ಳಬೇಕು, ಯಾವಾಗ ಹೆಚ್ಚಿಸಿಕೊಳ್ಳಬೇಕು ಎಂಬುದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ.
Published by:
Latha CG
First published:
February 16, 2021, 11:37 AM IST