ಭಾನುವಾರ ಅಂದ್ರೆ ಮನೆಯಲ್ಲಿ ನಾನ್ ವೆಜ್ (Non-Veg) ಊಟ ಇರಲೇಬೇಕು, ವಾರ, ವಾರ ಹೋಟೆಲ್ (Hotel), ರೆಸ್ಟೋರೆಂಟ್ಗೆ ಹೋಗಿ ರುಚಿ ರುಚಿ ತಿನ್ನಲು ಕಷ್ಟವಾಗುತ್ತದೆ. ಹೀಗಾಗಿ ಮನೆಯಲ್ಲೆ ಹೋಟೆಲ್ ಸ್ಟೈಲ್ನಲ್ಲಿ ಅಡುಗೆ ಮಾಡಿ ತಿನ್ನಿ. ಮನೆ ಮಂದಿಗೆಲ್ಲಾ ನೀಡಿ ತಿಂದ್ರೆ ಮನಸ್ಸಿಗೂ ಖುಷಿಯಾಗುತ್ತದೆ. ಇವತ್ತು ಭಾನುವಾರ ಮನೆಯಲ್ಲಿ ಏನ್ ಸ್ಪೆಷಲ್ ಮಾಡೋದು ಅಂತ ಚಿಂತೆ ಮಾಡ್ತಿದ್ದೀರಾ? ಮಟನ್ನಲ್ಲಿ (Mutton) ಮನೆಗಳಲ್ಲಿ ಸಾಮಾನ್ಯವಾಗಿ ಸಾರು, ಗೊಜ್ಜು ಮಾಡ್ತಾರೆ ಆದ್ರೆ ನಾವು ಇಲ್ಲಿ ನಿಮಗೆ ಪೆಪ್ಪರ್ ಮಟನ್ ಮಾಡೋದು ಹೇಗೆ ಅಂತ ಹೇಳಿಕೊಡ್ತಿವಿ. ಹೌದು ತುಂಬಾ ರುಚಿಕರವಾಗಿರೋ ಈ ಪೆಪ್ಪರ್ ಮಟನ್ ಮಾಡೋದು ತುಂಬಾ ಸುಲಭವಾಗಿದೆ.
ಈ ಖಾದ್ಯದಲ್ಲಿ ಪ್ರಮುಖವಾಗಿ ಕಾಳುಮೆಣಸನ್ನು ಬಳಸಲಾಗುವುದರಿಂದ ಇದನ್ನು ರೊಟ್ಟಿ, ಚಪಾತಿ ಜೊತೆ ತಿನ್ನುವಾಗ ಅತ್ಯುತ್ತಮವಾದ ರುಚಿಯನ್ನು ನೀಡುತ್ತದೆ. ಅನ್ನದೊಡನೆ ಕಲಸಿಕೊಂಡು ತಿನ್ನಬಹುದಾದರೂ ಇದರ ಸಾರು ಬಹಳ ಗಟ್ಟಿಯಾಗಿ ಇರುತ್ತದೆ. ಕಾಳು ಮೆಣಸು ಆರೋಗ್ಯಕ್ಕೆ ಉತ್ತಮವಾಗಿದೆ. ಕಾಳುಮೆಣಸನ್ನು ಪ್ರಮುಖವಾಗಿ ಬಳಸಿರುವ ಕಾರಣ ಊಟದ ಬಳಿಕ ಕೊಂಚ ಮೊಸರನ್ನು ಸೇವಿಸುವುದು ಅಗತ್ಯ. ಬನ್ನಿ, ತಿಂದಷ್ಟೂ ನಾಲಿಗೆ ಇನ್ನೂ ಬೇಕು ಎನ್ನಿಸುವಂತೆ ಮಾಡುವ ಪೆಪ್ಪರ್ ಮಟನ್ ಮಾಡುವ ಬಗೆಯನ್ನು ನೋಡೋಣ
ಪೆಪ್ಪರ್ ಮಟನ್ ಮಾಡಲು ಅಗತ್ಯವಿರುವ ಸಾಮಾಗ್ರಿಗಳು:
*ಮಟನ್ - ಒಂದು ಕೇಜಿ (ಚಿಕ್ಕ ತುಂಡುಗಳಾಗಿಸಿದ್ದು)
*ಒಣಮೆಣಸಿನ ಪುಡಿ: ಒಂದು ದೊಡ್ಡ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದೂವರೆ ಚಮಚ)
*ಗರಂ ಮಸಾಲಾ ಪುಡಿ : ಒಂದು ದೊಡ್ಡ ಚಮಚ
*ಬೇವಿನ ಎಲೆಗಳು : ಒಂದು ಎಸಳು
*ಅರಿಶಿನ ಪುಡಿ: ಅರ್ಧ ದೊಡ್ಡಚಮಚ
*ಹಸಿಮೆಣಸು : ನಾಲ್ಕು (ಉದ್ದಕ್ಕೆ ಸೀಳಿದ್ದು)
*ಹಸಿಶುಂಠಿಯ ಪೇಸ್ಟ್: ಒಂದು ದೊಡ್ಡ ಚಮಚ
*ಸಾಸಿವೆ: ಒಂದು ದೊಡ್ಡಚಮಚ
*ಕಾಳುಮೆಣಸು: ಮೂರು ದೊಡ್ಡ ಚಮಚ
*ಕೊತ್ತಂಬರಿ ಪುಡಿ: ಒಂದು ದೊಡ್ಡ ಚಮಚ
*ಶುಂಠಿ-ಬೆಳ್ಳುಳ್ಳಿ ಪೇಸ್ಟ್: ಅರ್ಧ ದೊಡ್ಡ ಚಮಚ
*ಎಣ್ಣೆ : ಒಂದು ದೊಡ್ಡಚಮಚ
*ಉಪ್ಪು: ರುಚಿಗನುಸಾರ
ಇದನ್ನೂ ಓದಿ: Recipe: ಮಕ್ಕಳಿಗೆ ಮಾಡಿ ಕೊಡಿ ರುಚಿಯಾದ ಕ್ಯಾಪ್ಸಿಕಂ ಎಗ್ ಚಿಲ್ಲಿ
ಮಾಡುವ ವಿಧಾನ:
1) ಮಾಂಸದ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೀರೆಲ್ಲಾ ಹೊರಹೋಗುವಂತೆ ಬಸಿಯಿರಿ. ಇದಕ್ಕೆ ಅರ್ಧದಷ್ಟು ಅರಿಶಿನದ ಪುಡಿ ಹಚ್ಚಿ ಬದಿಗಿಡಿ.
2) ಸುಮಾರು ಹದಿನೈದು ನಿಮಿಷದ ಬಳಿಕ ಪ್ರೆಶರ್ ಕುಕ್ಕರ್ ನಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಳಿದ ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಚಿಕ್ಕ ಉರಿಯಲ್ಲಿ ನಡುನಡುವೆ ತಿರುವುತ್ತಾ ಹುರಿಯಿರಿ.
3) ಕೊಂಚ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಮಾಂಸದ ತುಂಡುಗಳನ್ನು ಹಾಕಿ ಕೆಲಕಾಲ ಹುರಿದು ಬಳಿಕ ಮುಚ್ಚಳ ಮುಚ್ಚಿ ಅತಿ ಕಡಿಮೆ ಉರಿಯಲ್ಲಿ ಸುಮಾರು ಹದಿನೈದು ನಿಮಿಷ ಬೇಯಲು ಬಿಡಿ.
4) ಇನ್ನೊಂದು ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಬಳಿಕ ಬೇವಿನ ಎಲೆ, ಶುಂಠಿ ಪೇಸ್ಟ್, ಹಸಿಮೆಣಸು ಹಾಕಿ ಕಂದು ಬಣ್ಣವಾಗುವವರೆಗೆ ಹುರಿಯಿರಿ.
Non-veg Recipe: ಈಸ್ಟರ್ ಸಂಡೇಗಾಗಿ ಸ್ಪೆಷಲ್ ಸ್ಪೈಸಿ ಚಿಕನ್ ಫ್ರೈ
5) ಬಳಿಕ ಗರಂ ಮಸಾಲ ಪುಡಿ, ಕಾಳುಮೆಣಸು ಹಾಕಿ ಹುರಿಯಿರಿ.
6) ನಂತರ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿದ್ದ ಮಾಂಸದ ತುಂಡುಗಳನ್ನು ಇದಕ್ಕೆ ಹಾಕಿ ತಿರುವಿ
7) ಚಿಕ್ಕ ಉರಿಯಲ್ಲಿಯೇ ನಡುನಡುವೆ ತಿರುವುತ್ತಾ ಮಾಂಸ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಸ್ಟವ್ ಆಫ್ ಮಾಡಿ
8) ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ಮೇಲೆ ಸಿಂಪಡಿಸಿ ಬಿಸಿಬಿಸಿಯಿದ್ದಂತೆಯೇ ಅತಿಥಿಗಳಿಗೆ ಬಡಿಸಿ. ಈ ರುಚಿಕರ ಖಾದ್ಯವನ್ನು ನಿಮ್ಮ ಮನೆ ಮಂದಿಗೆಲ್ಲಾ ಬಡಿಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ