Sleeping Disorder: ನಿದ್ರಾಹೀನತೆಗೆ ಸಾಮಾನ್ಯ ಕಾರಣಗಳಿವು, ನಿರ್ಲಕ್ಷ್ಯ ಬೇಡ

Common Causes of Sleep Problem: ಒಟ್ಟಿನಲ್ಲಿ, ನಿದ್ರಾಹೀನತೆ ಉಂಟಾಗಲು ಸಾಕಷ್ಟು ಕಾರಣಗಳಿವೆ ಎಂದು ಹೇಳಬಹುದು. ರೋಗಗಳು, ಮಾನಸಿಕ ಒತ್ತಡಗಳು ಹಾಗೂ ಕೆಲವು ಔಷಧಿಗಳ ಸೇವನೆ ನಿಮಗೆ ನಿದ್ರಾಹೀನತೆಯನ್ನುಂಟು ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿದ್ರಾಹೀನತೆ (Sleeping Disorder) ಉಂಟಾಗಲು ಇಂತಿಷ್ಟೆ ಕಾರಣಗಳು (Reason)  ಎಂದೇನಿಲ್ಲ. ಪರಿಸ್ಥಿತಿ ಹಾಗೂ ನಿದ್ರಾಹೀನತೆಯಲ್ಲಿರುವ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಲವಾರು ಕಾರಣಗಳಿರುವುದನ್ನು ನಾವು ಕಾಣಬಹುದು. ಅದಕ್ಕು ಮುಂಚೆ ನಿದ್ರಾಹೀನತೆ ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು ಬಹು ಅವಶ್ಯಕವಾಗುತ್ತದೆ. 

ನಿದ್ರಾಹೀನತೆ ಎಂದರೆ ಏನು?

ನಿದ್ರಾಹೀನತೆ ಎಂಬುದು ಮನುಷ್ಯನ ದೇಹಕ್ಕೆ ಬರುವ ಒಂದು ಸ್ಥಿತಿ. ಮನುಷ್ಯನಿಗೆ ನಿದ್ರೆ ಎಂಬುದು ಅವಶ್ಯಕವಾಗಿ ಬೇಕಾಗಿರುವಂಥದ್ದು. ಹೇಗೆ ಆಹಾರ, ನೀರು ಹಾಗೂ ಆಮ್ಲಜನಕಯುಕ್ತ ಗಾಳಿ ಸೇವನೆ ಜೀವಿಸಲು ಅನಿವಾರ್ಯವೋ ಅದೇ ರೀತಿ ದೇಹಕ್ಕೆ ನಿದ್ರೆಯೂ ಸಹ ಅವಶ್ಯಕವಾಗಿ ಬೇಕಾಗುತ್ತದೆ. ನಿದ್ರೆಯು ಮಾನವನಿಗೆ ಬದುಕಲು ಬೇಕಾಗಿರುವ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಒಬ್ಬ ವ್ಯಕ್ತಿಯು ನಿದ್ರೆಯಿಲ್ಲದೆ ಬದುಕಲಾಗದ ಅವಧಿಗಿಂತ ಮೂರು ಪಟ್ಟು ಹೆಚ್ಚು ಸಮಯ ಬೆಕಾದರೆ ಊಟವಿಲ್ಲದೆ ಬದುಕಬಹುದು ಎಂದು ಹೇಳಲಾಗುತ್ತದೆ. 

ಈ ರೀತಿಯ ಸಂಶೋಧನೆಯ ಹೊರತಾಗಿಯೂ, ನಿದ್ರೆಯ ಪ್ರಾಮುಖ್ಯತೆಯ ಬಗ್ಗೆ ಇನ್ನೂ ಸಾಕಷ್ಟು ವಿವರಣೆ ನೀಡಲಾಗಿಲ್ಲ. ಹಾಗಾದರೆ ಈ ನಿದ್ರಾಹೀನತೆ ಉಂಟಾಗಲು ಏನೆಲ್ಲ ಕಾರಣಗಳಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲು ನಿದ್ರಾಹೀನತೆಯಲ್ಲಿ ಪ್ರಮುಖವಾಗಿ ಎಷ್ಟು ಬಗೆಗಳಿವೆ ಎಂಬುದನ್ನು ಒಮ್ಮೆ ಗಮನಿಸಬೇಕಾದುದು ಅವಶ್ಯಕವಾಗಿರುತ್ತದೆ. ಏಕೆಂದರೆ ನಿದ್ರಾಹೀನತೆಯ ಪ್ರಕಾರಗಳಿಂದಲೇ ಅದು ಬರುವ ಅತಿ ಸಾಮಾನ್ಯ ಕಾರಣಗಳು ಯಾವುವು ಎಂದು ಗುರುತಿಸಬಹುದು. ಹಾಗೆ ನೋಡಿದರೆ, ನಿದ್ರಾಹೀನತೆಯಲ್ಲಿ ಹಲವು ಬಗೆಗಳಿವೆ. ಆದಾಗ್ಯೂ, ಐದು ಪ್ರಮುಖ ಪ್ರಕಾರಗಳನ್ನು ಗುರುತಿಸಲಾಗಿದೆ.

ಇನ್ಸೋಮ್ನಿಯಾ : ನಿಮಗೆ ದಣಿವಾಗಿದ್ದರೂ ಪ್ರತಿ ರಾತ್ರಿ ನಿದ್ರೆ ಬರುತ್ತಿಲ್ಲ. ನಿತ್ಯವೂ ನೀವು ಮಲಗಲು ಪರದಾಡುತ್ತಿದ್ದೀರಿ ಎಂದರೆ  ನೀವು ಇನ್ಸೋಮ್ನಿಯಾ ಎಂಬ ನಿದ್ರಾಹೀನತೆಯ ಪ್ರಕಾರದಿಂದ ಬಳಲುತ್ತಿರುವ ಸಾಧ್ಯತೆ ಇರಬಹುದು. ಇದರಲ್ಲೂ ಎರಡು ವಿಭಾಗಗಳಿದ್ದು ಅವುಗಳನ್ನು ಅಕ್ಯೂಟ್ ಹಾಗೂ ಕ್ರಾನಿಕ್ ಇನ್ಸೋಮ್ನಿಯಾ ಎಂದು ಗುರುತಿಸಲಾಗಿದೆ. 

ಅಕ್ಯೂಟ್ ಇನ್ಸೋಮ್ನಿಯಾ ಎಂಬುದು ತಾತ್ಕಾಲಿಕವಾದ ನಿದ್ರಾಹೀನತೆಯ ಸ್ಥಿತಿಯಾಗಿದ್ದು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದಾಗ ಉಂಟಾಗುವ ಜೆಟ್ ಲ್ಯಾಗ್ ಹಾಗೂ ಕೆಲವೊಮ್ಮೆ ಆಘಾತಕಾರಿ ವಿಷಯಗಳಿಂದ ಉಂಟಾಗುತ್ತದೆ. ಕ್ರಾನಿಕ್ ಇನ್ಸೋಮ್ನಿಯಾ ಎಂಬುದು ದೀರ್ಘಕಾಲದವರೆಗೆ ಇರುವ ನಿದ್ರಾಹೀನತೆಯ ಒಂದು ಸ್ಥಿತಿಯಾಗಿರುತ್ತದೆ. 

ಪ್ರಧಾನವಾಗಿ, ಇನ್ಸೋಮ್ನಿಯಾ ಉಂಟಾಗಲು ಇತರೆ ಹಲವು ಕಾರಣಗಳೂ ಸಹ ಇವೆ, ಅವುಗಳೆಂದರೆ, ಇತರೆ ಔಷಧಿಗಳ ಸೇವನೆ, ಹೆಚ್ಚು ಮದ್ಯ ಸೇವನೆ, ನಿಕೋಟಿನ್ ಸೇವನೆ, ಮಾನಸಿಕ ಒತ್ತಡ ಹಾಗೂ ಮಲಗುವ ಪರಿಸರ ಹಿತಕರವಾಗಿಲ್ಲದೆ ಇರುವುದು. 

ರೆಸ್ಟ್ ಲೆಸ್ ಲೆಗ್ಸ್ ಸಿಂಡ್ರೋಮ್ (RLS) : ಒಮ್ಮೊಮ್ಮೆ ನಾವು ಮಲಗಿದಾಗ ಕಾಲಾಡಿಸುವ ರೂಢಿ ಹೊಂದಿರುತ್ತೇವೆ. ಇದರಿಂದಲೂ ನಿದ್ರೆ ಬರದಿರುವ ಸ್ಥಿತಿ ಉಂಟಾಗಬಹುದು. ಈ ಸ್ಥಿತಿಯಲ್ಲಿ ಕಾಲುಗಳಲ್ಲಿ ಜುಮ್ಮೆನಿಸುವಂತಹ ಸಂವೇದನೆಯುಂಟಾಗುವ ಕಾರಣ ಕಾಲುಗಳು ಚಲನೆಯ ಸ್ಥಿತಿಯಲ್ಲಿರುತ್ತವೆ. ಇದೂ ಸಹ ನಿದ್ರಾಹೀನತೆಯ ಒಂದು ಸ್ಥಿತಿಯಾಗಿದ್ದು ಇದನ್ನು ರೆಸ್ಟ್ ಲೆಸ್ ಲೆಗ್ಸ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.  

ಪ್ಯಾರಾಸೋಮ್ನಿಯಾ : ವ್ಯಕ್ತಿಯೊಬ್ಬ ಅಲಗಿದ್ದಾಗಲೂ ದೈಹಿಕ ಚಲನ-ವಲನ ಹೊಂದಿರುವಂತಹ ಸ್ಥಿತಿಯೇ ಇದಾಗಿದೆ. ಅಂದರೆ ವ್ಯಕ್ತಿಗೇನಾದರೂ ಕನಸು ಬಿದ್ದಲ್ಲಿ ಅದರ ಪ್ರಸಂಗಕ್ಕೆ ತಕ್ಕಂತೆ ಮಲಗಿದ್ದಾಗಲೇ ಪ್ರತಿಕ್ರಿಯೆ ನೀಡುತ್ತಾನೆ.  ಕೈ/ಕಾಲುಗಳನ್ನಾಡಿಸುವುದು, ಅರಚುವುದು/ಚೀರುವುದು, ಹಾಸಿಗೆ ಒದ್ದೆ ಮಾಡುವುದು, ಹಲ್ಲು ಕಡಿಯುವುದು, ನಿದ್ರೆಯಲ್ಲೇ ಚಲಿಸುವುದು ಮುಂತಾದವುಗಳನ್ನು ಮಾಡುತ್ತಾನೆ. 

ಸ್ಲೀಪ್ ಅಪ್ನಿಯಾ : ಮಲಗಿರುವಾಗ ಉಸಿರಾಟದಲ್ಲಿ ಅಡಚಣೆಯುಂಟಾಗಿ ಥಟ್ಟನೆ ಏಳುವುದು. ಈ ರೀತಿಯ ನಿದ್ರಾಹೀನತೆಯನ್ನುಸ್ಲೀಪ್ ಅಪ್ನಿಯಾ ಎಂದು ಕರೆಯುತ್ತಾರೆ. ಈ ಸ್ಥಿತಿ ಬರಲು ಕಾರಣ ನೀವು ಉಸಿರಾಡುವಾಗ ಆಗಾಗ ವಿರಾಮಗಳನ್ನು ತೆಗೆದುಕೊಳ್ಳುತ್ತಿರಬಹುದು ಇಲ್ಲವೆ ಆಳವಿಲ್ಲದ ಉಸಿರು ಹೊರ ಬಿಡುತ್ತಿರಬಹುದು. ಈ ಸ್ಥಿತಿಯಿಂದ ಬಳಲುವ ಜನರು ಮಲಗಿದ್ದಾಗ ಒಮ್ಮೊಮ್ಮೆ ಉಸಿರಾಡುವುದನ್ನೇ ನಿಲ್ಲಿಸಿಬಿಡುತ್ತಾರೆ, ಪರಿಣಾಮ ಥಟ್ಟನೆ ಎಚ್ಚರವಾಗಿ ಬಿಡುತ್ತದೆ. ಇದನ್ನು ನಿರ್ಲಕ್ಷಿಸಿದರೆ ಇದು ರಕ್ತದೊತ್ತಡ ಏರುವಂತೆ ಮಾಡಬಹುದು ಹಾಗೂ ಹೃದಯಾಘಾತವಾಗುವ ಸಾಧ್ಯತೆಯೂ ಇರುತ್ತದೆ. 

ನಾರ್ಕೋಲೆಪ್ಸಿ : ಈ ಸ್ಥಿತಿಯಲ್ಲಿ ವ್ಯಕ್ತಿ ದಿನವಿಡಿ ದಣಿದಿರುವ, ನಿದ್ರೆಯ ಗುಂಗಿನಲ್ಲಿರುವ ಮನಸ್ಥಿತಿಯಲ್ಲೇ ಇರುತ್ತಾನೆ. ಈ ಸ್ಥಿತಿಯನ್ನು ವೈದ್ಯಕೀಯವಾಗಿ ನಿದ್ರಾಘಾತ ಎಂತಲೂ ಕರೆಯುತ್ತಾರೆ. ಹೃದಯಾಘಾತವಾಗುವ  ರೀತಿಯಲ್ಲೇ ಒಮ್ಮೊಮ್ಮೆ ಈ ಸ್ಥಿತಿಯಲ್ಲಿರುವವರು ಥಟ್ಟನೆ ನಿದ್ರಾಘಾತಕ್ಕೆ ಒಳಗಾಗುತ್ತಾರೆ. ಅಂದರೆ ದಿನದ ಯಾವುದೇ ಸಮಯದಲ್ಲಿ ಆ ವ್ಯಕ್ತಿಗಳಿಗೆ ತಡೆದುಕೊಳ್ಳಲಾಗದಂತಹ ನಿದ್ರೆ ಬರಬಹುದು. ದೈಹಿಕವಾಗಿ ಜಾಗರೂಕತೆಯಿಂದ ಮಾಡಬೇಕಾಗಿರುವ ಕೆಲಸಗಳನ್ನು ಮಾಡುವ ಜನರಿಗೆ ಈ ಸ್ಥಿತಿಯು ಸಾಕಷ್ಟು ಅಪಾಯವನ್ನು ತಂದೊಡ್ಡಬಹುದು.

ನಿದ್ರಾಹೀನತೆ ಉಂಟಾಗಲು ಪ್ರಧಾನವಾದ ಸಾಮಾನ್ಯ ಕಾರಣಗಳು ಯಾವುವು?

ದೈಹಿಕ ಅಡೆ-ತಡೆಗಳು : ಕಲ್ಪಿಸಿಕೊಳ್ಳಿ, ನಿಮಗೇನಾದರೂ ತಲೆ ನೋವು, ಹೊಟ್ಟೆ ನೋವು ಅಥವಾ ಹಲ್ಲು ನೋವು ಬಾಧಿಸುತ್ತಿದೆ ಅಂತ. ಆಗ ನೀವು ಹಾಯಾಗಿ ಮಲಗಿಕೊಳ್ಳಲು ಸಾಧ್ಯವಾಗುತ್ತದೆಯೆ? ಖಂಡಿತ ಇಲ್ಲ. ನಿಮಗೆ ನಿದ್ರೆ ಬರುತ್ತಿದ್ದರೂ ನಿಮಗೆ ಕಾಡುತ್ತಿರುವ ದೇಹದ ವಿಪರೀತ ನೋವು ನೀವು ಸಮರ್ಪಕವಾಗಿ ನಿದ್ರೆ ಮಾಡುವಂತೆ ಅಡೆ-ತಡೆಗಳನ್ನುಂಟು ಮಾಡುತ್ತವೆ. ಇವು ನಿದ್ರಾಹೀನತೆ ಉಂಟಾಗುವಂತೆ ಮಾಡುವ ದೈಹಿಕ ಅಡೆ-ತಡೆಗಳು.

ವೈದ್ಯಕೀಯ ಕಾರಣಗಳು : ಇದಕ್ಕೆ ಪ್ರಮುಖ ಉದಾಹರಣೆಯಾಗಿ ಸ್ಲೀಪ್ ಅಪ್ನೀಯಾ ಸ್ಥಿತಿಯನ್ನು ಉದಾಹರಿಸಬಹುದು. ಸ್ಲೀಪ್ ಅಪ್ನೀಯಾ ಎಂಬುದು ದೇಹದಲ್ಲೇ ಉಂಟಾಗುವ ನಿದ್ರಾಹೀನತೆಯ ಒಂದು ಸ್ಥಿತಿಯಾಗಿದೆ. 

ಇದನ್ನೂ ಓದಿ: ಬೆಂಗಳೂರಿನ ಈ ರೆಸ್ಟೊರೆಂಟ್​ಗಳಲ್ಲಿ ಮಸ್ತ್​ ಮಶ್ರೂಮ್ ಬಿರಿಯಾನಿ ಸಿಗುತ್ತೆ

ಮಾನಸಿಕ ದುರ್ಬಲತೆಗಳು : ಮಾನಸಿಕವಾಗಿ ಉಂಟಾಗುವ ಖಿನ್ನತೆ, ಆತಂಕ ಅಥವಾ ಆಘಾತ ಮನಸ್ಥಿತಿಗಳು ನಿದ್ರಾಹೀನತೆ ಉಂಟಾಗುವಂತೆ ಮಾಡುತ್ತವೆ. 

ಭೌತಿಕ ಕಾರಣಗಳು : ಇದು ಬಹುತೇಕ ಎಲ್ಲೆಡೆ ಕಾಣಬಹುದಾದ ಅತಿ ಸಾಮಾನ್ಯ ಕಾರಣ ಎಂತಲೇ ಹೇಳಬಹುದು. ಮಲಗುವ ಕೋಣೆಯಲ್ಲಿ ವಾತಾವರಣ ಮಲಗಲು ಹಿತಕರವಾಗಿರದೆ ಇರುವುದು. ಉದಾಹರಣೆಗೆ ಹೆಚ್ಚು ಬೆಳಕು ಬರುವುದು, ಗದ್ದಲ ಸದ್ದುಗಳು, ಸ್ವಚ್ಛತೆ ಇಲ್ಲದಿರುವುದು, ದುರ್ವಾಸನೆಯಿಂದ ಕೂಡಿದ ವಾತಾವರಣ, ಸೊಳ್ಳೆಗಳ ಕಾಟ, ವಿಪರೀತವಾದ ಧಗೆ ಅಥವಾ ವಿಪರೀತವಾದ ಚಳಿ ಮುಂತಾದವುಗಳು.

ಇನ್ನು ಇವುಗಳನ್ನು ಹೊರತುಪಡಿಸಿ ನಿದ್ರೆ ಬರದಂತೆ ಮಾಡಬಹುದಾದ ಇತರೆ ಕೆಲವು ಕಾರಣಗಳೆಂದರೆ,

ಅನುವಂಶಿಕತೆ : ನಾರ್ಕೋಲೆಪ್ಸಿಯಂತಹ ನಿದ್ರಾಹೀನತೆ ಉಂಟಾಗಲು ಅನುವಂಶಿಕತೆಯೂ ಕಾರಣವಾಗಿರುವುದಾಗಿ ಸಂಶೋಧಕರು ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. 

ರಾತ್ರಿಪಾಳಯದ ಕೆಲಸ : ಸಾಮಾನ್ಯವಾಗಿ ಇಂದು ಮೆಟ್ರೋ ನಗರಗಳಲ್ಲಿ ನಾವು ವಿವಿಧ ಐಟಿ/ಬಿಪಿ ಕಂಪನಿಗಳಲ್ಲಿ, ಕೆಲವು ಕಾರ್ಖಾನೆಗಳಲ್ಲಿ ರಾತ್ರಿ ಪಾಳಯದಲ್ಲಿ ವ್ಯಕ್ತಿಗಳು ಕೆಲಸ ಮಡುವುದನ್ನು ನೋಡುತ್ತೇವೆ. ಈ ರೀತಿ ಮಾಡುವುದರಿಂದ ನಮ್ಮ ಸ್ವಾಭಾವಿಕವಾದ ದೈಹಿಕ ಪ್ರಕ್ರಿಯೆಯಲ್ಲಿ ಅಡ್ಡಿಯುಂಟಾಗಿ ನಿದ್ರಾಹೀನತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 

ಮಾತ್ರೆಗಳ ಸೇವನೆ : ಕೆಲವು ಔಷಧಿ-ಮಾತ್ರೆಗಳು ತನ್ನಲ್ಲಿ ಹೊಂದಿರುವ ರಾಸಾಯನಿಕಗಳ ಪರಿಣಾಮದಿಂದಾಗಿ ನಿದ್ರಾಹೀನತೆಯನ್ನುಂಟು ಮಾಡುವ ಸಾಧ್ಯತೆಯಿರುತ್ತದೆ. ಉದಾಹರಣೆಗೆ ಕೆಲವು ಬಗೆಯ ಆಂಟಿ-ಡಿಪ್ರೆಸ್ಸಂಟ್, ರಕ್ತದೊತ್ತಡಕ್ಕೆ ಸೇವಿಸಬಹುದಾದ ಮಾತ್ರೆಗಳು ನಿದ್ರೆಯನ್ನು ಕಸಿದುಕೊಳ್ಳುವ ಸಾಧ್ಯತೆಯಿರುತ್ತದೆ. 

ಇದನ್ನೂ ಓದಿ: ಬರಿಗಾಲಿನಲ್ಲಿ ನಡೆಯೋದು ಕಷ್ಟ, ಆದ್ರೆ ಅದರ ಆರೋಗ್ಯ ಪ್ರಯೋಜನಗಳು ಮಾತ್ರ ಹಲವಾರು

ವಯಸ್ಸಾಗುವಿಕೆ : ವಯಸ್ಸಾದಂತೆ ನಿದ್ರೆಯ ಪ್ರಮಾಣ ಕಡಿಮೆಯಾಗುವುದು ಅಥವಾ ನಿದ್ರೆ ಹತ್ತದಿರುವಂತಹ ಸಾಕಷ್ಟು ದೂರುಗಳನ್ನು ಇಂದು ನಾವು ಕೇಳುತ್ತೇವೆ. 65 ವರ್ಷ ದಾಟಿರುವ ಬಹುತೇಕ ವಯಸ್ಕರಲ್ಲಿ ನಿದ್ರಾಹೀನತೆ ಉಂಟಾಗುವುದು ಸಾಮಾನ್ಯವಾಗಿ ಗಮನಿಸಲಾಗಿರುವುದನ್ನು ಅಧ್ಯಯನಗಳಲ್ಲೂ ಕಂಡುಬಂದಿದೆ. ಆದರೆ, ಇದು ವಯಸ್ಸಾದಂತೆ ಉಂಟಾಗಬಹುದಾದ ಸಾಮಾನ್ಯ ಸ್ಥಿತಿಯೋ ಅಥವಾ ವಯಸ್ಸಾದ ವ್ಯಕ್ತಿಗಳು ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾತ್ರೆಗಳ ಸೇವನೆಯಿಂದ ಉಂಟಾಗುತ್ತದೋ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎನ್ನಲಾಗಿದೆ.  

ಒಟ್ಟಿನಲ್ಲಿ, ನಿದ್ರಾಹೀನತೆ ಉಂಟಾಗಲು ಸಾಕಷ್ಟು ಕಾರಣಗಳಿವೆ ಎಂದು ಹೇಳಬಹುದು. ರೋಗಗಳು, ಮಾನಸಿಕ ಒತ್ತಡಗಳು ಹಾಗೂ ಕೆಲವು ಔಷಧಿಗಳ ಸೇವನೆ ನಿಮಗೆ ನಿದ್ರಾಹೀನತೆಯನ್ನುಂಟು ಮಾಡಬಹುದು. ಒಂದೊಮ್ಮೆ ನಿಮಗೆ ನಿದ್ರಾಹೀನತೆ ಉಂಟಾಗಿದೆ ಎಂಬ ಸಂದೇಹ ಉಂಟಾದರೆ ಅದನ್ನು ನಿರ್ಲಕ್ಷಿಸದೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ ಇಲ್ಲದೆ ಹೋದಲ್ಲಿ ಇದು ದೇಹದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ.
Published by:Sandhya M
First published: