#MonsoonFood: ಮಳೆಗಾಲದ ಆಹಾರದಲ್ಲಿ ಈ ಪದಾರ್ಥಗಳನ್ನೂ ಸೇರಿಸಿ

news18
Updated:July 23, 2018, 4:43 PM IST
#MonsoonFood: ಮಳೆಗಾಲದ ಆಹಾರದಲ್ಲಿ ಈ ಪದಾರ್ಥಗಳನ್ನೂ ಸೇರಿಸಿ
news18
Updated: July 23, 2018, 4:43 PM IST
-ನ್ಯೂಸ್ 18 ಕನ್ನಡ

ಮಳೆಗಾಲದಲ್ಲಿ ಅನೇಕ ಸಂಕ್ರಾಮಿಕ ರೋಗಗಳು ಉಂಟಾಗುವುದರಿಂದ ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ಮಾನ್ಸೂನ್​ ಗಾಳಿಯಿಂದ ಸೂಕ್ಷ್ಮಾಣುಗಳು ದೇಹ ಪ್ರವೇಶಿಸುವುದರಿಂದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ದಿನನಿತ್ಯದ ಆಹಾರದಲ್ಲಿ ಕೆಲ ಪದಾರ್ಥಗಳನ್ನು ಸೇರಿಸುವುದರಿಂದ  ಮಳೆಗಾಲದಲ್ಲಿ ಉಂಟಾಗುವ ಅಲರ್ಜಿ ಮತ್ತು ಸೋಂಕುಗಳಿಂದ ರಕ್ಷಣೆ ಪಡೆಯಬಹುದು. ಅಂತಹ ಕೆಲ ಆಹಾರಗಳ ಪಟ್ಟಿ ಇಲ್ಲಿವೆ.

ಬೆಳ್ಳುಳ್ಳಿ : ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸುವುದರಿಂದ ದೇಹದ ಇಮ್ಯೂನ್ ಸಿಸ್ಟಂ ಅನ್ನು ಬಲಪಡಿಸಿಕೊಳ್ಳಬಹುದು. ಇದರಲ್ಲಿ ಅಂಟಿ ಆ್ಯಕ್ಸಿಡೆಂಟ್ಸ್​​ಗಳು ಸಮೃದ್ಧವಾಗಿದ್ದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುವಲ್ಲಿ ಪ್ರಮುಖಪಾತ್ರವಹಿಸುತ್ತದೆ. ಬೆಳ್ಳುಳ್ಳಿಯನ್ನು ಸಣ್ಣ ತುಂಡುಗಳಾಗಿ ಅಥವಾ ಪೇಸ್ಟ್​ ರೀತಿಯಾಗಿ ಆಹಾರಗಳಲ್ಲಿ ಬಳಸಿಕೊಳ್ಳಬಹುದು.

ಪಿಯರ್ ಹಣ್ಣು : ಮಳೆಗಾಲದಲ್ಲಿ ಪಿಯರ್ ಹಣ್ಣುಗಳನ್ನು ಸೇವಿಸುವುದು ಉತ್ತಮ. ಈ ಹಣ್ಣಿನಲ್ಲಿ ಫೈಬರ್ ಅಂಶವು ಹೇರಳವಾಗಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿರುವ ಪೈಕ್ಟಿನ್ ಅಂಶ ಮಲಬದ್ಧತೆ ಸಮಸ್ಯೆಗೆ ರಾಮಬಾಣವಾಗಿದೆ. ಕಬ್ಬಿಣಾಂಶವು ಈ ಹಣ್ಣಿನಲ್ಲಿ ಹೆಚ್ಚಾಗಿರುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸಬಹುದು.

ಅರಿಶಿನ : ಫುಡ್​ ಪಾಯಿಸನಿಂಗ್ ಸಮಸ್ಯೆಗೆ ಅರಿಶಿನ ಮನೆಮದ್ದು. ವಾಂತಿ ಅಥವಾ ಭೇದಿ ಆಗುತ್ತಿದ್ದರೆ, 1 ಚಮಚ ಅರಿಶಿನವನ್ನು 1 ಕಪ್ ನೀರಿನಲ್ಲಿ ಹಾಕಿ 2 ಬಾರಿ ಕುಡಿಯಿರಿ. ಹೀಗೆ ಮಾಡುವುದರಿಂದ ಹೊಟ್ಟೆಯ ಅಸ್ವಸ್ಥತೆ ದೂರವಾಗುತ್ತದೆ. ಅಲ್ಲದೆ ನೀರಿನಲ್ಲಿ ಅರಿಶಿನ ಪುಡಿ ಮತ್ತು ಕಲ್ಲು ಉಪ್ಪನ್ನು ಮಿಶ್ರಣ ಮಾಡಿ ಕುದಿಸಿ ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆಗೆ ಪರಿಹಾರ ಕಾಣಬಹುದು.

ಬಾದಾಮಿ : ಬಾದಾಮಿ ಬೀಜಗಳಲ್ಲಿ ಅಧಿಕ ಪ್ರಮಾಣದ ಪೊಟ್ಯಾಶಿಯಂ ಅಂಶ ಕಂಡು ಬರುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಶರೀರದ ಎಲ್ಲಾ ಭಾಗಗಳಿಗೂ ಆಮ್ಲಜನಕ ತಲುಪಲು ಸಹಾಯಕವಾಗುತ್ತದೆ.

ಕರಿ ಮೆಣಸು : ಕರಿಮೆಣಸಿನ ಪುಡಿ ಅಥವಾ ಬೀಜಗಳನ್ನು ಸೇವಿಸುವುದರಿಂದ ಗ್ಯಾಸ್ಟಿಕ್ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಶರೀರದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವಲ್ಲಿ ಕರಿಮೆಣಸು ಪ್ರಯೋಜನಕಾರಿ. ಇದರಲ್ಲಿರುವ ಅಂಟಿ ಬ್ಯಾಕ್ಟೀರಿಯಾ ಅಂಶಗಳು ಜ್ವರ ಮತ್ತು ಇತರೆ ಸೋಂಕುಗಳಿಂದ ರಕ್ಷಿಸುತ್ತದೆ.

ಶುಂಠಿ: ಶುಂಠಿಯಲ್ಲಿ ಅಂಟಿ ಇನ್​ಫ್ಲೆಮೆಟ್ರಿ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿದೆ. ನಿಂಬೆ ರಸದೊಂದಿಗೆ ಶುಂಠಿ ಮಿಶ್ರ ಮಾಡಿ ಕುಡಿಯುವುದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬಹುದು. ಅಲ್ಲದೆ ಮಳೆಗಾಲದಲ್ಲಿ ಶುಂಠಿ ಚಹಾವನ್ನು ಕುಡಿಯುವುದು ಕೂಡ ಆರೋಗ್ಯಕ್ಕೆ ಉತ್ತಮ.
First published:July 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ