ಭಾಗ-2: ಹುಡುಗನೊಬ್ಬನ ಸ್ವಗತ- ಏನಾಗಬಾರದು ಅಂದುಕೊಂಡಿದ್ನೋ ಅದೇ ಆಗೋಯ್ತು!

news18
Updated:August 4, 2018, 4:20 PM IST
ಭಾಗ-2: ಹುಡುಗನೊಬ್ಬನ ಸ್ವಗತ- ಏನಾಗಬಾರದು ಅಂದುಕೊಂಡಿದ್ನೋ ಅದೇ ಆಗೋಯ್ತು!
news18
Updated: August 4, 2018, 4:20 PM IST
ಸುಷ್ಮಾ ಎನ್​. ಚಕ್ರೆ, ನ್ಯೂಸ್​18 ಕನ್ನಡ

ಊರಿಂದ ಬೆಂಗಳೂರಿಗೆ ಬಂದ ನಂತರ ನಾನೆಲ್ಲಿ ಕುಡಿತ, ಸಿಗರೇಟಿನ ಚಟಕ್ಕೆ ಬೀಳುತ್ತೇನೋ ಎಂದು ಹೆದರಿ ಅಪ್ಪ ಮೊದಮೊದಲೆಲ್ಲ ದಿನಕ್ಕೆ ನಾಲ್ಕು ಬಾರಿ ಫೋನ್​ ಮಾಡುತ್ತಿದ್ದ. ಸಿಗರೇಟು ಸೇದಿ ಕ್ಯಾನ್ಸರ್​ ಬಂದವರ ಕತೆ, ಕುಡಿದು ಮೋರಿಯ ಪಕ್ಕದಲ್ಲಿ ಬಿದ್ದು ಸತ್ತವರ ಕತೆ, ಯಾರದೋ ದೂರದ ನೆಂಟರ ಮಗನೊಬ್ಬ ಟ್ರಾಫಿಕಲ್ಲಿ ಸ್ಪೀಡ್​ ಆಗಿ ಬೈಕ್​ ಓಡಿಸಿ ತಲೆಯೊಡೆದು ಸತ್ತ ಕತೆಗಳೆಲ್ಲ ಥಿಯೇಟರ್​ಗಳಲ್ಲಿ ಬರುವ ಮುಖೇಶನ ತಂಬಾಕು ಸೇವನೆಯ ಕತೆಗಿಂತ ರೊಟೀನ್​ ಆಗಿಬಿಟ್ಟಿತ್ತು! ಇವತ್ತಾದರೂ ಹೊಸ ಕತೆ ಹೇಳಬಾರದಾ... ಅಂತ ಮನಸಲ್ಲೇ ಕೇಳಿಕೊಳ್ಳುವಷ್ಟು ನಾನೂ ರೋಸಿಹೋಗಿದ್ದೆ.

ಬೆಂಗಳೂರಿಗೆ ಬಂದನಂತರ ಜೀವನ ಸ್ವಲ್ಪ ಕಲರ್​ಫುಲ್​ ಎನಿಸಿದರೂ ಊರಿಗೆ ಹೋಗುವಾಗ ಬ್ಲಾಕ್​ ಆ್ಯಂಡ್​ ವೈಟ್​ ಆಗಿಯೇ ಹೋಗುತ್ತಿದ್ದೆ. ಆಗಲೇ ಅಪ್ಪನಿಗೂ ಖುಷಿ, ಪೇಟೆಗೆ ಹೋಗಿ ಇಷ್ಟು ವರ್ಷವಾದರೂ ಮಗ ಬದಲಾಗಲಿಲ್ಲ ಎಂಬ ಹೆಮ್ಮೆ. ಅಪ್ಪನಿಗ್ಯಾಕೆ ಬೇಸರ ಮಾಡೋದು ಅಂತ ನಾನೂ ಅವರಿಗೆ ಬೇಕಾದ ಹಾಗೇ ಇದ್ದು ಬರ್ತಿದ್ದೆ.

pc: getty images


ಹೀಗೇ ಎಷ್ಟು ದಿನಗಳು ಇರಲು ಸಾಧ್ಯ? ಒಂದೋ ಅಪ್ಪನಿಗೆ ಬೇಕಾದ ಹಾಗೆ ನಾನಿರಬೇಕು.. ಅಥವಾ ನನಗೆ ಬೇಕಾದ ಹಾಗೆ ಅಪ್ಪನನ್ನೇ ಬದಲಾಯಿಸಬೇಕೆಂದು ತೀರ್ಮಾನ ಮಾಡಿದೆ. ಪಕ್ಕಾ ಹಳ್ಳಿಯ ಸಾಹುಕಾರನಂತಿದ್ದ ಅಪ್ಪನಿಗೆ ತೋಟ, ಮನೆ, ಅಡಕೆಮಂಡಿಯ ವ್ಯವಹಾರ ಬಿಟ್ಟರೆ ಬೇರಾವುದರ ಅರಿವೂ ಇರಲಿಲ್ಲ. ಆದರೆ, ಅಪ್ಪನಿಗೆ ಹೊಸತನ್ನು ತಿಳಿದುಕೊಳ್ಳುವ ಮನಸಿತ್ತು.

pc: getty images


ನನ್ನ ಮೊದಲ ಸಂಬಳದಲ್ಲಿ ಅಪ್ಪನಿಗೊಂದು ಮೊಬೈಲ್​ ತೆಗೆದುಕೊಂಡುಹೋಗಿ ಕೊಟ್ಟೆ. ಯಾರಾದರೂ ಫೋನ್​ ಮಾಡಿದರೆ ಸಗಣಿ ಕೈಯಲ್ಲೇ ಸ್ವೈಪ್​ ಮಾಡುವಾಗೆಲ್ಲ ಕರುಳು ಒಂದು ಬಾರಿ ಚುರ್​ ಎನ್ನುತ್ತಿತ್ತು.ಆದರೂ ಅಪ್ಪನನ್ನು ಮಾಡರ್ನ್​ ಮಾಡಲೇಬೇಕೆಂಬ ಹಠದಿಂದ ಅಪ್ಪನಿಗೆ ಬೆಂಗಳೂರಿಂದ ದಪ್ಪನೆಯ ಜಾಕೆಟ್​, ಕೈಗೊಂದು ಸುಂದರವಾದ ವಾಚು, ಸ್ಮಾರ್ಟ್​ಫೋನ್​ ತೆಗೆದುಕೊಂಡು ಹೋಗಿ ಕೊಟ್ಟೆ. ಈಗ ಅಪ್ಪ ಮೊದಲಿನ ಹಾಗಿಲ್ಲ; ಫೋನ್​ ಮಾಡಿಲ್ಲವೆಂದರೆ ಟೆನ್ಷನ್​ ಮಾಡಿಕೊಳ್ಳುವುದಿಲ್ಲ. ನಾನು ಯಾವ ಹುಡುಗಿಯ ಜೊತೆಗೆ ನಿಂತು ಫೋಟೋ ಹಾಕಿದರೂ ಕೋಪಿಸಿಕೊಳ್ಳುವುದಿಲ್ಲ. ಮನೆಗೆ ಹೋಗುವಾಗ ಬರ್ಮುಡಾ ಹಾಕಿಕೊಂಡರೂ ಚಕಾರವೆತ್ತುವುದಿಲ್ಲ. ಮೊಬೈಲ್​ ಕೈಗೆ ಬಂದ ನಂತರ ಅಪ್ಪನೂ ಅಪ್​ಡೇಟ್​ ಆಗಿಬಿಟ್ಟ.
Loading...

ಇದನ್ನೂ ಓದಿ...

ಭಾಗ-1: ಹುಡುಗನೊಬ್ಬನ ಸ್ವಗತ- 'ನಮ್ಮ ಜನ್ಮಕ್ಕೆ ಮುಕ್ತಿ ಕೊಡಪ್ಪ ದೇವ್ರೇ..!'

ಬೆಂಗಳೂರಿಗೆ ಬಂದು ಹೇಗಾದರೂ ಮಾಡಿ ಜೀವನ ಸೆಟಲ್​ ಮಾಡಿಕೊಳ್ಳಬೇಕು ಎಂದು ನಾನು ಕನಸು ಕಂಡಿದ್ದು ನಿಜ. ಆದರೆ, ಇಲ್ಲಿಗೆ ಬಂದು ಮೂರ್ನಾಲ್ಕು ವರ್ಷವಾಗುವಷ್ಟರಲ್ಲಿ ಊರಿನ ಜಮೀನಿನ ನೆನಪಾಗುತ್ತಿತ್ತು. ಲುಂಗಿ ಎತ್ತಿಕಟ್ಟಿ ಉರಿಬಿಸಿಲಲ್ಲೇ ಓಡಾಡುವ ಅಪ್ಪ ನೆನಪಾಗುತ್ತಿದ್ದ. ಅಪ್ಪನನ್ನು ಬದಲಾಯಿಸಲು ಹೋಗಿ ನಾನೇ ಬದಲಾಗುತ್ತಿದ್ದೇನಾ? ಎಂದು ಅನಿಸುತ್ತಿತ್ತು. ಮೊಬೈಲ್, ಟಿವಿ ನೋಡಿಕೊಂಡು ಆರಾಮಾಗಿ ಇರಬೇಕಾದ ಅಪ್ಪನಿಗೆ ವಿಶ್ರಾಂತಿ ಕೊಡಲೆಂದು ಪೇಟೆಯಿಂದ ಮತ್ತೆ ಹಳ್ಳಿಯ ಬಸ್​ ಹತ್ತಿದೆ.

pc: getty images


ನಗರಜೀವನವನ್ನೇ ಕನಸು ಕಾಣುತ್ತಿದ್ದ ನಾನು ಹಳ್ಳಿಯ ಯಾವ ಕೆಲಸವನ್ನೂ ಕಲಿತಿರಲಿಲ್ಲ. ಈಗ ಹೋಗುತ್ತಿದ್ದೇನಲ್ಲ.. ತೆಂಗಿನ ಮರ ಹತ್ತೋದು ಕಲಿಯಬೇಕು, ಅಡಕೆ ಸುಲಿಯೋದು ಕಲಿಯಬೇಕು, ಯಾವಾಗ ಬೇಸಾಯ ಮಾಡಬೇಕು, ಯಾವಾಗ ಔಷಧ ಸಿಂಪಡಿಸಬೇಕು, ಹೇಗೆ ನೀರುಣಿಸಬೇಕು, ಹೇಗೆ ಕಾಳಜಿ ವಹಿಸಬೇಕು.. ಎಷ್ಟೆಲ್ಲ ಕಲಿಯೋದಿದೆ ಅಪ್ಪನಿಂದ ಎಂದುಕೊಳ್ಳುತ್ತ ಕುಳಿತಿದ್ದ ನನಗೆ ಬಸ್​ನಲ್ಲಿ ನಿದ್ರೆಯೇ ಬರಲಿಲ್ಲ. ಬೆಂಗಳೂರು, ಶಿವಮೊಗ್ಗ, ಊರು, ಕಾಡು, ಹೊಳೆಯಲ್ಲೆಲ್ಲ ಮನಸು ಓಡುತ್ತಲೇ ಇತ್ತು... ನಾನದನ್ನು ಕಟ್ಟಿಹಾಕಲಿಲ್ಲ... ಮನಸನ್ನು ಕಟ್ಟಿಹಾಕಲು ಯಾಕೋ ಮನಸಾಗಲೂ ಇಲ್ಲ.

 

 

 
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...