ಮೊಬೈಲ್ ಎಂಬ ಮಾಯಗಾರ; ಅಮ್ಮನನ್ನೂ ಮರುಳು ಮಾಡಿದ ಮಾಟಗಾರ!

news18
Updated:August 29, 2018, 6:24 PM IST
ಮೊಬೈಲ್ ಎಂಬ ಮಾಯಗಾರ; ಅಮ್ಮನನ್ನೂ ಮರುಳು ಮಾಡಿದ ಮಾಟಗಾರ!
news18
Updated: August 29, 2018, 6:24 PM IST
ಸುಷ್ಮಾ ಎನ್​. ಚಕ್ರೆ

'ಬೆಳಗ್ಗೆ 6 ಗಂಟೆಯಾಯ್ತು ಅನ್ಸುತ್ತೆ.. ಅಮ್ಮನ ರೂಂನಿಂದ ಅಲಾರಾಂ ಶಬ್ದ ಕೇಳುತ್ತಿತ್ತು. ನಾನೋ ಮುಖದ ತುಂಬ ಬೆಡ್​ಶೀಟ್ ಹೊದ್ದು ಮಲಗಿದೆ. ಮೊಸುಕಿನೊಳಗಿಂದಲೇ ಮನಸು ಲೆಕ್ಕ ಹಾಕತೊಡಗಿತ್ತು. ಇನ್ನೂ 6 ಗಂಟೆ ಅಷ್ಟೆ. ಅಂದ್ರೆ ನಾನು 8 ಗಂಟೆಗೆ ಎದ್ದರೂ ಸಾಕು.. ಈಗ ಅಮ್ಮ ಕಾಫಿಗೆ ಇಟ್ಟಿರ್ತಾಳೆ. ಅಪ್ಪ ಏನಾದ್ರೂ ಬೇಗ ಎದ್ರೆ ನನ್ನೂ ಎಬ್ಬಿಸ್ತಾರೆ...'

ಹೀಗೆ ನನ್ನ ದೈನಂದಿನ ಅನುಭವಗಳ ಆಧಾರದಲ್ಲಿ ರೂಮಿನ ಹೊರಗೆ ಏನೆಲ್ಲ ಆಗುತ್ತಿದೆ, ಮುಂದೆ ಏನೇನು ಆಗಬಹುದು ಎಂದು ಲೆಕ್ಕಾಚಾರ ಹಾಕುತ್ತಾ ಮಲಗಿದ್ದಾಗಲೇ 7 ಗಂಟೆಯಾಗಿ ಹೋಯ್ತು. ಈಗೊಂದು ಆರೇಳು ವರ್ಷದ ಹಿಂದೆ 'ಕೌಸಲ್ಯ ಸುಪ್ರಜಾ' ಎಂಬ ಸುಪ್ರಭಾತದಿಂದ ಆರಂಭವಾಗುತ್ತಿದ್ದ ಮುಂಜಾನೆ ನಮ್ಮ ಮನೆಗೆ ಮೊಬೈಲ್ ಬಂದ ನಂತರ ಅಲಾರಾಂನಿಂದ ಆರಂಭವಾಗುತ್ತಿದೆ.

ಮೊದಲೆಲ್ಲ ನಾನು ಮೊಬೈಲ್ ಹಿಡಿದು ಗೇಮ್ ಆಡುತ್ತಾ ಕುಳಿತರೆ ದುರ್ಗಾವತಾರ ತಾಳುತ್ತಿದ್ದ ನಮ್ಮಮ್ಮ ಈಗ ಮೊಬೈಲ್ನಲ್ಲಿ ಹಾಡು ಮೊಳಗದೆ ಅಡುಗೆ ಮನೆಯ ಸ್ಟೌವ್ ಕೂಡ ಹಚ್ಚುವುದಿಲ್ಲ. ಯಾವುದಾದರೂ ಸ್ವೀಟ್ ಮಾಡುವಾಗ ಅಥವಾ ಚಿಪ್ಸ್ ಕರಿಯುವಾಗ ಸ್ಟೌವ್ ಮೇಲಿನ ಶೆಲ್ಫ್ ಮೇಲೆ ಮೊಬೈಲ್ ಇಟ್ಟುಕೊಂಡು ಅನಂತನಾಗ್ ಸಿನಿಮಾ ಹಾಕಿಕೊಂಡು ನಿಂತುಬಿಟ್ಟರೆ ನಗುತ್ತಾ, ಆಗಾಗ ಕಣ್ಣೀರು ಒರೆಸಿಕೊಳ್ಳುತ್ತಾ ಅಡುಗೆ ಮಾಡಿ ಮುಗಿಸುವಷ್ಟರಲ್ಲಿ ನಮ್ಮ ಹೊಟ್ಟೆ ತಾಳ ಹಾಕತೊಡಗಿರುತ್ತದೆ. ಅಮ್ಮನಿಗೆ ಮೊಬೈಲ್ ಕೊಡಿಸಿದ ನಂತರ ಅಡುಗೆಗೆ ಯಾಕೋ ಉಪ್ಪು-ಹುಳಿ ಸರಿಯಾಗಿ ಬೀಳುತ್ತಿಲ್ಲ ಎಂದು ಅಪ್ಪನೂ ಆಗಾಗ ಕಾಲೆಳೆಯುವುದುಂಟು.ಕಳೆದ ವರ್ಷ ಮದುವೆಯಾದ ಅಕ್ಕ ಅಮೆರಿಕಕ್ಕೆ ಹೊರಟು ನಿಂತಾಗ ಅಮ್ಮ ತನ್ನ ಕರುಳಿನ ಕೊಂಡಿಯೇ ಕಳಚಿಬಿದ್ದಂತೆ ಅತ್ತು ಅತ್ತು ಸೊರಗಿದ್ದಳು. ಆಗ ಅಕ್ಕನೇ ಅಮ್ಮನಿಗೆ ಸ್ಮಾರ್ಟ್ಫೋನ್ ಕಳುಹಿಸಿದ್ದಳು. ಅದಕ್ಕೆ ಪ್ರತಿತಿಂಗಳೂ ಅನ್​ಲಿಮಿಟೆಡ್ ಡಾಟಾ ಪ್ಯಾಕ್ ಹಾಕಿಸುವ ಜವಾಬ್ದಾರಿಯನ್ನೂ ಅಮೆರಿಕದಿಂದಲೇ ಅಕ್ಕ ಚಾಚೂತಪ್ಪದೆ ಪಾಲಿಸುತ್ತಿದ್ದಳು. ಮೊದಲೆಲ್ಲ ಮೊಬೈಲ್ನಲ್ಲಿ ಕಾಲ್ ರಿಸೀವ್ ಮಾಡಲೂ ತಡಬಡಾಯಿಸುತ್ತಿದ್ದ ಅಮ್ಮನ ಮೊಬೈಲ್ ಸ್ಕ್ರೀನ್ ತುಂಬ ಅಡುಗೆಯ ಅವಶೇಷಗಳು ಇದ್ದೇ ಇರುತ್ತಿತ್ತು.

ಕಾಲ ಬದಲಾಯ್ತು:
Loading...

ಆಮೇಲಾಮೇಲೆ ಅಮ್ಮ ಯಾವ ಪರಿಯಲ್ಲಿ ಮೊಬೈಲ್ ಬಳಸಲು ಪರಿಣತಿ ಪಡೆದಳೆಂದರೆ ಅಕ್ಕ ಮನೆಯಲ್ಲಿಲ್ಲ ಎಂಬ ಭಾವನೆಯನ್ನು ಒಂದು ತಿಂಗಳೊಳಗೆ ಅಮ್ಮ ಮರೆತಾಗಿತ್ತು. ದಿನವೂ ವಿಡಿಯೋ ಕಾಲ್ ಮಾಡುತ್ತಿದ್ದ ಅಕ್ಕ- ಅಮ್ಮನ ನಡುವೆ ಅಂದಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟ, ಆ ದಿನದ ಸುದ್ದಿ ಸಮಾಚಾರಗಳು ವಿನಿಮಯವಾಗುತ್ತಿತ್ತು. ಅಮ್ಮನಿಗೂ ಮನೆಯಲ್ಲಿ ಒಬ್ಬಳೇ ಇದ್ದು ಬೇಜಾರು. ಅತ್ತ ಅಕ್ಕನಿಗೂ ಇಡೀ ದಿನ ಕೆಲಸವಿಲ್ಲ. ಬೆಳಗ್ಗೆ ತಿಂಡಿಯ ವೇಳೆ ಅಮ್ಮ ವಿಡಿಯೋ ಕ್ಯಾಮೆರಾ ಆನ್ ಮಾಡಿದರೆ ಯಾರ ಮನೆಯಲ್ಲಿ ಯಾವಾಗ ಶ್ರಾದ್ಧ, ಯಾರ ಮದುವೆ ಯಾವಾಗ, ಇವತ್ತು ಕೆಲಸಕ್ಕೆ ಯಾರು ಬಂದಿದ್ದಾರೆ, ತರಕಾರಿ ಬೆಲೆ ಎಷ್ಟಾಗಿದೆ, ಮನೆಯ ಹೊರಗೆ ಯಾವ ರೀತಿ ಮಳೆ ಬೀಳುತ್ತಿದೆ ಹೀಗೆ ಪ್ರತಿಯೊಂದನ್ನೂ ವಿಡಿಯೋ ಮೂಲಕವೇ ಅಕ್ಕನಿಗೆ ವಿವರಣೆ ಕೊಡುತ್ತಿದ್ದ ಅಮ್ಮ ನಮಗೆ ಮಾತನಾಡಲು ಯಾವ ವಿಷಯವನ್ನೂ ಉಳಿಸಿರುತ್ತಿರಲಿಲ್ಲ.

ಮಲಗಿದ್ದಲ್ಲೇ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೊರಗೆ ಎದ್ದು ಬಂದ ನಾನು ಫ್ರೆಶ್ ಆಗಿ ಹೊರಗೆ ಬಂದೆ. ಅಮ್ಮ.. ಕಾಫಿ ಕೊಡು ಅಂತ ಹೇಳಿದೆ. ಅಡುಗೆ ಮನೆಯಿಂದ ಹೊರಗೆ ಬಂದ ಅಮ್ಮ 'ಅಲ್ಲಿ ಅಡುಗೆಮನೆಯ ಕಟ್ಟೆ ಮೇಲೆ ಫ್ಲಾಸ್ಕ್​ನಲ್ಲಿ ಇಟ್ಟಿದೀನಿ, ಲೋಟಕ್ಕೆ ಹಾಕೊಂಡು ಕುಡಿ' ಅಂತ ಹೇಳಿ ಸೀದಾ ಟಿವಿ ಸ್ಟಾಂಡ್ ಬಳಿ ಹೋದಳು. ಅಮ್ಮನಿಗೇನಾಯ್ತಪ್ಪ ಅಂತ ಆ ಕಡೆ ನೋಡಿದೆ. ನನ್ನ ನೋಟ ಅರ್ಥವಾದವಳಂತೆ 'ರಾತ್ರಿ ಮೊಬೈಲ್ ಚಾರ್ಜ್​ಗೆ ಹಾಕಿರ್ಲಿಲ್ಲ. ಸ್ವಿಚ್ ಆಫ್ ಆಗಿತ್ತು. ರಂಗೋಲಿ ಹಾಕಿದ್ನಲ್ಲ... ಅಕ್ಕನಿಗೊಂದು ಫೋಟೋ ಕಳಿಸಿ ಬರ್ತೀನಿ' ಅಂತ ಚಾರ್ಜಿಗೆ ಹಾಕಿದ್ದ ಮೊಬೈಲ್ ತೆಗೆದು ಹೊಸಿಲು ದಾಟಿ ಹೊರಹೋದಳು ಅಮ್ಮ.

ಮನೆಯಲ್ಲಿರುವ ಮಗಳಿಗೆ ಕಾಫಿ ಕೊಡೋದಕ್ಕಿಂತ ಮೊಬೈಲಲ್ಲಿ ರಂಗೋಲಿ ಫೋಟೋ ಕಳಿಸೋದೇ ಹೆಚ್ಚಾಯ್ತು ಅಂತ ಜೋರಾಗೇ ಗೊಣಗುತ್ತ ಕೋಪದಿಂದ ಸೋಫಾದ ಮೇಲೆ ಕುಳಿತೆ. ಎದುರಿನ ಕುರ್ಚಿಯಲ್ಲಿ ಕುಳಿತು ಪೇಪರ್ ಓದುತ್ತಿದ್ದ ಅಪ್ಪ ಪೇಪರ್ ಸ್ವಲ್ಪ ಕೆಳಗಿಳಿಸಿ ಮೀಸೆಯಂಚಲ್ಲಿ ನಕ್ಕು ಕನ್ನಡಕ ಸರಿಪಡಿಸಿಕೊಂಡರು... ನಾನು ಅಡುಗೆಮನೆಯತ್ತ ಹೊರಟೆ. ಅಷ್ಟರಲ್ಲೇ ಅಮ್ಮನ ಫೋನ್​ ರಿಂಗ್​ ಆಯಿತು. ನಮಗಿನ್ನು ಸದ್ಯಕ್ಕೆ ತಿಂಡಿ ಇಲ್ಲ ಎಂಬುದು ಖಾತ್ರಿಯಾಯ್ತು...
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...