HOME » NEWS » Lifestyle » MENSTRUAL PERIOD COMMON SIGN IN WOMENS STG SESR

Periods ಲೆಕ್ಕಾಚಾರ: ಮುಟ್ಟಿನ ದಿನ ಹತ್ತಿರಾಗುತ್ತಿದೆ ಎಂಬ ಸೂಚನೆಗಳಿವು!

ಈ ಸಂಕೇತಗಳು ಅತ್ಯಂತ ಸಾಮಾನ್ಯ. 90% ಹೆಂಗಸರಿಗೆ ಮುಟ್ಟು ಆರಂಭವಾಗುವ ಮೊದಲೇ ಅದರ ಸಂಕೇತಗಳು ಸಿಗುತ್ತವೆ

Trending Desk
Updated:June 9, 2021, 8:20 PM IST
Periods ಲೆಕ್ಕಾಚಾರ: ಮುಟ್ಟಿನ ದಿನ ಹತ್ತಿರಾಗುತ್ತಿದೆ ಎಂಬ ಸೂಚನೆಗಳಿವು!
ಸಾಂದರ್ಭಿಕ ಚಿತ್ರ
  • Share this:

ನಿಮ್ಮ ಮುಟ್ಟಿನ ದಿನಗಳು ಹತ್ತಿರದಲ್ಲಿ ಇದ್ದಾಗ ದೇಹದಲ್ಲಿ ಸ್ಪಲ್ಪ ವಿಚಿತ್ರ ಅನುಭವಗಳು ಉಂಟಾಗುವುದೇಕೆ? ಅದು ಋತುಸ್ರಾವದ ದಿನಗಳು ಇನ್ನೇನು ಹತ್ತಿರದಲ್ಲೇ ಇವೆ ಎಂಬುದಕ್ಕೆ ದೇಹ ಕೊಡುವ ಸಂಕೇತ. ನಿಮ್ಮ ಮುಟ್ಟಿನ ದಿನಗಳನ್ನ ಹೇಗೆ ಪಟ್ಟಿ ಮಾಡುತ್ತೀರಿ? ಹಿಂದಿನ ಮುಟ್ಟಿನ ದಿನಾಂಕವನ್ನು ಆಧಾರವಾಗಿ ಇಟ್ಟುಕೊಳ್ಳಬಹುದು ಅಥವಾ ಯಾವುದಾದರೂ ಅ್ಯಪ್ ಮೊರೆ ಹೋಗಬಹುದು ಅಲ್ವಾ?. ಆದರೆ ಅಷ್ಟೆಲ್ಲಾ ಸರ್ಕಸ್ ಮಾಡೋದ್ಯಾಕೆ ನಾನಿಲ್ವಾ ಅನ್ನುತ್ತೆ ನಿಮ್ಮ ದೇಹ! ಹೌದು, ದೇಹ ತಾನೇ ಪ್ರತಿ ತಿಂಗಳು ಮುಟ್ಟಿನ ದಿನ ಸಮೀಪಿಸುತ್ತಿರುವ ಸೂಚನೆಗಳನ್ನು ನೀಡ ತೊಡಗುತ್ತದೆ.


ನಿಮ್ಮ ದೇಹದ ಹಾರ್ಮೋನ್‍ಗಳಲ್ಲಿ ಕಂಡುಬರುವ ಏರಿಳಿತಗಳೇ ಈ ಸಂಕೇತಗಳಿಗೆ ಕಾರಣ. ಗುರುಗ್ರಾಂನ ಸಿಕೆ ಬಿರ್ಲಾ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಅರುಣಾ ಕಾರ್ಲಾ ಅವರು ಹೇಳುವ ಪ್ರಕಾರ, ಈ ಸಂಕೇತಗಳು ಅತ್ಯಂತ ಸಾಮಾನ್ಯ. 90% ಹೆಂಗಸರಿಗೆ ಮುಟ್ಟು ಆರಂಭವಾಗುವ ಮೊದಲೇ ಅದರ ಸಂಕೇತಗಳು ಸಿಗುತ್ತವೆ. ಆ ಸಂಕೇತಗಳು ಮಹಿಳೆಯರಿಂದ ಮಹಿಳೆಯರಿಗೆ ಭಿನ್ನವಾಗಿರುತ್ತದೆ. ಕೆಲವರಲ್ಲಿ ಅದು ಸಣ್ಣ ಮಟ್ಟದಲ್ಲಿ ಇದ್ದರೆ, ಇನ್ನು ಕೆಲವರಲ್ಲಿ ಅದು ತೀವ್ರ ಪ್ರಮಾಣದಲ್ಲಿ ಇರುತ್ತದೆ.



1) ಕಿಬ್ಬೊಟ್ಟೆ ನೋವು- ಇದು ಮುಟ್ಟಿನ ಆರಂಭದ ಮೊದಲ ಲಕ್ಷಣ. ಅಂದರೆ ಮುಟ್ಟಿನ ದಿನಗಳು ಹತ್ತಿರದಲ್ಲಿವೆ ಎಂದರ್ಥ. ಗರ್ಭಾಶಯದ ಸಂಕೋಚನದಿಂದ ಈ ನೋವು ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಮುಟ್ಟಿಗಿಂತ ಎರಡು ದಿನ ಮೊದಲು ಆರಂಭವಾಗುತ್ತದೆ.


2) ಮೊಡವೆಗಳು- ಮುಟ್ಟು ಆರಂಭ ಆಗುವ ಸುಮಾರು ಒಂದು ವಾರದ ಮೊದಲೇ ಮೊಡವೆಗಳು ಕಾಣಿಸಿಕೊಳ್ಳುವುದು, ಮುಟ್ಟಿನ ಆರಂಭದ ಸಾಮಾನ್ಯ ಸಂಕೇತಗಳಲ್ಲಿ ಒಂದು. ಇದಕ್ಕೆ ಕಾರಣ ಹಾರ್ಮೋನ್‍ಗಳಲ್ಲಿ ಆಗುವ ಏರಿಳಿತ. ಮಹಿಳೆ ಗರ್ಭಿಣಿ ಅಲ್ಲದಿದ್ದರೆ, ಆ್ಯಂಡ್ರೋಜೆನ್‍ಗಳ ಮಟ್ಟ ಕೊಂಚ ಹೆಚ್ಚಾಗುತ್ತದೆ. ಇದು ಮೊಡವೆಗಳನ್ನು ಉಂಟು ಮಾಡುವ ಮೇದೋಗ್ರಂಥಿಗಳ ಸ್ರಾವದ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.


3) ನೋವುಳ್ಳ ಅಥವಾ ಭಾರವಾದ ಸ್ತನಗಳು- ಸ್ತನಗಳಲ್ಲಿ ನೋವು ಕೂಡ ಮುಟ್ಟಿನ ಸಂಕೇತಗಳಲ್ಲಿ ಒಂದು. ಈಸ್ಟ್ರೋಜೆನ್, ಪ್ರೊಜೆಸ್ಟ್ರೋನ್ ಮತ್ತು ಪ್ರೊಲ್ಯಾಕ್ಟಿನ್‌ನಂತ ಹಾರ್ಮೋನ್‍ಗಳಲ್ಲಿ ಆಗುವ ಏರಿಳಿತಗಳು, ಮುಟ್ಟಿಗೆ ಕೆಲವು ದಿನಗಳು ಇರುವಾಗಲೇ ಸ್ತನಗಳ ಮೆತ್ತಗಾಗುವಿಕೆ ಅಥವಾ ಊತಕ್ಕೆ ಕಾರಣವಾಗುತ್ತದೆ.


4) ನಿದ್ರೆಯ ಸಮಸ್ಯೆಗಳು- ಕಿಬ್ಬೊಟ್ಟೆಯ ನೋವು, ತಲೆನೋವು ಮತ್ತು ಮನಸ್ಥಿತಿಯಲ್ಲಾಗುವ ಏರುಪೇರು ಮುಂತಾದ ಮುಟ್ಟಿನ ಆರಂಭದ ಸಂಕೇತಗಳು ನಿಮ್ಮ ನಿದ್ರೆಗೆ ಭಂಗ ತರಬಹುದು. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಮಟ್ಟದಲ್ಲಿ ಆಗುವ ಬದಲಾವಣೆಗಳು ದೇಹದ ತಾಪಮಾನವನ್ನು ಹೆಚ್ಚಿಸಿ, ನಿಮ್ಮ ನಿದ್ರೆಗೆ ತೊಂದರೆ ಉಂಟು ಮಾಡಬಹುದು.


5) ಕರುಳಿನ ಸಮಸ್ಯೆಗಳು - ಹಾರ್ಮೋನ್ ಬದಲಾವಣೆಗಳಿಗೆ ಕರುಳು ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತದೆ. ಪ್ರೋಸ್ಟಾಗ್ಲಾಂಡಿನ್ಸ್ ಕರುಳಿನಲ್ಲಿ ಸಂಕೋಚನವನ್ನು ಉಂಟು ಮಾಡಬಹುದು. ಅದರಿಂದ ಮುಟ್ಟಿಗೂ ಮೊದಲು ಮಲಬದ್ಧತೆ, ಅತಿಸಾರ, ವಾಕರಿಕೆ ಮತ್ತಿತರ ಸಮಸ್ಯೆಗಳು ಉಂಟಾಗಬಹುದು.

6) ಉಬ್ಬುವಿಕೆ- ಉಬ್ಬುವಿಕೆ ಮುಟ್ಟು ಆರಂಭವಾಗುವುದರ ಸಾಮಾನ್ಯ ಸಂಕೇತ. ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್‍ಗಳಲ್ಲಿ ಆಗುವ ಬದಲಾವಣೆ, ನಿಮ್ಮ ದೇಹ ಇತರ ದಿನಗಳಿಗಿಂತ ಹೆಚ್ಚು ನೀರು ಮತ್ತು ಉಪ್ಪನ್ನು ಉಳಿಸಿಕೊಳ್ಳುವಂತೆ ಮಾಡಬಹುದು. ಇದು ಉಬ್ಬುವಿಕೆಗೆ ಕಾರಣವಾಗುತ್ತದೆ. ಮುಟ್ಟಿನ ದಿನದ ಆರಂಭಕ್ಕೂ ಮೊದಲು ಉಬ್ಬಿಕೊಳ್ಳುವುದನ್ನು ತೂಕ ಹೆಚ್ಚಳ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಮುಟ್ಟಿನ ನಂತರ ದೇಹ ಮೊದಲಿನಂತಾಗುತ್ತದೆ.


7) ಮನಸ್ಥಿತಿಯ ಏರುಪೇರುಗಳು- ಮನಸ್ಥಿತಿಯಲ್ಲಿ ಆಗುವ ಏರುಪೇರುಗಳನ್ನು ಮುಟ್ಟಿನ ದಿನದ ಆರಂಭದ ಭಾವನಾತ್ಮಕ ಸಂಕೇತಗಳು ಎನ್ನಬಹುದು. ಅವು ದೈಹಿಕ ಸಂಕೇತಗಳಿಗಿಂತ ಹೆಚ್ಚು ತೀವ್ರವಾಗಿರುತ್ತವೆ. ಇದಕ್ಕೂ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್‍ಗಳಲ್ಲಿ ಆಗುವ ಬದಲಾವಣೆಯೇ ಕಾರಣ. ಜೊತೆಗೆ ಮೆದುಳಿನಲ್ಲಿ ಉತ್ಪತ್ತಿಯಾಗುವ ಸೆರೊಟೋನಿನ್ ಕೂಡ ಮನಸ್ಥಿತಿಯ ಏರುಪೇರುಗಳಿಗೆ ಕಾರಣವಾಗುತ್ತದೆ.


8) ಆತಂಕ ಮತ್ತು ಖಿನ್ನತೆ- ಇವು ಕೂಡ ಮುಟ್ಟು ಆರಂಭವಾಗುವುದರ ಸಾಮಾನ್ಯ ಸಂಕೇತಗಳು. ಮೆದುಳಿನಲ್ಲಿ ಉತ್ಪತ್ತಿಯಾಗುವ ಸೆರೊಟೋನಿನ್ ಮತ್ತು ಫೀಲ್-ಗುಡ್ ಎಂಡಾರ್ಫಿನ್‍ಗಳಲ್ಲಿನ ಏರಿಳಿತವೇ ಇದಕ್ಕೆ ಕಾರಣ. ಅದು ಆರೋಗ್ಯಕರ ಭಾವನೆಗಳನ್ನು ಕಡಿಮೆ ಮಾಡಿ, ಆತಂಕ ಮತ್ತು ಖಿನ್ನತೆಯ ಭಾವನೆಗಳನ್ನು ಹೆಚ್ಚಿಸುತ್ತದೆ.


9) ಕೆಳ ಬೆನ್ನುನೋವು- ಪ್ರೋಸ್ಟಾಗ್ಲಾಂಡಿನ್ಸ್ ಬಿಡುಗಡೆಯಿಂದ ಪ್ರಚೋದಿಸಲ್ಪಟ್ಟು, ಗರ್ಭಾಶಯ ಮತ್ತು ಕಿಬ್ಬೊಟ್ಟೆಯ ಸಂಕೋಚನಗಳುಂಟಾಗಿ, ಸಾಮಾನ್ಯವಾಗಿ ಕೆಳ ಬೆನ್ನು ನೋವಿಗೆ ಕಾರಣವಾಗುತ್ತದೆ. ಕೆಲವು ಮಹಿಳೆಯರಲ್ಲಿ ಕೆಳ ಬೆನ್ನು ನೋವು ಕಡಿಮೆ ಇರಬಹುದು, ಆದರೆ ಕೆಲವರಲ್ಲಿ ಅದರ ಪ್ರಮಾಣ ತೀವ್ರವಾಗಿರುತ್ತದೆ.


10) ತಲೆನೋವು- ಮುಟ್ಟಿನ ಆರಂಭವಾಗುವ ಮೊದಲು ಹಾರ್ಮೋನ್‍ಗಳಲ್ಲಿ ಆಗುವ ಏರುಪೇರು ತಲೆನೋವಿಗೆ ಬಹುದೊಡ್ಡ ಕಾರಣ. ಇದಕ್ಕೂ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್‍ಗಳಲ್ಲಿ ಆಗುವ ಬದಲಾವಣೆಯೇ ಕಾರಣ.


First published: June 9, 2021, 8:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories